ಬ್ರೆಡ್, ಪೀಜಾಗಳಲ್ಲಿ ಕ್ಯಾನ್ಸರ್ ತರುವ ಕೆಮಿಕಲ್ಸ್, ತನಿಖೆಗೆ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ

ಡಿಜಿಟಲ್ ಕನ್ನಡ ಟೀಮ್

ನಗರ ಪ್ರದೇಶಗಳ ಆಹಾರ ಪದ್ಧತಿಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿರೋ ಬ್ರೆಡ್, ಬರ್ಗರ್ ಮತ್ತು ಪೀಜಾಗಳಲ್ಲಿ ಕಾನ್ಸರ್ ತರುವಂತಹ ಟಾಕ್ಸಿಕ್ ರಾಸಾಯನಿಕಗಳಿವೆ ಎಂಬ ವರದಿಗಳು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ತನಿಖೆಗೆ ಆದೇಶ ನೀಡಿದೆ.

ಭಾರತದಲ್ಲಿ ಲಭ್ಯವಿರುವ ಬ್ರೆಡ್ ಗಳಲ್ಲಿ ಪೊಟಾಶಿಯಂ ಬ್ರೊಮೇಟ್ ಮತ್ತು ಪೊಟಾಶಿಯಂ ಲೊಡೆಟ್ ರಾಸಾಯನಿಕಗಳ ಮಿಶ್ರಣವಾಗಿದ್ದು, ಇದರಿಂದ ಥೈರಾಯಿಡ್ ಸಮಸ್ಯೆ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ನಾನ್ ಪ್ರಾಫಿಟ್ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ವರದಿ ವ್ಯಾಪಕ ವಿವಾದ ಸೃಷ್ಠಿಸಿದೆ. ಸುಮಾರು 40 ದೇಶಗಳಲ್ಲಿ ಈ ರಾಸಾಯನಿಕಗಳನ್ನು ನಿಷೇಧಿಸಿವೆ. ದೇಶದಾದ್ಯಂತ ಸಾಕಷ್ಟು ಪ್ರಭಾವ ಬೀರಿರುವ ಕೆಎಫ್ ಸಿ, ಪಿಜಾ, ಹಟ್, ಡೊಮಿನಾಸ್, ಸಬ್ ವೇ, ಮೆಕ್ ಡೊನಾಲ್ಡ್ಸ್ ಮತ್ತು ಸ್ಲೈಸ್ ಆಫ್ ಇಟಲಿ ಬ್ರಾಂಡ್ ಗಳ ಆಹಾರಗಳಲ್ಲಿ ಗರಿಷ್ಠ ಮಟ್ಟದ ರಾಸಾಯನಿಕಗಳಿವೆ ಎಂಬ ಆಘಾತಕಾರಿ ಅಂಶ ವರದಿಯಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೊಮಿನಾಸ್, ಬ್ರಿಟಾನಿಯಾ ಮತ್ತು ಸ್ಲೈಸ್ ಆಫ್ ಇಟಲಿ, ನಮ್ಮ ಆಹಾರ ಉತ್ಪನ್ನಗಳಲ್ಲಿ ಈ ರಾಸಾಯನಿಕಗಳನ್ನು ಬಳಸುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿವೆ. ಯಾರು ಏನೇ ಸಮಜಾಯಷಿ ನೀಡಿದರೂ, ಅಧಿಕೃತವಾಗಿ ಸ್ಪಷ್ಟನೆ ಸಿಗುವವರೆಗೂ ಜನರಲ್ಲಿ ಮೂಡಿರುವ ಆತಂಕ ದೂರವಾಗದು. ಈ ಬಗ್ಗೆ ತನಿಖೆ ಮೂಲಕವೇ ವಾಸ್ತವ ಅಂಶ ಬೆಳಕಿಗೆ ಬರಬೇಕಿದೆ.

ಈ ಗೊಂದಲದ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಂಧಿಸಿದ್ದು, ತನಿಖೆಗೆ ಆದೇಶಿಸಿದೆ. ತತಕ್ಷಣವೇ ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರು ಈ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ. ಶೀಘ್ರದಲ್ಲೇ ಈ ಬಗ್ಗೆ ತನಿಖೆಯಾಗಿ ವರದಿಗಳನ್ನು ಪಡೆಯಲಿದ್ದೇವೆ ಎಂದಿದ್ದಾರೆ ಆರೋಗ್ಯ ಸಚಿವ ಜೆ.ಪಿ ನಡ್ಡಾ.

ಸಿಎಸ್ಇ ದೆಹಲಿಯ ಈ ಬ್ರಾಂಡ್ ಗಳ ಆಹಾರ ಕೇಂದ್ರಗಳಲ್ಲಿನ ಉತ್ಪನ್ನಗಳ 38 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಶೇ.84 ರಷ್ಟು ಉತ್ಪನ್ನಗಳಲ್ಲಿ ರಾಸಾಯನಿಕ ಬಳಕೆಯಾಗಿರುವುದು ಸಾಬೀತಾಗಿದೆ. ಅಲ್ಲದೆ ದಿನಕ್ಕೆ ಕೇವಲ ಎರಡು ಬ್ರೆಡ್ ತುಂಡುಗಳನ್ನು ಸೇವಿಸಿದರೆ ಸಾಕು ಥೈರಾಯಿಡ್ ಸಮಸ್ಯೆ ಮತ್ತು ಕ್ಯಾನ್ಸರ್ ಗೆ ದಾರಿ ಮಾಡಿಕೊಡಲಿದೆ ಎಂಬ ಅಂಶ ಆಂತಕಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದೆ ಸಿಎಸ್ಇ ವರದಿ.

Leave a Reply