ಕಾಣದ ತಳಪಾಯಕ್ಕಿಂಥ, ಕಾಣುವ ಗೋಪುರವೇ ಸುಂದರ.. ಆದರೆ ಸೌಂದರ್ಯವಷ್ಟೇ ಬದುಕಲ್ಲವಲ್ಲ!

author-geetha‘ನಿಮ್ಮ ಮಗ ಎಷ್ಟನೇ ಕ್ಲಾಸು ?’

‘ನೈನ್ತ್ ಸ್ಟಾಂಡರ್ಡ್..’

‘ಓ.. ಈ ವರ್ಷ ಆದರೆ ಆಯ್ತು ಮುಂದಿನ ವರ್ಷ ಟೆನ್ತ್ ಗೆ ಬರ್ತಾನೆ.. ಆಮೇಲೆ ಪಿಯುಸಿ ! ಇನ್ನು ಮೂರು ವರ್ಷ ನಿಮ್ಮನ್ನು ಮಾತನಾಡಿಸೋ ಹಾಗಿಲ್ಲ..’
‘ಯಾಕೆ ?’ ಕಣ್ಣರಳಿಸಿದೆ.

‘ಮತ್ತೆ ?.. ಆ ಮೂರು ವರ್ಷ ತುಂಬಾ ಮುಖ್ಯ. ಕೂತು ಓದಿಸಬೇಕು. ಲೈಫ್  ಡಿಸೈಡಿಂಗ್ ಇಯರ್ಸ್.. ನೀವು ಮನೇಲಿದ್ದು ಅವನ್ನ ನೋಡಿಕೊಳ್ಳಬೇಕು ಅಲ್ಲವೇ ?..’

‘ಇಲ್ಲ.. ಹಾಗೇನು ಇಲ್ಲ’ ಅಂದರೆ ನಾನು ಜವಾಬ್ದಾರಿಯುತ ಅಮ್ಮ ಅಲ್ಲ ಅಂದುಕೊಂಡುಬಿಡ್ತಾಳೆ ನನ್ನ ಸ್ನೇಹಿತೆ ಎಂದುಕೊಂಡು ತಲೆಯಾಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಮನೆಗೆ ಬಂದು ಟಿವಿ ಆನ್ ಮಾಡಿದಾಗ ಮತ್ತೊಬ್ಬ ಸ್ನೇಹಿತೆ ವಿಮಲಾ ನೆನಪಿಗೆ ಬಂದಳು.

‘ನೀನು ಸೀರಿಯಲ್ಗೆ ಬರೀತಿಯಂತೆ. ಟಿ.ವಿ.ಲಿ ಆಗಾಗ ಬರ್ತಿಯಂತೆ.. ನಾನು ಒಮ್ಮೆಯೂ ನೋಡಿಲ್ಲ. ನಮ್ಮ ಮನೇಲಿ ಕೇಬಲ್ ತೆಗೆಸಿಬಿಟ್ಟಿದ್ದೇವೆ.. ಮಕ್ಕಳು ಓದಿಕೊಳ್ಳಬೇಕು. ನೋಡು ಸುಮ್ಮನೆ distraction ಆಗುತ್ತೆ ಅಂತ..’

ಇಷ್ಟುದ್ದ ಹೇಳಿದ್ದಳು. 

ಕೇಬಲ್, ಟಿ.ವಿ ಬಂದ್. ಲ್ಯಾಪ್ ಟಾಪ್, ಫೋನು ಬೀರುವಿನೊಳಗೆ.. ಓದಬೇಕು ಅಷ್ಟೇ.. ಸಂಜೆ ಹೊತ್ತು ಹೊರಗೆ ಒಂದು ವಾಕ್ ಕೂಡ ಬಂದ್. ಸ್ನೇಹಿತರು ಸಿಗ್ತಾರೆ.. ಏನೋ ಮಾತು.. ನಗು.. ಮನಸ್ಸು ಕದಡಿ, ಓದುವುದರ ಮೇಲೆ ಗಮನವಿರೊಲ್ಲ. ಊರಿಂದ ಬರುವ ಇರಾದೆ ತೋರಿದ ಬಂಧುಗಳಿಗೂ ನಿಷ್ಠುರವಾಗಿ ಬರಬೇಡಿ ಎಂದು ಹೇಳಲಾಗುತ್ತದೆ.

‘ಪರೀಕ್ಷೆ ಟೈಮಿನಲ್ಲಿ ಬಂದು ಕುಳಿತರೆ, ನಾನು ಪರೀಕ್ಷೆಗೆ ಓದುಕೊಳ್ಳುವವನನ್ನು ನೋಡಲೋ ಇಲ್ಲ.. ಇವರುಗಳಿಗೆ ಉಪಚಾರ ಮಾಡಲೋ.. ಆಗೋದಿಲ್ಲ.. ಅಂದೆ’ ಮತ್ತೊಬ್ಬಳು ಗೆಳತಿ ರಮಾ ವಾದ.

ಊಟ, ತಿಂಡಿಯೂ ಅಷ್ಟೇ.. ಹೆಚ್ಚು ಖಾರ, ತುಂಬಾ ಥಂಡಿಯದೆಲ್ಲಾ ಏನೂ ಇಲ್ಲ.. ಪರೀಕ್ಷೆ ಟೈಮಿನಲ್ಲಿ ಆರೋಗ್ಯ ಕೆಟ್ಟರೆ.. ಎಂಬ ಹೆದರಿಕೆ.
‘ಯಾರು ಏನೇ ಹೇಳಲಿ.. ಇದು ಹೀಗೇ.. ನಾಳೆ ಅನ್ನುವವರು ಬಂದು ಕಾಲೇಜಿನಲ್ಲಿ ಸೀಟು ಕೊಡಿಸ್ತಾರಾ? ಹತ್ತನೇ ಕ್ಲಾಸಿನಲ್ಲಿ 93 ಪರ್ಸೆಂಟ್ ಬಂದಿದ್ರೂ ಎರಡನೇ ಲಿಸ್ಟ್ ನಲ್ಲಿ ಆ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದು.. ಈಗ ಒಳ್ಳೆ ರಾಂಕ್ ಬಂದ್ರೆ ತಾನೇ ಒಳ್ಳೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕೋದು. ಒಳ್ಳೇ ಹೆಸರಾಂತ ಕಾಲೇಜಾದರೆ ಒಳ್ಳೊಳ್ಳೆ reputed MNC company ಗಳು campus selectionಗೆ ಬರ್ತಾರೆ.. ವರ್ಷಕ್ಕೆ ಇಪ್ಪತ್ತು ಲಕ್ಷ, ನಲವತ್ತು ಲಕ್ಷ ಸಂಬಳ ಕೊಟ್ಟು ಕೆಲಸ ಕೊಡ್ತಾರೆ.. ಆಗ ಮಕ್ಕಳು ತಾನೇ ಸುಖವಾಗಿರೋದು ?.. ನಾವು ಕಷ್ಟ ಪಡೋದು ಮಕ್ಕಳು ಸುಖವಾಗಿರಲಿ ಎಂದು ತಾನೇ ?’
ಮೇಲಿನ ಉದ್ದನೆಯ ಮಾತಿನಲ್ಲಿ ತಪ್ಪೇನಿದೆ ? ಆರ್ಗ್ಯುಮೆಂಟ್ ಸರಿಯಾಗಿಯೇ ಇದೆ. ದುಡ್ಡು ಕಾಸಿಲ್ಲದೆ ಸುಖವಾಗಿರೋರು ಯಾರು ? ಎಲ್ಲಿದ್ದಾರೆ? ಇಂದಿನ ಪರಿಸ್ಥಿತಿಯಲ್ಲಿ ಸಾಧ್ಯವೇ ?

ಎಲ್ಲಾ ಸರಿ. ಆದರೆ ಆ ಮಕ್ಕಳಿಗೆ ಏನು ಬೇಕು? ಅವರ ಕನಸುಗಳೇನು ? ಸಾಧಿಸಬೇಕು ಎಂದುಕೊಂಡಿರುವುದೇನು? ಅದು ಮುಖ್ಯವಲ್ಲವೇ ? ಎಲ್ಲರೂ ಇಂಜಿನೀಯರ್ರು, ಡಾಕ್ಟರು (ಈಗ ಮಕ್ಕಳು ಡಾಕ್ಟರಾಗಲಿ ಎಂದು ಬಯಸುವ ತಂದೆತಾಯಂದಿರು ಕಡಿಮೆ !) ಗಳೇ ಆಗಬೇಕೇ?
ಹದಿನಾರು ವರ್ಷದ ಮಕ್ಕಳಿಗೆ ಬರೀ ಕನಸುಗಳು ಮುಖ್ಯ. ಜೀವನ ಏನು ಗೊತ್ತಿರುತ್ತದೆ ? ಯಾವುದಕ್ಕೂ ಕಮ್ಮಿಯಾಗದ ಹಾಗೆ ತಂದೆತಾಯಿ ಸಾಕುತ್ತಿರುವಾಗ ಕನಸು ಕಟ್ಟದೆ ಏನು ಮಾಡುತ್ತಾರೆ ? ಕನಸಿನ ಗೋಪುರಕ್ಕೆ ತಳಪಾಯ ಬೇಡವೇ ? ಕಾಣದ ತಳಪಾಯಕ್ಕಿಂಥ, ಕಾಣುವ ಗೋಪುರವೇ ಸುಂದರ.. ಆದರೆ ಸೌಂದರ್ಯವಷ್ಟೇ ಬದುಕಲ್ಲವಲ್ಲ.

ಬದುಕಲು ತಳಪಾಯ ಮುಖ್ಯ. ಭದ್ರ ಬುನಾದಿ ಹಾಕಿ ನಂತರ ಕನಸು ಕಾಣು ಎನ್ನುವ ತಂದೆತಾಯಿಯ ಕೋರಿಕೆಯಲ್ಲಿ, ಹಂಬಲದಲ್ಲಿ ತಪ್ಪೇನು ?
‘money is not everything’ ಎಂದು ಅತೀ ಶ್ರೀಮಂತ ಹೇಳಬಲ್ಲ ಅಷ್ಟೇ. ಬದುಕಿನ ಪ್ರತೀ ಹಂತದಲ್ಲೂ ಕೈಯಲ್ಲಿರುವ ದುಡ್ಡು ಮುಖ್ಯವಾಗಿರುವ ನಮ್ಮ ಇಂದಿನ ಜೀವನಶೈಲಿಯಲ್ಲಿ, ಸಮಾಜದಲ್ಲಿ.. ‘ದುಡ್ಡು ಸಂಪಾದಿಸಬೇಕು’ ಎನ್ನುವುದು ಏಕೆ ತಪ್ಪು ? ಹೇಳುತ್ತಿರುವ ರೀತಿ ತಪ್ಪಾಗಿರಬಹುದು ಅಷ್ಟೇ.
ಬೇರೆಯವರಿಗೆ ಮೋಸ ಮಾಡಿ, ತಲೆಯೊಡೆದು ಅನ್ಯಾಯ ಮಾಡಿ, ದುಡ್ಡು ಸಂಪಾದಿಸುವುದು ತಪ್ಪು. ಆದರೆ ದುಡಿದು ದುಡ್ಡು ಸಂಪಾದಿಸುವುದು ಏಕೆ ತಪ್ಪು? ನಮ್ಮ ಮಕ್ಕಳು ಹಾಗೆ ದುಡಿದು ಸಂಪಾದಿಸುವ ಯೋಗ್ಯತೆ ಪಡೆದುಕೊಳ್ಳಲಿ ಎಂದು ಹೆತ್ತವರು ಬಯಸುವುದರಲ್ಲಿ ತಪ್ಪೇನು?

ನಡಿಗೆ ಕಲಿತ ತಕ್ಷಣ ಕೆಲವು ಮಕ್ಕಳು ಓಡಾಡುತ್ತಲೇ ಇರುತ್ತವೆ. ಪುಟ್ಟ ಪಾದಗಳು ನೋವಾಗುತ್ತವೆ ಎಂದು ಸಂಕಟಪಡುವಷ್ಟು. ಕೆಲವು ಮಕ್ಕಳು ನಡಿಗೆ ಕಲಿತ ಮೇಲೂ ನಾವು ಕೈ ಚಾಚಿ ಬಾ ಎಂದು ಪುಸಲಾಯಿಸಿ ಕರೆಯದಿದ್ದರೆ ಕುಳಿತಲ್ಲೇ ಕುಳಿತಿರುತ್ತವೆ. ಕರೆದರೆ ಪುಟುಪುಟು ಹೆಜ್ಜೆಯಿಟ್ಟು ಧಾವಿಸಿ ಬರುತ್ತವೆ. ಕೈಯಲ್ಲಿ ಮಕ್ಕಳಿಗೆ ಇಷ್ಟವಾದ ತಿಂಡಿಯೋ, ಆಟದ ಸಾಮಾನೋ ಇಟ್ಟುಕೊಂಡಿದ್ದರೆ ಅವರ ನಡಿಗೆಯಲ್ಲಿ ಮತ್ತಷ್ಟು ವೇಗ, ಸಂತಸ, ಗುರಿ ತಪ್ಪೇನು ?
ಮಕ್ಕಳ ಒಳಿತು, ಹೆತ್ತವರ ಸ್ವಾರ್ಥ ಹೇಗೆ ? ತಮ್ಮ ಮಕ್ಕಳ ಒಳಿತು, ಕೆಡಕು ಅರಿತಿರುವ ಹೆತ್ತವರಿಗೆ ಹಾಗೆಯೇ ತಮ್ಮ ಮಕ್ಕಳ ಬುದ್ಧಿಮತ್ತೆ, ಕಲಿಯುವಲ್ಲಿ ಅವರಿಗಿರುವ ಒರತೆ, ಕೊರತೆಯ ಬಗ್ಗೆ ಕೂಡ ಅರಿವಿರಬೇಕು. ಮಕ್ಕಳು ತಳಪಾಯವಿಲ್ಲದೆ ಕನಸು ಕಾಣಬಹುದು. ಆದರೆ ಜೀವನದಲ್ಲಿ ಮಾಗಿರುವ ತಂದೆ ತಾಯಂದಿರು ಹಾಗೆ ಮಾಡಲು ಸಾಧ್ಯವಿಲ್ಲ.. ಮಾಡಲೂ ಬಾರದು.

ಹೆತ್ತವರು, ಕೇಬಲ್ ಟಿ.ವಿ ತೆಗೆಸಿ ಹಾಕಲಿ, ಮೊಬೈಲ್ ಫೋನ್ ಎತ್ತಿಟ್ಟುಕೊಳ್ಳಲಿ.. ಸ್ನೇಹಿತರೊಂದಿಗಿನ ಮಾತು ಹರಟೆ ತಡೆಯೊಡ್ಡಲಿ.. ಆದರೆ ತಮ್ಮ ಈ ನಡೆಗಳ ಪರಿಣಾಮ ಮಕ್ಕಳ ಮೇಲೆ ಹೇಗಾಗುತ್ತಿದೆ ಎಂಬುದರ ಬಗ್ಗೆ ಗಮನವಿರಲಿ.

‘children need a push. But not off the cliff.. they need to be chisseled but not broken..’

1 COMMENT

  1. ವಾಹ್… ಎಂಥ ಬರಹ. ವಾಸ್ತವಕ್ಕೆ ಕನ್ನಡಿ ಹಿಡಿದಿಟ್ಟ ಹಾಗೆ

Leave a Reply