ದೇಶಪಾಂಡೆ- ಚಿಂಚನಸೂರ್ ವಿರುದ್ಧ ಶೆಟ್ಟರ್ ಭ್ರಷ್ಟಾಚಾರ ಆರೋಪ, ಮುಷ್ಕರದಲ್ಲಿ ಭಾಗಿಯಾದ್ರೆ ಪೋಲೀಸರು ವಜಾ, ಬಿಜೆಪಿಯಲ್ಲಿ ಸೋಮಣ್ಣ ಫೈನಲ್… ಇನ್ನೊಂದಿಷ್ಟು ಸುದ್ದಿಗಳು

ಮೇಘಾಲಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸ್ಥಳೀಯ ಕಲಾವಿದರೊಂದಿಗೆ ಬೆರೆತು, ಡೋಲು ಬಾರಿಸುವುದನ್ನು ಕಲಿತು ಆನಂದಿಸಿದರು.

ಕಿಕ್ ಬ್ಯಾಕ್ ಆಡಿಯೋ ಬಾಂಬ್

ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ,ಮೂಲಸೌಕರ್ಯ ವಿಷಯದಲ್ಲಿ ಪ್ಯಾಕೇಜ್ ಅನ್ನು ಕೆಬಿಆರ್ ಕನ್‍ಸ್ಟ್ರಕ್ಷನ್ ಕಂಪನಿಗೆ ಕೊಡಿಸುವಲ್ಲಿ ಅವ್ಯವಹಾರ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂಮಿ ಹಂಚಿಕೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ ಎದುರಿಸುತ್ತಿರುವ ಭಾರೀ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಬಂದರು, ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವ ಬಾಬುರಾವ್ ಚಿಂಚನಸೂರ್ ಕೆಬಿಆರ್ ಕನ್‍ಸ್ಟ್ರಕ್ಷನ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅಜಿತ್ ಅವರೊಂದಿಗೆ ನಡೆಸಿದ ಮಾತುಕತೆಯ ಆಡಿಯೋ ಸಂಭಾಷಣೆಯ ವಿವರಗಳನ್ನು ಬಹಿರಂಗಪಡಿಸಿದ ಶೆಟ್ಟರ್, ಹಣಕ್ಕಾಗಿ ಸಚಿವರು ಮಾಡಿದ ಒತ್ತಾಯ ಹಾಗೂ ಅಜಿತ್ ಅವರು ಕೈಗಾರಿಕಾ ಸಚಿವ ದೇಶಪಾಂಡೆಯವರಿಗೆ  ಒಂದೂವರೆ ಕೊಡಬೇಕು ಎಂಬುದಾಗಿ ನೀಡಿರುವ ಉತ್ತರದ ವಿವರಗಳನ್ನು ಬಹಿರಂಗಪಡಿಸಿದರು.

ಈ ಹಗರಣದಲ್ಲಿ ಬಾಬುರಾವ್ ಚಿಂಚನಸೂರ್ ಹಾಗೂ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರ ಹೆಸರೂ ಕೇಳಿ ಬಂದಿರುವುದರಿಂದ ಇಬ್ಬರೂ ಸಚಿವರು ನೈತಿಕ ಹೊಣೆ ಹೊರಬೇಕಾಗುತ್ತದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು.  ಸತ್ಯ ಏನೆಂಬುದು ಬಹಿರಂಗವಾಗಲಿದೆ ಎಂದು ಹೇಳಿದರು.

ಗಂಗೊಳ್ಳಿಯಲ್ಲಿ ಬ್ರೇಕ್ ವಾಟರ್ ಬಂಡ್ ನಿರ್ಮಾಣಕ್ಕೆ ಸಂಬಂಧಿಸಿದ 102 ಕೋಟಿ ರೂಗಳ ಕಾಮಗಾರಿಯನ್ನು ಚೆನ್ನೈನ ಶ್ರೀಪತಿ ಅಸೋಸಿಯೇಟ್ಸ್ ಕಂಪನಿಗೆ ಕೊಡಿಸುವುದರಲ್ಲೂ ಸಚಿವ ಬಾಬುರಾವ್ ಚಿಂಚನಸೂರ್ ಲಂಚ ಪಡೆದಿದ್ದಾರೆ ಎಂದು ಅವರು ಆರೋಪಿಸಿದ ಶೆಟ್ಟರ್ ಹೇಳಿದ್ದು- ‘ಆರು ಕಂಪನಿಗಳು ಟೆಂಡರ್‍ನಲ್ಲಿ ಭಾಗಿಯಾಗಿದ್ದರೂ ತಾಂತ್ರಿಕ ಕಾರಣಗಳನ್ನು ನೀಡಿ ನಾಲ್ಕು ಕಂಪನಿಗಳನ್ನು ಹೊರಗಿಡಲಾಗಿದೆ. ಉಳಿದ ಎರಡು ಕಂಪನಿಗಳಲ್ಲಿ ಒಂದು ಕಂಪನಿಯನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಬಂದರು ಸಚಿವರೂ ಆಗಿರುವ ಬಾಬುರಾವ್ ಚಿಂಚನಸೂರ್ ಕಾಮಗಾರಿಗೆ ಶೇಕಡಾ ಇಪ್ಪತ್ನಾಲ್ಕರಷ್ಟು ಹೆಚ್ಚುವರಿ ದರ ನಮೂದಿಸಿದ ಶ್ರೀಪತಿ ಅಸೋಸಿಯೇಟ್ಸ್‍ಗೆ ಟೆಂಡರ್ ದಕ್ಕುವಂತೆ ಮಾಡಿದರು. ಈ ಹಗರಣದಲ್ಲಿ ಅವರು ಎರಡು ಕೋಟಿ ರೂಗಳಷ್ಟು ಹಣವನ್ನು ಕಿಕ್‍ಬ್ಯಾಕ್ ಆಗಿ ಪಡೆದಿದ್ದಾರೆ’ ಎಂದು ಆರೋಪಿಸಿದರು.

ಮುಷ್ಕರದಲ್ಲಿ ಭಾಗಿಯಾಗೋ ಪೋಲಿಸ್ರು ವಜಾ

ಬೇಡಿಕೆಗಳಿಗೆ ಒತ್ತಾಯಿಸಿ ಜೂನ್ 4 ರಂದು ಕರೆದಿರುವ ಮುಷ್ಕರದಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾದಲ್ಲಿ ಅಂತಹವರನ್ನು ಸೇವೆಯಿಂದ ವಜಾಗೊಳಿಸುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

‘ಪೊಲೀಸ್ ನಿಯಮಾವಳಿಯಲ್ಲಿ ಮುಷ್ಕರಕ್ಕಾಗಲೀ, ಸಾಮೂಹಿಕ ರಜೆಗಾಗಲೀ ಅವಕಾಶವೇ ಇಲ್ಲ.

ಸೇವೆಯಿಂದ ವಜಾಗೊಂಡವರು, ನಿವೃತ್ತಿ ಹೊಂದಿದವರು, ಸೇವೆಯಲ್ಲಿರುವ ಪೊಲೀಸರನ್ನು ಪ್ರಚೋದಿಸಿ, ಮುಷ್ಕರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ರಜಾಪತ್ರ ನೀಡಿದವರನ್ನು ಹಿರಿಯ ಅಧಿಕಾರಿಗಳು ಮನವೊಲಿಸಿದ್ದಾರೆ. ಬೇರೆ ಯಾವುದೇ ರಾಜ್ಯಗಳಲ್ಲಿ ಪೊಲೀಸರಿಗೆ ನೀಡಲಾಗದಂತಹ ಸವಲತ್ತುಗಳನ್ನು ನಾವು ನೀಡಿದ್ದೇವೆ. ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ವೇತನ ಶ್ರೇಣಿಯಲ್ಲಿ ತಾರತಮ್ಯವಿದೆ. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ’ ಎಂದಿದ್ದಾರೆ ಸಚಿವರು.

25 ಸಾವಿರ ಹುದ್ದೆಗಳು ಖಾಲಿ ಇದ್ದು, ಕಳೆದ ಮೂರು ವರ್ಷಗಳಲ್ಲಿ 8500 ಪೊಲೀಸರ ನೇಮಕಾತಿಯಾಗಿದೆ. ಈಗ ಮತ್ತೆ 3500 ಪೊಲೀಸರ ನೇಮಕಾತಿ ಚಾಲ್ತಿಯಲ್ಲಿದೆ. ಇದಲ್ಲದೆ 1500 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ 15 ಸಾವಿರ ಪೊಲೀಸ್ ಹಾಗೂ ಸಬ್‍ಇನಿಸ್ಪೆಕ್ಟರ್ ಗಳನ್ನು ನೇಮಕ ಮಾಡುವುದರ ಮೂಲಕ ಅವರ ಮೇಲಿರುವ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತೇವೆ ಎಂಬುದು ಸಚಿವರು ನೀಡಿರುವ ಭರವಸೆ.

ವಿಧಾನ ಪರಿಷತ್: ಬಿಜೆಪಿ ಮೊದಲ ಅಭ್ಯರ್ಥಿಯಾಗಿ ಸೋಮಣ್ಣ

ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಮೊದಲ ಅಭ್ಯರ್ಥಿಯಾಗಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.

ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರೋಧದ ನಡುವೆಯೂ ಕೋರ್ ಕಮಿಟಿಯ ಉಳಿದೆಲ್ಲರ ಅಭಿಪ್ರಾಯ ಸೋಮಣ್ಣ ಅವರ ಪರವಾಗಿದ್ದುದರಿಂದ ಬಹು ಮಂದಿಯ ಅಭಿಪ್ರಾಯಕ್ಕೆ ಹೈಕಮಾಂಡ್ ಮನ್ನಣೆ ನೀಡಿದೆ.

ಸಂಘ ಪರಿವಾರ ಮೂಲದ ಸದಾಶಿವ ಅವರ ಹೆಸರನ್ನು ಯಡಿಯೂರಪ್ಪ ಮುಂದೆ ಮಾಡಿದರೂ ಪರಿವಾರವೇ ಆ ಬಗ್ಗೆ ಅನಾಸಕ್ತಿ ತೋರಿಸಿದ್ದು ಸೋಮಣ್ಣ ಹಾದಿ ಸುಗಮವಾಗುವುದಕ್ಕೆ ಕಾರಣವಾಯಿತೆಂದು ಮೂಲಗಳು ಹೇಳಿವೆ. ಎರಡನೇ ಅಭ್ಯರ್ಥಿ ಜಾಗಕ್ಕೆ ಕಟ್ಟಾ ಸುಬ್ರಮಣ್ಯ ನಾಯ್ಡು, ಲೆಹರ್ ಸಿಂಗ್ ಹೆಸರುಗಳು ತೇಲಾಡುತ್ತಿವೆಯಾದರೂ ಇನ್ನೂ ಸ್ಪಷ್ಟ ಚಿತ್ರಣ ಲಭಿಸುತ್ತಿಲ್ಲ. ಜೆಡಿಎಸ್ ವತಿಯಿಂದ ನಿಲ್ಲುವ ಅಭ್ಯರ್ಥಿಗೆ ಬೆಂಬಲ ಕೊಡಿ ಎಂಬ ವಿನಂತಿಯೂ ಬಿಜೆಪಿಗೆ ಸಲ್ಲಿಕೆಯಾಗಿರುವ ಮಾತುಗಳಿವೆ. ಶುಕ್ರವಾರ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಎರಡನೇ ಅಭ್ಯರ್ಥಿಯಾಗಿ ಬಿಜೆಪಿ ವತಿಯಿಂದ ಕಣಕ್ಕಿಳಿಯಲು ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರಾದರೂ ಅವರಿಂದ ಪೂರಕ ಉತ್ತರ ಸಿಕ್ಕಿಲ್ಲ.

ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ಟಾಪರ್ ಗಳು, ಲಭ್ಯ ಸೀಟುಗಳ ವಿವರ

ರಾಜ್ಯ ಉನ್ನತ ಶಿಕ್ಷಣ ಸಚಿವ ಟಿ. ಬಿ. ಜಯಚಂದ್ರ ಶನಿವಾರ ಸಿಇಟಿ ಫಲಿತಾಂಶ ಪ್ರಕಟಿಸಿದ್ದಾರೆ.

ಮೂಡಬಿದರಿಯ ಆಳ್ವಾಸ್ ಕಾಲೇಜಿನ ಅನಂತ ಜಿ. ವೈದ್ಯ ಮತ್ತು ದಂತವೈದ್ಯದಲ್ಲಿ ಪ್ರಥಮ ಶ್ರೇಯ ಗಳಿಸಿ, ಇಂಡಿಯನ್ ಸಿಸ್ಟಮ್ ಮೆಡಿಸಿನ್ (ಐಎಸ್ ಎಮ್) ಮತ್ತು ಹೋಮಿಯೋಪಥಿಯಲ್ಲಿ 3ನೇ ಶ್ರೇಯಾಂಕ ಗಳಿಸಿದ್ದಾರೆ. ಐಎಸ್ ಎಮ್ ಮತ್ತು ಹೋಮಿಯೋಪಛಿ ವಿಭಾಗದಲ್ಲಿ ಪ್ರಥಮ ಶ್ರೇಯ ಶೇಷಾದ್ರಿಪುರಂ ಪಿಯು ಕಾಲೇಜಿನ ಸಂಜಯ್ ಎಮ್. ಗೌಡರ್ ಹಾಗೂ ದ್ವಿತೀಯ ಸ್ಥಾನದಲ್ಲಿರುವವರು ಬೀದರಿನ ಸಹೀನ್ ಇಂಡಿಪೆಂಡೆಂಟ್ ಕಾಲೇಜಿನ ವಚನಾಶ್ರೀ ಪಾಟೀಲ್. ಸಂಜಯ್ ಮತ್ತು ವಚನಾಶ್ರೀ ಅವರೇ ವೈದ್ಯ ಮತ್ತು ದಂತವೈದ್ಯದಲ್ಲಿ ಕ್ರಮವಾಗಿ 2 ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಎಂಜಿನಿಯರಿಂಗ್ ನಲ್ಲಿ ಪ್ರಥಮ ಸ್ಥಾನ ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜಿನ ಮಿಲಿಂದ್ ಕುಮಾರ್ ವಡ್ಡಿರಾಜು. ಎಕ್ಸ್ ಪರ್ಟ್ ಪಿಯು ಕಾಲೇಜಿನ ನಿರಂಜನ ಕಾಮತ್ ಎರಡನೇ ಸ್ಥಾನ ಮತ್ತು ಕೆಎಲ್ ಇ ಇಂಡಿಪೆಂಡೆಂಟ್ ಪಿಯು ಕಾಲೇಜಿನ ದಿವ್ಯ ಎ. ಜಮಖಂಡಿ ಮೂರನೇ ಸ್ಥಾನ ಪಡೆದಿದ್ದಾರೆ. ಆರ್ಕಿಟೆಕ್ಚರ್ ವಿಭಾಗದಲ್ಲಿಸಿಎಮ್ ಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಮೃದುಲಾ ಸಿ. ಆರ್. ಮೊದಲ ಸ್ಥಾನ, ಅಮೃತ ಅಕಾಡೆಮಿಯ ಐಶ್ವರ್ಯ ಮಹಾದೇವನ್ ಎರಡನೇ ಸ್ಥಾನ, ಸೋಫಿಯಾ ಹೈಸ್ಕೂಲಿನ ನೇಹಾ ಸರಾ ಅಬ್ರಾಹಂ ಮೂರನೇ ಸ್ಥಾನ ಪಡೆದಿದ್ದಾರೆ.

1.71 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಈಗ 41, 350 ವಿದ್ಯಾರ್ಥಿಗಳು ವೈದ್ಯ ಮತ್ತು ಡೆಂಟಲ್ ಕೋರ್ಸುಗಳಿಗೆ, 99,791 ವಿದ್ಯಾರ್ಥಿಗಳು ಐ ಎಮ್ ಎಸ್ ಮತ್ತು ಹೋಮಿಯೋಪಥಿಗೆ, 1.27 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್, 1395 ವಿದ್ಯಾರ್ಥಿಗಳು ಆರ್ಕಿಟೆಕ್ಟ್ ಗೆ ಸೇರಿಕೊಳ್ಳಬಹುದಾಗಿದೆ.

 

ಪಾಕಿಸ್ತಾನಕ್ಕೆ ಪಾಠ ಹೇಳಿದ ಅಮೆರಿಕ

ಅಣು ಪೂರೈಕೆ ರಾಷ್ಟ್ರಗಳ ಗುಂಪಿಗೆ ಭಾರತವನ್ನು ಸೇರಿಸಿಕೊಳ್ಳುವ ಅಮೆರಿಕದ ನಿರ್ಧಾರಕ್ಕೆ ಆಕ್ಷೇಪಿಸಿದ್ದ ಪಾಕಿಸ್ತಾನ, ಇದರಿಂದ ತನ್ನ ಸುರಕ್ಷತೆಗೆ ಆತಂಕ ಎದುರಾಗುತ್ತದೆ ಎಂದಿತ್ತು.

ಅಮೆರಿಕದ ಗೃಹಖಾತೆ ವಕ್ತಾರ ಮಾರ್ಕ್ ಟೋನರ್ ಒಂದರ್ಥದಲ್ಲಿ ಪಾಕಿಸ್ತಾನಕ್ಕೆ ಮೂಲಭೂತ ಪಾಠ ಮಾಡಿದರು. ‘ಎನ್ ಎಸ್ ಜಿ (ನ್ಯೂಕ್ಲಿಯರ್ ಸಪ್ಲೈ ಗ್ರೂಪ್) ಗೆ ಭಾರತ ಸೇರುವುದನ್ನು ಶಸ್ತ್ರ ಪೈಪೋಟಿ ಎಂದು ನೋಡುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಈ ಗುಂಪು ಇರುವುದು ನಾಗರಿಕ ಬಳಕೆಗಾಗಿ ಅಣು ಇಂಧನ ಪೂರೈಕೆ ಕುರಿತಾಗಿ. ಈ ಶಾಂತಿಯುತ ಉದ್ದೇಶವನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳುತ್ತದೆ ಅಂತ ಆಶಿಸುತ್ತೇವೆ’ ಅಂದಿದ್ದಾರೆ ಅವರು.

Leave a Reply