ತೆಲಂಗಾಣದ ಈ ಐಟಿ ಮಿನಿಸ್ಟರ್ ಕರ್ನಾಟಕದ ಹೆಗ್ಗಳಿಕೆ ಕಸಿದಾರು ಎಚ್ಚರ!

ಚೈತನ್ಯ ಹೆಗಡೆ

ಆ್ಯಪಲ್ ಸಿಇಒ ಟಿಮ್ ಕುಕ್ ಭಾರತಕ್ಕೆ ಬಂದು ಹೋಗಿದ್ದು ಮಾಧ್ಯಮದಲ್ಲಿ ಸಾಕಷ್ಟು ವಿವರವಾಗಿ ವರದಿಯಾಗಿದೆ. ಬಾಲಿವುಡ್ ಕೈಕುಲುಕುವಿಕೆ, ದೇವಸ್ಥಾನ ಭೇಟಿ ಇಂಥ ಅಲಂಕಾರಿಕ ವಿವರಗಳನ್ನು ಬದಿಗಿರಿಸಿ ನೋಡಿದರೆ ಮುಖ್ಯವಾಗಿ ಎರಡು ಕಾರ್ಯಗಳು ಟಿಮ್ ಭೇಟಿಯಲ್ಲಿ ಸಾಕಾರವಾಗಿವೆ. ಬೆಂಗಳೂರಿನಲ್ಲಿ ಐಫೋನ್ ಕಿರುತಂತ್ರಾಂಶ (ಆ್ಯಪ್) ತಯಾರಕರ ವಿಭಾಗ ಪ್ರಾರಂಭಿಸುವುದಕ್ಕೆ ಒಪ್ಪಿಗೆ ಹಾಗೂ ಹೈದರಾಬಾದಿನಲ್ಲಿ ಆ್ಯಪಲ್ ಮ್ಯಾಪ್ ಅಭಿವೃದ್ಧಿ ವಿಭಾಗವನ್ನು ತೆರೆಯುವುದಕ್ಕೆ ಮುಂದಾಗಿರುವುದು. ಉಳಿದಂತೆ, ಬೇರೆಡೆ ಬಳಕೆಯಾದ ಐಫೋನ್ ಗಳನ್ನು ಭಾರತದಲ್ಲಿ ಮಾರುವ ಯೋಜನೆ ಆ್ಯಪಲ್ ಗೆ ಇತ್ತಾದರೂ ಭಾರತ ಸರ್ಕಾರ ಅಂಥ ಯೋಜನೆಗೆ ಅನುವು ಮಾಡಿಕೊಡಲಿಲ್ಲ.

ಟಿಮ್ ಕುಕ್ ಸಾಂಪ್ರದಾಯಿಕ ಧಿರಿಸು, ದೇಗುಲ ಭೇಟಿ, ಮಾಧ್ಯಮಗಳ ಸಂದರ್ಶನ ಇಂಥ ಎಲ್ಲ ಸಾರ್ವಜನಿಕ ಸಂಪರ್ಕದ ಸರ್ಕಸ್ಸುಗಳ ಮಜದಿಂದ ಸ್ವಲ್ಪ ಹೊರಗೆ ನಿಂತು ಈ ಭೇಟಿ ಅಂಶಗಳನ್ನು ಗಮನಿಸಲು ಹೋದರೆ ಅಲ್ಲೊಂದು ಭಾಷಣ ಬಹುವಾಗಿ ಗಮನ ಸೆಳೆಯುತ್ತದೆ…

ಇಲ್ಲ… ಅದು ಟಿಮ್ ಕುಕ್ ಭಾಷಣ ಅಲ್ಲ. ಬದಲಿಗೆ, ಕುಕ್ ಎದುರು ತೆಲಂಗಾಣವನ್ನು ಮಾರ್ಕೆಟ್ ಮಾಡಿಕೊಳ್ಳುತ್ತ ಆ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ. ಟಿ. ರಾಮರಾವ್ ಎಂಬ 40ರ ಹರೆಯದ ಸಚಿವ ಮಾಡಿದ ಭಾಷಣ. ಈತನ ಸ್ಫುಟ- ಆಕರ್ಷಕ ಮಾತು ಯೂಟ್ಯೂಬಿನಲ್ಲಿ ಲಭ್ಯವಿದ್ದು, ಫೇಸ್ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ.

ಚೆಂದದ ಇಂಗ್ಲಿಷು ಎಂಬ ಕಾರಣಕ್ಕಷ್ಟೇ ರಾಮರಾವ್ ಮಾತುಗಳು ಗಮನಸೆಳೆಯುತ್ತವೆ ಅಂತಲ್ಲ. ಬದಲಿಗೆ, ದೈತ್ಯ ಕಂಪನಿಯೊಂದರ ಮುಖ್ಯಸ್ಥ ವಹಿವಾಟಿನ ಅವಕಾಶಗಳನ್ನು ಹುಡುಕಿಕೊಂಡು ಬಾಗಿಲಲ್ಲಿ ನಿಂತಿರುವಾಗ, ನಮ್ಮ ಧೋರಣೆ ಹೆಂಗಿರಬೇಕು ಅಂತ ಚೆನ್ನಾಗಿ ಕಟ್ಟಿಕೊಡುತ್ತಿದೆ ಇದು. ಪ್ರತಿಪಾದಿಸುತ್ತಿರುವ ವಿಷಯಗಳಲ್ಲಿ ಸ್ಪಷ್ಟತೆ, ಎಲ್ಲೂ ರಿಪೀಟು ಹೊಡೆಯದೆ ಆಸಕ್ತಿ ಕಾದುಕೊಳ್ಳುವ ಶೈಲಿ…. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮೊಂದಿಗೆ ವಹಿವಾಟು ನಡೆಸುವ ಸಮಬಲರು ನಾವು ಎಂಬಂತೆ ಮಾತಿನಲ್ಲಿ ತುಂಬಿದ್ದ ಜಂಬರಹಿತ ವಿಶ್ವಾಸ. ಐದೂ ಚಿಲ್ಲರೆ ನಿಮಿಷಗಳಲ್ಲಿ ಈ ಸಚಿವ ತೆಲಂಗಾಣವನ್ನು ಟಿಮ್ ಕುಕ್ ಎದುರು ಮಾರ್ಕೆಟ್ ಮಾಡಿಕೊಂಡ ರೀತಿ ಇದೆಯಲ್ಲ… ಯಾರೂ ಇದನ್ನು ಮ್ಯಾನೇಜ್ಮೆಂಟ್ ಪಾಠದಂತೆ ಓದಿಕೊಂಡುಬಿಡಬಹುದು.

‘ಮಿಸ್ಟರ್ ಕುಕ್… ಈ ದಿನಗಳಲ್ಲಿ ಎಲ್ಲ ಕಡೆ ಒಂದು ಮಾತು ಕೇಳಿ ಬರ್ತಿದೆ. ವಾಟ್ಸ್ ಕುಕಿಂಗ್ ಅಂತ… ಈಗ ನೀವೇ ನಮ್ಮ ಮುಂದಿದ್ದೀರಿ’ ಅಂತ ಚಟಾಕಿ ಹಾರಿಸುತ್ತಲೇ ಮೆದುವಾಗಿ ಶುರುವಾದ ಮಾತು, ಮುಂದಿನ ಹಂತದಲ್ಲಿ ಟಿಮ್ ನಿಂದ ಜಾರಿಕೊಂಡು ಸ್ವಂತ ರಾಜ್ಯದ ಮೇಲೆ ಫೋಕಸ್ ಆದ ಸ್ವಾರಸ್ಯ ಗಮನಿಸಬೇಕು. ದಟ್ ಈಸ್ ಬಿಸಿನೆಸ್! ‘ಕುಕ್… ನಾವು ಇತ್ತೀಚೆಗಷ್ಟೇ ರೂಪುಗೊಂಡ ಹೊಸರಾಜ್ಯ. ಹಾಗೆಂದೇ ನಾವು ನಮ್ಮನ್ನು ಸ್ಟಾರ್ಟ್ ಅಪ್ ಸ್ಟೇಟ್ ಅಂತ ಕರೆದುಕೊಳ್ಳುತ್ತೇವೆ. ನವೋದ್ದಿಮೆಯ ಉತ್ಸಾಹವನ್ನು ಕಟ್ಟಿಕೊಂಡೇ ನಾವು ಪ್ರೈವೇಟ್ ಕಂಪನಿಯ ಥರ ಕೆಲಸ ಮಾಡ್ತೀವಿ. ನಿಮಗೆ ಗೊತ್ತಿರಲಿ ಟಿಮ್… ಬಿಸಿನೆಸ್ ಮಾಡುವುದಕ್ಕೆ ಸುಲಭದ ವಾತಾವರಣ ಅಂತೇವಲ್ಲ, ಅದು ದೇಶದಲ್ಲೇ ಹೈದರಾಬಾದಿನಲ್ಲಿ ಉತ್ತಮವಾಗಿದೆ ಅನ್ನೋ ನಂಬಿಕೆ ನಮ್ದು. ನಮ್ಮ ಸರ್ಕಾರ ಬಂದ ನಂತರ, ನಮ್ಮ ಮುಖ್ಯಮಂತ್ರಿಗಳು ವಿದೇಶಗಳನ್ನೆಲ್ಲ ಸುತ್ತಿ ಅಲ್ಲಿನ ಉತ್ತಮ ಅಂಶಗಳೊಂದಿಗೆ ಕೈಗಾರಿಕಾ ನೀತಿ ರೂಪಿಸಿದ್ದಾರೆ. ಇಲ್ಲಿ ಉದ್ಯಮ ಸ್ಥಾಪಿಸೋದಕ್ಕೆ ಸೆಲ್ಫ್ ಸರ್ಟಿಫಿಕೇಷನ್ ಸಾಕು. ಅಂದರೆ ನಾವು ಉದ್ದಿಮೆ ಮಾಡಲು ಬಂದವರನ್ನು ಕಚೇರಿಯಿಂದ ಕಚೇರಿಗೆ ಅಲೆಸುವುದಿಲ್ಲ. ನೀವು ಪ್ರಸ್ತಾವ ಸಲ್ಲಿಸಿದ 15 ದಿನಗಳೊಳಗೆ ಹೌದು ಅಥವಾ ಇಲ್ಲ ಎಂಬ ಉತ್ತರ ಸಿಗುತ್ತೆ. 16ನೇ ದಿನ ನಮ್ಮಿಂದ ಉತ್ತರ ಬರದಿದ್ದರೆ ಅದನ್ನೇ ಸಮ್ಮತಿ ಅಂತ ತಿಳಿದು ನೀವು ಉದ್ದಿಮೆ ಪ್ರಾರಂಭಿಸಿಬಿಡಬಹುದು. ಇದು ಬಹುಶಃ ನಮ್ಮಲ್ಲಿ ಮಾತ್ರ ಲಭ್ಯವಿರುವ ನಿಯಮ. ಉತ್ತರದಾಯಿತ್ವ ಮತ್ತು ಪಾರದರ್ಶಕತೆಗಳು ನಮ್ಮ ಎರಡನೇ ಮುಖ್ಯ ಅಂಶ. ಮೂರನೆಯದಾಗಿ ಟಿಮ್… ಹೊಸರಾಜ್ಯ ಶುರುವಾಗಿ 23 ತಿಂಗಳಲ್ಲಿ ಜಗತ್ತಿನ ದೈತ್ಯ ಕಂಪನಿಗಳು ನಮ್ಮ ಅಂಗಳದಲ್ಲಿವೆ. ನಾವೀಗ ಮಾತಾಡುತ್ತಿರುವ ಜಾಗದಿಂದ 2 ಕಿಲೋಮೀಟರ್ ದೂರದಲ್ಲಿ ಅಮೆಜಾನ್ ಘಟಕ ತಲೆ ಎತ್ತುತ್ತಿದೆ. ಗೂಗಲ್ ಸಹ ಕಚೇರಿ ತೆರೆಯುತ್ತಿದೆ. ಸೋ ಮಿಸ್ಟರ್ ಟಿಮ್ ಕುಕ್… ನಿಮ್ಮ ಸ್ಪರ್ಧಿಗಳೆಲ್ಲ ಇರೋದು ಇಲ್ಲಿಯೇ!’

‘ಟಿಮ್, ಭಾರತದಲ್ಲಿ ನಮ್ಮನ್ನೂ ಸೇರಿದಂತೆ ಹಲವು ಆಯ್ಕೆಗಳನ್ನು ನೀವು ಹೊಂದಿದ್ದೀರಿ. ಸ್ಮಾರ್ಟ್ ಫೋನ್ ಗಳ ಬಳಕೆ ಇನ್ನು ಹೆಚ್ಚುತ್ತಲೇ ಸಾಗುವುದರಿಂದ ನಿಮಗಿಲ್ಲಿ ಮಾರುಕಟ್ಟೆ ಇದ್ದೇ ಇದೆ. ತೆಲಂಗಾಣದಲ್ಲೂ ನೀವು ಈಗಾಗಲೇ ಆ್ಯಪಲ್ ಫೋನ್ ಗಳ ಬಳಕೆ ಸಾಕಷ್ಟು ಕಾಣಬಹುದು. ನಮ್ಮಲ್ಲೊಂದು ಕ್ಯಾಂಪಸ್ ಸ್ಥಾಪಿಸಿ. ಹಾಗೆಯೇ ಮುಂದುವರಿದ ಹಂತದಲ್ಲಿ ನಿಮ್ಮ ಉತ್ಪಾದನಾ ಘಟಕವೂ ತೆಲಂಗಾಣದಲ್ಲಿ ಶುರುವಾಗಲಿ. ನಿಮ್ಮಂತೆ ಅನ್ವೇಷಣೆಯನ್ನು ಇಷ್ಟಪಡೋರು ನಾವು. ಸಮಾನ ಸಹಭಾಗಿತ್ವವನ್ನು ಹೊಂದಿ ಒಟ್ಟಿಗೆ ಹೆಜ್ಜೆ ಹಾಕೋಣ..’

ಯಾವುದೇ ದೈನ್ಯವಿಲ್ಲದೇ, ಅದೇ ಸಮಯಕ್ಕೆ ಏಕೆ ತಮ್ಮಲ್ಲೇ ನಿಲ್ಲಬೇಕೆಂಬುದಕ್ಕೆ ಕಾರಣಗಳನ್ನೂ ಕೊಡುತ್ತ, ಅಲ್ಪ ಸಮಯದಲ್ಲೇ ಎಷ್ಟೆಲ್ಲ ವಿಷಯಗಳನ್ನು ಆಪ್ತವಾಗಿ ಹೇಳಿದ ಈ ಸಚಿವರ ಬಗ್ಗೆ ಮೆಚ್ಚುಗೆ ಮೂಡದಿರದೇ?

ಹಾಗೆಯೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಕರ್ನಾಟಕವೇನೋ ಒಂದು ಹಂತದಲ್ಲಿ ಐಟಿ ಸಿಟಿ ಎಂದು ಗುರುತಿಸಿಕೊಂಡಿದೆ. ಆದರೆ ಒಬ್ಬ ಕೆಟಿ ರಾಮರಾವ್ ಥರದಲ್ಲಿ ಭವಿಷ್ಯದಲ್ಲಿ ಕರ್ನಾಟಕವನ್ನು ಮಾರ್ಕೆಟ್ ಮಾಡಬಲ್ಲ ಮುಖಗಳೇನಾದರೂ ನಮ್ಮ ಒಟ್ಟಾರೆ ರಾಜಕಾರಣದಲ್ಲಿ ಕಾಣುತ್ತಿವೆಯೇ? ಎಲ್ಲ ಪಕ್ಷಗಳಲ್ಲಿ ಹುಡುಕಬೇಕಷ್ಟೆ ಎಂಬುದು ತೋಚುತ್ತಿರುವ ಉತ್ತರ ಎಂದಾದರೆ ಭವಿಷ್ಯದ ಔದ್ಯೋಗಿಕ ರೇಸ್ ಅನ್ನು ಕರ್ನಾಟಕ ಕಳೆದುಕೊಂಡೀತು.

ಯಾರೀ ಕೆ. ಟಿ. ರಾಮರಾವ್? ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರ ಮಗ. ಹಾಗಂತ ಮಗನೆಂಬ ಒಂದು ಕಾರಣವನ್ನಿಟ್ಟುಕೊಂಡು ಸುದ್ದಿಯಾಗುತ್ತಿಲ್ಲ ಎಂಬುದು ಸಮಾಧಾನದ ಅಂಶ. ಮುಖ್ಯಮಂತ್ರಿ ಚಂದ್ರಶೇಖರರಾವ್ ಹೋಮ- ಹವನ ಮಾಡಿ ರಾಜ್ಯ ಉದ್ಧಾರ ಮಾಡ್ತೇನೆ ಎಂಬಂತೆ ನಡೆದುಕೊಳ್ಳುವುದನ್ನು ನೋಡಿದರೆ ಪಿಚ್ಚೆನಿಸುತ್ತದೆ. ಆದರೆ ಮಗನ ದಾರಿ ಮತ್ತು ಇಮೇಜ್ ಮಾತ್ರ ಭಿನ್ನ. ಮಾಹಿತಿ ತಂತ್ರಜ್ಞಾನ ಸಚಿವ ಹುದ್ದೆ ವಹಿಸಿಕೊಂಡ ನಂತರ ತೆಲಂಗಾಣದಲ್ಲಿ ಬಹಳ ಕೆಲಸಗಳಾಗಿವೆ, ಆಗುತ್ತಿವೆ. ಹಾಗೆ ನೋಡಿದರೆ ಹೈದರಾಬಾದಿಗೆ 1995-2004ರ ಅವಧಿಯಲ್ಲಿ ಐಟಿ ಮೆರಗು ನೀಡಿದ ಖ್ಯಾತಿ, ಈಗ ಸೀಮಾಂಧ್ರದ ಮುಖ್ಯಮಂತ್ರಿ ಆಗಿರುವ ಚಂದ್ರಬಾಬು ನಾಯ್ಡು ಅವರದ್ದು. ನಾಯ್ಡು ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯ ತೋರುತ್ತಿದ್ದಾರೆ ಈ ಕೆಟಿಆರ್. ಅದಕ್ಕೆ ಈ ಅವಧಿಯಲ್ಲಾಗುತ್ತಿರುವ ಪ್ರಯತ್ನಗಳೇ ಸಾಕ್ಷಿ.

ಹೈದರಾಬಾದಿನಲ್ಲಿ ನಿರ್ಮಾಣವಾಗಿರುವ ಟಿ-ಹಬ್ ಬಹಳ ದೊಡ್ಡ ಯತ್ನ. ಮೊದಲ ಹಂತದಲ್ಲಿ 40 ಕೋಟಿ ರುಪಾಯಿ ಬಂಡವಾಳ ಹೂಡಿ 70 ಸಾವಿರ ಚದರ ಅಡಿ ಜಾಗದಲ್ಲಿ ತಲೆಎತ್ತಿರುವ ಸ್ಥಾವರಗಳು ಸುಮಾರು 300 ಸ್ಟಾರ್ಟ್ ಅಪ್ ಕಂಪನಿಗಳಿಗೆ ಜಾಗ ನೀಡಿವೆ. ‘ಇವತ್ತಿನ ಕಾಲಕ್ಕೆ ಬೇಕಿರೋದು ಹೊಸ ಐಡಿಯಾಗಳು. ಐಡಿಯಾ ಜತೆಗೆ ಇಲ್ಲಿ ಬನ್ನಿ. ಪ್ರಾಡಕ್ಟ್ ಗಳ ಜತೆ ಹೊರಹೋಗಿ’ ಎಂಬ ಸ್ಫೂರ್ತಿಯ ಮಾತುಗಳನ್ನಾಡುವ ಕೆಟಿಆರ್ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಅಮೆರಿಕ ಸೇರಿದಂತೆ ಇತರ ದೇಶಗಳನ್ನು ಸುತ್ತಿದ ಫಲವಾಗಿ ತೆಲಂಗಾಣದಲ್ಲೀಗ ಸಿಸ್ಕೊ, ಅಮೆಜಾನ್, ಒರಾಕಲ್ ಕಂಪನಿಗಳೆಲ್ಲ ಬೇರು ಬಿಡುತ್ತಿವೆ. ಅಮೆಜಾನ್, ಲುಲು ಗ್ರೂಪ್ ಸೋರಿದಂತೆ ಹಲವರು ಅಲ್ಲಿ ಅಂಗಡಿ ತೆರೆದಿದ್ದಾರೆ. ಅದಾಗಲೇ ಅಲ್ಲಿ ಅಸ್ತಿತ್ವದಲ್ಲಿದ್ದ ಇನ್ಫೊಸಿಸ್ ಅನ್ನು 12 ಸಾವಿರದಿಂದ 25 ಸಾವಿರ ಸಿಬ್ಬಂದಿಗೆ ಹೆಚ್ಚಿಸುವ ನಿರ್ಧಾರ ವಿಶಾಲ್ ಸಿಕ್ಕ ತೆಗೆದುಕೊಳ್ಳುತ್ತಾರೆಂದರೆ, ಅಲ್ಲಿ ಈ ಸಚಿವರು ಮೂಡಿಸಿರುವ ವಿಶ್ವಾಸ ಕೆಲಸ ಮಾಡಿರುತ್ತದೆ. ಉಬರ್ ಹೈದರಾಬಾದಿನಲ್ಲಿ ಹೂಡಿರುವ 50 ಮಿಲಿಯನ್ ಡಾಲರ್, ಅಮೆರಿಕದ ಹೊರಗಡೆ ಅದರ ಅತಿದೊಡ್ಡ ಹೂಡಿಕೆ ಎನಿಸಿಕೊಂಡಿದೆ.  ‘ತೆಲಂಗಾಣ ಅಕಾಡೆಮಿ ಫಾರ್ ಸ್ಕಿಲ್ ಆ್ಯಂಡ್ ನಾಲೆಜ್’ನ ಅಭಿವೃದ್ಧಿ ಕನಸನ್ನೂ ಕಣ್ಮುಂದಿರಿಸಿ ಕುಳಿತಿದ್ದಾರೆ ಕೆಟಿಆರ್.

ತೆಲಂಗಾಣದ ಈ ಐಟಿ ತುರುಸು ಕರ್ನಾಟಕಕ್ಕೆ ಹೇಗೆಲ್ಲ ಏಟು ಕೊಟ್ಟೀತು ಎಂಬ ಆತಂಕ ಇದ್ದೇ ಇದೆ. ಆದರೆ ಗುಣಕ್ಕೇಕೆ ಮತ್ಸರ? ಈ ಮನುಷ್ಯ ಕೆಟಿಆರ್ ಅರ್ಥಾತ್ ಕಲವಕುಂತಲ ತಾರಕ ರಾಮರಾವ್, ಭಾರತದ ಹೊಸ ಪರಿಭಾಷೆಯ ಅಭಿವೃದ್ಧಿ ರಾಜಕಾರಣವು ಮುಖ್ಯಗಮನದಲ್ಲಿರಿಸಿಕೊಳ್ಳಬೇಕಾದ ವ್ಯಕ್ತಿ!

3 COMMENTS

  1. ಸರ್, ವಿಚಾರವನ್ನು ಉತ್ತಮವಾಗಿ ವಿಶ್ಲೇಷಣೆ ಮಾಡಿದ್ದೀರಿ.ಆದರೆ, ನೀವು ರಾಮರಾವ್ ಹೇಳಿದ ಎರಡನೇ ವಿಚಾರವನ್ನು ಒಂದೇ ವಾಕ್ಯದಲ್ಲಿ ಹೇಳಿದ್ದೀರಿ.
    ಎರಡನೇ ಅಂಶವೂ ಮಹತ್ವದ್ದೆ ಆಗಿದೆ. ರಾಮರಾವ್ ಹೇಳುತ್ತಾರೆ, ನಾವು (ಸರ್ಕಾರ) ನೀಡಿದ ಭರವಸೆಗಳು ಈಡೇರಲಿಲ್ಲವಾದರೆ, ನಾವೂ ಕಾನೂನಿನ ಪ್ರಕಾರ ತಪ್ಪಿತಸ್ಥರಾಗುತ್ತೇವೆ ಎಂದು. ಅಂದರೆ, ತೆಲಂಗಾಣ ನೆಲದಲ್ಲಿ ಬಂಡವಾಳ ಹೂಡುವಾಗ ತೆಲಂಗಾಣ ಸರ್ಕಾರ ನೀಡಿದ್ದ ಭರವಸೆಗಳು ಆನಂತರದಲ್ಲಿ ಹುಸಿಯಾದರೆ, ಯಾವುದೇ ನಿರ್ದಿಷ್ಟ ಕಂಪನಿಯು ಸರ್ಕಾರದ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡಬಹುದು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಮುಂದೆ ಅದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಅನ್ನೋದು ಆಮೇಲಿನ ವಿಚಾರ.ಆದರೆ,ಒಬ್ಬ ದೈತ್ಯ ಕಂಪನಿಯ ಮುಖ್ಯಸ್ಥನ ಮುಂದೆ ಅವರು ಹೀಗೆ ಹೇಳಿರುವುದು ಸ್ವಾಗತಾರ್ಹ.
    ಇದು ನಿಮ್ಮ ಲೇಖನದಲ್ಲಿ ತಪ್ಪಿ ಹೋಗಿದೆ. ದಯವಿಟ್ಟು ಗಮನಿಸಿ.

  2. Please forward this article to the heads of all parties in Karnataka and in particular to the honorable Chief Minister of Karnataka

  3. ಈ ಹಿಂದೆ ಚಂದ್ರನ್ನ ಅಖಂಡ ಆಂದ್ರಪ್ರದೇಶ ಮುಖ್ಯ ಮಂತ್ರಿ ಆಗಿದ್ದಾಗ ನಡೆಯದಿರುವದು,ಈಗ ಆಗುವುದೇ?

Leave a Reply