ಮೋದಿ @2: ಬೇವು ಲೇಪಿತ ಯೂರಿಯಾ ಕೃಷಿರಂಗದ ಸಿಹಿಕಥನವಾಗಿದ್ದು ಹೇಗೆ?

ಡಿಜಿಟಲ್ ಕನ್ನಡ ವಿಶೇಷ:

ಕೇಂದ್ರದ ಮೋದಿ ಸರ್ಕಾರ ತನ್ನ ಎರಡು ವರ್ಷಗಳ ಅಧಿಕಾರ ಪೂರೈಕೆ ನಿಮಿತ್ತ ಹಲವು ಪ್ರಚಾರ ಕಾರ್ಯಕ್ರಮಗಳು, ಜಾಹೀರಾತುಗಳು, ಮಾಧ್ಯಮ ಸಂದರ್ಶನಗಳಲ್ಲಿ ತೊಡಗಿಸಿಕೊಂಡಿದೆ. ಯಾವ ಪಕ್ಷದ್ದೇ ಸರ್ಕಾರವಿದ್ದರೂ ಇಂಥ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಟೀಕೆಯೂ ಅಷ್ಟೇ ಸಹಜವಾಗಿ ವ್ಯಕ್ತವಾಗುತ್ತಿರುತ್ತದೆ.

ಪ್ರಧಾನಿ ಮೋದಿ ಭಾಷಣಗಳಲ್ಲಿ, ಸಚಿವರ ಸಂದರ್ಶನಗಳಲ್ಲಿ, ಪ್ರಚಾರ ಜಾಹೀರಾತುಗಳಲ್ಲಿ ಸರ್ಕಾರದ ಸಾಧನೆಗಳ ಪಟ್ಟಿಯನ್ನೇ ಕೊಡಲಾಗುತ್ತಿದೆ. ಆ ಪೈಕಿ ಕೃಷಿ ವಲಯಕ್ಕೆ ಸಂಬಂಧಿಸಿದ ಒಂದು ಯೋಜನೆ ಹೊಸತನದ್ದೇ ಹೌದು. ಈ ಅನ್ವೇಷಕ ಯೋಜನೆ ಹಲವು ಸಿಕ್ಕುಗಳನ್ನು ಒಮ್ಮೆಗೇ ಬಿಡಿಸಿಟ್ಟಿರುವುದರ ಹೆಗ್ಗಳಿಕೆ ಹೊಂದಿದೆ.

ಅದು ಬೇವು ಲೇಪಿತ ಯೂರಿಯಾ. ರಸಗೊಬ್ಬರಕ್ಕಾಗಿ ಕೇಂದ್ರ ಸರ್ಕಾರ ಲಾಗಾಯ್ತಿನಿಂದಲೂ ವ್ಯಯಿಸುತ್ತಿರುವ ಸಬ್ಸಿಡಿ ಅಗಾಧವಾದದ್ದು. ಅಷ್ಟಾಗಿಯೂ ಸಕಾಲಕ್ಕೆ ರಸಗೊಬ್ಬರ ಸಿಗುತ್ತಿಲ್ಲವೆಂಬ ಕೂಗು ಯಾವಾಗಲೂ ಒಂದಿಲ್ಲೊಂದು ಪ್ರದೇಶಗಳಿಂದ ಕೇಳಿ ಬರುತ್ತಿತ್ತು. ಇತ್ತೀಚೆಗೆ ಕರ್ನಾಟಕದ ಒಂದು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ ಅವರನ್ನು ಶ್ಲಾಘಿಸುತ್ತ, ‘ಈ ಬಾರಿ ಯಾವ ರಾಜ್ಯದಿಂದಲೂ ಯೂರಿಯಾ ಸಿಗಲಿಲ್ಲ ಎಂಬ ದೂರು ಬಂದೇ ಇಲ್ಲ’ ಅಂತ ಹರ್ಷ ವ್ಯಕ್ತಪಡಿಸಿದ್ದರು.

ಈ ಸ್ಥಿತಿಗೆ ಕಾರಣವಾಗಿದ್ದು ಬೇವು ಲೇಪಿತ ಯೂರಿಯಾ. ವರ್ಷದ ಹಿಂದೆಯೇ ಕೇಂದ್ರ ಸರ್ಕಾರವು ಯೂರಿಯಾಕ್ಕೆ ಬೇವು ಲೇಪಿಸುವುದನ್ನು ಎಲ್ಲ ರಸಗೊಬ್ಬರ ಕಂಪನಿಗಳಿಗೆ ಕಡ್ಡಾಯವಾಗಿಸಿತು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದು ಹಾಗೂ ಕಡಿಮೆ ಪ್ರಮಾಣದಲ್ಲಿ ಹಾಕಿದರೂ ನಿಧಾನಕ್ಕೆ ಫಲವತ್ತತೆ ಬೇರುಗಳಿಗೆ ಇಳಿಯುವ ವರವಿರುವುದು ಮುಖ್ಯ ಅಂಶ. ಬೇವು ಲೇಪಿತ ರಸಗೊಬ್ಬರದಲ್ಲಿ ನೈಟ್ರೊಜನ್ ಬಿಡುಗಡೆ ಪ್ರಮಾಣವು ಶೇ. 10-15ರ ಪ್ರಮಾಣದಲ್ಲಿ ನಿಧಾನವಾಗುವುದರಿಂದ, ಮಾಲಿನ್ಯವೂ ತಗ್ಗುವುದು ಪ್ರಯೋಗಗಳಲ್ಲಿ ದೃಢಪಟ್ಟಿದೆ.

ಆದರೆ, ಬೇವು ಲೇಪಿತ ಯೂರಿಯಾದಿಂದ ಆದ ಬಹುದೊಡ್ಡ ಕ್ರಾಂತಿ ಎಂದರೆ ರಸಗೊಬ್ಬರದ ಹೊರತಾಗಿ ಅನ್ಯ ಬಳಕೆಗಳಿಗೆ ಯೂರಿಯಾ ಸೋರಿಹೋಗುವುದು ನಿಂತುಹೋಯಿತು. ಏಕೆಂದರೆ ರಸಗೊಬ್ಬರದ ಸಬ್ಸಿಡಿ ಯೂರಿಯಾವನ್ನು ದಕ್ಕಿಸಿಕೊಂಡು ಅದನ್ನು ಹಲವು ಕೈಗಾರಿಕೆಗಳಿಗೆ ಬಳಸಿಕೊಳ್ಳುವ ಅಕ್ರಮವೊಂದು ಜಾರಿಯಲ್ಲಿತ್ತು. ಯೂರಿಯಾಕ್ಕೆ ಬೇವಿನ ಲೇಪ ಅಂಥ ಎಲ್ಲ ದುರುಪಯೋಗದ ಮಾರ್ಗವನ್ನು ಮುಚ್ಚಿ ಹಾಕಿತು.

ಇದರ ಆಳ- ಅಗಲ ಗೊತ್ತಾಗಬೇಕಾದರೆ ಯೂರಿಯಾ ಏನಕ್ಕೆಲ್ಲ ಬಳಕೆಯಾಗುತ್ತದೆ ಎಂಬುದನ್ನು ಅರಿಯಬೇಕು. ಪೇಂಟ್ ತಯಾರಿಕೆಗೆ, ಅಂಟು ಉತ್ಪನ್ನಗಳಿಗೆ, ಕ್ರಿಮಿನಾಶಕಗಳಿಗೆ, ಪ್ಲಾಸ್ಟಿಕ್ ತಯಾರಿಕೆಯಲ್ಲಿ, ಡೈಯಿಂಗ್ ಮತ್ತು ಇಂಕುಗಳಲ್ಲಿ ಇಲ್ಲೆಲ್ಲ ಯೂರಿಯಾದೊಳಗಿನ ರಾಸಾಯನಿಕ ಅಂಶಗಳ ಬಳಕೆ ಆಗುತ್ತಿತ್ತು. ಹಾಗೆಂದೇ ರಸಗೊಬ್ಬರದ ಯೂರಿಯಾ ರೈತರಿಗೆ ಸಿಗುವುದಕ್ಕೂ ಮುಂಚೆ ಎಲ್ಲೆಲ್ಲೋ ಅಡ್ಡದಾರಿ ಹಿಡಿಯುತ್ತಿತ್ತು.

ನಮಗೆ ಮಾರಣಾಂತಿಕವಾದ ಇನ್ನೆರಡು ಸಂಗತಿಗಳಲ್ಲೂ ಈ ಅಕ್ರಮ ಯೂರಿಯಾ ಬಳಕೆ ಇದೆ. ಆರ್ ಡಿಎಕ್ಸ್ ಮತ್ತು ಟಿಎನ್ ಟಿಗಳಂಥ ಬಾಂಬುಗಳ ತಯಾರಿಕೆಯಲ್ಲಿ ಕಚ್ಚಾವಸ್ತುಗಳಲ್ಲಿ ಒಂದಾಗಿ ಬಳಕೆಯಾಗುತ್ತಿದ್ದದ್ದು ಯೂರಿಯಾ. ಉಗ್ರರು, ವಿಶೇಷವಾಗಿ ಈಶಾನ್ಯ ಭಾರತದ ಬಂಡುಕೋರರು ಸುಲಭವಾಗಿ ದಕ್ಕಿಸಿಕೊಳ್ಳುತ್ತಿದ್ದದ್ದೇ ರಸಗೊಬ್ಬರಗಳಲ್ಲಿದ್ದ ಯೂರಿಯಾವನ್ನು.

ಹಾಲಿನಲ್ಲಿ ಕಲಬೆರಕೆ ಎಂಬ ಸುದ್ದಿಯನ್ನು ಆಗಾಗ ಕೇಳುತ್ತಿರುತ್ತೀರಿ. ಹೀಗೆ ಕಲಬೆರಕೆ ಮಾಡಲು ಹಲವು ಪದಾರ್ಥಗಳ ಮೊರೆ ಹೋಗುತ್ತಿದ್ದರಾದರೂ ಯೂರಿಯಾ ಸಹ ಕಲಬೆರಕೆದಾರರ ಮೆಚ್ಚಿನ ವಸ್ತುಗಳಲ್ಲೊಂದು.

ರಸಗೊಬ್ಬರ ಯೂರಿಯಾದ ಬೇವು ಲೇಪದಿಂದ ಇಂಥ ಎಲ್ಲ ಬಳಕೆಗಳಿಗೂ ಯೂರಿಯಾ ನಿರರ್ಥಕವಾಗಿದೆ. ಹಾಗೆ ನೋಡಿದರೆ ಈ ಯೂರಿಯಾ ಲೇಪಿತ ರಸಗೊಬ್ಬರಕ್ಕೆ ಈ ಹಿಂದಿನ ರಸಗೊಬ್ಬರಕ್ಕಿಂತ ಟನ್ ಗೆ ₹260 ಹೆಚ್ಚಿಗೆ ಖರ್ಚು ತಗುಲುತ್ತದೆ. ಆದರೆ ಉಳಿದ ಲಾಭ ದೊಡ್ಡಮಟ್ಟದ್ದು. ಮಾರ್ಚ್ ನಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ರಾಜ್ಯಸಭೆಯಲ್ಲಿ ತಿಳಿಸಿರುವ ಪ್ರಕಾರ, ಬೇವು ಲೇಪಿತ ಯೂರಿಯಾ ಕ್ರಮದ ನಂತರ ರಾಜ್ಯಗಳಿಂದ ಬರುತ್ತಿದ್ದ ರಸಗೊಬ್ಬರ ಬೇಡಿಕೆ 7 ಲಕ್ಷ ಟನ್ ಗಳಿಗೆ ಕುಸಿದಿದೆ. ಅರ್ಥಾತ್ ಆ ಪ್ರಮಾಣದಲ್ಲಿ ರಸಗೊಬ್ಬರವು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು ಎಂದಾಯಿತು.

ananth kumarಈ ಮೊದಲು ಶೇ. 75ರಷ್ಟು ಬೇವು ಲೇಪಿತ ಎಂದಿದ್ದ ನಿಯಮವನ್ನು ಎಲ್ಲವಕ್ಕೂ ವಿಸ್ತರಿಸಿ ಶೇ. 100ರಷ್ಟು ಮಾಡಲಾಗಿದೆ. ಹೀಗಾಗಿ ಯೂರಿಯಾ ರಸಗೊಬ್ಬರ ಅಂತಂದ್ರೆ ಅದು ಬೇವು ಲೇಪಿತವೇ. ಈ ಕ್ರಮದಿಂದ ಸರ್ಕಾರ ವಾರ್ಷಿಕವಾಗಿ ₹6500 ಕೋಟಿ ಸಬ್ಸಿಡಿ ಹಣ ಉಳಿಸಲಿದೆ ಎಂಬುದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಪ್ರತಿಪಾದನೆ.

ದೆಹಲಿಯ ‘ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್’ 2002ರಿಂದಲೇ ಬೇವು ಲೇಪಿತ ಯೂರಿಯಾ ಪ್ರಯೋಗವನ್ನು ಹಂತ ಹಂತವಾಗಿ ಮಾಡಿ ಹೀಗೊಂದು ಸೂತ್ರ ರೂಪಿಸಿತು. ಇದನ್ನು ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ತರುತ್ತಿರುವ ಶ್ರೇಯಸ್ಸು ಎನ್ ಡಿ ಎ ಸರ್ಕಾರಕ್ಕೆ ಸಲ್ಲುತ್ತಿದೆ.

1 COMMENT

  1. The greatest losers are the corrupt one’s and middle men who had the chance of 6500 crores.t he terrorists and antinationals will be the next in line to lose.so people r forced to be come honest.honest ones remain honest without any change.so all those who complain against modi or just 100% corrupt.that is why they say there is no freedom after modi became pm .kejri coniahs and Congress r worst hit

Leave a Reply