ನಿರ್ಣಾಯಕ ಘಟ್ಟಕ್ಕೆ ಜೆಡಿಎಸ್ ಭಿನ್ನಮತ; ಪರಸ್ಪರ ಪಾಠ ಕಲಿಸಲು ಪಾಳೆಯಗಳ ತವಕ

ಡಿಜಿಟಲ್ ಕನ್ನಡ ವಿಶೇಷ:

ಜಾತ್ಯತೀತ ಜನತಾ ದಳ ಮತ್ತೊಂದು ಭಿನ್ನಮತ ಸ್ಫೋಟದ ಹೊಸ್ತಿಲಲ್ಲಿ ನಿಂತಿದೆ. ನಾಯಕರ ಪ್ರತಿಷ್ಠೆ, ವೈಷಮ್ಯ ಪಾರಮ್ಯಕ್ಕೆ ಸಿಕ್ಕಿರುವ ಪಕ್ಷದ ಒಳಬೇಗುದಿ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಸಿಡಿಯುವ ಲಕ್ಷಣಗಳು ಕಾಣುತ್ತಿವೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ದೇವೇಗೌಡರ ಕುಟುಂಬ ಮತ್ತು ಎರಡನೇ ಹಂತದ ನಾಯಕರ ನಡುವೆ ಪರಸ್ಪರ ಮೂಡಿದ್ದ ವಿಶ್ವಾಸದ ಕೊರತೆ ಮೂರು ವರ್ಷ ಕಳೆದರೂ ಸರಿಹೋಗಿಲ್ಲ. ಅದನ್ನು ಸರಿಪಡಿಸುವ ಯತ್ನ ಎರಡೂ ಪಾಳೆಯದಲ್ಲಿ ನಡೆಯಲಿಲ್ಲ. ಬದಲಿಗೆ ಒಬ್ಬರನ್ನೊಬ್ಬರು ಬಹಿರಂಗವಾಗಿಯೇ ಟೀಕೆ ಮಾಡುತ್ತಾ ಬಂದಿದ್ದರು. ಇದೀಗ ಬಂದಿರುವ ಚುನಾವಣೆ ಪರಸ್ಪರರ ಪಾಠ ಕಲಿಸುವ ಪ್ರಕ್ರಿಯೆಗೆ ಪರಿವರ್ತನೆ ಆಗಿರುವ ಪರಿಣಾಮ ಭಿನ್ನಾಭಿಪ್ರಾಯ ನಿರ್ಣಾಯಕ ಘಟ್ಟ ಮುಟ್ಟಿದೆ.

ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯಬಲ 40. ರಾಜ್ಯಸಭೆ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು 45 ಸದಸ್ಯರ ಬೆಂಬಲ ಬೇಕು. ಈಗಾಗಲೇ 5 ಮತಗಳ ಕೊರತೆ ಇದೆ. ಅದನ್ನು ಪಕ್ಷೇತರರು ಮತ್ತಿತರ ಮೂಲಗಳಿಂದ ತುಂಬಿಕೊಳ್ಳಲು ಗೌಡರು ಮತ್ತು ಕುಮಾರಸ್ವಾಮಿ ತಂತ್ರ ಹೆಣೆಯುತ್ತಿರುವ ಸಂದರ್ಭದಲ್ಲೇ ಜೆಡಿಎಸ್ ನ ಐವರು ಶಾಸಕರು ಕಾಂಗ್ರೆಸ್ ಪ್ರಾಯೋಜಿತ ಮೂರನೇ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಅವರನ್ನು ಬೆಂಬಲಿಸಲು ನಿರ್ಣಯ ಮಾಡಿದ್ದಾರೆ. ಆಸ್ಕರ್ ಫರ್ನಾಂಡಿಸ್, ಜೈರಾಮ್ ರಮೇಶ್ ಕಾಂಗ್ರೆಸ್ಸಿನ ಪ್ರಥಮಾದ್ಯತೆಯ ಇಬ್ಬರು ಅಭ್ಯರ್ಥಿಗಳಾಗಿದ್ದು, ತನಗುಳಿದಿರುವ 31 ಮತಗಳ ಬೆಂಬಲದೊಂದಿಗೆ ರಾಮಮೂರ್ತಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಈ ಸ್ಥಾನ ಗೆಲ್ಲಲು 14 ಮತಗಳ ಕೊರತೆ ಇದ್ದು, ಚಲುವರಾಯಸ್ವಾಮಿ, ಜಮೀರ್ ಅಹಮದ್, ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ಪರ ವಾಲಿದ್ದಾರೆ. ಇದರಿಂದ ಕೆಂಡಮಂಡಲರಾಗಿರುವ ದೇವೇಗೌಡರು ಮತ್ತು ಕುಮಾರಸ್ವಾಮಿ ಒಂದೊಮ್ಮೆ ಪಕ್ಷದ ಶಾಸಕರು ವಿಪ್ ಉಲ್ಲಂಘಿಸಿದ್ದೇ ಆದಲ್ಲಿ, ಚುನಾವಣೆ ನಂತರ ಅವರನ್ನು ಪಕ್ಷದಿಂದ ಹೊರಹಾಕುವ ಚಿಂತನೆಯಲ್ಲಿದ್ದಾರೆ. ಅಲ್ಲಿಗೆ ಜೆಡಿಎಸ್ ಮತ್ತೊಂದು ವಿಘಟನೆಗೆ ಸಜ್ಜಾದಂತಾಗಿದೆ.

ವಿಧಾನಸಭೆ, ವಿಧಾನ ಪರಿಷತ್, ನಾನಾ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮನಬಂದವರಿಗೆ ಟಿಕೆಟ್ ನೀಡಲಾಯಿತು ಎಂಬ ಕೊರಗಿನಿಂದ ಚಲುವರಾಯಸ್ವಾಮಿ, ಜಮೀರ್ ಅವರ ಟೀಮ್ ಹೊರಬರಲಿಲ್ಲ. ಅವರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನವನ್ನು ಗೌಡರಾಗಲಿ, ಕುಮಾರಸ್ವಾಮಿ ಅವರಾಗಲಿ ಮಾಡಲಿಲ್ಲ. ಅದಕ್ಕೆ ಅವರು ನೀಡುವ ಕಾರಣ – ಚಲುವರಾಯ ಸ್ವಾಮಿ ಮತ್ತು ಜಮೀರ್ ಟೀಮ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಷಾಮೀಲಾಗಿದೆ. ಅವರ ಅಣತಿಯಂತೆ ರಾಜಕೀಯ ಹೆಜ್ಜೆಗಳನ್ನು ಇಡುತ್ತಿದೆ. ಇವರನ್ನು ಜತೆಗಿಟ್ಟುಕೊಂಡು ಸಿದ್ದರಾಮಯ್ಯ ಪಕ್ಷ ಒಡೆಯಲು ಹುನ್ನಾರ ಮಾಡುತ್ತಿದ್ದಾರೆ. ಅಂಥವರ ಜತೆ ಕೈಜೋಡಿಸಿರುವ, ಮೃದು ಧೋರಣೆ ಹೊಂದಿರುವವರ ಜತೆ ಮಾತುಕತೆ ನಡೆಸುವ ಪ್ರಮೇಯವಾದರೂ ಏನು ಎಂಬುದು.

ನಮ್ಮ ಆದ್ಯತೆ 2018 ರ ವಿಧಾನಸಭೆ ಚುನಾವಣೆಯೇ ಹೊರತು ಬೇರೇನೂ ಅಲ್ಲ. ಈಗ ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆ ಬಂದಿದೆ. ಅದು ಮುಗಿಯಲಿ. ಅಷ್ಟರಲ್ಲಿ ಯಾರು, ಯಾರು, ಏನು, ಏನು ಎಂಬುದು ಗೊತ್ತಾಗುತ್ತದೆ. ನಮಗಷ್ಟೇ ಅಲ್ಲ, ಜನರಿಗೂ. ಮುಂದಿನ ಚುನಾವಣೆಯಲ್ಲಿ ಅವರೇ ಸರಿಯಾದ ಪಾಠ ಕಲಿಸುತ್ತಾರೆ ಎನ್ನುತ್ತದೆ ಗೌಡರ ಪಾಳೆಯ.

ಅದರೆ ಭಿನ್ನಪಾಳೆಯದ ವಾದವೇ ಬೇರೆ. ಪಕ್ಷದಿಂದ ಅಮಾನತಾದರೂ ಮಾಡಲಿ, ಹೊರಹಾಕುವುದಾದರೆ ಹಾಕಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ಪಕ್ಷದಲ್ಲಿ ಇದ್ದು ಮಾಡುತ್ತಿರುವುದು ಅಷ್ಟರಲ್ಲಿಯೇ ಇದೆ. ಈಗಲೂ ಒಂದು ರೀತಿ ಪಕ್ಷದಿಂದ ಹೊರಗೇ ಇದ್ದೇವೆ. ಅದಕ್ಕೆ ಅಧಿಕೃತ ಮುದ್ರೆ ಬೀಳುವುದಾದರೆ ಬೀಳಲಿ. ಗೊಂದಲ ಮನಸ್ಥಿತಿಯಲ್ಲಿ ಮುಂದುವರಿಯುವುದು ನಮಗೂ ಬೇಕಿಲ್ಲ. ಎಷ್ಟೋ ಬಾರಿ ದೇವೇಗೌಡರೇ ಹೇಳಿದ್ದಾರೆ. ಪಕ್ಷದಲ್ಲಿ ಇದ್ದವರು ಇರಲಿ, ಹೋಗುವವರು ಹೋಗಲಿ ಎಂದು. ಹಾಗೆಂದು ನಾವಾಗಿಯೇ ಪಕ್ಷದಿಂದ ಹೊರಹೋಗುವುದಿಲ್ಲ. ಬೇಕಿದ್ದರೆ ಅವರೇ ಹೊರಹಾಕಲಿ ಎನ್ನುವುದು ಭಿನ್ನಪಾಳೆಯದ ಹಠವಾದ.

ಅಲ್ಲಿಗೆ ಒಂದು ವಿಚಾರ ದೃಢಪಟ್ಟಿದೆ. ಇಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸು ಯಾರಿಗೂ ಇದ್ದಂತಿಲ್ಲ. ಬದಲಿಗೆ ಅದನ್ನು ಸದಾ ಪ್ರತಿಷ್ಠೆಯ ಕಣ್ಣಿನಿಂದಲೇ ಅಳೆಯಲಾಗುತ್ತಿದೆ. ಹೀಗಾಗಿ ಅದೀಗ ಮತ್ತಷ್ಟು ಉಲ್ಬಣಗೊಂಡಿದೆ.

ಜೆಡಿಎಸ್ ಒಳಗುದಿ ಸದ್ಬಳಕೆ ಮಾಡಿಕೊಳ್ಳಲು ಹೊರಟಿರುವ ಸಿದ್ದರಾಮಯ್ಯನವರ ತಂಡ ಕಾಂಗ್ರೆಸ್ ಪ್ರಾಯೋಜಿತ ಅಭ್ಯರ್ಥಿಗೆ ಮತ ಹಾಕುವ ಜೆಡಿಎಸ್ ಹಾಗೂ ಪಕ್ಷೇತರ ಶಾಸಕರ ಸಂಖ್ಯೆ ವೃದ್ಧಿಗೆ ನಾನಾ ಭರವಸೆಗಳ ಮೊರೆ ಹೋಗಿದೆ. ಶಾಸಕರ ಕ್ಷೇತ್ರಾಭಿವೃದ್ಧಿಗೆ ಕೋಟ್ಯಂತರ ರುಪಾಯಿ ಅನುದಾನದ ಜತೆಗೆ ವ್ಯಕ್ತಿಗತ ಲಾಭದ ಆಮೀಷವೂ ಇದರಲ್ಲಿದೆ. ಹಾಗೇ ನೋಡಿದರೆ ಅದು ರಾಜ್ಯಸಭೆ ಇರಲಿ ಅಥವಾ ವಿಧಾನ ಪರಿಷತ್ ಚುನಾವಣೆಯೇ ಇರಲಿ, ಪಕ್ಷದ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಪ್ರತಿಭೆ, ನಾನಾ ಕ್ಷೇತ್ರಗಳಲ್ಲಿನ ಸೇವೆ, ಗೌರವ-ಘನತೆಗಿಂತ ಧನವೇ ಮಾನದಂಡ. ಇದಕ್ಕೆ ಯಾವುದೇ ಪಕ್ಷವೂ ಹೊರತಲ್ಲ. ಅದರಲ್ಲೂ ಕೊರತೆ ಮತಗಳನ್ನು ತುಂಬುವ ಬೇರೆ-ಬೇರೆ ಪಕ್ಷಗಳ ಶಾಸಕರಿಗೆ ಇದೊಂದು ಲಾಟರಿ ಯೋಜನೆಯೇ ಸರಿ. ಈಗ ಇಂಥದೊಂದು ಸನ್ನಿವೇಶ ಒದಗಿ ಬಂದಿದೆ. ಈ ಸನ್ನಿವೇಶ ಬಳಕೆಗೆ ಭಿನ್ನಮತವೇ ಜೆಡಿಎಸ್ ಅಸ್ತ್ರ ಆಗಿರುವುದು ಈ ಪಕ್ಷದ ದುರಂತವೇ ಸರಿ.

Leave a Reply