ತ್ರಿಪುರಾ ಮಕ್ಕಳಿಗೆ ಭಾರತ ಇತಿಹಾಸದ ಬದಲಿಗೆ ಕಮ್ಯುನಿಸ್ಟ್ ಪಾಠ ಹೇಳಿಕೊಡಲು ಮುಂದಾಗಿದೆ ಸಿಪಿಐ ಸರ್ಕಾರ

ಡಿಜಿಟಲ್ ಕನ್ನಡ ಟೀಮ್: ಮುಂದಿನ ಪೀಳಿಗೆ ನಮ್ಮ ದೇಶದ ಬಗ್ಗೆ ಕಿಂಚಿತ್ತಾದರೂ ತಿಳಿದಿರುತ್ತದೋ ಇಲ್ಲವೋ ಎಂಬ ಆತಂಕ ಈಗ ಹುಟ್ಟುಕೊಳ್ಳುತ್ತಿದೆ. ಇದಕ್ಕೆ ಕಾರಣ, ತ್ರಿಪುರಾದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇತಿಹಾಸ ವಿಷಯದಲ್ಲಿ ಹೊಸ ಪಠ್ಯಕ್ರಮ ತರಲಾಗಿದ್ದು, ಅದರಲ್ಲಿ ಭಾರತದ ಇತಿಹಾಸದ ಬಗ್ಗೆ ಒಂದೇ ಒಂದು ಎಳೆಯೂ ಮಾಹಿತಿ ಇಲ್ಲ. ಬದಲಾಗಿ ಮಕ್ಕಳಿಗೆ ಕಮ್ಯುನಿಷ್ಟ್ ನಾಯಕರ ಕುರಿತು ಬೋಧಿಸಲು ತ್ರಿಪುರಾದಲ್ಲಿ ಅಧಿಕಾರದಲ್ಲಿರುವ ಭಾರತೀಯ ಕಮ್ಯುನಿಷ್ಟ್ ಪಕ್ಷ (ಸಿಪಿಐ) ಮುಂದಾಗಿದೆ.

ಈಶಾನ್ಯ ಭಾಗದ ಪುಟ್ಟ ರಾಜ್ಯವಾಗಿರೋ ತ್ರಿಪುರಾದ 9ನೇ ತರಗತಿಯ ಇತಿಹಾಸ ಪಠ್ಯಕ್ರಮದಲ್ಲಿ ಭಾರತದ ಇತಿಹಾಸದ ಮಹಾನ್ ನಾಯಕರ ಹೆಸರೇ ಇಲ್ಲ. ಮಹಾತ್ಮ ಗಾಂಧಿ ಹೆಸರನ್ನು ಒಮ್ಮೆ ಬಳಸಲಾಗಿದ್ದು, ಅಲ್ಲಿ ಕ್ರಿಕೆಟ್ ಬಗ್ಗೆ ಅವರಿಗಿದ್ದ ಅಭಿಪ್ರಾಯವನ್ನು ತಿಳಿಸಲಾಗಿದೆ ಎಂಬುದು ಬಿಟ್ಟರೆ ಮತ್ಯಾವ ಮಹತ್ವದ ವಿವರವನ್ನೂ ಕೊಟ್ಟಿಲ್ಲ. ಉಳಿದಂತೆ ಭಾರತ ಇತಿಹಾಸದ ಯಾವುದೇ ಐಕಾನ್ ಗಳ ಹೆಸರಿಲ್ಲ. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರ ಬಗ್ಗೆ ಪಠ್ಯಪುಸ್ತಕದಲ್ಲಿ ಸುಳಿವೇ ಇಲ್ಲ.

ಹಾಗಾದರೆ ಇಲ್ಲಿ ಇರೋರು ಯಾರು? ಮತ್ತದೇ ಕಾರ್ಲ್ ಮಾರ್ಕ್ಸ್, ರಷ್ಯದ ಸ್ಟಾಲಿನ್…

ಈ ಪಠ್ಯಪುಸ್ತಕ ಓದಿದರೆ ಮಕ್ಕಳಿಗೆ ಭಾರತದ ಇತಿಹಾಸ ತಿಳಿಯೋಲ್ಲ. ಬದಲಿಗೆ ತಿಳಿಯೋದಿಷ್ಟು.. ರಷ್ಯಾ ಮತ್ತು ಫ್ರಾನ್ಸ್ ಕ್ರಾಂತಿ, ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಹುಟ್ಟಿದ್ದು ಹೇಗೆ, ನಾಜಿವಾದ ಮತ್ತು ಅಡೊಲ್ಫ್ ಹಿಟ್ಲರ್…  ಈ ಪುಸ್ತಕ ಶುರುವಾಗೋದೇ ಯುರೋಪಿಯನ್ ಇತಿಹಾಸದಿಂದ. ಬ್ರಿಟಿಷರ ಕಾಲದಲ್ಲಿ ಕಾಡು ಪ್ರದೇಶದಲ್ಲಿನ ಬುಡಕಟ್ಟು ಜನರ ಪರಿಸ್ಥಿತಿ ಹೇಗಿತ್ತು ಎಂಬ ಪಾಠವಿದ್ದು, ನಂತರ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಕ್ರೀಡೆ ಬೆಳವಣಿಗೆ ಆಗಿದ್ದರ ಬಗ್ಗೆ ಮಾಹಿತಿ ಇದೆ.

ಈ ಪಠ್ಯಕ್ರಮವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿಯ ಮಾರ್ಗದರ್ಶನದಂತೆ ಸಿದ್ಧಪಡಿಸಲಾಗಿದೆ ಎಂದು ತ್ರಿಪುರಾ ಶೈಕ್ಷಣಿಕ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಮಕ್ಕಳಿಗೆ ಭಾರತ ಇತಿಹಾಸದ ಮಹಾನ್ ನಾಯಕರ ಬದಲಿಗೆ ಕಾರ್ಲ್ ಮಾರ್ಕ್ಸ್ ಮತ್ತು ಹಿಟ್ಲರ್ ಬಗ್ಗೆ ಬೋಧನೆ ಮಾಡುವ ಮೂಲಕ ಕಮ್ಯುನಿಸ್ಟ್ ಸಿದ್ಧಾಂತವನ್ನು ಮುಂದಿನ ಪೀಳಿಗೆಯವರಲ್ಲಿ ಬಿತ್ತುವ ಕಾರ್ಯ ನಡೆಯುತ್ತಿರುವುದು ಸ್ಪಷ್ಟವಾಗಿದೆ.

Leave a Reply