ವಾರಾಂತ್ಯದಲ್ಲಿ ನೀವು ಗಮನಿಸಬೇಕಿರುವ ಟ್ರೆಂಡ್: ಇ ಕಾಮರ್ಸ್ ಮುಗ್ಗರಿಸುತ್ತಿದೆ!

ಡಿಜಿಟಲ್ ಕನ್ನಡ ಟೀಮ್:

ಈ ವಾರದ ಪ್ರಮುಖ ಬೆಳವಣಿಗೆ ಎಂದರೆ, ಇ ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್, ಕ್ಯಾಂಪಸ್ ನೇಮಕ ಮಾಡಿಕೊಂಡಿದ್ದ ಪದವೀಧರರ ಕೆಲಸಕ್ಕೆ ಸೇರುವ ದಿನಾಂಕವನ್ನು ಮುಂದೂಡಿ ಟೀಕೆಗೆ ಒಳಗಾಗಿದ್ದು. ಅಹಮದಾಬಾದಿನ ಐಐಎಮ್ ನಿಂದ ಕ್ಯಾಂಪಸ್ ರಿಕ್ರೂಟ್ ಮೆಂಟ್ ಆಗಿದ್ದವರು ಫ್ಲಿಪ್ ಕಾರ್ಟ್ ಸೇರಬೇಕಿತ್ತು. ಆದರೆ, ತನ್ನಲ್ಲಿ ಕೆಲವು ಸಾಂಸ್ಥಿಕ ಬದಲಾವಣೆಗಳಾಗುತ್ತಿರುವುದರಿಂದ ನೇಮಕವನ್ನು ಮುಂದೂಡಿರುವುದಾಗಿ ಫ್ಲಿಪ್ ಕಾರ್ಟ್ ಹೇಳಿದೆ. ಇದಕ್ಕೆ ತಾಂತ್ರಿಕ ಕಾರಣಗಳನ್ನು ಏನೇ ಹೇಳಿದರೂ ಕಂಪನಿ ಸದ್ಯಕ್ಕೆ ಉನ್ನತ ವೇತನದ ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂಬ ಸಂದೇಶ ಹೋದಂತಾಗಿದೆ.

ಫ್ಲಿಪ್ ಕಾರ್ಟ್ ನ ಕೆಟ್ಟ ಸುದ್ದಿ ಇಷ್ಟಕ್ಕೆ ನಿಂತಿಲ್ಲ. ಅದರ ಹೂಡಿಕೆದಾರರಲ್ಲೊಂದಾದ ಮಾರ್ಗನ್ ಸ್ಟ್ಯಾನ್ಲಿ, ಮೂರೇ ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಫ್ಲಿಪ್ ಕಾರ್ಟ್ ಮೌಲ್ಯವನ್ನು ಕುಗ್ಗಿಸಿದೆ. ಜೂನ್ 2015ರಲ್ಲಿ ಫ್ಲಿಪ್ ಕಾರ್ಟ್ ಮೌಲ್ಯ 15.2 ಬಿಲಿಯನ್ ಡಾಲರ್ ಗಳಾಗಿತ್ತು. ಮಾರ್ಗನ್ ಸ್ಟ್ಯಾನ್ಲಿ ಎರಡು ಬಾರಿ ಮೌಲ್ಯ ಕುಗ್ಗಿಸಿದ್ದರಿಂದ 9.4 ಬಿಲಿಯನ್ ಡಾಲರ್ ಗಳಿಗೆ ಕುಸಿದಿದೆ. ಫ್ಲಿಪ್ ಕಾರ್ಟ್ ಸೇರಿದಂತೆ ಪ್ರಮುಖ ಇ ಕಾಮರ್ಸ್ ಕಂಪನಿಗಳು ಇನ್ನೂ ಲಾಭ ಮಾಡಿಲ್ಲ. ಆದರೆ ಇವುಗಳ ಮೌಲ್ಯದ ಕಾರಣದಿಂದಾಗಿಯೇ ವೆಂಚುರ್ ಕ್ಯಾಪಿಟಲ್ ಗಳಿಂದ ಹಣ ಹರಿದು ಬರುತ್ತಿದೆ. ಈ ನಿಟ್ಟಿನಲ್ಲಿ ಮೌಲ್ಯ ಕುಗ್ಗುವಿಕೆ ಮಾರಕ ಹೊಡೆತವೇ ಸರಿ.

ಇನ್ನು ಇದರ ವಿರೋಧಿ ಪಾಳೆಯದ ಸ್ನ್ಯಾಪ್ ಡೀಲ್ ನಲ್ಲಿ ಚೀಫ್ ಪ್ರಾಡೆಕ್ಟ್ ಆಫೀಸರ್ ಆನಂದ ಚಂದ್ರಶೇಖರನ್ ನೇಮಕವಾಗಿ ವರ್ಷ ಕಳೆಯುವುದರಲ್ಲೇ ನಿರ್ಗಮಿಸಿರುವುದು ಈ ವಾರದ ಔದ್ಯಮಿಕ ರಂಗದ ಪ್ರಮುಖ ಬೆಳವಣಿಗೆಗಳಲ್ಲೊಂದು. ನವೋದ್ದಿಮೆಯ ಮಾದರಿ ಮತ್ತು ಸಕ್ಸಸ್ ಸ್ಟೋರಿ ಎಂದೆಲ್ಲ ಬಣ್ಣಿಸಿಕೊಂಡಿದ್ದ ಇ ಕಾಮರ್ಸ್ ಉದ್ಯಮಗಳಲ್ಲಿ ಹೆಚ್ಚಿನವುಗಳ ಸ್ಥಿತಿ ಇದೇ ಆಗಿದೆ. ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್,ಕಾರ್ ದೇಖೊ, ಕ್ಲಿಕ್ ಲ್ಯಾಬ್ಸ್, ಹಾಪ್ ಸ್ಕಾಚ್, ಎಲ್ಲವೂ ನೇಮಕ ಪ್ರಕ್ರಿಯೆಯನ್ನು ತಗ್ಗಿಸಿವೆ.

ಹಳೆಓದು- ಮರುಓದುಫ್ಲಿಪ್ ಕಾರ್ಟ್- ಸ್ನ್ಯಾಪ್ ಡೀಲ್ ವಾಕ್ಸಮರ, ಇಲ್ಲಿದೆ ಇ ಕಾಮರ್ಸ್ ಬಣ್ಣದ ಪುಗ್ಗಿ ಒಡೆಯಲು ಹೊರಟಿರುವುದರ ವಿವರ!

ಆಹಾರ ನವೋದ್ದಿಮೆ ಜೊಮಾಟೊ ತನ್ನ ಪ್ರಸ್ತುತಿ ಹೊಂದಿದ್ದ 23 ದೇಶಗಳ ಪೈಕಿ 9ರಲ್ಲಿ ಕಾರ್ಯಾಚರಣೆಯನ್ನು ಗಣನೀಯವಾಗಿ ಕುಗ್ಗಿಸಿರುವುದಾಗಿ ಘೋಷಿಸಿದೆ. ಈ ಕಂಪನಿಯ ಶೇ. 45ರಷ್ಟು ಆದಾಯ ಇರುವುದು ಭಾರತದಲ್ಲೇ. ವಿದೇಶದ ಬೇರೆ ಬೇರೆ ಆಹಾರ ನವೋದ್ದಿಮೆಗಳನ್ನು ತನ್ನದಾಗಿಸಿಕೊಂಡು ಈ ವಲಯದಲ್ಲಿ ವಿಶ್ವದ ಮುಂಚೂಣಿ ಸ್ಥಾನದಲ್ಲಿರಬೇಕೆಂಬ ಅದರ ಆಸೆಗೆ ಬ್ರೇಕ್ ಬಿದ್ದಿದೆ. ಅದಾಗಲೇ ಮುಂಬೈ ಮೂಲದ ಟೈನಿಔಲ್ ಎಂಬ ಆಹಾರ ನವೋದ್ದಿಮೆ, ನಗರದಲ್ಲಷ್ಟೇ ತನ್ನ ವಹಿವಾಟು ಇರಿಸಿಕೊಳ್ಳುವುದಾಗಿ ಪ್ರಕಟಿಸಿದೆ.

ಹಳೆ ಓದು- ಮರುಓದು: ಕುಸಿದ ಜೊಮಾಟೊ ಮೌಲ್ಯಮಾಪನ, ಆಹಾರ ಸೇವೆಯ ನವೋದ್ದಿಮೆ ಸಂಕಷ್ಟಗಳ ಪ್ರತಿಫಲನ

ಅತಿದೊಡ್ಡ ವ್ಯಾಪ್ತಿಯಲ್ಲಿ ಬೆಳೆದು ನಿಲ್ಲುವ ಕನಸು ಬಿತ್ತಿ, ಎಲ್ಲರನ್ನೂ ಇ ಕಾಮರ್ಸ್ ಬೆರಗಿಗೆ ಹಚ್ಚಿದ್ದ ದೈತ್ಯರೆಲ್ಲ ಕುಬ್ಜರಾಗುತ್ತಿರುವುದು ಈಗಿನ ಟ್ರೆಂಡ್. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬ ಕೌತುಕವಿನ್ನೂ ಬಾಕಿ ಇದೆ.

Leave a Reply