ರವಿಚಂದ್ರರ ಮುಗಿಯದ ಯೌವನ, ಪ್ರಣಯರಾಜನ ಹೊಸ ಪ್ರಯತ್ನ

ಡಿಜಿಟಲ್ ಕನ್ನಡ ಟೀಮ್: ವಯಸ್ಸು ಎಲ್ಲರಿಗೂ ಆಗಲೇಬೇಕು, ಆಗುತ್ತದೆ. ಬದುಕಿನ ಪಥದಲ್ಲಿ ಸಾಗುತ್ತ ಹೊಸ ಅನುಭವಗಳಿಗೆ ತೆರೆದುಕೊಳ್ಳುವವರು ಕೆಲವರು. ಮತ್ತೆ ಹಲವರು ರಾಜಕೀಯ, ಕಲೆ, ಸಿನಿಮಾ ಹೀಗೆ ಹಲವು ಮಗ್ಗುಲುಗಳಲ್ಲಿ ಯೂತ್ ಐಕಾನ್, ಚಿರಯುವಕ ಇತ್ಯಾದಿ ಹಣೆಪಟ್ಟಿಯಲ್ಲೇ ಇರಬೇಕು ಎಂದು ಬಯಸುತ್ತಾರೆ.

ಒಂದು ಕಾಲದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿದ್ದ ಅಮಿತಾಭ್ ಬಚ್ಚನ್ ಪ್ರಾಯ ಉರುಳುತ್ತಲೇ ‘ಪಾ’, ‘ಪೀಕೂ’, ‘ಚೀನಿ ಕಮ್’ ಹಿಂಗೆಲ್ಲ ತಮ್ಮನ್ನು ಪ್ರಯೋಗಗಳಿಗೆ ಒಗ್ಗಿಕೊಂಡರು. ಆ ಮೂಲಕ ವೀಕ್ಷಕರಲ್ಲೂ ಹೊಸ ಅನುಭವವನ್ನು ಅರಳಿಸಿದರು. ಮತ್ತದೇ ಪ್ರಾಯಕಾಲದ ಹೀರೋಗಿರಿ ತೋರಿಸಲು ಹೋದ ‘ಬುಡ್ಡಾ ಹೋಗಾ ತೇರಾ ಬಾಪ್’ ನಂಥ ಚಿತ್ರಗಳು ವಿಳಾಸವಿಲ್ಲದೇ ಹೋದಾಗ ಅದರಿಂದ ಎಚ್ಚೆತ್ತರು.

ಇಂಥ ಪೀಠಿಕೆ ಏಕೆಂದರೆ… ಶುಕ್ರವಾರ ಕನ್ನಡದಲ್ಲಿ ಎರಡು ಚಿತ್ರಗಳು ಬಿಡುಗಡೆ ಆಗುತ್ತಿವೆ. ಐವತ್ತರಾಚೆಯ ವ್ಯಕ್ತಿಗೆ ಲಿಫ್ಟ್ ನಲ್ಲಿ 20ರ ಹರೆಯದ ಹುಡುಗಿ ಸಿಗ್ತಾಳೆ. ಕನಸಿನ ಲೋಕ ತೆರೆದುಕೊಳ್ಳುತ್ತೆ. ಸೆಟ್ ನಿರ್ಮಿಸೋಕೆ ಅಷ್ಟು ಖರ್ಚು ಮಾಡಿದೀವಿ, ಅದ್ಧೂರಿಯಾಗಿದೆ… ಇತ್ಯಾದಿ, ಇತ್ಯಾದಿ. ರವಿಚಂದ್ರನ್ ಅವರ ಅಪೂರ್ವ ಚಿತ್ರದ ಕುರಿತು ಕೇಳಬಹುದಾದ ಮಾತುಗಳು. ಚಿತ್ರದ ಕೆಲ ಸ್ಟಿಲ್ ಗಳು ಇಲ್ಲಿವೆ. ಹೀಗೆ ಕಣ್ಣತುಂಬಿಸಿಕೊಳ್ಳುವುದರಾಚೆಗೂ ಏನಾದರೂ ಇದ್ದೀತು ಅಂತ ಭರವಸೆ ಇರುವವರು ಚಿತ್ರಮಂದಿರಕ್ಕೂ ಹೋಗಬಹುದು.

cinema-ravi1

cinema-ravi2

ಇನ್ನೊಂದು ಚಿತ್ರ, ಪ್ರಣಯರಾಜ ಎಂಬ ಹೆಗ್ಗಳಿಕೆ ಹೊತ್ತಿರುವ ಶ್ರೀನಾಥರನ್ನು ಮುಖ್ಯಭೂಮಿಕೆಯಲ್ಲಿ ಹೊಂದಿರುವ ‘ಸುಳಿ’. ಇಲ್ಲಿ ಅವರೇನೂ ಇಪ್ಪತ್ತರ ತರುಣಿ ಜತೆ ರೋಮಾನ್ಸಿಂಗ್ ಪಾತ್ರದಲ್ಲಿಲ್ಲ. ಬುಡೆನ್ ಸಾಬ್ ಎಂಬ ಹೊಸ ಥರದ ಪಾತ್ರವೊಂದನ್ನು ಪ್ರಯತ್ನಿಸಿರುವ ಸೂಚನೆಗಳು ಫೋಟೊಶೂಟಿನಲ್ಲಿ ಸಿಗುತ್ತಿವೆ.

cinema-suli

cinema-suli1

cinema-suli2

ಹೊಸತನದ ಪ್ರಯತ್ನಗಳೆಲ್ಲ ವೀಕ್ಷಕರ ಮನಗೆಲ್ಲುತ್ತವೆ ಅಂತಲ್ಲ. ಆದರೆ, ಮತ್ತದೇ ನಾಯಕಿ ಜತೆ ಹಾಡು ಹಾಡಿಕೊಂಡಿರುವ ಯೌವನ್ನೋತ್ಸಾಹದ ಪೊಳ್ಳು ಪ್ರದರ್ಶನಕ್ಕಿಂತ ಇಂಥ ಪ್ರಯತ್ನಗಳು ಪ್ರಶಂಸಾರ್ಹ.

2 COMMENTS

Leave a Reply