ಡಾ.ವಿಷ್ಣುವರ್ಧನ್ ಸ್ಮಾರಕ ಸ್ಥಳಾಂತರ ವಿವಾದ, ವಿಷ್ಣು ಸೇನಾ ಸಮಿತಿಯಿಂದ ಜೂನ್ 5 ರಿಂದ ಅನಿರ್ದಿಷ್ಟಾವಧಿ ಧರಣಿ

ಡಿಜಿಟಲ್ ಕನ್ನಡ ಟೀಮ್

ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಾಂತರದ ಸರ್ಕಾರದ ನಿರ್ಧಾರ ಕುರಿತು ಡಾ.ವಿಷ್ಣು ಸೇನಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಈ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿ ಸಮಿತಿ ಜೂನ್ 5ರಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಅನಿರ್ಧಿಷ್ಟಾವಧಿ ಧರಣಿಗೆ ಕರೆ ನೀಡಿದೆ.

ಈ ಧರಣಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಾರಾಯಣಗೌಡರು, ಕಸಾಪದ ಚನ್ನೆಗೌಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ಮಾರಕ ಸ್ಥಳಾಂತರದ ಬಗ್ಗೆ ಕನ್ನಡ ಚಿತ್ರರಂಗದ ಗಣ್ಯರು ಮೌನ ವಹಿಸಿರುವ ಬಗ್ಗೆ ಸಮಿತಿ ಬೇಸರ ವ್ಯಕ್ತಪಡಿಸಿದೆ. ಈ ಕುರಿತು ಡಾ. ವಿಷ್ಣು ಸೇನಾ ಸಮಿತಿ ಹೇಳಿರೋದೇನು ಇಲ್ಲಿದೆ ನೋಡಿ.

‘ವಿಷ್ಣುವರ್ಧನ್ ಅವರ ಮರಣದ ನಂತರ ಅವರಿಗೆ ತೀವ್ರ ಮಟ್ಟದ ಅನ್ಯಾಯವಾಗುತ್ತಿದೆ. ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದು, ರಾಜ್ಯ ರಾಜಧಾನಿಯಲ್ಲಿ ಅವರ ಸ್ಮಾರಕಕ್ಕೆ 2 ಎಕರೆ ಜಾಗ ಸಿಗೋದಿಲ್ಲವೆನ್ನೋದು ಅನ್ಯಾಯವಲ್ಲವೇ? ಇದು ಚಿತ್ರರಂಗಕ್ಕೆ ಅಪಮಾನವಲ್ಲವೇ ?

ಬೆಂಗಳೂರಿನಲ್ಲೇ ಅವರ ಸ್ಮಾರಕ ಆಗಬೇಕೆಂದು ಡಾ.ಭಾರತಿ ವಿಷ್ಣುವರ್ಧನ್ ಅವರೊಂದಿಗೆ ಆರುವರೆ ವರ್ಷದಿಂದ ಕಾಯುತ್ತಿದ್ದೇವೆ. ಈ ಕುರಿತ ವಿವಾದದಿಂದ ಅವರು ಬೇಸತ್ತಿದ್ದಾರೆ. ಈ ಕುರಿತು ಚಿತ್ರರಂಗ ಗಣ್ಯರು, ದಿ.ಬಾಲಕೃಷ್ಣ ಅವರ ಕುಟುಂಬ ಸದಸ್ಯರು, ಮಾಧ್ಯಮಗಳ ಪ್ರಮುಖರು ಮತ್ತು ಮುಖ್ಯಮಂತ್ರಿ ಜತೆ ಮಾತನಾಡಿದರೆ, ಈ ವಿವಾದ ಬಗೆಹರಿಯುತ್ತದೆ. ಈ ಸ್ಮಾರಕಕ್ಕೆ ಹಣದ ಕೊರತೆ ಸಮಸ್ಯೆಯಾಗಿದ್ದರೆ, ಅದನ್ನು ನಾವೇ ಕೊಡುತ್ತೇವೆ.’

Leave a Reply