ಬಂಗಾಳದ ಶಾಸಕರಿಂದ ಸೋನಿಯಾ- ರಾಹುಲ್ ನಿಷ್ಠೆಯ ಬಾಂಡ್ ಬರೆಸಿಕೊಂಡ ಕಾಂಗ್ರೆಸ್, ಇದಲ್ಲವೇ ಕುಸಿದಿರುವ ವಿಶ್ವಾಸದ ಸಂಕೇತ?

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿಕಾಂಗ್ರೆಸ್ಸಿಗೆ 44 ಸ್ಥಾನಗಳು ಸಿಕ್ಕಿವೆ. ಈ ಎಲ್ಲ 44 ಶಾಸಕರನ್ನು ಒಟ್ಟುಗೂಡಿಸಿ, ನೂರು ರುಪಾಯಿಯ ಬಾಂಡ್ ಪೇಪರ್ ಮೇಲೆ ‘ನಿಷ್ಠೆ’ಯ ಸಹಿ ಹಾಕಿಸಿಕೊಂಡಿರುವುದು ಕಾಂಗ್ರೆಸ್ಸನ್ನು ನಗೆಪಾಟಲಿಗೆ ಒಡ್ಡಿದೆ.

ಪಕ್ಷ ಒಡೆಯುವುದನ್ನು ತಡೆಯಲು ಅದಾಗಲೇ ಕಾನೂನುಗಳು ರೂಪುಗೊಂಡಿವೆ. ಆದರೆ ಕಾಂಗ್ರೆಸ್ಸಿಗೆ ಕಾನೂನು ಮೀರಿದ ಆತಂಕವಿದ್ದಂತಿದೆ. ಹಾಗೆಂದೇ, ಈಗ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿರುವ ಬಾಂಡ್ ಪೇಪರ್ ನಲ್ಲಿ ಶಾಸಕರು ಹೀಗೆ ಬರೆದಿದ್ದಾರೆ ಅರ್ಥಾತ್ ಬರೆಸಿಕೊಳ್ಳಲಾಗಿದೆ. ‘ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ನನ್ನ ನಿಷ್ಠೆ ವ್ಯಕ್ತಪಡಿಸುತ್ತೇನೆ.’

cong_bond‘ಶಾಸಕನಾಗಿ ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಮಗ್ನನಾಗುವುದಿಲ್ಲ. ಪಕ್ಷದ ನೀತಿಗಳು ಮತ್ತು ನಿರ್ಧಾರಗಳು ನನಗೆ ಸರಿ ಎನಿಸದಿದ್ದ ಪಕ್ಷದಲ್ಲೂ ನಾನು ಅದರ ವಿರುದ್ಧ ಹೇಳಿಕೆಗಳನ್ನು ನೀಡುವುದಾಗಲೀ, ಪಕ್ಷದ ಹಿತಕ್ಕೆ ಮಾರಕವಾಗುವ ಯಾವುದೇ ನಕಾರಾತ್ಮಕ ಮಾತುಗಳನ್ನಾಡುವುದಾಗಲೀ ಮಾಡುವುದಿಲ್ಲ. ಅಂಥ ಕ್ರಮ ಅಥವಾ ಹೇಳಿಕೆಗೆ ಮುಂದಾಗುವುದಕ್ಕೂ ಪೂರ್ವದಲ್ಲಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.’

ನಿಜ. ಈ ಹಿಂದೆ ಕಾಂಗ್ರೆಸ್ಸಿನ ಹಲವರು ತೃಣಮೂಲಕ್ಕೆ ಜಿಗಿದಿದ್ದಾರೆ. ಉತ್ತರಾಖಂಡದಲ್ಲೂ ಹರೀಶ್ ರಾವತ್ ಸರ್ಕಾರ ಇಂಥದೇ ಸಮಸ್ಯೆ ಎದುರಿಸಿತ್ತು. ಆದರೆ 212 ಸ್ಥಾನಗಳ ಭರ್ಜರಿ ಬಹುಮತ ಪಡೆದಿರುವ ದೀದಿಗೆ ಕಾಂಗ್ರೆಸ್ ಶಾಸಕರನ್ನು ತುಂಬಿಕೊಳ್ಳುವ ದರ್ದೇನಿದೆ?

ಎಲ್ಲಕ್ಕಿಂತ ಮುಖ್ಯವಾಗಿ, ಈ ‘ಬಾಂಡೆಡ್ ಲೇಬರ್’ ಕ್ರಮದಿಂದ ಪಕ್ಷವನ್ನು ಹಿಡಿದಿಡುವುದಕ್ಕೆ ಸಾಧ್ಯವೇ? ಕಾಂಗ್ರೆಸ್ ತನ್ನ ಪಕ್ಷದವರನ್ನು ಉಳಿಸಿಕೊಳ್ಳಬೇಕಾದರೆ ಅದು ಗೆಲ್ಲುವ ಶಕ್ತಿ ಹೆಚ್ಚಿಸಿಕೊಳ್ಳುವುದೊಂದೇ ಮಾರ್ಗ. ಅದಕ್ಕೆ ಸೋನಿಯಾ- ರಾಹುಲ್ ಹಂತದಲ್ಲಿ ಬದಲಾವಣೆಗಳು ಬೇಕು ಎಂಬುದು ಈಗ ಬಹುತೇಕರ ಪ್ರತಿಪಾದನೆ. ಅಂಥದ್ದರಲ್ಲಿ ಸೋನಿಯಾ- ರಾಹುಲ್ ನಾಯಕತ್ವದ ಕಾಂಗ್ರೆಸ್ ಗೆ ನಿಷ್ಠನಾಗಿರುತ್ತೇನೆ ಎಂದು ಬಾಂಡ್ ಬರೆಸಿಕೊಳ್ಳುವುದು ಕಾಂಗ್ರೆಸ್ ನಂಬಿಕೊಂಡಂತೆ ಶಿಸ್ತಿನ ಸಂಕೇತವಾಗುವುದಿಲ್ಲ ಬದಲಿಗೆ ಸೋಲಿನಿಂದ ಕಂಗೆಟ್ಟಿರುವ ಅದರ ತೊಳಲಾಟದ ಪ್ರದರ್ಶನವಾಗುತ್ತದೆ.

Leave a Reply