ಇಟಲಿ ನಾವಿಕ ಸ್ವದೇಶಕ್ಕೆ ಮರಳಲು ಸುಪ್ರೀಂ ಅನುಮತಿ

ಡಿಜಿಟಲ್ ಕನ್ನಡ ಟೀಮ್: ಕೇರಳದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧನವಾಗಿದ್ದ ಇಟಲಿಯ ನಾವಿಕ ಸ್ವದೇಶಕ್ಕೆ ಮರಳಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.

2012ರಲ್ಲಿ ಕೇರಳದ ಮೀನುಗಾರರನ್ನು ಕೊಂದ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಲ್ವಾಟೋರ್ ಗಿರೊನ್, ಸ್ವದೇಶಕ್ಕೆ ಮರಳಬೇಕು ಎಂದು ಮನವಿ ಮಾಡಿಕೊಂಡಿದ್ದ. ಮಾನವೀಯತೆಯ ಆಧಾರದ ಮೇಲೆ ಭಾರತ ಸರ್ಕಾರ ಈತನ ಮನವಿಯನ್ನು ಪುರಸ್ಕರಿಸಿತ್ತು. ಹೀಗಾಗಿ ಈತ ಸ್ವದೇಶಕ್ಕೆ ಮರಳಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಅಲ್ಲದೇ, ಪ್ರತಿ ತಿಂಗಳು ಪೊಲೀಸ್ ಠಾಣೆಗೆ ಸಂಪರ್ಕಿಸಿ ಕಾನೂನು ನಿಯಮ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಾವಿಕನಿಗೆ ಸೂಚಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಶ್ವಸಂಸ್ಥೆ ನ್ಯಾಯಾಧಿಕರಣ, ಜಾಮೀನಿನ ಮೇಲೆ ಹೊರಬಂದಿರುವ ಈ ನಾವಿಕನನ್ನು ಭಾರತ ಬಿಡುಗಡೆ ಮಾಡಬೇಕೆಂದು ಈ ತಿಂಗಳ ಆರಂಭದಲ್ಲಿ ತೀರ್ಪು ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ಮತ್ತು ಭಾರತದ ನಡುವೆ ತಿಕ್ಕಾಟ ನಡೆದು, ರಾಜತಾಂತ್ರಿಕತೆ ಹದಗೆಟ್ಟಿತ್ತು. ಈಗ ಭಾರತ ವಿಶ್ವಸಂಸ್ಥೆ ನ್ಯಾಯಾಧಿಕರಣದ ತೀರ್ಪಿಗೆ ಬದ್ಧವಾಗಿ ಈತನನ್ನು ಬಿಡುಗಡೆ ಮಾಡಿದೆ.

ಈ ಪ್ರಕರಣದಲ್ಲಿ ಇಬ್ಬರು ನಾವಿಕರು ಆರೋಪಿಯಾಗಿದ್ದರು. ಆ ಪೈಕಿ ಮ್ಯಾಸಿಮಿಲಿಯಾನೊ ಲಾಟೊರೆ ಎಂಬ ನಾವಿಕ 2014 ರಲ್ಲಿ ಪಾರ್ಶ್ವವಾಯುವಿಗೆ ಸಿಲುಕಿದ ಪರಿಣಾಮ ಆರೋಗ್ಯ ಚಿಕಿತ್ಸೆಗಾಗಿ ಸ್ವದೇಶಕ್ಕೆ ಮರಳಿದ್ದ.

ಈ ನಾವಿಕರು ತೈಲ ಟ್ಯಾಂಕರ್ ಗಳ ಭದ್ರತಾ ಸಿಬ್ಬಂದಿಯಾಗಿದ್ದು, ಮೀನುಗಾರರನ್ನು ಕಡಲುಗಳ್ಳರೆಂದು ಭಾವಿಸಿ ಹತ್ಯೆ ಮಾಡಲಾಗಿದೆ ಎಂದು ಇಟಲಿ ಸರ್ಕಾರ ಇವರ ಪರ ವಾದ ಮಾಡಿತ್ತು. ಅಲ್ಲದೆ ಇವರನ್ನು ಬಿಡುಗಡೆ ಮಾಡಬೇಕೆಂದು ಇಟಲಿ ವಿಶ್ವಸಂಸ್ಥೆ ನ್ಯಾಯಾಧಿಕರಣದ ಮೊರೆ ಹೋಗಿತ್ತು.

Leave a Reply