ಅಪಘಾತದಿಂದ ಮೃತಪಟ್ಟವನ ಕುಟುಂಬಕ್ಕೆ ₹53.70 ಲಕ್ಷ ಪರಿಹಾರ, ಅಪರೂಪಕ್ಕೆ ಅನ್ಸುತ್ತೆ- ನ್ಯಾಯ ಇಲ್ಲಿದೆ!

ಡಿಜಿಟಲ್ ಕನ್ನಡ ಟೀಮ್: ರಸ್ತೆ ಅಪಘಾತದಲ್ಲಿಸಾಯೋರಿಗೆ ಅಳೋರ್ಯಾರು? ಹಾಗೊಂದು ಸ್ಥಿತಿ ನಮ್ಮ ದೇಶದಲ್ಲಿದೆ ಅಂತಂದ್ರೆ ಅದಕ್ಕೆ ಯಾರ ಆಕ್ಷೇಪವೂ ಇರದೇನೋ..

ಆದರೆ ರಸ್ತೆ ಅಪಘಾತದಲ್ಲಿ ಮೃತನಾದವನ ಕುಟುಂಬಕ್ಕೆ ನ್ಯಾಯಾಧಿಕರಣವು ₹53.70 ಲಕ್ಷ ಪರಿಹಾರ ಕೊಡಿಸಿರೋ ಸುದ್ದಿ ಸ್ವಲ್ಪ ಸಮಾಧಾನ ಕೊಡುವಂಥದ್ದು.  2014ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬನ ಕುಟುಂಬ ಸದಸ್ಯರಿಗೆ ಮೋಟಾರ್ ಅಪಘಾತ ಹಕ್ಕು ನ್ಯಾಯಾಧಿಕರಣ (ಎಂಎಸಿಟಿ) ದ ತೀರ್ಪು ₹ 53.70 ಲಕ್ಷ ಪರಿಹಾರಕ್ಕೆ ಸೂಚನೆ ನೀಡಿದೆ. ನ್ಯಾಯಾಧಿಕರಣದ ಸದಸ್ಯ ಹಾಗೂ ಜಿಲ್ಲಾ ನ್ಯಾಯಾಧೀಶರಾಗಿರುವ ಕೆ.ಡಿ ವದಾನೆ ಈತನ ಕುಟುಂಬಕ್ಕೆ ₹ 53.70 ಲಕ್ಷ ಪರಿಹಾರ ನೀಡಬೇಕು ಎಂಬ ಮಹತ್ವದ ತೀರ್ಪು ನೀಡಿದ್ದಾರೆ. ಆ ಮೂಲಕ ನ್ಯಾಯಾಧಿಕರಣ ಸಂತ್ರಸ್ತರ ಜೀವನಕ್ಕೆ ನೆರವಾಗಿದೆ. ಇದು ಇತರೆ ಪ್ರಕರಣಗಳಿಗೂ ಉತ್ತಮ ಉದಾಹರಣೆಯಾಗಿ ಉಳಿದ ಸಂತ್ರಸ್ತರ ಕುಟುಂಬಗಳಿಗೂ ಸೂಕ್ತ ಪರಿಹಾರ ಸಿಗಬೇಕು.

ಏನಿದು ಪ್ರಕರಣ..?

2014 ರ ಜೂನ್ 20 ರಂದು ಸಂತೋಷ್ ಠಾಕ್ರೆ ಮೋಟಾರ್ ಬೈಕ್ ಮೇಲೆ ಕೆಲಸಕ್ಕೆ ತೆರಳುತ್ತಿರುವಾಗ ಎದುರಿನಿಂದ ಬಂದ ಟ್ರಕ್ ಈತನಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆತ ಗಂಭೀರವಾಗಿ ಗಾಯಗೊಂಡ. ಆನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ. ಈತ ಸರ್ಕಾರಿ ಕೆಲಸದಲ್ಲಿದ್ದ. ಪಾಲ್ಘರದ ಚಿಂಚಾಣಿ ಪಿಎಚ್ ಸಿಯಲ್ಲಿ ಆರೋಗ್ಯ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ಸಂತೋಷ್ ಪತ್ನಿ ಸಾಕ್ಷಿ (30 ವರ್ಷ), ಮಗ (10), ಮಗಳು (2) ಹಾಗೂ ತಾಯಿ (63) ಅವರಿಗೆ ಪರಿಹಾರವೆಂದು ₹ 53.70 ಲಕ್ಷ ನೀಡಬೇಕು ಎಂದು ಅಪಘಾತಕ್ಕೆ ಕಾರಣವಾದ ವಾಹನ ಮಾಲೀಕ ಸುಶಿಲ್ ಕೊಲಿ ಮತ್ತು ಮಾಗ್ಮಾ ಎಚ್ ಡಿಐ ಜೆನರಲ್ ಲೈಫ್ ಇನ್ ಶೂರೆನ್ಸ್ ಕಂಪನಿಗೆ ಸೂಚನೆ ನೀಡಿದೆ. ಈ ಪರಿಹಾರ ಮೊತ್ತದಲ್ಲಿ ಆತನ ಇಬ್ಬರು ಮಕ್ಕಳಿಗೂ ತಲಾ ₹ 15 ಲಕ್ಷ ಎಫ್ ಡಿ ಇಡಬೇಕೆಂದು ಸೂಚನೆಯನ್ನೂ ನೀಡಿದೆ.

Leave a Reply