ರಾಜಕೀಯ ಹತ್ಯೆ-ದಾಳಿಗಳ ನಂತರವೂ ಬಿಹಾರ ಜಂಗಲ್ ರಾಜ್ ಅಲ್ಲ ಅಂತೀರಾ?

ಪ್ರವೀಣ್ ಕುಮಾರ್

ಬಿಹಾರದ ಮಾಜಿ ಮುಖ್ಯಮಂತ್ರಿ ಜತಿನ್ ರಾಮ್ ಮಾಂಜಿ ಕಾರಿನ ಮೇಲೆ ಗುರುವಾರ ಗಯಾದಲ್ಲಿ ದಾಳಿಯಾಗಿದೆ. ಅವರ ಅನುಚರರ ಹೊತ್ತ ಜೀಪೊಂದಕ್ಕೆ ಅಪರಿಚಿತರು ಬೆಂಕಿಯನ್ನೂ ಹೊತ್ತಿಸಿದ್ದಾರೆ.

ಈ ಪ್ರಕರಣ ನಡೆದ ಸಂದರ್ಭವನ್ನು ಗಮನಿಸುವುದಕ್ಕೆ ಹೋದರೆ ಅದು ಇನ್ನೊಂದು ಅಪರಾಧ ಮತ್ತು ಬಿಹಾರದ ಕಾನೂನು ಪತನದತ್ತ ಗಮನ ಸೆಳೆಯುತ್ತದೆ. ಏಕೆಂದರೆ, ಒಂದೊಮ್ಮೆ ಆರ್ಜೆಡಿಯಲ್ಲಿದ್ದು ಈಗ ಬಿಜೆಪಿ ಪಾಳೆಯದಲ್ಲಿರುವ ಜಿತಿನ್ ರಾಮ್ ಮಾಂಜಿ, ಗುರುವಾರ ಸುದೇಶ್ ಪಾಸ್ವಾನರ ಕುಟುಂಬವನ್ನು ಭೇಟಿ ಮಾಡುವುದಕ್ಕೆ ಹೋಗಿದ್ದರು. ಈ ಸುದೇಶ್ ಪಾಸ್ವಾನ್ ಒಂದೆರಡು ದಿನ ಹಿಂದಷ್ಟೇ ಕೊಲೆಯಾಗಿದ್ದಾರೆ. ಸ್ಥಳೀಯ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದ ತಮ್ಮ ಹೆಂಡತಿ ಪರ ಪ್ರಚಾರಕ್ಕೆ ತೆರಳಿದ್ದ ಸುದೇಶ್ ಪಾಸ್ವಾನ್, ರಾಮ ವಿಲಾಸ ಪಾಸ್ವಾನರ ಎಲ್ ಜೆ ಪಿ ಸದಸ್ಯರಾಗಿದ್ದರು.

ಅರೇ, ಇದೇನು? ಬಿಹಾರದಲ್ಲಿ ರಾಜಕೀಯ ವಿರೋಧಿಗಳ ಮೇಲೆ ಹಲ್ಲೆ- ಹತ್ಯೆಯ ಮಾರಕ ವಾತಾವರಣ ಈ ಪರಿ ಬಿಗಿ ಆಗಿದೆಯಲ್ಲ ಅಂತ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಅಲ್ಲಿನ ಉಪಮುಖ್ಯಮಂತ್ರಿ ಮತ್ತು ಲಾಲು ಪುತ್ರರತ್ನ ತೇಜಸ್ವಿ ಯಾದವ್ ಪ್ರತಿಕ್ರಿಯೆ – ‘ಮಹಾರಾಷ್ಟ್ರದಲ್ಲಿ ಏಕನಾಥ ಖಾಡ್ಸೆ ಮೊಬೈಲ್ ಫೋನಿಗೆ ದಾವೂದ್ ಇಬ್ರಾಹಿಂ ಕರೆಗಳು ಬರ್ತಿವೆ ಎಂಬುದರ ಬಗ್ಗೆ ಬಿಜೆಪಿ ಏನು ಹೇಳುತ್ತೆ? ಮೊದಲು ಅಲ್ಲಿ ಉತ್ತರ ಕೊಡಲಿ..’

ಇದೆಂಥ ಲಾಜಿಕ್ ಸ್ವಾಮಿ? ರಾಜ್ಯದ ಉಪಮುಖ್ಯಮಂತ್ರಿಯಾದವ ತನ್ನ ನೆಲದಲ್ಲಾಗುತ್ತಿರುವ ಕೊಲೆ- ಹಲ್ಲೆಗಳಿಗೆ ಪ್ರತಿಕ್ರಿಯಿಸಬೇಡವೇ? ಸುದೇಶ್ ಪಾಸ್ವಾನ್ ಕೊಲೆ ಮಾವೋವಾದಿಗಳಿಂದ ಆಗಿದೆ ಎನ್ನುತ್ತಿವೆ ವರದಿಗಳು. ಆ ಬಗ್ಗೆ ತನಿಖೆಯಾಗುತ್ತದೆ, ರಾಜಕೀಯ ಹತ್ಯೆಗಳು ಖಂಡನೀಯ ಎಂಬ ಮಾತಾದರೂ ಬರಬೇಡವೇ?

ಹಾಗಂತ ಇದ್ಯಾವುದೋ ಒಂದೇ ಘಟನೆಯಾಗಿದ್ದರೆ ಅದರ ಕತೆ ಬೇರೆ. ಲಾಲು- ನಿತೀಶರ ಜೋಡಿ ಬಿಹಾರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಬಿಜೆಪಿ- ಇವರು ಜಂಗಲ್ ರಾಜ್ ಗೆ ಕಾರಣರಾಗುತ್ತಾರೆ ಎಚ್ಚರ ಎಂದಿತ್ತು. ಆದರೆ ನಿತೀಶ್ ಕುಮಾರ್ ಅವರಂಥ ಅಭಿವೃದ್ಧಿಯ ಮುಖ ಮುಖ್ಯಮಂತ್ರಿ ಹುದ್ದೆಯಲ್ಲಿರುವುದರಿಂದ ಬಿಜೆಪಿಗರು ಹೆದರಿಸುವಂಥದ್ದೇನೂ ಆಗಲಿಕ್ಕಿಲ್ಲ ಅಂತಲೇ ಜನರೂ ಅಂದುಕೊಂಡಿದ್ದರು. ಆದರೆ, ಎಂಜಿನಿಯರ್ ಗಳ ಹತ್ಯೆಯಿಂದ ಶುರುವಾದ ಜಂಗಲ್ ರಾಜ್, ಪತ್ರಕರ್ತರ ಹತ್ಯೆಗಳಿಗೆ ಕಾರಣವಾಗಿ, ಈಗ ರಾಜಕೀಯ ಪ್ರತಿಸ್ಪರ್ಧಿಗಳನ್ನು ಇಲ್ಲವಾಗಿಸುವುದರವರೆಗೆ ಬಂದು ನಿಂತಿದೆ!

ಹಳೆಓದು- ಮರುಓದು: ಸಂಕ್ರಾಂತಿಗೆ ಬಿಹಾರ ರಾಜಕೀಯ ಥಿಯೇಟರ್ ನಲ್ಲಿ ಓಡ್ತಿರೋ ಚಿತ್ರ ‘ಜಂಗಲ್ ರಾಜ್ ರಿಟರ್ನ್ಸ್’! ಏನ್ಮಾಡೋದು, ಇದು ‘ಪ್ರೇಕ್ಷಕರ’ ಒತ್ತಾಸೆಯಿಂದ್ಲೇ ಬಂದಿದ್ದು…

ಜೆಡಿಯು ಶಾಸಕಿಯ ಮಗ, ತನ್ನನ್ನು ಓವರ್ ಟೋಕ್ ಮಾಡಿದವನನ್ನು ಗುಂಡಿಟ್ಟು ಕೊಂದಿದ್ದು ಕೇವಲ ಒಂದು ಅಪರಾಧ ಪ್ರಕರಣವಾಗಿರದೇ, ಹೇಗೆ ಅಧಿಕಾರಸ್ಥರಿಗೆ ಏನನ್ನಾದರೂ ದಕ್ಕಿಸಿಕೊಳ್ಳಬಹುದೆಂಬ ಮದ ಏರಿದೆ ಎಂಬುದನ್ನು ಬಿಂಬಿಸುತ್ತಿದೆ. ಈ ವಿದ್ಯಮಾನದ ವರದಿಯನ್ನು ನೀವಿಲ್ಲಿ ಓದಿಕೊಳ್ಳಬಹುದು.

ಆದರೆ ಇಂಥ ಎಲ್ಲದರ ಪ್ರಸ್ತಾಪ ಬಂದಾಗಲೆಲ್ಲ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತವರ ಸಾಥಿಗಳು ಒಂದು ವಾದ ಮುಂದಿಡುತ್ತಾರೆ. ಅದೆಂದರೆ, ಬಿಹಾರದ ಅಪರಾಧ ಅಂಕಿಅಂಶಗಳು ಬಿಜೆಪಿ ಆಡಳಿತದ ಹಲವು ರಾಜ್ಯಗಳಿಗಿಂತ ಕಡಿಮೆ ಇದೆ ಅನ್ನೋದು. ಮೇಲ್ನೋಟಕ್ಕೆ ಹೌದಲ್ಲ ಎನಿಸಿಬಿಡಬಹುದಾದ ಈ ವಾದದಲ್ಲಿ ಅಪಾಯವಿದೆ. ಏಕೆಂದರೆ ಅಪರಾಧಗಳು ದಾಖಲಾಗುವುದು ವ್ಯವಸ್ಥೆ ಸರಿ ಇದೆ ಎಂಬುದಕ್ಕೆ ಸೂಚನೆಯೂ ಹೌದು. ಅಂದರೆ ಪೋಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದಕ್ಕೆ ಅವಕಾಶವಾಗುತ್ತಿದೆ ಎಂದಾಯಿತು. ಪೋಲೀಸ್ ಠಾಣೆಯಲ್ಲಿ ದೂರನ್ನೇ ದಾಖಲಿಸಿಕೊಳ್ಳದಂಥ ಪರಿಸ್ಥಿತಿ ಇದ್ದರೆ ಅಪರಾಧಗಳು ವರದಿಯಾಗುವುದೆಲ್ಲಿಂದ? ಇದನ್ನಿಟ್ಟುಕೊಂಡು ಅಪರಾಧಗಳ ಅಂಕಿಅಂಶ ಕಡಿಮೆ ಇದೆ ಎಂದರಾಯಿತೆ? ಅಂಕಿಅಂಶಗಳಿಗಿಂತ ಜನರ ಗ್ರಹಿಕೆ ರೂಪುಗೊಳ್ಳುವುದು ಅವರ ಅನುಭವಕ್ಕೆ ಏನು ಬರುತ್ತಿದೆ ಎಂಬುದರ ಮೇಲೆ. ಬಿಹಾರದಿಂದ ಒಂದರ ಹಿಂದೊಂದರಂತೆ ಬರುತ್ತಿರುವಂಥ ವಿಚಲಿತ ಚಿತ್ರಗಳು ಇನ್ನೆಲ್ಲಿಂದ ಬರುತ್ತಿವೆ?

ಇಷ್ಟೆಲ್ಲದರ ನಂತರವೂ ಜಂಗಲ್ ರಾಜ್ ನಮ್ಮದಲ್ಲ ಅಂತಂದುಬಿಟ್ಟರೆ ಆಯಿತೇ?

Leave a Reply