ವಿಮಾನ ಆ್ಯಂಬುಲೆನ್ಸ್ ಪತನ, ರಾಜಕೀಯ ಪಡಸಾಲೆಯ ಮಾತುಗಳು, ದಿನಾಂತ್ಯದ ಸುದ್ದಿಸಾಲು…

 

ಗದ್ದೆಯಲ್ಲಿ ತುರ್ತಾಗಿ ಇಳಿದ ಏರ್ ಆಂಬುಲೆನ್ಸ್

ತಾಂತ್ರಿಕ ವೈಫಲ್ಯದಿಂದಾಗಿ 7 ಮಂದಿಯನ್ನು ಹೊತ್ತು ಸಾಗುತ್ತಿದ್ದ ಏರ್ ಆಂಬುಲೆನ್ಸ್ ಮಂಗಳವಾರ ದೆಹಲಿಯ ನಜಾಫ್ಘರ್ ಪ್ರದೇಶದ ಗದ್ದೆಯಲ್ಲಿ ಲ್ಯಾಂಡ್ ಆಗಿದೆ. ಈ ಸಂದರ್ಭದಲ್ಲಿ ಅತ್ಯುತ್ತಮವಾಗಿ ಜವಾಬ್ದಾರಿ ನಿರ್ವಹಿಸಿದ ಪೈಲೆಟ್ 7 ಮಂದಿಯ ಪ್ರಾಣ ಉಳಿಸಿದ್ದಾನೆ. ಈ ಏರ್ ಆಂಬ್ಯುಲೆನ್ಸ್ ಕೆಳಗಿಳಿಯುವ ಸಂದರ್ಭದಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಈ ಪ್ರಯಾಣಿಕರ ಪೈಕಿ ಹೃದಯ ರೋಗಿಯೂ ಇದ್ದರು. ಅವಘಡದಲ್ಲಿ ಬದುಕುಳಿದಿದ್ದರೂ ಅವರ ಸ್ಥಿತಿ ಗಂಭೀರವಾಗಿದೆ.

 

ವಿಧಾನ ಪರಿಷತ್- ರಾಜ್ಯಸಭೆ ಚುನಾವಣೆ: ಮೇ 31 ನಾಮಪತ್ರಕ್ಕೆ ಕೊನೆದಿನ

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನ ಹಾಗೂ ವಿಧಾನಪರಿಷತ್‍ನ 7 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಚುನಾವಣಾ ಅಧಿಸೂಚನೆ ಇಂದು ಪ್ರಕಟಗೊಂಡಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ನಾಮಪತ್ರ ಸಲ್ಲಿಸಲು ಮೇ 31ರ ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸದಸ್ಯ ಸ್ಥಾನಗಳಿಗೆ ಜೂನ್ 11 ರಂದು ಬೆಳಗ್ಗೆ 9 ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆದು ಅಂದು ಸಂಜೆ ಮತ ಎಣಿಕೆ ನಡೆಯಲಿದೆ. ವಿಧಾನಪರಿಷತ್ 7 ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಇಂದೇ ಅಧಿಸೂಚನೆ ಪ್ರಕಟವಾಗಿದ್ದು, ಇಂದಿನಿಂದ ಮೇ 31ರವರೆಗೆ ನಾಮಪತ್ರ ಸಲ್ಲಿಸಬಹುದು. ಜೂನ್ 10 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಬಳಿಕ ಮತ ಎಣಿಕೆ ನಡೆಯಲಿದೆ. ಈವರೆಗೆ ಯಾವುದೇ ರಾಜಕೀಯ ಪಕ್ಷ ಅಧಿಕೃತವಾಗಿ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ಆಂಜನೇಯ- ನರೇಂದ್ರಸ್ವಾಮಿ ವಾಗ್ಯುದ್ಧ

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿರುವ 20 ಸಾವಿರ ಕೋಟಿ ರೂ. ಬಳಕೆ ವಿಚಾರದಲ್ಲಿ ಸಮಾಜ ಕಲ್ಯಾಣ  ಸಚಿವ ಎಚ್.ಆಂಜನೇಯ ಮತ್ತು ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಡುವೆ ಬಿರುಮಾತುಗಳು ವಿನಮಯಗೊಂಡವು.

ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ನೀವು ಸಚಿವರಾಗಿ ಏನು ಮಾಡುತ್ತೀದ್ದೀರಿ ಅನ್ನೋದು ಶಾಸಕರ ಪ್ರಶ್ನೆ. ಇದನ್ನೆಲ್ಲ ಕೇಳೋಕೆ ನೀನ್ಯಾರೂ ಅಂತ ಆಕ್ರೋಶದ ಮರು ಉತ್ತರ ಸಚಿವರಿಂದ.

ಇದರಿಂದ ನರೇಂದ್ರ ಸ್ವಾಮಿಯವರಿಗೆ ಮತ್ತಷ್ಟು ಕೋಪ ಏರಿತು. ಸರ್ಕಾರಿ ಬೊಕ್ಕಸದಲ್ಲಿ ಹಣ ಇಟ್ಟುಕೊಂಡು ಸಮುದಾಯಕ್ಕೆ ಒಳ್ಳೆಯದು ಆಗದಿದ್ದರೆ ಏನು ಪ್ರಯೋಜನ ಅಂತ ಕೊನೆಗೆ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಇಬ್ಬರನ್ನೂ ಸಮಾಧಾನಪಡಿಸಿ ಪರಸ್ಪರ ಕ್ಷಮೆ ಕೇಳಿಸಿ ಪರಿಸ್ಥಿತಿ ತಣ್ಣಗಾಗಿಸಿದರು ಅಂತ ರಾಜಕೀಯ ಪಡಸಾಲೆ ಉಸುರುತ್ತಿದೆ. ಸಭೆಯ ನಂತರ ಮಾತನಾಡಿದ ಆಂಜನೇಯ, ಸಭೆಯಲ್ಲಿ ಸಣ್ಣಪುಟ್ಟ ಮಾತುಗಳು ಬಂದವು, ಗಲಾಟೆ ಏನಾಗ್ಲಿಲ್ಲ ಅಂದ್ರು.

ಬಿಎಂಟಿಸಿ ಚತುರ ಸಾರಿಗೆ

ಬಿಎಂಟಿಸಿ ಇಂಟಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ (ಚತುರ ಸಾರಿಗೆ) ಯೋಜನೆಯನ್ನು ಜಾರಿಗೆ ತಂದಿದೆ. ಬಸ್ ಯಾವ ಮಾರ್ಗದಲ್ಲಿ ಚಲಿಸುತ್ತದೆ, ಯಾವ ಸಮಯಕ್ಕೆ ಬರುತ್ತದೆ, ಎಷ್ಟು ಗಂಟೆಗೆ ತಲುಪುತ್ತದೆ ಎಂಬುದೂ ಸೇರಿದಂತೆ ಹಲವು ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾದ ವಿಧಾನ ಇದಾಗಿದೆ. ಟ್ರೈಮ್ಯಾಕ್ಸ್ ಎಂಬ ಐಟಿ ಕಂಪನಿ ಈ ತಂತ್ರಜ್ಞಾನ ರೂಪಿಸಿದೆ.

6500 ಬಸ್‍ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್ ಜಾರಿಗೆ ತರುವ ಯೋಜನೆ ಇದೆ ಎಂದು ಇದೇ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ರೂಪಿಸುವುದರಿಂದ ಚಿಲ್ಲರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಆಶಯವಿದೆ ಎಂದಿದ್ದಾರೆ ಸಚಿವರು.

 ಉಷ್ಣಗಾಳಿಗೆ ತೆಲಂಗಾಣವೊಂದರಲ್ಲೇ 317 ಸಾವು

ಪ್ರಸಕ್ತ ಸಾಲಿನಲ್ಲಿ ದೇಶದಾದ್ಯಂತ ಉಷ್ಣಗಾಳಿಯ ರುದ್ರತಾಂಡವ ಹೆಚ್ಚಾಗಿದೆ. ಪರಿಣಾಮ ತೆಲಂಗಾಣವೊಂದರಲ್ಲೇ 317 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈ ವರ್ಷ ಉಷ್ಣಗಾಳಿಯ ತೀವ್ರತೆಯ ಅಧ್ಯಯನಕ್ಕಾಗಿ ನೇಮಕವಾಗಿದ್ದ ಮೂರು ಸದಸ್ಯರ ಸಮಿತಿ ಈ ಸಂಖ್ಯೆ ನೀಡಿದೆ. ನಲಗೊಂಡ ಜಿಲ್ಲೆಯೊಂದರಲ್ಲೇ 91 ಜನ ಸಾವನಪ್ಪಿದ್ದು, ಈ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ನಲಗೊಂಡದ ಜತೆಗೆ ಅದಿಲಾಬಾದ್, ನಿಜಾಮಾಬಾದ್, ಕರೀಮ್ ನಗರ್, ಮೆಡಕ್, ವಾರಂಗಲ್ ಮತ್ತು ಖಮ್ಮಮ್ ಜಿಲ್ಲೆಗಳಲ್ಲಿ ಮುಂದಿನ 72 ಗಂಟೆಗಳ ಕಾಲ ಈ ಉಷ್ಣಗಾಳಿ ತೀವ್ರತೆ ಇದೇ ರೀತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ರಾಜ್ಯಗಳ ಬಡವಾಗಿಸ್ತಿರೋ ಕೇಂದ್ರದ ಬಾಕಿ

1996-97 ಸಾಲಿನಿಂದ 2014-15 ರವರೆಗೂ ಹತ್ತು ವರ್ಷ ಕೇಂದ್ರ ಸರ್ಕಾರ ಸುಮಾರು ₹ 81 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ. ಆ ಪೈಕಿ ಪ್ರಮುಖವಾಗಿ 2006-07ರಲ್ಲಿ ಸುಮಾರು ₹ 10 ಸಾವಿರ ಕೋಟಿ, 2014-15 ರಲ್ಲಿ ₹ 17 ಸಾವಿರ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಹೀಗೆ ಪ್ರತಿ ವರ್ಷವೂ ಕೇಂದ್ರ ರಾಜ್ಯಗಳಿಗೆ ನೀಡುವ ಪಾಲಿನಲ್ಲಿ ಬಾಕಿ ಉಳಿಸಿಕೊಳ್ಳುತ್ತಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

Leave a Reply