ಎಟಿಎಂಗಳು ಸರಿ ಇರೋದೇ ಕಡಿಮೆ ಅನ್ನೋದು ನಿಮ್ಮ ಅನುಭವವಾ? ಆರ್ಬಿಐ ಡೆಪ್ಯುಟಿ ಗವರ್ನರ್ ಹೌದೆನ್ನುತ್ತಾರೆ..

ಡಿಜಿಟಲ್ ಕನ್ನಡ ಟೀಮ್: ತುರ್ತು ಪರಿಸ್ಥಿತಿಯಲ್ಲಿ ಹಣ ಡ್ರಾ ಮಾಡಬೇಕೆಂದು ಆತುರದಲ್ಲಿ ಎಟಿಎಂಗಳಿಗೆ ಹೋದರೆ, ಕೆಲವೊಮ್ಮೆ ಔಟ್ ಆಫ್ ಆರ್ಡರ್ ಬೋರ್ಡ್ ನೇತು ಹಾಕಿರ್ತಾರೆ. ಇಲ್ಲ, ಎಟಿಎಂನಲ್ಲಿ ಕಾಸಿಲ್ಲ ಅಂತಲೋ, ನಿಮ್ಮ ಕಾರ್ಡ್ ಉಜ್ಜಿದರೂ ಯಂತ್ರ ಕೆಲಸ ಮಾಡದೇ ಕೈಕೊಟ್ಟ ಅನುಭವ ನಿಮಗೂ ಆಗಿದೆ ಅಲ್ಲವೇ? ಇದು ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ, ಈಗ ಭಾರತೀಯ ರಿಸರ್ವ್ ಬ್ಯಾಂಕ್ ಗೂ ಈ ಬಗ್ಗೆ ಅರಿವಾಗಿದೆ.

‘ನಮ್ಮಲ್ಲಿನ ಎಟಿಎಂಗಳಲ್ಲಿ ಸರಿಯಾಗಿ ಹಣ ಸಿಗ್ತಿಲ್ಲ, ಮೂರರಲ್ಲಿ ಒಂದು ಎಟಿಎಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ’ ಅಂತಾ ಹೇಳ್ತಿರೋದು ಬೇರೆ ಯಾರೂ ಅಲ್ಲ, ಸ್ವತಃ ಆರ್ಬಿಐ ಡೆಪ್ಯುಟಿ ಗವರ್ನರ್ ಎಸ್.ಎಸ್ ಮುಂದ್ರಾ. ನಿಜ, ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ದೇಶದ ಹಲವೆಡೆ, ವಿವಿಧ ಬ್ಯಾಂಕ್ ಗಳ 4 ಸಾವಿರ ಎಟಿಎಂ ಗಳಲ್ಲಿ ಸಮೀಕ್ಷೆ ನಡೆಸಿತ್ತು. ಇದರಿಂದ ಭಾರತದಲ್ಲಿನ ಎಟಿಎಂಗಳ ಕೆಟ್ಟ ಪರಿಸ್ಥಿತಿ ಬೆಳಕಿಗೆ ಬಂದಿದೆ.

ಕೇವಲ ತಾಂತ್ರಿಕ ದೋಷ ಅಷ್ಟೇ ಅಲ್ಲ, ಈ ಎಟಿಎಂಗಳಲ್ಲಿ ಸಾಕಷ್ಟು ಮಾನದಂಡಗಳ ಉಲ್ಲಂಘನೆಗಳೂ ಆಗಿರುವುದನ್ನು ಆರ್ಬಿಐ ಗಮನಿಸಿದೆ. ಈ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸಮಸ್ಯೆಗಳನ್ನು ಸರಿಪಡಿಸದಿದ್ದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಂದ್ರಾ ಎಚ್ಚರಿಕೆ ನೀಡಿದ್ದಾರೆ.

ಕಳೆದ ಫೆಬ್ರವರೆಗಿನ ಅಂಕಿ ಅಂಶಗಳ ಪ್ರಕಾರ 56 ವಾಣಿಜ್ಯ ಬ್ಯಾಂಕುಗಳು ಒಟ್ಟಾರೆ 1,00,671 ಆನ್ ಸೈಟ್ (ಬ್ಯಾಂಕ್ ಇರುವ ಕಡೆ) ಎಟಿಎಂ ಹೊಂದಿದ್ದು, 96,656 ಆಫ್ ಸೈಟ್ (ಬ್ಯಾಂಕ್ ಇಲ್ಲದಿರುವ ಕಡೆ) ಎಟಿಎಂ ಯಂತ್ರಗಳನ್ನು ಹೊಂದಿವೆ.

ಹಣಕಾಸು ಪ್ರಕ್ರಿಯೆಯಲ್ಲಿ ಜನಸಾಮಾನ್ಯರನ್ನು ಸೇರಿಸಿಕೊಳ್ಳುವುದು ಸರ್ಕಾರ ಮತ್ತು ಆರ್ಬಿಐನ ಪ್ರಮುಖ ಗುರಿಯಾಗಿದೆ. ಈ ಗುರಿ ಸಾಧನೆಗೆ ಎಟಿಎಂಗಳು ಪ್ರಮುಖ ಪಾತ್ರ ವಹಿಸಲಿವೆ. ಹಾಗಾಗಿ ಬ್ಯಾಂಕುಗಳು ಸೂಕ್ತ ರೀತಿಯಲ್ಲಿ ಎಟಿಎಂಗಳನ್ನು ನಿರ್ವಹಿಸದಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ ಮುಂದ್ರಾ.

Leave a Reply