ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ, ಬಜರಂಗ ದಳದ 50 ಕಾರ್ಯಕರ್ತರ ವಿರುದ್ಧ ಎಫ್ಐಆರ್

ಡಿಜಿಟಲ್ ಕನ್ನಡ ಟೀಮ್: ತೀವ್ರ ವಿವಾದಕ್ಕೆ ಕಾರಣವಾದ ಬಜರಂಗ ದಳದ ‘ಆತ್ಮ ರಕ್ಷಣೆ’ ಶಿಬಿರದ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಯುವಕರಿಗೆ ಬಂದೂಕು, ಖಡ್ಗದಂತಹ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಫೋಟೊ ಮತ್ತು ವಿಡಿಯೋಗಳು ಮಂಗಳವಾರ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಆ ಮೂಲಕ ಶಿಬಿರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಇದರ ಪರಿಣಾಮ, ಶಾಂತಿ ಮತ್ತು ಸಾಮರಸ್ಯ ಕದಡಿದ ಹಾಗೂ ಕಾನೂನು ಉಲ್ಲಂಘನೆ ಆರೋಪದಲ್ಲಿ ಬಜರಂಗ ದಳದ 50 ಕಾರ್ಯಕರ್ತರ ವಿರುದ್ಧ ಅಯೋಧ್ಯೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸಂಘ ಪರಿವಾರದ ದೈಹಿಕ ವ್ಯಾಯಾಮಗಳಲ್ಲಿ ಕಟ್ಟಿಗೆ ದಂಡದ ಕದನ ತಾಲೀಮು ಹೊಸತೇನಲ್ಲ. ಆದರೆ, ಮೇ 10ರಂದು ಆಯೋಧ್ಯೆಯಲ್ಲಿ ಸಂಘಟಿಸಲಾದ ಆತ್ಮರಕ್ಷಣೆ ಶಿಬಿರದಲ್ಲಿ ಬಂದೂಕುಗಳು ಮತ್ತು ಕತ್ತಿಗಳು ಯುವಕರ ಕೈಯಲ್ಲಿ ರಾರಾಜಿಸಿದ್ದೇ ವಿವಾದಕ್ಕೆ ಕಾರಣ.

ಬಜರಂಗದಳ ಈ ತಾಲೀಮನ್ನು ಹೀಗೆ ಸಮರ್ಥಿಸಿಕೊಂಡಿದೆ-  ‘ನಮ್ಮ ಸಂಘಟನೆ ಸದಸ್ಯರಲ್ಲಿ ರಾಷ್ಟ್ರೀಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಈ ರೀತಿಯಾದ ತರಬೇತಿ ನೀಡಲಾಗುವುದು. ಕೆಲವು ಬಾರಿ ದೈಹಿಕ ತರಬೇತಿ ನೀಡಿದರೆ, ಮತ್ತೆ ಕೆಲವೊಮ್ಮೆ ಮಾನಸಿಕ ತರಬೇತಿ ನೀಡಲಾಗುವುದು. ಮಹಿಳೆಯರಿಗೆ ರಕ್ಷಣೆ ನೀಡುವ ಗುರಿಯೊಂದಿಗೆ ಯುವಕರಿಗೆ ಈ ತರಬೇತಿ ನೀಡುತ್ತಿದ್ದೇವೆ. ಇತರೆ ಸಮುದಾಯದವರೂ ಆಸಕ್ತಿ ಹೊಂದಿದ್ದರೆ, ಇಲ್ಲಿಗೆ ಆಗಮಿಸಿ ಕಲಿಯಬಹುದು’ ಎಂದು ಸ್ವಾಗತಿಸಿದ್ದಾರೆ ವಿಎಚ್ ಪಿ ನಾಯಕ ರವಿ ಅನಂತ್.

ಆದರೆ ಕೇಂದ್ರದ ಬಿಜೆಪಿ ಸರ್ಕಾರಕ್ಕೂ ಇದು ಇರಿಸುಮುರಿಸುಂಟು ಮಾಡಿರುವುದು ಸ್ಪಷ್ಟ. ಬಿಜೆಪಿಯ ಶಹನವಾಜ್ ಹುಸೇನ್ ಪ್ರತಿಕ್ರಿಯೆ ಹೀಗಿದೆ- ‘ಭಯೋತ್ಪಾದಕರಿಂದ ದೇಶವನ್ನು ಕಾಪಾಡುವುದಕ್ಕೆ ನಮ್ಮ ಭದ್ರತಾಪಡೆ ಇದೆ. ನರೇಂದ್ರ ಮೋದಿಯವರ ಸರ್ಕಾರವಿದೆ. ಈ ಬಗ್ಗೆ ಮತ್ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ.’

Leave a Reply