ತಿಮಿಂಗಿಲಗಳಿಗೇಕೆ ತೀರದಲ್ಲಿ ಸಾಯುವ ಬಯಕೆ, ನಮ್ಮ ಪಾಪ ಅವಕ್ಕೆ ಶಾಪ

author-ananthramuಎಲ್ಲಾದರೂ ಆಕ್ಸಿಡೆಂಟ್ ಆದಾಗ ಪೋಲಿಸರು ಬರುವ ಮೊದಲೇ ಜನ ಜಮಾಯಿಸಿರುತ್ತಾರೆ. ವಿಮಾನವೊಂದು ತೀರ ಕೆಳಮಟ್ಟದಲ್ಲಿ ಹಾರಾಡಿದರೆ ಅದೆಷ್ಟು ಜನ ತಲೆಯೆತ್ತಿ ನೋಡುವಿದಿಲ್ಲ? ರೌಡಿಯೊಬ್ಬ ಅಮಾಯಕನನ್ನು ಚಚ್ಚುತ್ತಿದ್ದರೆ ಕುತೂಹಲದ ಕಣ್ಣಲ್ಲಿ ನೋಡುವವರೇ ಹೆಚ್ಚು. ಮನುಷ್ಯನ ಜೀನ್ಸ್ ನಲ್ಲೇ ಇದು ಬರೆದಿದೆ-ಹಿಂಸೆ, ಆನಂದ, ಉದ್ವೇಗ, ತಣ್ಣಗಿರುವುದು ಇವೆಲ್ಲ.

ಈ ವರ್ಷದ ಆರಂಭದಲ್ಲೇ ಮುಂಬೈನ ಜುಹೂ ಬೀಚ್ ಬಳಿ ಅಪರೂಪದ ಅತಿಥಿ ಬಂದಾಗ ನೋಡದಿರುವವರುಂಟೆ? ಜನ ಅಲ್ಲೂ ಜಮಾಯಿಸಿದ್ದರು. ಪೋಲಿಸರಿಗೆ ನಿಯಂತ್ರಿಸುವುದೇ ಸಾಕುಸಾಕಾಗಿತ್ತು. ಬೀಚ್‍ನಲ್ಲಿ ಬಂದ ಅತಿಥಿ ಬದುಕಿರಲಿಲ್ಲ. ಆದರೇನಂತೆ, ಅದು ತಿಮಿಂಗಿಲ-ಇಡೀ ಜೀವಿ ಜಗತ್ತಿನ ದೈತ್ಯ ಜೀವಿಗಳಲ್ಲಿ ಇದಕ್ಕೇ ಅಗ್ರಸ್ಥಾನ. ಈ ಬಾರಿ ಹೆಣವಾಗಿ ತೇಲಿದ್ದು ಒಂಬತ್ತು ಟನ್ ತೂಗುವ ತಿಮಿಂಗಿಲ. ಉದ್ದ ಬರೋಬ್ಬರಿ ಒಂಬತ್ತು ಮೀಟರ್. ಮೈಮೇಲೆ ಗಾಯವಿರಲಿಲ್ಲ, ಯಾವುದೇ ಸಾಗರಜೀವಿ (ಸಾಮಾನ್ಯವಾಗಿ ಷಾರ್ಕ್) ಅಟ್ಯಾಕ್ ಮಾಡಿದ ಗುರುತೂ ಇರಲಿಲ್ಲ. ಪೋಸ್ಟ್‍ಮಾರ್ಟ್‍ಂಗೆ ಫಾರೆಸ್ಟ್ ಆಫೀಸಿಗೆ ಒಯ್ಯಬೇಕಾಗಿತ್ತು. ಒಂದಲ್ಲ, ಎರಡು ಕ್ರೇನ್ ಬಳಸಬೇಕಾಯಿತು. ಜುಹು ಬೀಚ್‍ನಲ್ಲಿ ಸತ್ತು ತೇಲಿಬರುವ ತಿಮಿಂಗಿಲಗಳದ್ದು ಹೊಸ ಕಥೆಯೇನಲ್ಲ. ಕಳೆದ ವರ್ಷ ನೀಲ ತಿಮಿಂಗಿಲವೊಂದು ಇದೇ ಸ್ಥಿತಿಯಲ್ಲಿ ಬಂದು ದಫನ್ ಮಾಡಿಸಿಕೊಂಡಿತ್ತು. ಸತ್ತ ತಿಮಿಂಗಿಲಗಳನ್ನು ತೀರಕ್ಕೆ ತಳ್ಳಲು ಸಮುದ್ರದ ಅಲೆಗಳು ಅದೆಷ್ಟು ಶಕ್ತಿ ಹಾಕಬೇಕೋ.

ತಮಿಳುನಾಡಿನ ತೂತ್ತುಕುಡಿ ಬೀಚ್‍ನಲ್ಲಿ, ಅದಕ್ಕೆ ಒಂದು ವಾರದ ಹಿಂದೆಯಷ್ಟೇ ನೂರಕ್ಕೂ ಮಿಕ್ಕು ಪೈಲಟ್ ತಿಮಿಂಗಿಲಗಳು ವಿಲಿವಿಲಿ ಒದ್ದಾಡಿ ತೀರದಲ್ಲಿ ಬಿದ್ದಿದ್ದವು. ಆ ಪೈಕಿ 42 ತಿಮಿಂಗಿಲಗಳನ್ನು ಉಳಿಸಲೇ ಆಗಲಿಲ್ಲ. ಅರೆಜೀವವಿದ್ದವನ್ನು ಮರಳಿ ಸಮುದ್ರದ ಆಳಕ್ಕೆ ಬಿಡುವುದು ಸುಲಭವಲ್ಲ. ಒರಿಸ್ಸಾದ ಗಂಜಾಂ ಜಿಲ್ಲೆ ಮತ್ತು ಕೇಂದ್ರಾಪುರ ಜಿಲ್ಲೆಯ ಕಡಲ ತೀರದಲ್ಲೂ ಇದೇ ಕಥೆ. ಏಕೆ ತಿಮಿಂಗಿಲಗಳು ತೀರಕ್ಕೆ ಬರುತ್ತವೆ? ಅವು ನಿಜಕ್ಕೂ ಬುದ್ಧಿವಂತ ಜೀವಿಗಳೇ. ಮನುಷ್ಯನಂತೆ ಆತ್ಮಹತ್ಯೆ ಮಾಡಿಕೊಳ್ಳುವ ಇರಾದೆ ಅವಕ್ಕಿಲ್ಲ. ಇದೇನೂ ಭಾರತಕ್ಕೆ ಸೀಮಿತವಾದ ಘಟನೆಯಲ್ಲ. ಬ್ರಿಟನ್, ಆಸ್ಟ್ರೇಲಿಯ, ನ್ಯೂಜಿಲೆಂಡ್, ಉತ್ತರ ಸಮುದ್ರ, ಜರ್ಮನಿಯ ಅನೇಕ ತೀರ ಪ್ರದೇಶಗಳಲ್ಲಿ ತಿಮಿಂಗಿಲಗಳು ವರ್ಷ ವರ್ಷವೂ ತೇಲಿಬರುತ್ತವೆ. ಪ್ರಾಣಿಪ್ರಪಂಚದಲ್ಲಿ ತಿಮಿಂಗಿಲಗಳಿಗೆ ವಿಶಿಷ್ಟ ಸ್ಥಾನ. ಅದರಲ್ಲೂ ನೀಲ ತಿಮಿಂಗಿಲಗಳು 190 ಟನ್ನು ತೂಗುವುದುಂಟು. ಮರಿ ಹಾಕುವ ಸ್ತನಿಗಳು ಇವು. ಆಗತಾನೇ ಹುಟ್ಟಿದ ನೀಲ ತಿಮಿಂಗಿಲದ ಮರಿ ಮೂರು ಟನ್ನು ತೂಗುವುದುಂಟು. ಒಂದೂವರೆ ವರ್ಷದವರೆಗೆ ಪ್ರತಿದಿನ ತಾಯ ಮೊಲೆಯನ್ನು ಹೀರಿ 91 ಕಿಲೋ ಗ್ರಾಂ ಹಾಲು ಕುಡಿಯುತ್ತದಂತೆ.

whale1

ಜೀವಿವಿಜ್ಞಾನಿಗಳಿಗೂ ಈ ತಿಮಿಂಗಿಲಗಳ ಸಾವು ಗೊಂದಲ ತಂದಿದೆ. ಜರ್ಮನಿಯಲ್ಲಿ ಇದೇ ವರ್ಷ 13 ಸ್ಪರ್ಮ್ ತಿಮಿಂಗಿಲಗಳು ನಾರ್ಥ ಸೀ ಕೋಸ್ಟ್ ತೀರದಲ್ಲಿ ಕೊಚ್ಚಿಬಂದವು. ಸ್ಪರ್ಮ್ ತಿಮಿಂಗಿಲ ಅಂದರೆ ಅವುಗಳ ತಲೆಯಲ್ಲಿ ವೀರ್ಯಾಣುವಿರುತ್ತದೆ ಎಂದು ಭಾವಿಸಿ ತಪ್ಪಾಗಿ ಈ ಹೆಸರು ಕೊಟ್ಟಿದ್ದುಂಟು. ವಾಸ್ತವದಲ್ಲಿ ಅರೆದ್ರವ ಪದಾರ್ಥದ ಅಂಟು ಅವುಗಳ ತಲೆಯಲ್ಲಿರುತ್ತದೆ. ಅವುಗಳಲ್ಲಿ ಒಂದನ್ನು ಪೋಸ್ಟ್ ಮಾರ್ಟಂ ಮಾಡಿದಾಗ, ಶಾಕ್ ಕೊಡುವ ಅಂಶ ಹೊರಬಿತ್ತು. ಅದರ ಹೊಟ್ಟೆಯಲ್ಲಿ ಕಸವಿತ್ತು, 13 ಮೀಟರ್ ಉದ್ದದ ಸೀಗಡಿ ಹಿಡಿಯುವ ನೈಲಾನ್ ಬಲೆಯಿತ್ತು. ಕಾರ್ ಎಂಜಿನ್‍ಗೆ ಹೊದಿಸುವ ಪ್ಲಾಸ್ಟಿಕ್ ಕವರಿತ್ತು. ಪ್ಲಾಸ್ಟಿಕ್ ಬಕೆಟ್ಟಿತ್ತು. ಪಾಪ, ತಿಮಿಂಗಿಲಗಳಿಗೇನು ಗೊತ್ತು? ಇವು ಹೊಸ ತಿನಿಸು ಎಂದು ತಿಂದಿದ್ದವು. ನಮ್ಮ ನಾಗರಿಕ ಜೀವನ ಸಾಗರ ಜೀವಿಗಳಿಗೆ ಹೇಗೆ ಮಾರಕವಾಗಿದೆ ಎಂಬುದಕ್ಕೆ ಇದು ಕನ್ನಡಿ ಹಿಡಿದಿತ್ತು. ಇದೊಂದೆ ಅಲ್ಲ, ನಮ್ಮ ತಂತ್ರಜ್ಞಾನದ ಅನೇಕ ಪರಿಕರಗಳು ತಿಮಿಂಗಿಲಗಳನ್ನು ಕೊಲ್ಲುತ್ತಿವೆ. ನೇವಿಗಳಲ್ಲಿ ಆಗಾಗ ಯುದ್ಧಕೌಶಲ ಕುರಿತು ಎಲ್ಲ ದೇಶಗಳೂ ಕವಾಯತು ಮಾಡುತ್ತವೆ. ಬಹುತೇಕ ವೇಳೆ ಸ್ಫೋಟಕಗಳು ಬಳಕೆಯಾಗುತ್ತವೆ. ಅತಿಶಕ್ತಿಯ ಸೋನಾರ್ ಬಳಕೆಯಾಗುತ್ತದೆ. ಈ ಶಬ್ದವನ್ನು ತಾಳಿಕೊಳ್ಳುವ ಶಕ್ತಿ ತಿಮಿಂಗಿಲಗಳಿಗಿಲ್ಲ. ವಾಸ್ತವವಾಗಿ ಮೇಲು ಸ್ವರದ ಸೀಟಿ ಹೊಡೆದು ಅವು ಒಂದಕ್ಕೊಂದು ಸಂಪರ್ಕ ಕಲ್ಪಿಸಿಕೊಳ್ಳುತ್ತವೆ. ಈ ಸೀಟಿಯ ಶಬ್ದ ಕೆಲವೊಮ್ಮೆ ಐದು ಕಿಲೋ ಮೀಟರ್ ದೂರದವರೆಗೂ ಕೇಳಿಬರುತ್ತಂತೆ. ನಮ್ಮ ಈ ಕೃತ್ಯದಿಂದ ಅವುಗಳ ಶಬ್ದ ಸಂಪರ್ಕದ ಜಾಲವೇ ಕಡಿದುಹೋಗುತ್ತದೆ. ತೀರ ಪ್ರದೇಶದಲ್ಲಿ ತೈಲ ಮತ್ತು ಅನಿಲಕ್ಕಾಗಿ ಕೊರೆಯುವಾಗ ಹೊರಡುವ ಎಂಜಿನ್ ಸೌಂಡ್, ಇದರ ಜೊತೆಗೆ ಕೆಲವೊಮ್ಮೆ ಆಳ ಸಾಗರದಲ್ಲಿ ಸ್ಫೋಟಿಸುವ ಜ್ವಾಲಾಮುಖಿಗಳು ಮತ್ತು ಸಂಭವಿಸುವ ಭೂಕಂಪನಗಳು ತಿಮಿಂಗಿಲಗಳ ಯಾನದ ದಿಕ್ಕನ್ನೇ ಬದಲಾಯಿಸುವಷ್ಟು ಗೊಂದಲವನ್ನುಂಟುಮಾಡುತ್ತವೆ. ಆಗ ಅವಕ್ಕೆ ಅರಿವಿಲ್ಲದೆ ತೀರಕ್ಕೆ ಬರುತ್ತವೆ, ತಮ್ಮ ದೇಹ ತೇಲುವಷ್ಟು ಆಳದ ನೀರು ಇಲ್ಲದಿದ್ದಾಗ ವಿಲಿವಿಲಿ ಒದ್ದಾಡುತ್ತವೆ, ಅಲ್ಲೇ ಜಲಸಮಾಧಿಯಾಗುತ್ತವೆ.

ಇತ್ತೀಚೆಗೆ ಸಾಗರದ ಪಾಚಿ ಭರ್ಜರಿಯಾಗಿ ಬೆಳೆದಿರುವುದನ್ನು ಉಪಗ್ರಹಗಳು ಸೆರೆಹಿಡಿದಿವೆ. ದೊಡ್ಡ ಪ್ರಮಾಣದ ಪಾಚಿ ಬೆಳೆಯಿತೆಂದರೆ ತಿಮಿಂಗಿಲಗಳಿಗೆ ಬೇಕಾದ ಆಕ್ಸಿಜನ್ ಪೂರೈಕೆಗೆ ತಡೆಯಾಗುತ್ತದೆ. ಈಗ ಎಲ್ಲೆಲ್ಲೂ ಜಾಗತಿಕ ಉಷ್ಣತೆಯ ಮಾತು. ದೀರ್ಘಕಾಲ ಒಂದು ನಿರ್ದಿಷ್ಟ ಉಷ್ಣತೆಗೆ ಹೊಂದಿಕೊಂಡ ತಿಮಿಂಗಿಲಗಳಿಗೆ ಈ ಉಷ್ಣತೆಯ ಏರುಪೇರು ಮತ್ತೆ ಗಲಿಬಿಲಿ ಮಾಡುತ್ತದೆ. ಅವುಗಳ ನೆಲೆಯ ಬಗ್ಗೆ ಅವಕ್ಕೆ ಕನ್‍ಫ್ಯೂಷನ್. ಹೀಗಾಗಿ ಯಾವ ತೀರದತ್ತ ನುಗ್ಗುತ್ತವೋ ಅವಕ್ಕೇ ತಿಳಿಯುವುದಿಲ್ಲ ಎನ್ನುತ್ತಾರೆ ತಜ್ಞರು. ಇದೂ ಸಾಲದೆಂಬಂತೆ ನಾವು ಸಮುದ್ರಕ್ಕೆ ಬಿಡುತ್ತಿರುವ ರಸಗೊಬ್ಬರದ ರೊಚ್ಚು ‘ರೆಡ್‍ಟೈಡ್’ ಎಂಬ ವಿಚಿತ್ರ ಸ್ಥಿತಿಯನ್ನು ಉಂಟುಮಾಡುತ್ತದೆ. ಆಗಲೂ ತಿಮಿಂಗಿಲಗಳು ದಿಕ್ಕುತಪ್ಪುತ್ತವೆ ಎಂದು ಚಿಲಿಯ ವೇಲ್ ಪಂಡಿತರು ಹೇಳುತ್ತಿದ್ದಾರೆ.

ಪೈಲಟ್ ವೇಲ್ ಎಂಬ ಒಂದು ಬಗೆಯ ತಿಮಿಂಗಿಲ ತಮ್ಮ ಲೀಡರ್ ಎಲ್ಲಿ ಹೋಗುತ್ತಾನೋ ಅವನನ್ನು ಹಿಂಬಾಲಿಸುವ ಚಾಳಿ ಬೆಳೆಸಿಕೊಂಡಿವೆ. ಒಂದುವೇಳೆ ಆ ಲೀಡರ್ಗೆ ಯಾವುದೋ ರೋಗವಿದ್ದು, ಯಾನದಲ್ಲಿ ನಿಯಂತ್ರಣ ಕಳೆದುಕೊಂಡರೆ, ಅದು ಹೋಗಿದ್ದೇ ದಾರಿ. ಅಂತಿಮವಾಗಿ ಇವೂ ಫಾಲೋ ಮಾಡಿ ತೀರದಲ್ಲಿ ಸಾಮೂಹಿಕವಾಗಿ ಗೊಟಕ್ ಎನ್ನುತ್ತವೆ. ತಿಮಿಂಗಿಲಗಳಿಗೇನೂ ಜಿ.ಪಿ.ಎಸ್. ಬೇಕಾಗಿಲ್ಲ ತಮ್ಮ ಯಾನಕ್ಕೆ. ಆದರೆ ಯಾನ ತಪ್ಪಿಸಲು ಇಂಥ ನೂರೆಂಟು ಉಪದ್ರವಗಳಿವೆ. ಸಾಗರ ನೌಕಾಯಾನ ಎರಡನೇ ಮಹಾಯುದ್ಧದ ನಂತರ ಬಹು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಎಷ್ಟೋ ವೇಳೆ ಹಡುಗುಗಳಿಗೆ ಡಿಕ್ಕಿ ಹೊಡೆದು ತಮ್ಮ ಯಾನದ ಗುರಿ ಕಳೆದುಕೊಂಡು ಅಂಡಲೆಯುವ ತಿಮಿಂಗಿಲಗಳ ಕಥೆಯನ್ನು ಯಾರೂ ಹೊರಹಾಕಲು ಇಷ್ಟಪಡುವುದಿಲ್ಲ. ಮನುಷ್ಯನ ಲಾಲಸೆ ಎಂಥ ಹೇಯ ಕೃತ್ಯಕ್ಕಾದರೂ ಇಳಿಸುತ್ತದೆ. ಹಲ್ಲಿರುವ ತಿಮಿಂಗಿಲಗಳು ಹೆಣವಾಗಿ ತೇಲುತ್ತ ಬಂದಾಗ ಅವುಗಳ ಹಲ್ಲನ್ನು ಗರಗಸದಿಂದ ಕೊಯ್ದು ಟ್ರೋಫಿ ಮಾಡಲು ಒಯ್ಯುವ ಕದೀಮರೂ ಇದ್ದಾರೆ. ಬ್ರಿಟನ್ನಿನ ತೀರದಲ್ಲಂತೂ ಇದೊಂದು ದೊಡ್ಡ ದಂಧೆಯಾಗಿ ಕೋಸ್ಟ್ ಗಾರ್ಡ್ ನೌಕೆಗಳು ಅಂತಹವರ ಮೇಲೆ ಕಣ್ಣಿಡುತ್ತಿವೆ. ಸತ್ತ ತಿಮಿಂಗಿಲಗಳ ಹೊಟ್ಟೆಯಲ್ಲಿ ಮೀಥೇನ್ ಯಥೇಚ್ಛವಾಗಿ ಸೇರಿ ಇನ್ನಷ್ಟು ಊದಿಕೊಳ್ಳುವುದುಂಟು. ಪೋಸ್ಟ್ ಮಾರ್ಟಂ  ಮಾಡುವಾಗ ಅದು ಬಾಂಬಿನಂತೆ ಸಿಡಿದು ಸರ್ಜರಿ ಮಾಡುತ್ತಿದ್ದವರೇ ತಬ್ಬಿಬ್ಬಾಗಿದ್ದಾರೆ. ತಿಮಿಂಗಿಲಗಳ ಸಾವಿಗೆ ಮರುಗುವವರೂ ಇದ್ದಾರೆ. ಅವುಗಳ ದೇಹದ ಮೇಲೆ ಇದು `ಫುಕುಷಿಮಾ ಸೀಳಿದ್ದರ ಫಲ’ ಎಂದೋ, `ಮಾನವನ ಪೈಶಾಚಿಕ ಪ್ರವೃತ್ತಿ’ ಎಂದೋ ಬರೆದು ತಮ್ಮ ನೋವನ್ನು ತೋಡಿಕೊಂಡವರೂ ಉಂಟು. `ಅರೆರೇ, ತಿಮಿಂಗಿಲ ಸತ್ತು ಬಿದ್ದಿದೆಯಂತೆ. ಇದೊಂದು ವಿಶೇಷ ಅವಕಾಶ ಬನ್ನಿ ಸೆಲ್ಫೀ ತೆಗೆದುಕೊಳ್ಳೋಣ’ ಎಂದು ದೌಡಾಯಿಸುವ ಮಂದಿ ಇತ್ತೀಚೆಗೆ ಹೆಚ್ಚಿದ್ದಾರೆ.

whale4

ಸದ್ಯಕ್ಕೆ ಬೇಕು ತಿಮಿಂಗಿಲಗಳ ನಿಜವಾದ ಸಂಕಟವನ್ನು ಅರ್ಥಮಾಡಿಕೊಳ್ಳುವ ಮನುಷ್ಯರು. ಅರ್ಜೆಂಟಾಗಿ ಬೇಕು ಬರೀ ಪ್ರಕೃತಿಯನ್ನೇ ದೂಷಿಸುತ್ತ ಬಚಾವಾಗಲು ಪ್ರಯತ್ನಿಸುವವರನ್ನು ಹಿಡಿದು ನಿಲ್ಲಿಸುವ ಶೆರ್ಲಾಕ್ ಹೋಂಗಳು. ತಿಮಿಂಗಿಲಗಳನ್ನು ಕೊಲ್ಲುವುದು ಅಪರಾಧ. ಆದರೆ ಪರೋಕ್ಷವಾಗೂ ಕೊಲ್ಲುತ್ತಿದ್ದೇವಲ್ಲ!

Leave a Reply