ಒಂದು ಟನ್ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು ಬರೀ ₹ 1, ಕೃಷಿಕನ ದುಃಸ್ಥಿತಿಗೆ ಹಿಡಿದ ಕನ್ನಡಿ!

ಡಿಜಿಟಲ್ ಕನ್ನಡ ಟೀಮ್:  ಒಂದು ಟನ್ ಈರುಳ್ಳಿ ಬೆಳೆದ ರೈತನಿಗೆ ಸಿಗೋದು ಬರೀ ಒಂದು ರುಪಾಯಿ ಅಂದ್ರೆ ನಂಬಲು ಕಷ್ಟ ಆಗಬಹುದು. ಆದರೆ, ಇದು ವಾಸ್ತವ.

ದೇವಿದಾಸ್ ಪರ್ಭಾನೆ.. ಈತ ಪುಣೆಯ ಹಳ್ಳಿಯೊಂದರ ರೈತ. ದೇಶದಲ್ಲಿ ರೈತರ ಪರಿಸ್ಥಿತಿ ಯಾವ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಈತ ತಾಜಾ ಉದಾಹರಣೆ.

ಈತನ ಬಳಿ ಇರುವುದು 2 ಎಕರೆ ಕೃಷಿ ಭೂಮಿ. ಅದರಲ್ಲಿ ₹ 80 ಸಾವಿರ ಖರ್ಚು ಮಾಡಿ ಆತ ಬೆಳೆದಿದ್ದು ಈರುಳ್ಳಿ ಬೆಳೆ. ಈ ಎರಡು ಎಕರೆ ಜಾಗದಲ್ಲಿ ಈ ಬಾರಿ ಆತನಿಗೆ 952 ಕೆ.ಜಿಯಷ್ಟು ಇಳುವರಿ ಬಂದು ಬಂಪರ್ ಬೆಳೆ ಸಿಕ್ಕಿತು. ಆದರೆ, ಬಂಪರ್ ಬೆಳೆಯ ಖುಷಿ ನೀರ ಮೇಲಿನ ಗುಳ್ಳೆಯಂತಾಗಿದ್ದು ಮಾತ್ರ ದುರಂತ. ತಾನು ಬೆಳೆದ ಈರುಳ್ಳಿಯನ್ನು ಉತ್ಸಾಹದಲ್ಲಿ ಟ್ರಕ್ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಗೆ ತೆಗೆದುಕೊಂಡು ಹೋದ. ಆದರೆ, ಆತನಿಗೆ ಅಲ್ಲಿ ದೊಡ್ಡ ಶಾಕ್ ಎದುರಾಗಿತ್ತು. ಕಾರಣ, ಈರುಳ್ಳಿ ಬೆಲೆ ಪಾತಾಳ ಕಂಡಿತ್ತು.

ಈರುಳ್ಳಿ ಬೆಲೆ ಕುಸಿತ ಆತನಿಗೆ ಯಾವ ಮಟ್ಟಿಗೆ ಭ್ರಮನಿರಸನಕ್ಕೆ ಕಾರಣವಾಯಿತೆಂದರೆ, ಪ್ರತಿ ಕೆ.ಜಿಗೆ ₹ 3 ಬೆಲೆ ಸಿಕ್ಕರೆ ಸಾಕು ಎನ್ನುವಷ್ಟರ ಮಟ್ಟಿಗೆ. ಅಲ್ಲಿನ ವ್ಯಾಪಾರಿಗಳ ಜತೆ ಸಾಕಷ್ಟು ಚೌಕಾಸಿ ಮಾಡಿದರೂ ಆತನಿಗೆ ವ್ಯಾಪಾರ ಕುದುರಿದ್ದು ಪ್ರತಿ 10 ಕೆ.ಜಿಗೆ ₹ 16 ಎಂಬಂತೆ. ಅಲ್ಲಿಗೆ ಪ್ರತಿ ಕೆ.ಜಿಗೆ ಸಿಕ್ಕಿದ್ದು ₹ 1.60 ಮಾತ್ರ.

ಆತನೇ ಹೇಳಿರುವ ಲೆಕ್ಕದ ಪ್ರಕಾರ ಪ್ರತಿ ಕೆ.ಜಿಗೆ ₹ 1.60. ಒಟ್ಟು 952 ಕೆ.ಜಿಗೆ ₹ 1523.20 ಸಿಕ್ಕಿತು. ಆ ಪೈಕಿ ₹ 91.35 ದಳ್ಳಾಳಿಗಳ ಜೇಬಿಗಿಳಿಯಿತು. ಕೂಲಿ ವೇತನ ಅಂತಾ ₹ 59 ಖಾಲಿ, ಇನ್ನು ₹ 18.55 ಮತ್ತು ₹ 33.30 ಇತರೆ ವೆಚ್ಚವಾಗಿ ಹೊಯ್ತು. ಇನ್ನು ತನ್ನ ಈರುಳ್ಳಿಯನ್ನು ಹೊತ್ತು ತಂದ ಟ್ರಕ್ ಬಾಡಿಗೆ ₹ 1320 ತಗುಲಿತ್ತು. ಆ ಮೂಲಕ ಮಾರಾಟದಲ್ಲಿ ಸಿಕ್ಕ ₹ 1523 ರಲ್ಲಿ ₹ 1522 ವ್ಯಾಪಾರದ ಹಂತದಲ್ಲೇ ಖಾಲಿಯಾಗಿ ಕೇವಲ ₹1 ಮಾತ್ರ ಆತನ ಕೈಯಲ್ಲಿತ್ತು.

‘ನಾಲ್ಕು ತಿಂಗಳ ಕಾಲ ನಾನು ಕಷ್ಟ ಪಟ್ಟು ಬೆಳೆ ಬೆಳೆದೆ. ಇದನ್ನು ಕಾಪಾಡಲು ಲೋಡ್ ಶೆಡ್ಡಿಂಗ್ ನಡುವೆಯೂ ನೀರು ಹಾಯಿಸಿದೆ. ಇಲ್ಲಿ ಲಾಭ ಬರುವುದಿರಲಿ ಹಾಕಿದ ಬಂಡವಾಳವನ್ನು ಪಡೆಯಲು ಪರದಾಡುತ್ತಿದ್ದೇನೆ. ಪ್ರತಿ ನಿತ್ಯ ಬರ ಪೀಡಿತ ಪ್ರದೇಶಗಳಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳನ್ನು ಕೇಳುತ್ತಲೇ ಇದ್ದೀವಿ. ಈರುಳ್ಳಿ ಬೆಲೆ ಈ ರೀತಿಯಾಗಿ ಕುಸಿತ ಕಂಡ ನಂತರ ನನ್ನಂತ ರೈತನೂ ಆತ್ಮಹತ್ಯೆ ಹಾದಿ ಹಿಡಿದರೆ ಅನುಮಾನವಿಲ್ಲ’ ಎಂಬುದು ದೇವಿದಾಸ್ ನೋವಿನ ನುಡಿ.

Leave a Reply