ಕಾಜಲ್ ಕಣ್ಗನ್ನಡಿಯಲ್ಲಿ ಪ್ರತಿಫಲಿಸಿದೆ ಬಾಲಿವುಡ್ ನಲ್ಲಿ ವಿಜೃಂಭಿಸುತ್ತಿರುವ ಮಹಿಳಾ ಶೋಷಣೆ ವಿಕೃತ ಮನಸ್ಥಿತಿ

sridharamurthyಎನ್.ಎಸ್‍.ಶ್ರೀಧರ ಮೂರ್ತಿ

ಬಾಲಿವುಡ್‍ನ ಸರ್ವಕಾಲೀನ ಪ್ರತಿಭಾವಂತ ಕಲಾವಿದೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಜಲ್ ಇತ್ತೀಚಿನ ಸಂದರ್ಶನದಲ್ಲಿ ಕೆಲವು ಕುತೂಹಲಕರ ವಿಷಯಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಬೆಳ್ಳಿತೆರೆಯಲ್ಲಿ 23 ವರ್ಷಗಳ ಪಯಣವನ್ನು ನಡೆಸಿ ಇಂದಿಗೂ ನಾಯಕಿಯಾಗೇ ಉಳಿದಿರುವ ಅವರ ಮಾತುಗಳಲ್ಲಿ ಹಲವು ಚಿಂತಿಸಬೇಕಾದ ಅಂಶಗಳಿವೆ.

ಕಾಜಲ್ ಹೇಳುತ್ತಾರೆ. ‘ಬಾಲಿವುಡ್‍ನಲ್ಲೀಗ ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ. ಆದರೆ ಕಲಾವಿದೆಯರಿಗೆ ಸಮಾನತೆ ಸಿಕ್ಕುತ್ತಿಲ್ಲ’. ಅವರು ಸಮಾನತೆ ಎಂದು ಹೇಳುತ್ತಿರುವುದು ಎರಡು ನೆಲೆಯಲ್ಲಿ. ಒಂದು ಇಂದಿಗೂ ಬಾಲಿವುಡ್‍ನಲ್ಲಿ  ಕಲಾವಿದೆಯರಿಗೆ ಕಲಾವಿದರ ಕಾಲು ಭಾಗಕ್ಕಿಂತಲೂ ಕಡಿಮೆ ಸಂಭಾವನೆ ಸಿಕ್ಕುತ್ತದೆ. ಇನ್ನೊಂದು ಇನ್ನಷ್ಟು ಮಹತ್ವದ ಅಂಶ ಇಲ್ಲಿ ಕಲಾವಿದೆಯರನ್ನು ಕಥೆಯ ಆಯ್ಕೆಯಿಂದ ಹಿಡಿದು ಪ್ರತಿ ಹಂತದಲ್ಲಿಯೂ ಶೋಷಿಸಲಾಗುತ್ತದೆ. ಮಾರಾಟದ ಸರಕಿನಂತೆಯೇ ನಡೆಸಿಕೊಳ್ಳುತ್ತಿದೆ. ದೃಶ್ಯ ಮಾಧ್ಯಮದಲ್ಲಿ ನಡೆದಿರುವ ಕ್ರಾಂತಿ ಸ್ವಾಭಿಮಾನಕ್ಕಿಂತಲೂ ಶೋಷಣೆಯ ಕಡೆಗೆ ಹೆಣ್ಣನ್ನು ಕರೆದುಕೊಂಡು ಹೋಗುತ್ತಿದೆ.  ನಾಯಕಿಯ ಪಟ್ಟದಲ್ಲಿರುವವರಿಗಾದರೂ ಕೆಲಮಟ್ಟಿನ ಗೌರವ ಸಿಕ್ಕಬಹುದು. ಆದರೆ ಎಕ್ಸ್ಟ್ರಾಗಳ ಪಾಡು ಯಾರಿಗೂ ಬೇಡ. ದೈಹಿಕ ಮತ್ತು ಮಾನಸಿಕವಾಗಿ ಅವರನ್ನು ಶೋಷಿಸುವ ಸ್ಯಾಡಿಸ್ಟ್ ಮನೋಸ್ಥಿತಿ ಬಾಲಿವುಡ್‍ನಲ್ಲಿ ಹೆಚ್ಚು ಹೆಚ್ಚಾಗಿ ಬೆಳೆಯುತ್ತಿದೆ. ಕಾಜಲ್ ಹೇಳಿದ ಮಾತು ಬಾಲಿವುಡ್‍ಗೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಕೂಡ ಅನ್ವಯ ಆಗಬಲ್ಲದ್ದಾಗಿದ್ದರಿಂದ ಈ ಕುರಿತು ಗಂಭೀರ ಚರ್ಚೆಗಳು ನಡೆಯ ಬೇಕಾಗಿದೆ.

ಹಾಗೆ ನೋಡಿದರೆ ಕಲಾವಿದೆಯರಿಗೆ ಕೂಡ ಸಮಾನ ಸಂಭಾವನೆ ಸಿಗಬೇಕು ಎನ್ನುವ ಪ್ರಶ್ನೆಯನ್ನು ಅನುಷ್ಕಾ ಶರ್ಮ ಇತ್ತೀಚೆಗೆ ಎತ್ತಿದ್ದರು. ಕನ್ನಡದಲ್ಲಿ ಕೂಡ ರಮ್ಯ, ರಾಗಿಣಿ, ಐಂದ್ರಿತಾ ರೇ ಈ ಪ್ರಶ್ನೆಯನ್ನು ಎತ್ತುತ್ತಲೇ ಬಂದಿದ್ದಾರೆ. ಆದರೆ ಕಾಜಲ್ ಎತ್ತಿರುವ ಪ್ರಶ್ನೆ ಸಂಭಾವನೆಯಷ್ಟು ಸರಳವಾದದ್ದಲ್ಲ, ಅದು ಮನೋಸ್ಥಿತಿಗೆ ಸಂಬಂಧಿಸಿದ್ದು. ಅವರು ಹೇಳುತ್ತಾರೆ, ‘ಮಕ್ಕಳು ತಂದೆಯನ್ನು ಬಿಟ್ಟಿರುತ್ತಾರೆ ಆದರೆ ತಾಯಿಯನ್ನಲ್ಲ. ಹೀಗಾಗಿ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮುಖ್ಯವಾದದ್ದು, ಅದಕ್ಕಾಗಿ ಅವಳು ತ್ಯಾಗವನ್ನು ಮಾಡಲೇಬೇಕು’ ಇಂತಹ ರಂಗು ರಂಗಿನ ಮಾತುಗಳನ್ನು ನಂಬಿಸುತ್ತಲೇ ಬರಲಾಗುತ್ತಿದೆ. ಈ ಕಾರಣದಿಂದಲೇ ಅನೇಕ ಕಲಾವಿದೆಯರ ವೃತ್ತಿ ಜೀವನ ಮದುವೆಯಾದ ಕೂಡಲೇ ಮುಕ್ತಾಯವಾಗುತ್ತದೆ, ಆದರೆ ಇದೊಂದು ಸೃಷ್ಟಿಸಿದ ಸುಂದರ ಸುಳ್ಳು. ನನ್ನ ಮಗಳು ನಾನು ಮನೆಗೆ ಬರುವುದನ್ನೇ ಕಾಯುತ್ತಿರುತ್ತಾಳೆ ಎಂದರೆ ಅವಳಿಗೆ ಅದು ಅಭ್ಯಾಸವಾಗಿದೆ. ನನ್ನ ಗಂಡ ಈ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರೆ ಅವಳು ಅಪ್ಪ ಬರುವುದನ್ನೇ ಕಾಯುತ್ತಿದ್ದಳು. ಅಂದರೆ  ಪುರುಷ ಪ್ರಧಾನ ವ್ಯವಸ್ಥೆ ತನ್ನ ಉಳಿವಿಗಾಗಿ ಸೃಷ್ಟಿಸಿಕೊಂಡ ಸುಳ್ಳು ಇದು. ಚಿತ್ರರಂಗದ ಎಲ್ಲಾ ಹಂತದಲ್ಲಿಯೂ ಈ ಕಹಿ ಸತ್ಯದ ನೆರಳು ಇರುವುದನ್ನು ಕಾಣಬಹುದು.’ ಕಾಜಲ್ ಅವರ ಪತಿ ಅಜಯ್ ದೇವಗನ್ ಕೂಡ ಬೇಡಿಕೆಯಲ್ಲಿರುವ ನಾಯಕರಾಗಿದ್ದರಿಂದ ಈ ಮಾತಿಗೆ ಇನ್ನೂ ವಿಶೇಷ ಅರ್ಥಗಳಿರುವುದನ್ನು ಗಮನಿಸಬಹುದು.

ಕಾಜಲ್ ಎತ್ತಿದ ಪ್ರಶ್ನೆ ಜಾಗತಿಕ ಮಟ್ಟದಲ್ಲಿ ಕೂಡ ಚರ್ಚಿತವಾಗುತ್ತಿದೆ. ಸ್ವೀಡನ್‍ನ ಜೀನ್ ಡೇವೀಸ್ ಇನ್ಸ್‍ಟ್ಯೂಟ್ ಅಫ್ ಜೆಂಡರ್ ಇಕ್ವಾಲಿಟಿ ಇನ್ ಮೀಡಿಯ ನಡೆಸಿದ ಸಮೀಕ್ಷೆಯ ಪ್ರಕಾರ ಚಿತ್ರರಂಗದಲ್ಲಿ ಮಹಿಳೆಯರನ್ನು ಶೋಷಿಸುವ ಮನೋಸ್ಥಿತಿ ಜಗತ್ತಿನ ಎಲ್ಲೆಡೆಯೂ ಇದೆ. ಹಾಲಿವುಡ್‍ ಚಿತ್ರಗಳಲ್ಲಿ ಹೆಣ್ಣನ್ನು ಮಾರಾಟದ ಸರಕು ಎಂದು ತೋರಿಸುವ ಪ್ರವೃತ್ತಿ ಹೆಚ್ಚಾಗಿದ್ದರೂ ಅದು ಈಗ ಎಲ್ಲೆಡೆ ವ್ಯಾಪಿಸಿದೆ. ಯೂರೋಪ್ ಮತ್ತು ಆಸ್ಟ್ರೇಲಿಯಾದ ಚಿತ್ರಗಳಲ್ಲಿ ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಬಾಲಿವುಡ್‍ನಲ್ಲಿ ಕೂಡ ಐಟಂ ಸಾಂಗ್‍ಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಗ್ಲಾಮರ್‍ಗೆ ಹೆಚ್ಚು ಒತ್ತು ಬೀಳುತ್ತಿದೆ.

ಸಮೀಕ್ಷೆ ಇನ್ನೊಂದು ಕುತೂಹಲಕರ ವಿಷಯದ ಕುರಿತೂ ಬೆಳಕನ್ನು ಚೆಲ್ಲಿದೆ. ಚಿತ್ರರಂಗದಲ್ಲಿ ಮಹಿಳೆಯರ ಪಾತ್ರ ಅಭಿನಯಕ್ಕೆ ಸೀಮಿತವಾಗಿದೆ, ಉಳಿದ ಕ್ಷೇತ್ರಗಳಲ್ಲಿ ಅದು ಗಮನಾರ್ಹವಾಗಿ ಕಡಿಮೆ ಇದೆ. ಜಾಗತಿಕವಾಗಿ ಮಹಿಳಾ ನಿರ್ದೇಶಕಿಯರ ಪ್ರಮಾಣ ಶೇ. 9.1 ರಷ್ಟಿದೆ (ಭಾರತದಲ್ಲಿ ಇದು ಶೇ. 7 ರಷ್ಟಿದೆ). ಮಹಿಳಾ ಬರಹಗಾರ್ತಿಯರ ಸಂಖ್ಯೆ ಶೇ 19.9 (ಭಾರತದಲ್ಲಿ ಶೇ 8.5), ನಿರ್ಮಾಪಕಿಯರ ಪ್ರಮಾಣ ಶೇ 18.7 (ಭಾರತದಲ್ಲಿ ಶೇ 9.2),ಮಹಿಳಾ ಛಾಯಾಗ್ರಾಹಕಿಯರ ಸಂಖ್ಯೆ ಶೇ 7.2 ರಷ್ಟಿದೆ(ಭಾರತದಲ್ಲಂತೂ ಶೇ 2.4ರಷ್ಟಿದೆ). ಅಂದರೆ 21ನೇ ಶತಮಾನದಲ್ಲಿ ಕೂಡ ಚಿತ್ರರಂಗ ಹೆಣ್ಣನ್ನು ಅಭಿನಯ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಒಪ್ಪಿಕೊಳ್ಳುತ್ತಿಲ್ಲ. ಶೋಷಣೆಯ ಮನೋಸ್ಥಿತಿ ಎಲ್ಲಿದೆ ಎನ್ನುವ ಕಡೆ ಈ ಅಂಕಿ-ಅಂಶಗಳೇ ಬೆಳಕನ್ನು ಚೆಲ್ಲುತ್ತದೆ. ಕನ್ನಡದಲ್ಲಂತೂ ಈ ಅಂಕಿ ಅಂಶಗಳನ್ನು ಯಾರೂ ಪಟ್ಟಿ ಮಾಡದಿದ್ದರೂ ಪರಿಸ್ಥಿತಿ ಧಾರಣವಾಗಿದೆ ಎನ್ನುವುದರಲ್ಲಿ ಹೆಚ್ಚಿನ ಅನುಮಾನವೇ ಇಲ್ಲ. ಚಿತ್ರರಂಗ ದೈಹಿಕ ಶ್ರಮ ಬೇಡುವ ಕ್ಷೇತ್ರ. ಅದಕ್ಕಾಗಿ ಮಹಿಳೆಯರ ಸಂಖ್ಯೆ ಕಡಿಮೆ ಎನ್ನುವ ಸಬೂಬನ್ನು ಎಂದಿನಿಂದಲೂ ಕೊಡುತ್ತಲೇ ಬರಲಾಗಿದೆ. ಮಹಿಳೆಯರು ಇಂದು ದೈಹಿಕವಾಗಿ ಶ್ರಮವನ್ನು ಬೇಡುವ ಅನೇಕ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆದಿದ್ದಾರೆ. ಅಷ್ಟಕ್ಕೂ ಚಿತ್ರರಂಗಕ್ಕೆ ಬೇಕಾಗಿರುವುದು ಸೃಜನಶೀಲತೆ,  ದೈಹಿಕ ಶ್ರಮ ಅಲ್ಲ ಎನ್ನುವುದು ತೀರಾ ಪ್ರಾಥಮಿಕ ಸತ್ಯ.

ಬಾಲಿವುಡ್‍ನಲ್ಲಿ ‘ಪೀಕು’ ಚಿತ್ರದ ಯಶಸ್ಸಿನ ನಂತರ ಮಹಿಳಾ ಪ್ರಧಾನ ಚಿತ್ರಗಳು ಸಾಲು ಸಾಲಾಗಿ ತೆರೆ ಕಾಣುತ್ತಿವೆ. ‘ಎನ್.ಎಚ್ 10’ ನಲ್ಲಿ ಅನುಷ್ಕಾ ಶರ್ಮ,  ‘ಗಂಗಾಜಲ್‍’ನಲ್ಲಿ ಪ್ರಿಯಾಂಕ ಚೋಪ್ರ, ‘ಚಾಕ್ ಅಂಡ್  ಡೆಸ್ಟರ್‍’ನಲ್ಲಿ ಜೂಹಿ ಚಾವ್ಲ ಮತ್ತು ಶಬನಾ ಅಜ್ಮಿ, ‘ಫಿತೂರ್‍’ನಲ್ಲಿ ಕತ್ರಿನಾ ಕೈಫ್‍, ‘ಸರ್ಬಜಿತ್‍’ನಲ್ಲಿ ಐಶ್ವರ್ಯ ರೈ ಸ್ವಂತಿಕೆಯ ಪಾತ್ರಗಳನ್ನು ಮಾಡಿದ್ದಾರೆ. ಈ ಪಟ್ಟಿಯಲ್ಲಿ ‘ಎನ್.ಎಚ್.10’ ಒಂದೇ ಮಹಿಳೆಯೇ ನಿರ್ಮಿಸಿದ ಚಿತ್ರ.  ಇದನ್ನು  ಒಂದು ಅರ್ಥದಲ್ಲಿ ಸಮಾನತೆಯ ಕಡೆಗಿನ ದಿಟ್ಟ ಹೆಜ್ಜೆ ಎಂದೇ ಕರೆಯ ಬಹುದು. ‘ಆದರೆ ಇಷ್ಟೇ ಸಾಕಾಗುವುದಿಲ್ಲ’ ಎಂದು ಕಾಜೂಲ್ ಹೇಳಿದ್ದರಲ್ಲಿ ಕೂಡ ಅರ್ಥವಿದೆ. ಸೇರಿಸಲೇ ಬೇಕಾದ ಮಾತೆಂದರೆ ಕನ್ನಡ ಚಿತ್ರರಂಗದಲ್ಲಿ ತೆರೆಯ ಮೇಲೆ ಕೂಡ ಮಹಿಳಾ ಸಬಲೀಕರಣ ಇನ್ನೂ ಸಾಧ್ಯವಾಗಿಲ್ಲ.

Leave a Reply