ಮಕ್ಕಳಿಗೆ ಹುಚ್ಚರ ವೇಷ ಹಾಕಿಸಿ ಖುಷಿ ಪಡುವ ಪೋಷಕರ ಮನಸ್ಥಿತಿಯನ್ನು ಏನೆಂದು ಕರೆಯಬೇಕು..?

author-shamaಅದೊಂದು ಖ್ಯಾತ ವಾಹಿನಿಯ ರಿಯಾಲಿಟಿ ಶೋ. ಎಳೆಯ ಮಕ್ಕಳಿಂದ ಹಿಡಿದು ಸುಮಾರು ಹದಿಮೂರು ವರ್ಷದವರೆಗಿನ ಮಕ್ಕಳು ಭಾಗವಹಿಸಬಹುದಾದ್ದು. ಮುದ್ದಾದ ಮಗುವಿಗೆ ಯಾವುದೋ ಸಿನೆಮಾದ ಹುಚ್ಚಿಯ ಪಾತ್ರ ಮಾಡಿಸಿ ಸೈ ಎನ್ನಿಸಿಕೊಳ್ಳುವ ಆಸೆಯೇನೋ ಪೋಷಕರಿಗೆ. ಹುಚ್ಚಿಯ ವೇಷದಲ್ಲಿ ಬಂದ ಮಗು ಮಾನಸಿಕ ಅಸ್ವಸ್ಥೆ ಹೇಳಬಹುದಾದ ಎಲ್ಲವನ್ನೂ ಆ ಸಿನೆಮಾದಲ್ಲಿ ಕಲಾವಿದೆ ಹೇಳಿದ್ದಕ್ಕಿಂತ ಚೆನ್ನಾಗಿ ಬಡಬಡಿಸಿದ್ದು ಹೌದು. ಜತೆಗೆ ಚಪ್ಪಾಳೆಯ ಸುರಿಮಳೆ. ಗ್ರೀನ್ ರೂಮಿನಲ್ಲಿ ಕೇಳಿದರೆ “ನಂಗೊತ್ತಿಲ್ಲ, ಅಪ್ಪ ದಿನಾ ಮೊಬೈಲಲ್ಲಿ, ಟಿ.ವಿಯಲ್ಲಿ ಹಾಕಿ ತೋರಿಸ್ತಾ ಇದ್ರು. ಹೀಗೇ ಮಾಡಬೇಕು ಅಂದರು, ನಾ ಮಾಡಿದೆ. ಯಾಕಾಂಟಿ ಚೆನ್ನಾಗಿರ್ಲಿಲ್ವಾ ?” ಮುಗ್ಧ ಪ್ರಶ್ನೆಗೆ ಏನು ಉತ್ತರ ಹೇಳೋಣ ?

ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿದ ಕೂಸಿಗೆ ತಾನು ಮಾಡಿದ್ದೇನು ? ಹೇಳಿದ ಪದಗಳ ಅರ್ಥವೇನು ಕಿಂಚಿತ್ತೂ ಗೊತ್ತಿಲ್ಲ. ವಯಸ್ಸಿನ್ನೂ ಸುಮಾರು ಏಳಿರಬಹುದು. ಇದು ಇಂದಿನ ಪೋಷಕರ ಹಂಬಲದ ಫಲ. “ನನ್ನ ಮಗಳು ನನ್ ಥರ ಆಗಬಾರ್ದು. ನಮ್ಮ ಕಾಲಕ್ಕೆ ಇವೆಲ್ಲ ಎಲ್ಲಿತ್ತು ? ಯಾವುದಕ್ಕೂ ಅವಕಾಶವಿರಲಿಲ್ಲ. ಈಗ ಎಲ್ಲ ಇದೆ ಅದ್ಕೇ ಅವಳಿಗೆ ಹೇಳಿದೀನಿ ಏನಾದ್ರೂ ಪರವಾಗಿಲ್ಲ ಹೇಳಿದ್ದನ್ನ ಚಾಚೂ ತಪ್ಪದೆ ಮಾಡು. ಟಿ.ವಿ.ಲಿ ಬರ್ತಾಳೆ ಅಂದ್ರೆ ಆಡ್ಕೋಳ್ಳೋರ ಬಾಯಿನೂ ಮುಚ್ಚತ್ತೆ.” ಅಮ್ಮನ ಮಾತು. ಬರೀ ಹೆಣ್ಣು ಹೆತ್ತಿದ್ದಾಳೆ ಅಂತ ಮನೇಲಿ ಹಂಗಿಸುವವರ ಬಾಯಿ ಮುಚ್ಚಿಸುವುದಕ್ಕೆ ಮಗಳು ತನಗರಿವಿಲ್ಲದ ಯಾವುದೋ ಲೋಕಕ್ಕೆ ಹೋಗಿ ಪರಕಾಯ ಪ್ರವೇಶ ಮಾಡಬೇಕು!!!

ನಿಜ, ನಮಗಿಲ್ಲದ ಅವಕಾಶಗಳು, ಅದಕ್ಕೆ ಬೇಕಾದಂಥ ವಾತಾವರಣ, ಪ್ರತಿಭೆಯಿದ್ದರೆ ಅದನ್ನು ಸಾಣೆ ಹಿಡಿದು ಫಳ್ಳನೆ ಹೊಳೆಸುವಂಥ ತರಬೇತಿಯ ಸಾಧ್ಯತೆಗಳು ಎಲ್ಲವೂ ಇಂದು ಲಭ್ಯ. ಜತೆಗೇ ಅವರು ಬರೀ ಪುಸ್ತಕದ ಹುಳುಗಳಾಗಿ ಕೂರದೇ ಅದನ್ನು ಮೀರಿ ಸಾಧ್ಯವಾಗುವ ಎಲ್ಲ ಕಲೆಗಳಲ್ಲೂ ಕೈಯಾಡಿಸಿದರೆ, ಕರಗತ ಮಾಡಿಕೊಂಡರೆ ಖಂಡಿತಾ ಒಳ್ಳೆಯದೇ. ಇದನ್ನು ಯಾವತ್ತಿಗೂ ತಳ್ಳಿ ಹಾಕುವಂತಿಲ್ಲ ಮತ್ತು ಇತ್ತೀಚಿನ ಹಲವು ಸಂಶೋಧನೆಗಳು ಕೂಡ ಇದನ್ನೇ ಹೇಳಿದ್ದಾವೆ. ಪಾಠಗಳ ಜತೆಗೆ ಆಟ ಮತ್ತು ಲಲಿತಕಲೆಗಳು ಮಿಳಿತವಾದರೆ ಅವರ ಬುದ್ಧಿ ಶಕ್ತಿ, ಜತೆಗೆ ಭಾವನಾತ್ಮಕ ಬೆಳವಣಿಗೆ ಕೂಡ ಸಹಜವಾಗಿ ಮತ್ತು ಚೆನ್ನಾಗಿ ಆಗುವುದರಲ್ಲಿ ಸಂಶಯವೇ ಇಲ್ಲ.

ಇವೆಲ್ಲ ಇದ್ದರೂ ಕೂಡ “ಆಯ್ಕೆ” ಅನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮಕ್ಕಳು ಬಟ್ಟೆ ಬರೆ ಆಟಿಕೆ ಆಯ್ಕೆ ಮಾಡಿಕೊಂಡಾರೇ ಹೊರತು ಇಂಥವುಗಳನ್ನೆಲ್ಲ ಅಳೆದು ತೂಗಿ ನೋಡುವ ಸಾಮರ್ಥ್ಯ ಅವರಲ್ಲಿ ಇನ್ನೂ ಬೆಳೆದಿರುವುದಿಲ್ಲ. ಇದರಲ್ಲಿ ಪೋಷಕರ ಪಾತ್ರವೇ ಹಿರಿದು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ನೀರೆರೆಯುವ ಮುನ್ನ ಅದನ್ನು ಯಾವ ದಿಕ್ಕಿನಲ್ಲಿ ಬೆಳೆಸೆಬೇಕು ಮತ್ತು ಯಾವ ರೀತಿಯಲ್ಲಿ ಬೆಳೆಸಬೇಕು ಎಂಬುದರ ಸ್ಪಷ್ಟ ಪರಿಕಲ್ಪನೆ ಇಟ್ಟುಕೊಂಡೇ ಹೆಜ್ಜೆ ಇಡಬೇಕಾಗುತ್ತದೆ. ಕಾರಣ ಇಂದು ನಾವು ಏನನ್ನು ಕೊಡುತ್ತೇವೋ ಅದನ್ನೇ ಅವರು ಮುಂದೆಯೂ ಒಳಗಿಳಿಸಿಕೊಳ್ಳುವುದು.

ಮಕ್ಕಳನ್ನು ವೇದಿಕೆಗೆ ತಯಾರು ಮಾಡುವಾಗ ಮೊದಲ ಯೋಚನೆ ಬರಬೇಕಿರುವುದು ವಯಸ್ಸಿನ ಬಗ್ಗೆ. ಪುಟ್ಟ ಕಂದ ಬಂದು ಹುಚ್ಚಿಯ ಥರ ಆಡುವ ಬದಲಾಗಿ ಕೃಷ್ಣನ ಥರ ಕುಣಿದರೆ ಆ ಮೋದವೇ ಬೇರೆ. ಹನುಮಂತನ ಥರವೋ ಅಥವಾ ಇನ್ನಾವುದೋ ಪ್ರಾಣಿ, ಪಕ್ಷಿಗಳ ಥರವೋ ಮಾಡುವ ಅಭಿನಯ ಮುದ ನೀಡುತ್ತದೆ. ದಿನ ನಿತ್ಯದ ಬದುಕಿನಲ್ಲಿ ನಾವು ನೋಡುವ ಸೊಪ್ಪು ಮಾರಾಟದ ಹೆಂಗಸಿನ ವೇಷ, ಹಣ್ಣು ಮಾರಾಟದ ತಳ್ಳು ಗಾಡಿ, ವೈದ್ಯರೋ, ಬಸ್ ಕಂಡಕ್ಟರೋ, ಟೀಚರ್ ಅಥವಾ ಇಂಥ ಯಾವುದೇ ಪಾತ್ರವಾದರೂ ಚೆಂದ. ಇನ್ನು ತೀರಾ ಸಿನೆಮಾದ ಪಾತ್ರವೇ ಆಗಬೇಕೆಂದಿದ್ದರೆ ಅವುಗಳಲ್ಲೂ ಸಾಕಷ್ಟು ಅದ್ಭುತವಾದ ಪಾತ್ರಗಳು ಇವೆ. ಅಂತವನ್ನೇ ಹುಡುಕಿ ಮಾಡಿಸಿದರೆ ನೋಡುವವರು ಶಿಳ್ಳೆ, ಚಪ್ಪಾಳೆ ಹಾಕುವುದರಲ್ಲಿ ಅನುಮಾನವೇ ಇಲ್ಲ.

ಮಕ್ಕಳಿಗೆ ತಾವೇನು ಮಾಡುತ್ತಿದ್ದೇವೆ ಅನ್ನುವುದು ಗೊತ್ತಿರಬೇಕು. ಮಾತ್ರವಲ್ಲ, ಒಳ್ಳೆಯ ಯಾವುದೋ ಒಂದು ಪಾತ್ರ ತಾನಾಗುವ ಹೊತ್ತಿನಲ್ಲಿ ಇನ್ನೂ ಖಾಲಿ ಹಾಳೆಯಂತಿರುವ ಮಕ್ಕಳು ಆ ವ್ಯಕ್ತಿತ್ವವನ್ನು ತಮ್ಮಲ್ಲಿ ಆವಾಹಿಸಿಕೊಳ್ಳುತ್ತಾರೆ. ಗುರು ರಾಘವೇಂದ್ರರ ಜೀವನ ಚರಿತ್ರೆ ಧಾರಾವಾಹಿಯಾಗಿ ಬಂದಾಗ ರಾಘವೇಂದ್ರ ಪಾತ್ರಧಾರಿ ಹೇಳಿದ “ಬರ್ತಾ ಬರ್ತಾ ನಾನು ಆ ಪಾತ್ರವೇ ಆಗಿಬಿಟ್ಟೆ. ಮಾಂಸಾಹಾರ ತ್ಯಜಿಸಿದೆ, ಸಿಟ್ಟು ಕಡಿಮೆಯಾಗಿದೆ, ಒಟ್ಟಿನಲ್ಲಿ ನನ್ನ ವ್ಯಕ್ತಿತ್ವವೇ ಬದಲಾಗಿದೆ” ಮಾತು ಎಲ್ಲೋ ಓದಿದ ನೆನಪು. ಇಂಥ ಪರಿಣಾಮಗಳಾಗುವುದು ನೂರಕ್ಕೆ ನೂರು ನಿಜ. ಎಳೆಯ ಮಕ್ಕಳಲ್ಲಿ ಇದು ಬಹಳ ಬೇಗ ಆಗುವಂಥದ್ದು. ಪೋಷಕರು ಎಚ್ಚರದಿಂದ ಇರಲೇ ಬೇಕು.

ಸಮಾಜದ ಬೇರೆ ಬೇರೆ ಸ್ತರಗಳಲ್ಲಿರುವವರ ಪಾತ್ರ ತಾವಾಗುವಾಗ ಅವರ ಸಾಮಾಜಿಕ ಬುದ್ಧಿಮತ್ತೆ (Social Intelligence) ಕೂಡ ಭಿನ್ನ ರೀತಿಯಲ್ಲಿ ಅರಳುತ್ತದೆ. ನಮ್ಮ ಸುತ್ತ-ಮುತ್ತ ಇರುವವರಿಂದ ನಮಗಾಗುವ ಉಪಕಾರಗಳು, ಪ್ರತಿಯೊಬ್ಬರೂ ಯಾವ ರೀತಿ ಪ್ರಮುಖರಾಗುತ್ತಾರೆ ಎಂಬ ಜಾಗೃತಿ ಮೂಡುವುದು ಇಂಥವುಗಳಿಂದಲೇ. ಈಗ ಚಿಕ್ಕ ಮಕ್ಕಳಿಗೆ ಕೂಡ ನಾಟಕ, ಏಕ ಪಾತ್ರಾಭಿನಯಗಳನ್ನು ಹೇಳಿ ಕೊಡುವುದಕ್ಕೆ ತರಬೇತಿ ಕೆಂದ್ರಗಳಿರುವಾಗ ಆಯ್ಕೆ ಮಾಡಿದ ಒಳ್ಳೆಯ ಪಾತ್ರವೊಂದಕ್ಕೆ ತಯಾರು ಮಾಡುವುದು ಕೈಲಾಗದ ಕೆಲಸವಲ್ಲ.

ಜವಾಬ್ದಾರಿಯುತ ನಾಗರಿಕರಾಗಲು ಮೊದಲನೆಯದಾಗಿ ಬೇಕಿರುವುದು ಒಳಗಿನ ತಾಕತ್ತು, ಅಂತಃಸತ್ವವೇ ಹೊರತು ಥಳುಕು ಬಳುಕಲ್ಲ. ಒಂದು ರಿಯಾಲಿಟಿ ಶೋನಲ್ಲಿ ಗಿಟ್ಟಿಸಿದ ಚಪ್ಪಾಳೆ ಬದುಕು ಪೂರ್ತಿ ಕಾಯುವುದಕ್ಕಾಗದು. ಅದಕ್ಕೆ ಬೇಕಿರುವುದು ವ್ಯಕ್ತಿತ್ವದ ಗಟ್ಟಿತನ ಮತ್ತು ಅರಿವು. ಅದನ್ನು ಬೆಳೆಸೋಣ. ನಮ್ಮ ಮಕ್ಕಳು ಕೆಟ್ಟದ್ದನ್ನು ಅನುಕರಿಸುವ ಕೀಲು ಗೊಂಬೆಗಳಾಗುವುದು ಬೇಡ, ಒಳ್ಳೆಯದನ್ನು ಅರಿತು ಅನುಸರಿಸಿ ಬೆಳೆಯಲಿ. ಆವಾಗ ಸಿಗುವ ಚಪ್ಪಾಳೆ ಅವರಿಗೂ ಪೋಷಕರಿಗೂ ಇಬ್ಬರಿಗೂ ಸಲ್ಲುತ್ತದೆ ಮತ್ತು ನಿಜಕ್ಕೂ ಗೆಲ್ಲಿಸುತ್ತದೆ.

1 COMMENT

  1. ಮತ್ತೊಂದು ಉತ್ತಮ ವಿಚಾರದ ಆಯ್ಕೆ ಮಾಡಿದ್ದೀರಿ. ಹೇಗಾದರೂ ಮಾಡಿ ಮಕ್ಕಳನ್ನು ಸೆಲಿಬ್ರಿಟಿ ಮಾಡಿ ಬಿಟ್ಟು ತಾವು ಐಶ್ವರ್ಯಾ ರಾಯ್ ಅಪ್ಪ ಅಮ್ಮನ ಸ್ಥಾನವನ್ನು ಕಲ್ಪಿಸಿಕೊಳ್ಳುವ ಜಾಡ್ಯ ಇಂದು ಪೋಷಕರಲ್ಲಿ ಸಾಂಕ್ರಾಮಿಕವಾಗಿ ವ್ಯಾಪಿಸಿಕೊಂಡಿರುವ ಜಾಡ್ಯವಾಗಿ ಹೋಗಿರುವುದು ನಿಜಕ್ಕೂ ದುರ್ದೈವ. ತುಂಬಾ ಚೆನ್ನಾಗಿ ವಿಷಯವನ್ನು ಅಭಿವ್ಯಕ್ತಿಸಿದ್ದೀರಿ.

Leave a Reply