ಸ್ಪರ್ಧಿಸದಿದ್ದರೂ ನಾರಾಯಣಸಾಮಿಗೆ ಸಿಕ್ತು ಪುದುಚೆರಿ ಮುಖ್ಯಮಂತ್ರಿ ಪಟ್ಟ, ಇಲ್ಲಿರೋದು ಸ್ವಾಮಿನಿಷ್ಠೆಯ ಗುಟ್ಟಾ?

ಡಿಜಿಟಲ್ ಕನ್ನಡ ಟೀಮ್

ಡಿಎಂಕೆ ಜತೆಗಿನ ಮೈತ್ರಿಯಲ್ಲಿ ಕೇಂದ್ರಾಡಳಿತದ ಪುದುಚೆರಿ ವಿಧಾನಸಭೆಯನ್ನು ಗೆದ್ದಿದ್ದ ಕಾಂಗ್ರೆಸ್, ಅಲ್ಲೀಗ ಮಾಜಿ ಸಚಿವ ವಿ. ನಾರಾಯಣಸಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದೆ.

ಕಾಂಗ್ರೆಸ್ ಹೈಕಮಾಂಡಿನಿಂದ ಈ ಘೋಷಣೆಯಾಗುತ್ತಿದ್ದಂತೆಯೇ ನಮಸ್ಸಿವಾಯಂ ನೇತೃತ್ವದ ಗುಂಪು ಬೀದಿಗಿಳಿದು ಪ್ರತಿಭಟನೆ ಮಾಡಿತು. ದ ಹಿಂದು ಪತ್ರಿಕೆ ವರದಿ ಪ್ರಕಾರ  ಈ ಪ್ರತಿಭಟನೆಯಲ್ಲಿ ಸುಮಾರು 10 ಬಸ್ಸುಗಳಿಗೆ ಹಾನಿಯಾಗಿದೆ. ಜನರು ಬವಣೆ ಅನುಭವಿಸಿದ್ದಾರೆ. ಈ ಪ್ರತಿಭಟನಾಕಾರರನ್ನು ಚದುರಿಸಲು ಪೋಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಿದ್ದಾರೆ.

ಇವರ ಅಧಿಕಾರ ಚೌಕಾಶಿಗೆ ಸಾರ್ವಜನಿಕರ ಆಸ್ತಿಹಾನಿ ಖಂಡನೀಯ. ಆದರೆ ಈ ಆಕ್ರೋಶ ಒಡೆದಿದ್ದೇಕೆ? ಏಕೆಂದರೆ ಶೀಲಾ ದಿಕ್ಷಿತ್ ಉಸ್ತುವಾರಿಯಲ್ಲಿ ಯಾವ ನಾರಾಯಣಸಾಮಿಯವರನ್ನು ಈಗ ಮುಖ್ಯಮಂತ್ರಿ ಎಂದು ಘೋಷಿಸಲಾಗುತ್ತಿದೆಯೋ ಅವರು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗುವ ಮಾತು ದೂರ ಉಳಿಯಿತು. ಮಾಜಿ ಮುಖ್ಯಮಂತ್ರಿ ವಿ. ವೈಥಿಲಿಂಗಮ್ ಹಾಗೂ ಎ. ನಮಸ್ಸಿವಾಯಂ ಮುಖ್ಯಮಂತ್ರಿ ಹುದ್ದೆ ಪೈಪೋಟಿಯಲ್ಲಿದ್ದರು. 30 ವಿಧಾನಸಭೆ ಸ್ಥಾನಗಳ ಪೈಕಿ 17 ಗೆದ್ದು ಸರಳ ಬಹುಮತ ಸಾಧಿಸಿರುವ ಕೂಟದಲ್ಲಿ ಈಗ ಯಾರಾದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿಯಾಗಲಿರುವ ನಾರಾಯಣಸಾಮಿಯವರನ್ನು ಗೆಲ್ಲಿಸಬೇಕು. ಪ್ರಾರಂಭದಿಂದಲೂ ರೇಸಿನಲ್ಲೇ ಇರದ ನಾರಾಯಣಸಾಮಿ ಈಗ ಹೈಕಮಾಂಡಿನ ಜತೆ ಲಾಬಿ ಮಾಡಿ ಮುಖ್ಯಮಂತ್ರಿ ಪದವಿ ತಮ್ಮದಾಗಿಸಿಕೊಳ್ಳುತ್ತಿರುವುದಕ್ಕೆ ಸ್ವಪಕ್ಷೀಯರ ಆಕ್ರೋಶ.

ಅಂಥ ಭಿನ್ನಾಭಿಪ್ರಾಯವೇನಿಲ್ಲ, ಎಲ್ಲವೂ ಸರಿಯಾಗಿದೆ ಎಂದು ವೈಥಿಲಿಂಗಮ್ ಸಮಜಾಯಿಷಿ ನೀಡಿದ್ದಾರೆ.

narayanasamyಕೊನೆಗೂ ನಾರಾಯಣಸಾಮಿ ಅದೃಷ್ಟ ಗಮನಿಸಿದಾಗ 2015ರ ಚಿತ್ರವೊಂದು ನೆನಪಿಗೆ ಬರುತ್ತದೆ. ಪುದುಚೆರಿಯ ಪ್ರವಾಹ ಸಂತ್ರಸ್ತರ ಸ್ಥಿತಿಗತಿ ವೀಕ್ಷಣೆಗೆ ಬಂದ ರಾಹುಲ್ ಗಾಂಧಿಯವರಿಗೆ ನಾರಾಯಣಸಾಮಿ ಚಪ್ಪಲ್ಲಿ ಕೈಲೆತ್ತಿ ಕೊಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಪ್ರಾರಂಭದಲ್ಲಿ ನಾರಾಯಣಸಾಮಿಯಂಥ ಹಿರಿ ಮನುಷ್ಯ ರಾಹುಲ್ ಗಾಂಧಿ ಚಪ್ಪಲ್ಲಿ ಹಿಡಿಯಬೇಕಾಯ್ತೇ ಎಂಬ ಪ್ರಶ್ನೆ ಎದ್ದಿತ್ತು. ನಂತರ ನಾರಾಯಣಸಾಮಿಯೇ ಅದಕ್ಕೆ ಸ್ಪಷ್ಟನೆ ನೀಡಿ ವಾಸ್ತವ ವಿವರಿಸಿದ್ದರು- ‘ಅದು ನನ್ನದೇ ಚಪ್ಪಲ್ಲಿ. ರಾಹುಲ್ ಗಾಂಧಿ ಶೂ ಹಾಕಿ ಬಂದಿದ್ದರಿಂದ ನೀರಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹೀಗಾಗಿ ನಾನೇ ಸೌಜನ್ಯಕ್ಕಾಗಿ ನನ್ನ ಚಪ್ಪಲ್ಲಿ ಬಿಚ್ಚಿಕೊಟ್ಟೆ. ನಂತರ ಪಕ್ಷದ ಕಾರ್ಯಕರ್ತ ಕೊಟ್ಟ ಇನ್ನೊಂದು ಜತೆ ಚಪ್ಪಲ್ಲಿ ಹಾಕಿ ನಾನೂ ಜತೆ ತೆರಳಿದೆ..’

ಇಂತಿಪ್ಪ ನಾರಾಯಣಸಾಮಿಯವರ ಸ್ವಾಮಿನಿಷ್ಠೆಗೆ ಪುದುಚೆರಿ ಮುಖ್ಯಮಂತ್ರಿ ಪಟ್ಟದ ರೂಪದಲ್ಲಿ ಪ್ರತಿಫಲ ಸಿಕ್ಕಿದೆ.

Leave a Reply