ಒಬ್ಬರ ನಷ್ಟವೇ ಇನ್ನೊಬ್ಬರ ಲಾಭ, ಬರಗಾಲದಲ್ಲಿ ಕುದುರಿತು ಡೀಸೆಲ್ ವ್ಯಾಪಾರ!

ಡಿಜಿಟಲ್ ಕನ್ನಡ ಟೀಮ್: ಒಬ್ಬರಿಗೆ ನಷ್ಟವಾದ್ರೆ, ಮತ್ತೊಬ್ಬರಿಗೆ ಲಾಭ ಎಂಬ ಮಾತಿದೆ. ಬರಗಾಲದಲ್ಲಿ ರೈತರಿಗೆ ನಷ್ಟವಾದಾಗ, ಮತ್ತೊಂದೆಡೆ ಡೀಸೆಲ್ ವ್ಯಾಪಾರ ಲಾಭ ಮಾಡಿದ್ದು ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಅರೆ, ರೈತರು ಬರಗಾಲದಲ್ಲಿ ಪರದಾಡೋದಕ್ಕೂ ಡೀಸೆಲ್ ವ್ಯಾಪಾರದ ಲಾಭಕ್ಕೂ ಎಲ್ಲಿಯ ಸಂಬಂಧ ಅಂತೀರಾ? ಸಂಬಂಧ ಇದೆ..

ಕಳೆದ ವರ್ಷ ಎಲ್ ನಿನೋ ಪರಿಣಾಮ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಲಿಲ್ಲ. ಹಾಗಾಗಿ ಈ ರಾಷ್ಟ್ರಗಳಲ್ಲಿನ ಕೃಷಿಕರಿಗೆ ನೀರಿನ ಅಭಾವ ಎದುರಾಯಿತು. ರೈತರು ತಮ್ಮ ಬೆಳೆಗೆ ಬೇರೆಡೆಯಿಂದ ನೀರು ಹಾಯಿಸಲು ಡೀಸೆಲ್ ಪಂಪ್ ಗಳ ಮೊರೆ ಹೋದರು. ಕ್ರಮೇಣ ಡೀಸೆಲ್ ಬಳಕೆ ಪ್ರಮಾಣ ಗಣನೀಯವಾಗಿ ಹೆಚ್ಚಿತು. ಡೀಸೆಲ್ ಬೆಲೆ ಏರಿಕೆ ಸಹ ವ್ಯಾಪಾರಿಗಳಿಗೆ ವರವಾಗಿ ಪರಿಣಮಿಸಿತು.

ಕೆಲ ವಾರಗಳ ಹಿಂದಷ್ಟೇ ಕಳೆದ ಐದು ವರ್ಷಗಳ ಅವಧಿಯಲ್ಲಿ ಡೀಸೆಲ್ ಬೆಲೆ ದಾಖಲೆಯ ಕುಸಿತ (ಪ್ರತಿ ಬ್ಯಾರೆಲ್ ಗೆ 7.08 ಅಮೆರಿಕನ್ ಡಾಲರ್) ಕಂಡಿತ್ತು. ಈಗ ಬರ ಪರಿಸ್ಥಿತಿಯಿಂದಾಗಿ ಡೀಸೆಲ್ ವ್ಯಾಪಾರ ಮತ್ತೆ ಚೇತರಿಕೆ ಕಂಡಿದೆ.  ದಕ್ಷಿಣ ಏಷ್ಯಾದಲ್ಲಿ ಭಾರತ, ವಿಯೆಟ್ನಾಂ ನಂತಹ ದೇಶಗಳ ರೈತರು ಬರ ಪರಿಸ್ಥಿತಿಯಲ್ಲಿ ಡೀಸೆಲ್ ಪಂಪ್ ಗಳ ಮೊರೆ ಹೋಗಿದ್ದರ ಪರಿಣಾಮ ಇದು. ಇದರಿಂದ ಡೀಸೆಲ್ ಬಳಕೆ ಶೇ.65 ರಷ್ಟು ಏರಿಕೆ ಕಂಡಿತು.

ಭಾರತ ಕಳೆದ ವರ್ಷ ಏಪ್ರಿಲ್ ತಿಂಗಳಿಗಿಂತ ಈ ವರ್ಷ ಅಧಿಕ ಪ್ರಮಾಣದಲ್ಲಿ ಡೀಸೆಲ್ ಆಮದು ಮಾಡಿಕೊಂಡಿದೆ. ಉಳಿದಂತೆ ವಿಯೆಟ್ನಾಂ ಶೇ. 22 ರಷ್ಟು, ಪಾಕಿಸ್ತಾನ ಶೇ. 7 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಖರೀದಿಸಿವೆ. ಹೀಗಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳು ಚೀನಾದಿಂದ 3 ಲಕ್ಷ ಬ್ಯಾರೆಲ್ ಡೀಸೆಲ್ ಅನ್ನು ಹೆಚ್ಚುವರಿಯಾಗಿ ಖರೀದಿಸಿವೆ. ಬೇಡಿಕೆ ಹೆಚ್ಚಿದ ಪರಿಣಾಮ ಪ್ರತಿ ಬ್ಯಾರೆಲ್ ಬೆಲೆ ಈಗ 11.65 ಅಮೆರಿಕನ್ ಡಾಲರ್ ಗೆ ಹೆಚ್ಚಿದೆ. ದುಬೈ ಕಚ್ಚಾತೈಲ ವ್ಯಾಪಾರದಲ್ಲಿ ಕಳೆದ ವರ್ಷಕ್ಕಿಂತ ಶೇ. 35 ರಷ್ಟು ಲಾಭ ಏರಿಕೆಯಾಗಿದೆ.

Leave a Reply