16ರ ಹುಡುಗನ ಬಟ್ಟೆಬಿಚ್ಚಿ ಹಿಂಸೆ, ಸುರಕ್ಷತೆ ಕುರಿತು ಹೌಹಾರುವಂತೆ ಮಾಡಿದ ಪ್ರಕರಣ

ಡಿಜಿಟಲ್ ಕನ್ನಡ ಟೀಮ್: ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ನೋಡುತ್ತಲೇ ಇದ್ದೀವಿ. ಆದರೆ, ಕಾಲ ಬದಲಾಗುತ್ತಿದೆ… ಅದೂ ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಸುದ್ದಿ ಓದುವ ಮಟ್ಟಿಗೆ.

ಆಗಿರುವುದಿಷ್ಟು.. ನವದೆಹಲಿಯ ಇಂದರಪುರಿ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪು 16 ವರ್ಷದ ಹುಡುಗನನ್ನು ಹಿಡಿದು, ಆತನ ಬಟ್ಟೆ ಬಿಟ್ಟಿಸಿ, ಕೈಕಾಲು ಕಟ್ಟಿ ಹೊಡೆದಿದ್ದಾರೆ. ಈ ಹಿಂಸಾತ್ಮಕ ಕೃತ್ಯವನ್ನು ಚಿತ್ರಿಕರಿಸಿದ ಘಟನೆ ಕಳೆದ ಸೋಮವಾರ ನಡೆದಿದೆ. ಗುರುವಾರ ಈ ವಿಡಿಯೊ ಬಹಿರಂಗವಾಗಿದ್ದು, ಪ್ರಕರಣದ ಕುರಿತು ಶುಕ್ರವಾರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಇವರು ಬಾಲಕನ ಜತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೂ ಬಲವಂತಮಾಡಿದ್ದು, ಬಿಯರ್ ಬಾಟೆಲ್ ನಿಂದ ಹಿಂಸೆ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಬಂಧಿತರಾಗಿರುವ ಆರೋಪಿಗಳು ನೆರೆಯವರೇ ಆಗಿದ್ದು, ಇವರ ಮೇಲೆ ಹಲ್ಲೆ ಮಾಡಿದ ಪ್ರಕರಣ ದಾಖಲಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕ ಸುದೀರ್ಘ ಸಮಯ ಮನೆಗೆ ಮರಳಲಿಲ್ಲ. ಅಲ್ಲದೆ ಆತ್ಮಹತ್ಯೆಗೂ ಯತ್ನಿಸಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪೊಲೀಸರು ಆತ್ಮಹತ್ಯೆ ಯತ್ನದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

ಕಳ್ಳತನದ ಆರೋಪದ ಮೇಲೆ ನನ್ನನ್ನು ಹಿಡಿದು ಎಳೆದಾಡಿದರು, ನಾನು ಕಳ್ಳತನ ಮಾಡಿರಲಿಲ್ಲ. ಆದರೂ ಬಟ್ಟೆ ಬಿಚ್ಚಿಸಿ ಹೊಡೆದರು ಎಂದು ಬಾಲಕ ಅಳಲು ತೋಡಿಕೊಂಡಿದ್ದಾನೆ.

Leave a Reply