88 ಖಾಸಗಿ ಪಿಯು ಕಾಲೇಜುಗಳ ಶೂನ್ಯ ಫಲಿತಾಂಶ, ಹಣ ಪೀಕುವ ಪಾಲಕರೇ ಎಚ್ಚೆತ್ತುಕೊಳ್ಳಿ!

ಸಾಂದರ್ಭಿಕ ಚಿತ್ರ

ಡಿಜಿಟಲ್ ಕನ್ನಡ ವಿಶೇಷ: ಸಿಕ್ಕ-ಸಿಕ್ಕ ಖಾಸಗಿ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸೋ ಪೋಷಕರಿಗೆ ಇಲ್ಲೊಂದು ಆಘಾತಕಾರಿ ಸುದ್ದಿ ಇದೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೂನ್ಯ ಸಂಪಾದನೆ ಮಾಡಿರೋ 91 ಕಾಲೇಜುಗಳ ಪೈಕಿ 88 ಖಾಸಗಿಯವು!

ತಮ್ಮ ಮಕ್ಕಳು ಸರಕಾರಿ ಶಾಲಾ-ಕಾಲೇಜುಗಳಲ್ಲಿ ಓದಿದರೆ ಉದ್ದಾರ ಆಗುವುದಿಲ್ಲ, ಹಾಳಾಗಿ ಹೋಗುತ್ತಾರೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಮಾತ್ರದಿಂದಲೇ ಸರಸ್ವತಿ ಸಂತತಿಯವರಾಗುತ್ತಾರೆ ಎಂಬುದು ಅನೇಕ ಪಾಲಕರ ಭ್ರಮೆ. ಹೀಗಾಗಿ ಹಿಂದೆ-ಮುಂದೆ ನೋಡದೆ, ಆ ಸಂಸ್ಥೆಗಳ ಪೂರ್ವಾಪರ ತಿಳಿದುಕೊಳ್ಳದೆ ಕಣ್ಣಿಗೆ ಕಂಡ ಖಾಸಗಿ ಕಾಲೇಜುಗಳಿಗೆ ಸೇರಿಸುತ್ತಾರೆ. ತತ್ಪರಿಣಾಮ ಈ 88 ಖಾಸಗಿ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳೂ ನುಣ್ಣಗೆ ಫೇಲಾಗಿ ಕೂತಿದ್ದಾರೆ. ಹೆಸರಿಗೆ ಅಂತಲೂ ಒಬ್ಬರೇ ಒಬ್ಬರು ಪಾಸಾಗಿಲ್ಲ.

ಹಾಗೆ ನೋಡಿದರೆ ಸರಕಾರಿ ಕಾಲೇಜುಗಳೇ ವಾಸಿ. ಒಂದೇ ಒಂದು ಕಾಲೇಜು ಮಾತ್ರ ಶೂನ್ಯ ಫಲಿತಾಂಶ ಕಂಡಿದೆ. ಉಳಿದಂತೆ ಒಂದು ಅನುದಾನಿತ ಕಾಲೇಜು, ಮತ್ತೊಂದು ವಿಭಜಿತ ಕಾಲೇಜು ಈ ಸಾಲಿಗೆ ಸೇರಿದ್ದು, ಶೂನ್ಯ ಸಾಧನೆಯ ಸಿಂಹಪಾಲನ್ನು ಖಾಸಗಿ ಕಾಲೇಜುಗಳಿಗೇ ಬಿಟ್ಟುಕೊಟ್ಟಿವೆ. ಈ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ತಲೆ ಮೇಲೆ ಕೈ ಹೊತ್ತಿದ್ದಾರೆ. ಇವರ ಬಳಿ ಮನಬಂದಂತೆ ಡೋನೇಷನ್, ಫೀಜು ವಸೂಲಿ ಮಾಡಿದ ಆಡಳಿತ ಮಂಡಳಿಯವರು ಮುಂದಿನ ಶೈಕ್ಷಣಿಕ ವರ್ಷದ ಹೊಸ ಬಕರಾಗಳಿಗಾಗಿ ಹೊಂಚು ಹಾಕಿ ಕೂತಿದ್ದಾರೆ.

ನಿಜ, ಈ ರೀತಿಯ ಅನೇಕ ಖಾಸಗಿ ಕಾಲೇಜುಗಳು ಸರಕಾರದಿಂದ ಮಾನ್ಯತೆಯನ್ನೇ ಪಡೆದಿರುವುದಿಲ್ಲ. ಮಾನ್ಯತೆ ನಿರೀಕ್ಷಿಸಿಕೊಂಡೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಮುಗಿಸಿರುತ್ತಾರೆ. ಸಮಸ್ಯೆ ಆದರೆ ಮುಂದೆ ನೋಡಿಕೊಂಡರಾಯಿತು ಎಂಬ ಉಡಾಫೆ ಜತೆಜತೆಗೆ. ಧಾವಂತಕ್ಕೆ ಬಿದ್ದ ಪೋಷಕರು ಕಾಲೇಜುಗಳ ಕುಲ-ಗೋತ್ರ, ಮಾನ್ಯತೆ, ಅಧಿಕೃತ, ಅನಧಿಕೃತ – ಈ ಯಾವ ವಿಚಾರಗಳ ಬಗ್ಗೆ ಅರಿಯುವ ಗೋಜಿಗೆ ಹೋಗುವುದಿಲ್ಲ. ಅವರ ಧಾವಂತಪೂರಿತ ಭಾವನೆಗಳನ್ನು ಆಡಳಿತ ಮಂಡಳಿಗಳು ಬ್ಲಾಕ್ ಮೇಲ್ ಮಾಡಿಕೊಳ್ಳುತ್ತವೆ.

ಇಂಥ ಕಾಲೇಜುಗಳಲ್ಲಿ ಅರ್ಹತೆ, ಸೂಕ್ತ ತರಬೇತಿ ಪಡೆದ ನುರಿತ ಶಿಕ್ಷಕರಿರುವುದಿಲ್ಲ. ಅನೇಕ ಕಾಲೇಜುಗಳಲ್ಲಿ ಅವರಿಗೇ ಪಾಠ ಮಾಡಬೇಕಾದ ದುಸ್ಥಿತಿ. ವಿದ್ಯಾರ್ಥಿಗಳಿಗೆ ಪ್ರಶ್ನೆ ಕೊಟ್ಟು, ಪೋಷಕರಿಂದ ಉತ್ತರ ತರಿಸಿಕೊಳ್ಳುವ ಬೃಹಸ್ಪತಿಗಳೇನೂ ಕಡಿಮೆ ಇಲ್ಲ. ಏಕೆಂದರೆ ಅವರಿಗೇ ಉತ್ತರ ಗೊತ್ತಿರುವುದಿಲ್ಲ. ಕಲಿತ ಪೋಷಕರು ಮಕ್ಕಳ ನೆರವಿಗೆ ಬರುತ್ತಾರೆ. ಪರ್ಯಾಯ ವ್ಯವಸ್ಥೆ ಮೊರೆ ಹೋಗುತ್ತಾರೆ. ಕಲಿಯದವರ ಮಕ್ಕಳ ಕತೆ ಆ ಸರಸ್ವತಿಗೇ ಪ್ರೀತಿ. ಇಂಥ ಕಾಲೇಜುಗಳ ಪರಿಸ್ಥಿತಿ ಪೋಷಕರಿಗೆ ಗೊತ್ತಾಗುವ ಹೊತ್ತಿಗೆ ಪ್ರವೇಶ ಪ್ರಕ್ರಿಯೆ ಮುಗಿದಿರುತ್ತದೆ. ಮಧ್ಯದಲ್ಲಿ ಬೇರೆ ವ್ಯವಸ್ಥೆ ಮಾಡಿಕೊಳ್ಳುವಂತಿಲ್ಲ. ಅನಿವಾರ್ಯ ಕರ್ಮಕ್ಕೆ ಸಿಕ್ಕಿಕೊಳ್ಳುತ್ತಾರೆ. ನುಂಗುವಂತೆಯೂ ಇಲ್ಲ, ಉಗುಳುವಂತೆಯೂ ಇಲ್ಲ.

ಈಗ ಶೂನ್ಯ ಸಂಪಾದನೆ ಮಾಡಿರುವ 88 ಕಾಲೇಜುಗಳಿಗೆ ವಿದ್ಯಾರ್ಥಿಗಳ ಬಗ್ಗೆ ಕನಿಷ್ಠ ಕಾಳಜಿ ಇದ್ದಿದ್ದರೂ ಈ ರೀತಿಯ ಫಲಿತಾಂಶ ಬರುತ್ತಿರಲಿಲ್ಲ. ತಮ್ಮ ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯ ಆಪೋಶನ ತೆಗೆದುಕೊಳ್ಳುವ ದುಷ್ಟ ವ್ಯವಸ್ಥೆಯ ಪ್ರತೀಕ ಇವು. ಇಲ್ಲಿನ ವ್ಯವಸ್ಥೆ ಬಗ್ಗೆ ಕೂಲಂಕಷ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಹೊಣೆ ರಾಜ್ಯ ಸರಕಾರದ ಮೇಲಿದೆ. ಪೋಷಕರ ಭಾವನೆ, ಹಣ, ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟ ಆಡುವ ಇಂಥ ಶಿಕ್ಷಣ ಸಂಸ್ಥೆಗಳನ್ನು ಮುಲಾಜಿಲ್ಲದೆ ಮುಚ್ಚಿಸಬೇಕು. ಇಲ್ಲದಿದ್ದರೆ ರಾಜ್ಯದ ಅಮೂಲ್ಯ ಮಾನವ ಸಂಪನ್ಮೂಲ ಹಾಳುಗೆಡವಿದ ಪಾಪದಲ್ಲಿ ಸರಕಾರವೂ ಭಾಗಿ ಆಗಬೇಕಾಗುತ್ತದೆ.

Leave a Reply