ಮತ್ತೆ ಎಸ್.ಆರ್ ನಾಯಕ್ ಹೆಸರು ತಿರಸ್ಕರಿಸಿದ ರಾಜ್ಯಪಾಲರು, ನಾಳೆ ಸಿಇಟಿ ಫಲಿತಾಂಶ ಪ್ರಕಟ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅತ್ಯಾಚಾರಕ್ಕೆ ಯತ್ನಿಸಿದ.. ದಿನಾಂತ್ಯದ ಸುದ್ದಿ- ವಿಶ್ಲೇಷಣೆಗಳ ಗುಚ್ಛ

ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಕ್ರೈಸ್ತ ಪ್ರಾರ್ಥನಾ ಮಂದಿರವನ್ನು ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.

ಡಿಜಿಟಲ್ ಕನ್ನಡ ಟೀಮ್:

ಸದ್ಯ ಖಾಲಿ ಇರುವ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಎಸ್.ಆರ್ ನಾಯಕ್ ಅವರ ಆಯ್ಕೆ ಕುರಿತ ಸರ್ಕಾರದ ಶಿಫಾರಸ್ಸನ್ನು ರಾಜ್ಯಪಾಲರು ಮತ್ತೆ ತಿರಸ್ಕರಿಸಿದ್ದಾರೆ. ಸತತ ಮೂರನೇ ಬಾರಿಗೆ ಎಸ್.ಆರ್ ನಾಯಕ್ ಅವರ ಹೆಸರನ್ನು ರಾಜ್ಯಪಾಲರು ನಿರಾಕರಿಸಿದ್ದು, ಸರ್ಕಾರಕ್ಕೆ ಹಿರಿಸುಮುರಿಸು ಉಂಟುಮಾಡಿದೆ.

ಗುರುವಾರವಷ್ಟೇ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿಗೆ ಕ್ಲೀನ್ ಚಿಟ್ ದೊರಕಿತ್ತು. ಈಗ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಎಸ್.ಆರ್.ನಾಯಕ್ ಹೆಸರನ್ನು ರಾಜ್ಯಪಾಲರು ಮತ್ತೆ ತಿರಸ್ಕರಿಸಿರುವುದು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಆದರೆ, ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಲಾದ ಬಿಡಿಎ ಆಯುಕ್ತ ಶ್ಯಾಂ ಭಟ್ ಹೆಸರ ಶಿಫಾರಸು ಕಡತ ರಾಜ್ಯಪಾಲರ ಬಳಿಯೇ ಇದೆ.

ಆರಂಭದಲ್ಲಿ ಎರಡು ಬಾರಿ ನಾಯಕ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದರಿಂದ ಮೂರನೇ ಬಾರಿ ಸರ್ಕಾರ ಶಿಫಾರಸ್ಸು ಮಾಡುವಾಗ ಇವರ ಆಯ್ಕೆ ಕುರಿತು ಸಮರ್ಥನೆಗಳನ್ನು ನೀಡಿತ್ತು. ಇವರು ಕನ್ನಡದವರಾಗಿದ್ದು, ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ನಡೆಸಬಲ್ಲರು. ಇದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಸ್ಥಾನಕ್ಕೆ ನಾಯಕ್ ಅವರೇ ಸೂಕ್ತ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.

ಎಸ್.ಆರ್. ನಾಯಕ್ ವಿರುದ್ಧ ಕಾನೂನು ಬಾಹಿರವಾಗಿ ಬೆಂಗಳೂರು ನಗರದಲ್ಲಿ ನಿವೇಶನ ಖರೀದಿ, ಹೊರ ಜಿಲ್ಲೆಯಲ್ಲಿ ಜಮೀನು ಖರೀದಿಸಿರುವ ಆರೋಪಗಳಿವೆ. ಕನ್ನಡಿಗ ಎಂಬ ಒಂದೇ ಕಾರಣಕ್ಕೆ ಲೋಕಾಯುಕ್ತ ಹುದ್ದೆಗೆ ಇವರನ್ನು ಪರಿಗಣಿಸಲು ಸಾಧ್ಯವಿಲ್ಲ. ನನ್ನ ಆಕ್ಷೇಪಣೆಗಳಿಗೆ ಸರ್ಕಾರ ನೀಡಿರೋ ಉತ್ತರ ತೃಪ್ತಿ ತಂದಿಲ್ಲ. ಹೀಗಾಗಿ ಈ ಕಡತವನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತಿರುವುದಾಗಿ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂಬುದು ಮೂಲಗಳಿಂದ ಬಂದಿರೋ ಮಾಹಿತಿ.

ನಾಳೆ ಸಿಇಟಿ ಫಲಿತಾಂಶ ಪ್ರಕಟ

ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ನಾಳೆ ಪ್ರಕಟವಾಗಲಿದೆ. ಈ ಬಾರಿ ನೀಟ್ ಪರೀಕ್ಷೆ ಕಡ್ಡಾಯದ ಗೊಂದಲದ ನಡುವೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಪರೀಕ್ಷೆ ನಡೆಸಿತ್ತು.

ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ನಂತರ ಬೆಳಗ್ಗೆ 11 ಗಂಟೆಗೆ ಪ್ರಾಧಿಕಾರದ ವೆಬ್ ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ವಿಧಾನ ಸಭೆಯಿಂದ ರಾಜ್ಯ ಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೀರುವ ಹೆಚ್ಚುವರಿ ಮತಗಳನ್ನು ಗಮನದಲ್ಲಿಟ್ಟುಕೊಂಡು ವರಿಷ್ಠರು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ತಿಳಿಸಿದ್ದಾರೆ.
  • ನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ. ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಬೇಡವೇ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದರು.
  • ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೇರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ತಿಕ್ಕಾಟದ ನಡುವೆ ತೃತೀಯ ರಂಗ ರಚನೆ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಮಂಡ್ಯದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಹಾಸ, ಕೆಲಸಕ್ಕೆ ಬರುವವಳನ್ನು ಕಚೇರಿಯಲ್ಲೇ ಅತ್ಯಾಚರಕ್ಕೆ ಯತ್ನಿಸಿ ಈಗ ಪೋಲೀಸರ ಅತಿಥಿಯಾಗಿದ್ದಾನೆ. ಈ ಕರಾಳ ಸುದ್ದಿ ವಿವರ ಇಲ್ಲಿದೆ.

ನೀವೇನೆ ಹೇಳಿ, ಇದು ಅಸಹಿಷ್ಣುತೆಯೇ. ನೆಹರು ಪ್ರಶಂಸೆಯ ಫೇಸ್ಬುಕ್ ಬರಹಕ್ಕೆ ಪ್ರತಿಯಾಗಿ ಐಎಎಸ್ ಅಧಿಕಾರಿಯನ್ನು ವರ್ಗಾಯಿಸಿತು ಮಧ್ಯಪ್ರದೇಶದ ಬಿಜೆಪಿ ಸರ್ಕಾರ.

ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಾಂತರದ ಸರ್ಕಾರದ ನಿರ್ಧಾರ ಕುರಿತು ಡಾ.ವಿಷ್ಣು ಸೇನಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಈ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿ ಸಮಿತಿ ಜೂನ್ 5ರಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದೆ.

ಮೇ 28 ಮತ್ತು 29ರಂದು ಬೆಂಗಳೂರಿನ ಹೊಸೂರು ತನೇಜಾ ಏರೋಸ್ಪೇಸ್ ಅಂಡ್ ಏವಿಯೇಷನ್ ರನ್‍ವೇಯಲ್ಲಿ ‘ಟೀಮ್ 46 ರೇಸಿಂಗ್ ಕಮ್ಯುನಿಟಿ’ ಕಾರು- ಬೈಕುಗಳ ರೇಸ್ ಹಬ್ಬವನ್ನು ಆಯೋಜಿಸಿದೆ.

ನವದೆಹಲಿಯ ಇಂದರಪುರಿ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪು 16 ವರ್ಷದ ಹುಡುಗನನ್ನು ಹಿಡಿದು, ಆತನ ಬಟ್ಟೆ ಬಿಟ್ಟಿಸಿ, ಕೈಕಾಲು ಕಟ್ಟಿ ಹೊಡೆದಿದ್ದಾರೆ. ಈ ಹಿಂಸಾತ್ಮಕ ಕೃತ್ಯವನ್ನು ಚಿತ್ರಿಕರಿಸಿದ ಘಟನೆ ಕಳೆದ ಸೋಮವಾರ ನಡೆದಿದೆ. ಗುರುವಾರ ಈ ವಿಡಿಯೊ ಬಹಿರಂಗವಾಗಿದ್ದು, ಪ್ರಕರಣದಲ್ಲಿ ಶುಕ್ರವಾರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ನಿಸರ್ಗದಲ್ಲೂ ಒಂದು ಎಂಜಿನಿಯರಿಂಗ್ ವ್ಯವಸ್ಥೆ ಇದೆ, ಪರಿಸರ ಸುಸ್ಥಿತಿಗೆ. ಯುರೋಪಿನ ಸ್ವಚ್ಛತೆಗೆ ಸಹಕರಿಸುತ್ತಿರುವ ನರಿಗಳು 2 ಮಿಲಿಯನ್ ಯುರೋವನ್ನು ಉಳಿಸಿಕೊಡ್ತಿವೆ ಹೇಗೆ ಗೊತ್ತೇ?

ಬಾಲಿವುಡ್‍ನ ಸರ್ವಕಾಲೀನ ಪ್ರತಿಭಾವಂತ ಕಲಾವಿದೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಜಲ್ ಇತ್ತೀಚಿನ ಸಂದರ್ಶನದಲ್ಲಿ ಕೆಲವು ಕುತೂಹಲಕರ ವಿಷಯಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಬೆಳ್ಳಿತೆರೆಯಲ್ಲಿ 23 ವರ್ಷಗಳ ಪಯಣವನ್ನು ನಡೆಸಿ ಇಂದಿಗೂ ನಾಯಕಿಯಾಗೇ ಉಳಿದಿರುವ ಅವರ ಮಾತುಗಳಲ್ಲಿ ಹಲವು ಚಿಂತಿಸಬೇಕಾದ ಅಂಶಗಳಿವೆ ಎಂದು ಎನ್. ಎಸ್. ಶ್ರೀಧರಮೂರ್ತಿ ಗಮನ ಸೆಳೆದಿದ್ದಾರೆ.

ಶಮ ನಂದಿಬೆಟ್ಟ ತಮ್ಮ ಅಂಕಣದಲ್ಲಿ ಪ್ರಶ್ನಿಸಿದ್ದಾರೆ- ಮಕ್ಕಳಿಗೆ ಹುಚ್ಚರ ವೇಷ ಹಾಕಿಸಿ ಖುಷಿ ಪಡುವ ಪೋಷಕರ ಮನಸ್ಥಿತಿಯನ್ನು ಏನೆಂದು ಕರೆಯಬೇಕು?

Leave a Reply