ಪಿಯು ಫಲಿತಾಂಶ: ಬಸ್ ಸ್ಟ್ಯಾಂಡ್ ನಲ್ಲಿ ಬಾಳೆ ಹಣ್ಣು ಮಾರುತ್ತಿದ್ದವನ ಮಗಳೇ ಫಸ್ಟ್

ಡಿಜಿಟಲ್ ಕನ್ನಡ ಟೀಮ್: ಶೇಕಡಾ 90.48 ಫಲಿತಾಂಶ ಪಡೆದ ದಕ್ಷಿಣ ಕನ್ನಡ ಪ್ರಥಮ.. ಎಂದಿನಂತೆ ಬಾಲಕಿಯರೇ ಮೇಲುಗೈ.. ಆದರೆ ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಪಾಸಾದವರ ಪ್ರಮಾಣ ಕುಸಿತ.. ಇವಿಷ್ಟೂ ಬುಧವಾರ ಪ್ರಕಟಗೊಂಡ ದ್ವಿತೀಯ ಪಿಯೂಸಿ ಫಲಿತಾಂಶದ ಪ್ರಮುಖ ಅಂಶ.

ಈ ಬಾರಿಯ ಫಲಿತಾಂಶದಲ್ಲಿ ಗಮನ ಸೆಳೆದಿರುವುದು ಕೂಡ್ಲಗಿಯ ವಿದ್ಯಾರ್ಥಿನಿ ಅನಿತಾ ಬಸಪ್ಪ. ಇಂದೂ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ 600ಕ್ಕೆ 585 ಅಂಕಗಳನ್ನು ಗಳಿಸಿ ಈ ವಿಭಾಗದಲ್ಲಿ ಅಗ್ರಸ್ಥಾನ ಪಡೆದ್ದಾರೆ. ವಿಶೇಷ ಏನಂದ್ರೆ, ಈಕೆಯ ತಂದೆ ಕೊಟ್ಟೂರಿನ ಬಸ್ ನಿಲ್ದಾಣದಲ್ಲಿ ಬಾಳೆ ಹಣ್ಣು ವ್ಯಾಪಾರಿ. ತಮ್ಮ ಮಗಳ ಫಲಿತಾಂಶ ಕಂಡು ಪೋಷಕರ ಸಂತೋಷಕ್ಕೆ ಪಾರವೇ ಇಲ್ಲ. ಭವಿಷ್ಯದಲ್ಲಿ ಐಎಎಸ್ ಮಾಡಬೇಕೆಂಬ ಕನಸು ಅನಿತಾಳದ್ದಾಗಿದೆ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ಸರ್ದಾರ್ ವಲ್ಲಭಾಯ್ ಪಟೇಲ್ ಕಾಲೇಜಿನ ರಕ್ಷಿತಾ ತಮನ್ 596 ಅಂಕ ಪಡೆದು ಅಗ್ರಸ್ಥಾನ ಪಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಛಾಯಾಶ್ರೀ, ಬಿಜಾಪುರದ ವಿಬಿ ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣಿ ಮತ್ತು ಮಹಾವೀರ್ ಜೈನ್ ಪಿಯು ಕಾಲೇಜಿನ ದೀಕ್ಷಾ ನಾಯಕ್ ತಲಾ 594 ಅಂಕಗಳನ್ನು ಸಂಪಾದಿಸಿದ್ದಾರೆ.

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನದಲ್ಲಿದ್ದು, ಉಡುಪಿ (ಶೇ.90.35) ಹಾಗೂ ಕೊಡಗು (79.35 ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ. ಕಳೆದ ವರ್ಷದ (ಶೇ. 60.54) ಶೇಖಡಾವಾರು ಫಲಿತಾಂಶಕ್ಕಿಂತ ಈ ಬಾರಿ ಕುಸಿತ ಕಂಡಿದೆ. ಈ ಬಾರಿ ಶೇ. 57.28 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸುಮಾರು ಶೇ. 3ರಷ್ಟು ಫಲಿತಾಂಶ ಕಡಿಮೆಯಾಗಿದೆ.

ಈ ಬಾರಿ ಪರೀಕ್ಷೆ ಬರೆದಿದ್ದ 3,09,535 ಬಾಲಕಿಯರ ಪೈಕಿ 2,00,529 (ಶೇ. 64.78) ಮಂದಿ ತೇರ್ಗಡೆ ಹೊಂದಿದ್ದಾರೆ. ಇನ್ನು 3,26,833 ಬಾಲಕರ ಪೈಕಿ 1,63,484 (ಶೇ. 50.02) ಮಂದಿ ಪಾಸ್ ಆಗಿದ್ದಾರೆ. ಇನ್ನು ಈ ಬಾರಿ 91 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಹೊರಬಿದ್ದಿದ್ದು, 88 ಸರ್ಕಾರಿ ಅನುದಾನ ರಹಿತ, 1 ಅನುದಾನಿತ, 1 ಸರ್ಕಾರಿ ಹಾಗೂ 1 ವಿಭಜಿತ ಕಾಲೇಜುಗಳು ಶೂನ್ಯ ಸಂಪಾದಿಸಿವೆ.

Leave a Reply