ಸಿಎಂ ಜನತಾ ದರ್ಶನಕ್ಕೆ ಬಂದ ದಲಿತೆಯನ್ನು ಅವಮಾನಿಸಲಾಯಿತೇ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಕಳೆದ ಮೇ 17 ರಂದು ಮುಖ್ಯಮಂತ್ರಿ ಅವರ ಜನತಾದರ್ಶನದಲ್ಲಿ ನೆರವು ಕೋರಲು ಬಂದ ಮಹಿಳೆಯನ್ನು ಪೊಲೀಸರು ಬಂಧಿಸಿ, ಆಕೆಯನ್ನು ರಿಮ್ಯಾಂಡ್ ರೂಮ್ ಗೆ ಕರೆದೊಯ್ದು ಶೋಷಣೆ ನಡೆಸಿದ್ದಾರೆ ಎಂಬುದು ಈಗ ಕೇಳಿಬಂದಿರುವ ಗಂಭೀರ ಆರೋಪ. ಆಕೆ ದಲಿತ ಮಹಿಳೆಯಾಗಿದ್ದು, ವಿವಾದದ ಸ್ವರೂಪ ತೀವ್ರತೆ ಪಡೆದುಕೊಂಡಿದೆ.

ಜೆಡಿಎಸ್ ಮುಖಂಡ ಕುಮಾರಸ್ವಾಮಿ ನೊಂದ ಮಹಿಳೆ ಸವಿತಾ ಅವರೊಂದಿಗೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದಿಷ್ಟು.. ‘ಜನತಾ ದರ್ಶನಕ್ಕೆಂದು ಬಂದ ದಲಿತ ಮಹಿಳೆಯನ್ನು ಭೇಟಿ ಮಾಡದೆ ರಾತ್ರಿ 8 ಗಂಟೆವರೆಗೂ ಸತಾಯಿಸಲಾಗಿದೆ. ಕೊನೆಗೆ ಆಕೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಳೆ ಎಂಬ ಆರೋಪದಲ್ಲಿ ಪೊಲೀಸರು ಬಂಧಿಸಿದರು. ಆಕೆಯನ್ನು ಮಡಿವಾಳದ ಮಹಿಳಾ ನಿಲಯದಲ್ಲಿ ಇರಿಸಿ ಶೋಷಣೆ ಮಾಡಿದ್ದಾರೆ. ಬೆತ್ತಲುಗೊಳಿಸಿ ಜೈಲಿಗೆ ಹಾಕುವುದಾಗಿ ಪೊಲೀಸರು ಆಕೆಗೆ ಬೆದರಿಸಿದ್ದಾರೆ. ಯಾರ ಉದ್ಧಾರಕ್ಕಾಗಿ ಸಿಎಂ ಜನತಾ ದರ್ಶನ ಕಾರ್ಯಕ್ರಮ ಮಾಡುತ್ತಿದ್ದಾರೆ? ಜನತಾ ದರ್ಶನಕ್ಕೆಂದು ಬಂದ ಮಹಿಳೆಯನ್ನು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಳೆ ಎಂಬ ಆರೋಪದಲ್ಲಿ ಬಂಧಿಸಿದ್ದೇಕೆ? ಈ ರೀತಿ ಮಹಿಳೆಯ ಕಣ್ಣಲ್ಲಿ ನೀರು ಹಾಕಿಸಿದರೆ, ಮುಂದಿನ ಬಾರಿ ನೀವು ಸರ್ಕಾರ ರಚಿಸಲ್ಲ. ಬದಲಿಗೆ ಭಸ್ಮವಾಗೊಗ್ತೀರಾ…’

ನೊಂದ ಮಹಿಳೆ ಸವಿತಾ ಹೇಳಿದ್ದು..

‘ಹಕ್ಕು ಪತ್ರ ಕೇಳಲಿಕ್ಕೆ ಮುಖ್ಯಮಂತ್ರಿ ಅವರ ಮನೆಗೆ ಹೋಗಿದ್ದೆ. ಸಂಜೆಯಾದರೂ ನನ್ನನ್ನು ಒಳಗೆ ಬಿಡಲಿಲ್ಲ. ನಂತರ ಹೊಯ್ಸಳ ಪೊಲೀಸರು ನನ್ನ ಕರೆದೊಯ್ದರು. ಅಲ್ಲಿಂದ ಮಹಿಳಾ ನಿಲಯಕ್ಕೆ ಹೋದೆ. ಅಲ್ಲಿ ನನ್ನ ಸೀರೆ ಹಿಡಿದು ಎಳೆದಾಡಿದರು. ನಿನ್ನ ಮೇಲೆ ವೇಶ್ಯಾವಾಟಿಕೆ ದೂರು ದಾಖಲಿಸುತ್ತೇವೆ ಎಂದು ಪೊಲೀಸರು ಬೆದರಿಕೆ ಹಾಕಿದರು.’

ಸಿಎಂ ಕೊಟ್ಟ ಸ್ಪಷ್ಟನೆ..

‘ಕುಮಾರಸ್ವಾಮಿ ಮಹಿಳೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆ ಮಹಿಳೆ ನನ್ನನ್ನು ಭೇಟಿ ಮಾಡಿಲ್ಲ. ಪೋಲೀಸರು ಹೇಳುತ್ತಿರುವ ಪ್ರಕಾರ ತಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯ ಬಳಿ ಗಲಾಟೆ ಮಾಡುತ್ತಿದ್ದಳು. ಅದಕ್ಕಾಗಿ ಪೊಲೀಸರು ಆಕೆಯನ್ನು ಬಂಧಿಸಿ ರಿಮ್ಯಾಂಡ್ ರೂಮ್ ಗೆ ಕರೆದುಕೊಂಡು ಹೋಗಿ ಬಿಟ್ಟರು. ಬೆಳಗ್ಗೆ ಆಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆಯುತ್ತೇನೆ. ಆಕೆಗೆ ಆಗಿರುವ ಅನ್ಯಾಯದ ಬಗ್ಗೆ ದೂರು ನೀಡಲಿ, ನಾನು ಕ್ರಮ ಕೈಗೊಳ್ಳುತ್ತೇನೆ. ಕುಮಾರಸ್ವಾಮಿ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು.’

Leave a Reply