ಎರಡು ವರ್ಷದ ಆಡಳಿತದ ಬಗ್ಗೆ ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ನಾನು ಪ್ರಧಾನ ಮಂತ್ರಿಯಲ್ಲ, ಪ್ರಧಾನ ಸೇವಕ..’

ಕೇಂದ್ರ ಬಿಜೆಪಿ ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತಿದು.

ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಎರಡು ವರ್ಷದಲ್ಲಿ ಮಾಡಿದ್ದೇನು.. ಮುಂದಿನ ಮೂರು ವರ್ಷಗಳಲ್ಲಿ ಮಾಡಬೇಕಿರುವುದೇನು.. ಭವಿಷ್ಯದ ಭಾರತ ಹೇಗಿರಬೇಕು.. ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಮೋದಿ ತಮ್ಮ ಭಾಷಣದಲ್ಲಿ ಹೇಳಿದ ಪ್ರಮುಖ ಅಂಶಗಳು ಹೀಗಿವೆ.

  • ನಮ್ಮ ದೇಶದಲ್ಲಿ ಪ್ರತಿ ಯೋಜನೆಯನ್ನು ನಿರ್ದಿಷ್ಟ ಜಾತಿ, ಸಮುದಾಯ ಮತ್ತು ಮತಬ್ಯಾಂಕ್ ಗಳಿಗೆ ಮೀಸಲಾಗಿಸುವ ಸಂಪ್ರದಾಯ ಇದೆ. ಆದರೆ, ದೇಶದ ಎಲ್ಲ 125 ಕೋಟಿ ಜನ ನನ್ನ ಕುಟುಂಬ ಇದ್ದಂತೆ. ಇಲ್ಲಿ ಯಾವುದೇ ಜಾತಿ, ಸಮುದಾಯ ಎಂಬುದಿಲ್ಲ.
  • 2022 ರಲ್ಲಿ ಭಾರತ 75ನೇ ಸ್ವಾತಂತ್ರೋತ್ಸವ ಆಚರಿಸಲಿದೆ. ಬಡವರು ಮತ್ತು ರೈತರ ಆದಾಯ ದುಪ್ಪಟ್ಟು ಮಾಡುವ ಮೂಲಕ ಆ ಸಂದರ್ಭವನ್ನು ಇನ್ನಷ್ಟು ಸಂಭ್ರಮಗೊಳಿಸೋಣ.
  • ಗ್ರಾಮ ಪಂಚಾಯಿತಿಗಳಿಗೆ 2 ಲಕ್ಷ ಕೋಟಿ ಹಣ ನೀಡುವ ಮೂಲಕ ಹಳ್ಳಿಗಳ ಪರಿವರ್ತನೆಗೆ ಮುಂದಾಗಿದ್ದೇವೆ. ಶಾಲೆ, ಆಸ್ಪತ್ರೆ, ವಿದ್ಯುತ್ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿದ್ದೇವೆ.
  • ಎರಡು ವರ್ಷಗಳ ಹಿಂದೆ ಹಗರಣಗಳು, ಹಣ ಲೂಟಿ ಮಾಡಿದ್ದರ ಬಗ್ಗೆಯೇ ಸುದ್ದಿ ಕೇಳುತ್ತಿದ್ದೆವು. ಈ ಹಿಂದಿನ ಸರ್ಕಾರ ದೇಶದ ಹಣವನ್ನು ಎಲ್ಲಿ ವ್ಯಯಿಸಿತು ಎಂಬುದೇ ಗೊತ್ತಿಲ್ಲ. ಕಳೆದ ಸರ್ಕಾರಕ್ಕಿಂತ ನಾವು ನಿತ್ಯ ಎರಡು ಪಟ್ಟು ವೇಗವಾಗಿ ರಸ್ತೆ ನಿರ್ಮಾಣ ಕಾರ್ಯ ಮಾಡುತ್ತಿದ್ದೇವೆ.
  • ನನ್ನ ಕೆಲಸದ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನಾನು ಏನೇ ತಪ್ಪು ಮಾಡಿದರೂ ಟಿವಿಗಳಲ್ಲಿ 24 ಗಂಟೆಗಳ ಕಾಲ ಪ್ರಸಾರವಾಗುತ್ತದೆ. ಈ ರೀತಿ ವಿಮರ್ಶೆ ಸ್ವಾಗತಾರ್ಹ. ಪ್ರತಿ ದಿನ ಹಾಗೂ ಪ್ರತಿ ಪೈಸೆಗೂ ಸರ್ಕಾರ ಜನರಿಗೆ ಲೆಕ್ಕಕೊಡಬೇಕು.
  • ದೇಶದಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ತಪ್ಪಿಸಲು ‘ಬೇಟಿ ಬಚಾವ್, ಬೇಟಿ ಪಡಾವ್’ ಆಂದೋಲನ ಹಮ್ಮಿಕೊಂಡೆವು. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಮಹಿಳೆಯರ ಸಶಕ್ತಿಕರಣಕ್ಕೆ ಇದಕ್ಕಿಂತ ಉತ್ತಮ ನಿರ್ಧಾರ ಮತ್ತೊಂದಿಲ್ಲ.
  • ಪ್ರತಿ ತಿಂಗಳು 9ನೇ ತಾರೀಕಿನಂದು ಬಡ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡಿ, ಔಷಧಿ ನೀಡಬೇಕೆಂದು ದೇಶದ ವೈದ್ಯರನ್ನು ಕೇಳಿಕೊಳ್ಳುತ್ತಿದ್ದೇನೆ. ವರ್ಷದಲ್ಲಿ ಹೀಗೆ 12 ದಿನ ಕೆಲಸ ಮಾಡಿದರೆ, ಬಡವರಿಗೆ ಸಾಕಷ್ಟು ನೆರವಾಗುತ್ತದೆ. ದೇಶದಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ ಸರ್ಕಾರಿ ವೈದ್ಯರ ನಿವೃತ್ತಿಯ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಿಸಲಾಗಿದೆ.
  • ನಮ್ಮ ರೈತರಿಗೆ ಸರಿಯಾಗಿ ನೀರು ಪೂರೈಸಿದರೆ ಚಿನ್ನವನ್ನೇ ಬೆಳೆಯುತ್ತಾರೆ. ನಮ್ಮ ಕೃಷಿ ಭೂಮಿ ಫಲವತ್ತತೆ ಬರಿದಾಗುತ್ತಿದೆ. ಹೀಗಾಗಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಅದರಿಂದ ಮಣ್ಣಿನ ಫಲವತ್ತತೆ ಬಗ್ಗೆ ರೈತ ಅರಿವು ಪಡೆದಿದ್ದಾನೆ. ಕಬ್ಬಿನಿಂದ ಎಥನೊಲ್ ತಯಾರಿಕೆ ಕಾರ್ಯಕ್ರಮ ರೂಪಿಸಿದ್ದು, ಇದರಿಂದ ಕಬ್ಬು ಬೆಳೆಗಾರರಿಗೆ ನೆರವಾಗಲಿದೆ.
  • ಸರ್ಕಾರ ಮತ್ತು ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ, ಪ್ರತಿ ಸರ್ಕಾರ ಜನರ ಕನಸು ಈಡೇರಿಸುವ ಕೆಲಸ ಮಾಡಬೇಕು. ಅಭಿವೃದ್ಧಿ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

Leave a Reply