ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಆಪ್ತರಿಗೆ ಆದ್ಯತೆ, ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ, ಬುಡಕಟ್ಟು ಜನರ ಒಕ್ಕಲೆಬ್ಬಿಸದಿರಲು ನಿರ್ಧಾರ

ಡಿಜಿಟಲ್ ಕನ್ನಡ ಟೀಮ್: 

ಬಿಜೆಪಿ ರಾಜ್ಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುರುವಾರ ಬಿಡುಗಡೆ ಮಾಡಿದ್ದು, ಮಾಜಿ ಸಚಿವೆ ಶೋಭಾ ಕರಂದ್ಲಾಜೆ  ಸೇರಿದಂತೆ ತಮ್ಮ ಆಪ್ತವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ ಅವರನ್ನು ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪಟ್ಟಿಯಲ್ಲಿ ಅವರ ಬೆಂಬಲಿಗರಿಗೆ ಮಣೆ ಹಾಕಿಲ್ಲ. ಕಳೆದ ಭಾನುವಾರ ಕರೆದಿದ್ದ ಕೋರ್ ಕಮಿಟಿ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಸಂಬಂಧ ಯಾವುದೇ ವಿಷಯ ಪ್ರಸ್ತಾಪ ಮಾಡದಿದ್ದ ಯಡಿಯೂರಪ್ಪನವರು ಏಕಾಏಕಿ ಪಟ್ಟಿ ಬಿಡುಗಡೆ ಮಾಡಿರುವುದು ಪಕ್ಷದ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಪದಾಧಿಕಾರಿಗಳ ಪಟ್ಟಿ ಹೀಗಿದೆ:

ಉಪಾಧ್ಯಕ್ಷರು: ಗೋವಿಂದ ಕಾರಜೊಳ, ಶ್ರೀರಾಮುಲು, ನಾಗರತ್ನ ಕುಪ್ಪಿ, ಬಾಬುರಾವ್ ಚೌಹಾಣ್, ಭಾನುಪ್ರಕಾಶ್, ಎಂ.ನಾಗರಾಜು, ಬಿ.ಸೋಮಶೇಖರ್, ನಿರ್ಮಲ್ ಕುಮಾರ್ ಸುರಾನಾ, ಪಿ.ಸಿ ಮೋಹನ್, ಅನಂತ್ ಕುಮಾರ್ ಹೆಗಡೆ.

ಪ್ರಧಾನ ಕಾರ್ಯದರ್ಶಿಗಳು: ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಎನ್.ರವಿಕುಮಾರ್, ಅರುಣ್ ಕುಮಾರ್.

ಕಾರ್ಯದರ್ಶಿಗಳು: ಶಂಕರಪ್ಪ, ಜಗದೀಶ್ ಹಿರೆಮನಿ, ಕರಡಿ ಸಂಗಣ್ಣ, ತೇಜಸ್ವಿನಿ, ಸುರೇಶ್ ಅಂಗಡಿ, ಸುರೇಶ್ ಗೌಡ, ಪೂರ್ಣಿಮಾ ಶ್ರೀನಿವಾಸ್, ತಿಂಗಾಳೆ ವಿಕ್ರಮಾರ್ಜುನ ಹೆಗಡೆ, ಮುನಿರಾಜು ಗೌಡ, ಎಂ.ಜಯದೇವ್.

ಮಾಧ್ಯಮ ವಕ್ತಾರರು: ಸುರೇಶ್ ಕುಮಾರ್, ಗೋ ಮಧುಸುಧನ್.

ಸಹ ವಕ್ತಾರರು: ಮಂಜುಳಾ, ಭಾರತಿ ಶೆಟ್ಟಿ, ಮಾಳವಿಕಾ ಅವಿನಾಶ್, ಮೋಹನ್ ಲಿಂಬಿಕಾಯಿ.

ಮೋರ್ಚಾ ಅಧ್ಯಕ್ಷರು: ಮಹಿಳಾ ಮೋರ್ಚಾ- ಭಾರತಿ ಮಗಧುಮ್, ರೈತ ಮೋರ್ಚಾ- ವಿಜಯ್ ಶಂಕರ್, ಎಸ್.ಟಿ ಮೋರ್ಚಾ- ರಾಜು ಗೌಡ ನಾಯಕ್, ಎಸ್.ಸಿ ಮೋರ್ಚಾ- ಡಿ.ಎಸ್ ವೀರಯ್ಯ, ಅಲ್ಪಸಂಖ್ಯಾತರ ಮೋರ್ಚಾ- ಅಬ್ದುಲ್ ಅಜೀಮ್, ಯುವ ಮೋರ್ಚಾ- ಪ್ರತಾಪ್ ಸಿಂಹ, ಒಬಿಸಿ ಮೋರ್ಚಾ- ಪುಟ್ಟಸ್ವಾಮಿ, ಕೊಳಗೇರಿ ಮೋರ್ಚಾ- ಜಯಪ್ರಕಾಶ್ ಅಂಬಾರ್ಕರ್.

ಮತಪತ್ರಗಳಲ್ಲಿ ಅಭ್ಯರ್ಥಿಯ ಭಾವಚಿತ್ರ

ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗಳ ಮತಪತ್ರಗಳಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರ ಪ್ರಕಟಿಸಲು ನಿರ್ಧರಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮುಂಚೆ ಅಭ್ಯರ್ಥಿಗಳ ಹೆಸರನ್ನು ಮಾತ್ರ ಮತ ಪತ್ರದಲ್ಲಿ ಮುದ್ರಿಸಲಾಗುತ್ತಿತ್ತು. ಆದರೆ ಕೆಲ ಹೆಸರುಗಳು ಒಂದಕ್ಕಿಂತ ಹೆಚ್ಚು ಇರುವಾಗ ಗೊಂದಲ ಉಂಟಾಗುತ್ತಿತ್ತು. ಹೀಗಾಗಿ ಅಭ್ಯರ್ಥಿಗಳ ಹೆಸರಿನ ಜತೆಗೆ ಅವರ ಭಾವಚಿತ್ರವನ್ನೂ ಪ್ರಕಟಿಸಲಾಗುತ್ತದೆ. ಚುನಾವಣೆ ಸುಧಾರಣೆ ಹಿನ್ನೆಲೆಯಲ್ಲಿ ಈ ಬದಲಾವಣೆ ಆಗಿದೆ ಎಂದು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣಾಧಿಕಾರಿ ಎಸ್. ಮೂರ್ತಿ ತಿಳಿಸಿದ್ದಾರೆ.

ಬುಡಕಟ್ಟು ಜನರ ಒಕ್ಕಲೆಬ್ಬಿಸದಿರಲು ಸರ್ಕಾರ ತೀರ್ಮಾನ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಬುಡಕಟ್ಟು ನಿವಾಸಿಗಳನ್ನು ಒಕ್ಕಲೆಬ್ಬಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಚಾಮರಾಜನಗರ, ಕೊಡಗು, ಮೈಸೂರು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ಬುಡಕಟ್ಟು ಹಾಗೂ ಪಾರಂಪರಿಕ ನಿವಾಸಿಗಳು ಅಲ್ಲಿನ ತಮ್ಮ ಹಕ್ಕು ಮಾನ್ಯ ಮಾಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಇತ್ಯರ್ಥ ಆಗುವವರೆಗೂ ಈ ಪ್ರದೇಶದ ಜನರನ್ನು ಒಕ್ಕಲೆಬ್ಬಿಸುವುದು ಬೇಡ ಎಂದು ನಿರ್ಧರಿಸಿಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಈವರೆಗಗೂ 2.90 ಲಕ್ಷ ಅರ್ಜಿಗಳು ಬಂದಿದ್ದು, ಆ ಪೈಕಿ 9115 ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. ಉಳಿದಂತೆ 1.31 ಲಕ್ಷ ಅರ್ಜಿಗಳು ತಿರಸ್ಕೃತವಾಗಿದ್ದು, 1.58 ಲಕ್ಷ ಅರ್ಜಿಗಳ ವಿಲೇವಾರಿ ಆಗಬೇಕಿದೆ. ಮಾನ್ಯ ಪಡೆದ ಜನ ಅರಣ್ಯದಲ್ಲಿ ವಾಸ, ಕೃಷಿ, ಹಣ್ಣು, ಸೊಪ್ಪು, ಉರುವಲುಗಳ ಬಳಕೆ ಹಕ್ಕು ಹೊಂದುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ವಿವರಿಸಿದರು.

ಪೊಲೀಸ್ ಸಿಬ್ಬಂದಿ ಬೇಡಿಕೆ ಪರಿಶೀಲನೆ: ಪರಮೇಶ್ವರ್

ವೇತನ ಹಾಗೂ ಬಡ್ತಿ ತಾರತಮ್ಯ ನಿವಾರಣೆ, ಹಲವು ಸೌಲಭ್ಯಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ವಿಷಯ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಪೊಲೀಸ್ ಮ್ಯಾನುಯಲ್ ಪ್ರಕಾರ ಪೊಲೀಸರು ಪ್ರತಿಭಟನೆ ಮಾಡುವಂತಿಲ್ಲ. ಇಲಾಖೆ ಹೊರಗಿನ ವ್ಯಕ್ತಿ ಜೂನ್ 2 ರಂದು ಪೊಲೀಸ್ ಸಿಬ್ಬಂದಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಆದರೂ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿಗಳ ಬೇಡಿಕೆ ಬಗ್ಗೆ ತಿಳಿದುಕೊಳ್ಳಲು ಸೂಚಿಸಿದ್ದೇನೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೊಲೀಸರಿಗೆ ಹೆಚ್ಚಿನ ಸೌಲಭ್ಯಗಳಿವೆ ಎಂದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಜಾಟ್ ಮತ್ತಿತರ 4 ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿರುವ ಸರ್ಕಾರದ ಹೊಸ ಮೀಸಲು ನೀತಿಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತಡೆ ಹಿಡಿದಿದೆ.
  • ಮುಂಬೈನ ರಾಯಾಯನಿಕ ತಯಾರಿಕ ಕಾರ್ಖಾನೆಯಲ್ಲಿ ಗುರುವಾರ ಸ್ಫೋಟ ಸಂಭವಿಸಿದ್ದು, 3 ಮಂದಿ ಮೃತಪಟ್ಟಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದ್ದು, 35 ಮಂದಿ ಗಾಯಗೊಂಡಿದ್ದಾರೆ.
  • ಕೇರಳದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದಡಿ ಬಂಧಿಸಲಾಗಿದ್ದ ಇಟಲಿ ನಾವಿಕನ ಬಿಡುಗಡೆಗೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ. ಪೂರ್ಣವಿವರ ಇಲ್ಲಿ ಓದಬಹುದು.

Leave a Reply