ಸಿದ್ದರಾಮಯ್ಯ ಸರಕಾರದ ಹೆಸರಿನ ಮುಂದೆ ಬಳಕೆ ಆಗಿ, ಆಗಿ ಸವಕಲಾಗಿ ಹೋಗಿರುವ ‘ಮುಖಭಂಗ’!

ಡಿಜಿಟಲ್ ಕನ್ನಡ ವಿಶೇಷ:

ಸಿದ್ದರಾಮಯ್ಯ ಸರಕಾರ ಹಾಗೂ ಮುಖಭಂಗ – ಇವೆರಡೂ ಪರ್ಯಾಯ ಪದಗಳಾಗಿ ಬಿಟ್ಟಿವೆ. ಒಂದನ್ನು ಬಿಟ್ಟು ಮತ್ತೊಂದು ಇರಲಾರದು ಎಂಬಂಥ ಅನ್ಯೋನ್ಯತೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಈ ಮುಖಭಂಗ ಎಂಬ ಪದ ಸರಕಾರದ ಮುಂದೆ ಬಳಕೆ ಆಗಿ, ಆಗಿ ಸವಕಲಾಗಿಬಿಟ್ಟಿದೆ!

ತಮ್ಮ ಸುತ್ತ ನವಗ್ರಹಗಳಂತೆ ಸುತ್ತುತ್ತಿರುವ ಗಾಂಪರ ಗುಂಪಿನ ಮಾತು ಕೇಳಿಕೊಂಡು ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ಅವರ ಪದಚ್ಯುತಿಗೆ ಕುಮ್ಮಕ್ಕು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ‘ನ್ಯಾಯದ ಅಡಿ’ಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ನ್ಯಾ. ಅಡಿ ಅವರು ಸ್ವಜನ ಪಕ್ಷಪಾತ ಎಸಗಿರುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಸಮಿತಿ ನೀಡಿರುವ ವರದಿ ಸರಕಾರದ ಮುಖಕ್ಕೆ ಎತ್ತಿರುವ ಮಂಗಳಾರತಿಯಾಗಿ ಪರಿಣಮಿಸಿದೆ.

ಸರಕಾರಕ್ಕೆ ಕಂಟಕವಾಗಿ ಪರಿಣಮಿಸಬಹುದಾದ ಲೋಕಾಯುಕ್ತ ವ್ಯವಸ್ಥೆಯ ಒಂದೊಂದೇ ಅಡಿಗಲ್ಲನ್ನು ಕಿತ್ತೆಸೆಯುವ ಹಾಗೂ ಅದೇ ಕಾಲಕ್ಕೆ ರಾಜಕೀಯ ಹಗೆ ಸಾಧನೆಗೆ ನ್ಯಾಯವ್ಯವಸ್ಥೆಯನ್ನೇ ವಸ್ತು ಮಾಡಿಕೊಳ್ಳುವ ಸರಕಾರದ ಭಂಡ ಹಾಗೂ ಅವಿವೇಕದ ನಡೆಗೆ ಈ ವರದಿ ತಕ್ಕ ಪಾಠ ಕಲಿಸಿದೆ. ಭ್ರಷ್ಟಾಚಾರ ಆರೋಪ ಹೊತ್ತ ಹಿಂದಿನ ಲೋಕಾಯುಕ್ತ ಭಾಸ್ಕರರಾವ್ ಪದಚ್ಯುತಿಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಸ್ತಾಪ ಸಲ್ಲಿಸಿದ್ದನ್ನು ಸರಕಾರ ವೈಯಕ್ತಿಕ ಹಾಗೂ ಪ್ರತಿಷ್ಠೆ ಕಣ್ಣಿಂದ ನೋಡಿದ್ದರ ಪರಿಣಾಮವೇ ನ್ಯಾ. ಅಡಿ ಅವರ ಪದಚ್ಯುತಿಗೆ ನಡೆಸಿದ ಸಂಚು. ಬಿಜೆಪಿ ಮುಖಂಡರ ಬಗ್ಗೆ ಮೃದುಧೋರಣೆ ತಾಳಿದ್ದಾರೆ ಎಂಬ ಭ್ರಮೆ ಈ ಸಂಚಿಗೆ ಪ್ರೇರಣೆ ನೀಡಿತ್ತು.

ಧಾರವಾಡ ಡಾ. ಶೀಲಾ ಪಾಟೀಲ ವಿರುದ್ಧದ ಇಲಾಖೆ ವಿಚಾರಣೆ ಕೈಬಿಡಲು ಬರೆದ ಪತ್ರ ನೆಪ ಮಾಡಿಕೊಂಡು ನ್ಯಾ. ಅಡಿ ಅವರ ಪದಚ್ಯುತಿಗೆ ಸಿದ್ದರಾಮಯ್ಯ ಕೃಪಾಪೋಷಿತ ಶಾಸಕ ಮಂಡಳಿ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರಲ್ಲಿ ವಿಜೃಂಭಿಸಿದ್ದು ಮತ್ತದೇ ರಾಜಕೀಯ ವೈಷಮ್ಯವೇ ಹೊರತು ಬೇರೇನೂ ಅಲ್ಲ. ತಮಗೆ ಅನುನಯವಾಗಿರುವ, ಸಾಕಷ್ಟು ವಿಚಾರಗಳಲ್ಲಿ ಸಹಕಾರ ಮನೋಭಾವ ಪ್ರದರ್ಶಿಸಿರುವ ನ್ಯಾ. ಭಾಸ್ಕರರಾವ್ ಪದಚ್ಯುತಿಗೆ ಪ್ರತಿಪಕ್ಷದವರು ಪ್ರಸ್ತಾವನೆ ಸಲ್ಲಿಸಿರುವಾಗ ತಾವ್ಯಾಕೆ ಇನ್ನೊಂದು ಪ್ರಸ್ತಾವನೆ ನೀಡಬಾರದು ಎಂಬ ತಲೆತಿರುಗು ರಾಜಕೀಯ ಕುತಂತ್ರ ಸುಳಿದಿದ್ದರ ಪರಿಣಾಮವೇ ಇದು.

ಅದರೆ ಇವತ್ತಿನ ಬೆಳವಣಿಗೆಯನ್ನು ಅವತ್ತೇ ನಿರೀಕ್ಷಿಸಿದ್ದ ತಿಮ್ಮಪ್ಪನವರು ಈ ಪ್ರಸ್ತಾವನೆಯನ್ನು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಶಾಸಕಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಆಳ-ಅಗಲ ಬಲ್ಲ ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಮೊದಲಿಂದಲೂ ತಿಮ್ಮಪ್ಪನವರನ್ನು ಒಕ್ಕಣ್ಣಿನಿಂದಲೇ ನೋಡುತ್ತಾ ಬಂದಿರುವ ಸಿದ್ದರಾಮಯ್ಯ ಬೆಂಬಲಿಗರ ತಂಡ ಸ್ಪೀಕರ್ ಅವರು ವಿಳಂಬ ಧೋರಣೆ ಅನುಸರಿಸುತಿದ್ದಾರೆ ಎಂದು ಕೆಂಡ ಕಾರಿದ್ದರು. ‘ಇನ್ನೂ ಇವರಿಗೆ ಬುದ್ಧಿ ಬಂದಿಲ್ಲ, ಬರುವುದೂ ಇಲ್ಲ,  ಅವರ ಹಣೆಬರಹ ಅನುಭವಿಸಲಿ’ ಅಂತಾ ತಿಮ್ಮಪ್ಪನವರು ಪ್ರಸ್ತಾವನೆಯನ್ನು ಅಂದಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರಿಗೆ ರವಾನಿಸಿ ಕೈ ತೊಳೆದುಕೊಂಡರು. ಅವತ್ತೇನಾದರೂ ಸರಕಾರ ಸ್ವಲ್ಪ ತಾಳ್ಮೆ ವಹಿಸಿ ಸ್ಪೀಕರ್ ಅವರ ಮಾತನ್ನು ಆಲಿಸಿದ್ದಿದ್ದರೆ, ಅವರನ್ನು ಅನುಮಾನದ ಕಣ್ಣಿನಿಂದ ನೋಡದೇ ಹೋಗಿದ್ದರೆ ಇವತ್ತಿನ ಈ ಮುಖಭಂಗದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಆದರೇನು ಮಾಡುವುದು, ಆತುರಗಾರನಿಗೆ ಬುದ್ಧಿಮಟ್ಟ ಎಂಬ ಹಳೇ ಗಾದೆಗೆ ಜೋತುಬಿದ್ದಿದ್ದರ ಪರಿಣಾಮ ಇವತ್ತು ಅವಮಾನದಿಂದ ತಲೆ ತಗ್ಗಿಸುವಂತಾಗಿದೆ.

ಸರಕಾರಕ್ಕೆ ಮುಖಭಂಗ ಅನ್ನೋದು ನಿತ್ಯಕರ್ಮದಂತೆ ಸಾಮಾನ್ಯವಾಗಿ ಹೋಗಿದೆ. ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ಅವರು ತಿರಸ್ಕರಿಸಿದರೂ ಲೋಕಾಯುಕ್ತ ಸ್ಥಾನಕ್ಕೆ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರ ಹೆಸರನ್ನು ಮತ್ತೆ, ಮತ್ತೆ ಶಿಫಾರಸ್ಸು ಮಾಡಿದೆ. ಇವರು ಕಳುಹಿಸೋದು, ಅವರು ವಾಪಸ್ಸು ಕಳುಹಿಸೋದು ಇದೇ ಆಗಿ ಹೋಗಿದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಮತ್ತಿತರ ಮೂವರ ನೇಮಕ, ಅಕ್ರಮ-ಸಕ್ರಮ ಯೋಜನೆಯ 94 ಸಿ ಅನುಬಂಧಕ್ಕೆ ತಿದ್ದುಪಡಿ ತರುವ ಸುಗ್ರೀವಾಜ್ಞೆ, ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ತ್ರಿಭಜನೆ, ಉಪಲೋಕಾಯುಕ್ತ ಮಜ್ಜಗೆ ನಿವೃತ್ತಿಯಿಂದ ತೆರವಾಗಿರುವ ಸ್ಥಾನಕ್ಕೆ ನ್ಯಾಯಮೂರ್ತಿ ಮಂಜುನಾಥ್ ನೇಮಕ ಪ್ರಸ್ತಾವನೆ, ಪರಿಶಿಷ್ಟ ಸಮುದಾಯದ ಗುತ್ತಿಗೆದಾರರಿಗೆ ಮೀಸಲು ಸುಗ್ರೀವಾಜ್ಞೆ ತಿರಸ್ಕಾರ– ಹೀಗೆ ಹತ್ತು ಹಲವು ವಿಚಾರಗಳಲ್ಲಿ ಸರಕಾರ ಮೇಲಿಂದ ಮೇಲೆ ಮುಖಭಂಗ ಅನುಭವಿಸುತ್ತಿದ್ದರೂ ಅದಕ್ಕೆ ಬುದ್ಧಿಯೂ ಬಂದಿಲ್ಲ, ಬರುವ ಯಾವುದೇ ಸೂಚನೆಯೂ ಇಲ್ಲ!

Leave a Reply