ಎಗರಾಡಿದ ವೆಂಕಯ್ಯ ಕೊನೆಗೂ ಕರ್ನಾಟಕದಿಂದ ಎತ್ತಂಗಡಿ, ಆಂಧ್ರದವರೇ ಆದ ನಿರ್ಮಲಾ ಸೀತಾರಾಮನ್ ಹೊಸ ಅಂಗಡಿ!

ಡಿಜಿಟಲ್ ಕನ್ನಡ ಟೀಮ್:
ಕನ್ನಡಿಗರ ಆಕ್ರೋಶಕ್ಕೆ ಬೆಲೆ ಕೊಟ್ಟಿರುವ ಬಿಜೆಪಿ ವರಿಷ್ಠರು ರಾಜ್ಯಸಭೆ ಚುನಾವಣೆಗೆ ಕೇಂದ್ರ ಸಚಿವ ವೆಂಕಯ್ಯನಾಯ್ಡು ಉಮೇದುವಾರಿಕೆಯನ್ನು ಕರ್ನಾಟಕದಿಂದ ರಾಜಸ್ತಾನಕ್ಕೆ ಒಗಾಯಿಸಿದ್ದಾರೆ. ಅವರ ಬದಲು ಆಂಧ್ರ ಪ್ರದೇಶದವರೇ ಆದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಇಲ್ಲಿಂದ ಕಣಕ್ಕಿಳಿಯಲಿದ್ದಾರೆ.
ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರೋಧ ಲೆಕ್ಕಿಸದೆ ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಿದ್ದು, ಸೋಮಣ್ಣ ಮತ್ತೊಂದು ಅವಧಿಗೆ ಮುಂದುವರಿಯಲಿದ್ದಾರೆ.
ಬಿಜೆಪಿ ಕೇಂದ್ರ ಚುನಾವಣೆ ಸಮಿತಿಯು ನಾನಾ ರಾಜ್ಯಗಳ ವಿಧಾನಸಭಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ 12 ಹಾಗೂ ಮೇಲ್ಮನೆಯ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ವೆಂಕಯ್ಯನಾಯ್ಡು ಕರ್ನಾಟಕದಿಂದ ಎತ್ತಂಗಡಿಯಾಗಿದ್ದಾರೆ.
ಕರ್ನಾಟಕದಿಂದ ಸತತ ಮೂರು ಬಾರಿ ರಾಜ್ಯಸಭೆ ಪ್ರತಿನಿಧಿಸಿದ್ದ ವೆಂಕಯ್ಯ ಅವರು ರಾಜ್ಯದ ಬಗ್ಗೆ ಯಾವತ್ತಿಗೂ ಹಿತಚಿಂತನೆ ಮಾಡಿರಲಿಲ್ಲ. ರಾಜ್ಯಸಭೆಯಲ್ಲಿ ನಾಡು-ನುಡಿ, ಜಲ ಮತ್ತಿತರ ವಿಚಾರಗಳು ಬಂದಾಗ ಕರ್ನಾಟಕದ ಪರ ಮಾತನಾಡದೆ ಸ್ಥಿತಪ್ರಜ್ಞತೆ ಮೆರೆದಿದ್ದರು. ಇದು ಸಹಜವಾಗಿಯೇ ಕನ್ನಡಿಗರಲ್ಲಿ ರೋಷ ಮೂಡಿಸಿತ್ತು. ಈ ಚುನಾವಣೆ ವಿಚಾರ ಪ್ರಸ್ತಾಪ ಆದ ದಿನದಿಂದಲೇ ವೆಂಕಯ್ಯ ವಿರುದ್ಧ ಎದ್ದಿದ್ದ ಕನ್ನಡಿಗರು, ನಾನಾ ಸಂಘಟನೆಗಳ ಆಕ್ರೋಶಕ್ಕೆ ಮಾಧ್ಯಮಗಳೂ ಧ್ವನಿಯಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಂತೂ ವೆಂಕಯ್ಯ ಸಾಕಯ್ಯ ಅಭಿಯಾನ ವ್ಯಾಪಕವಾಗಿತ್ತು.
ಇಷ್ಟೆಲ್ಲ ಆದರೂ ವೆಂಕಯ್ಯ ಉಡಾಫೆ ಮೆರೆದಿದ್ದರು. ದೇಶದ ಯಾವುದೇ ಭಾಗದಿಂದ ಸ್ಪರ್ಧಿಸುವ ಹಕ್ಕು ತನಗಿದೆ.ಮತದಾರರ ಬೇಕಿದ್ದರೆ ನನ್ನನ್ನು ತಿರಸ್ಕರಿಸಲಿ ಎಂದೆಲ್ಲ ಆಹಂಕಾರದಿಂದ ಮಾತಾಡಿದ್ದರು. ವಿರೋಧ ಲೆಕ್ಕಿಸದೆ ಶನಿವಾರವೇ ನಾಮಪತ್ರ ಸಲ್ಲಿಕೆಗೂ ಮುಂದಾಗಿದ್ದರು. ಆದರೆ ಕನ್ನಡ ನಾಡಿನ ತುಡಿತಕ್ಕೆ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವೆಂಕಯ್ಯ ಅವರನ್ನು ವಾಪಸ್ಸು ಕರೆಸಿಕೊಂಡು, ಇದೀಗ ರಾಜಸ್ತಾನದಿಂದ ಟಿಕೆಟ್ ನೀಡಿದ್ದಾರೆ. ಆ ಮೂಲಕ ಬಿಜೆಪಿ ವರಿಷ್ಠರು ಕನ್ನಡಿಗರ ಮನ ಗೆದ್ದಿದ್ದಾರೆ.
ಮತ್ತೊಂದು ನಡೆಯಲ್ಲಿ ವಿ. ಸೋಮಣ್ಣ ಅವರನ್ನು ಮೇಲ್ಮನೆ ಅಭ್ಯರ್ಥಿ ಮಾಡಲಾಗಿದೆ. ಹಿಂದಿನ ಭಾನುವಾರ ನಡೆದಿದ್ದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ವಿರೋಧಿಸಿದ್ದರೆ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ಮುಖಂಡ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಹಿಂದಿನ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಬೆಂಬಲಿಸಿದ್ದರು. ಭಾರತೀಯ ಮಜ್ದೂರ್ ಸಂಘದ ಸದಾಶಿವ ಅಥವಾ ಬಿಜೆಪಿ ನಗರಾಧ್ಯಕ್ಷ ಸುಬ್ಬ ನರಸಿಂಹ ಅವರಿಗೆ ಟಿಕೆಟ್ ಕೊಡಬೇಕು ಎನ್ನುವುದು ಯಡಿಯೂರಪ್ಪ ನಿಲುವಾಗಿತ್ತು. ಆದರೆ ಬಹುನಾಯಕರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿರುವ ವರಿಷ್ಠರು ಯಡಿಯೂರಪ್ಪನವರ ದ್ವೇಷ ರಾಜಕೀಯಕ್ಕೆ ಬ್ರೇಕ್ ಹಾಕಿದ್ದಾರೆ. 17 ಮತಗಳ ಕೊರತೆ ಇರುವ ಎರಡನೇ ಅಭ್ಯರ್ಥಿ ಆಗಲು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಲೆಹರ್ ಸಿಂಗ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಜತೆ ಕೈಜೋಡಿಸಲು ಒಪ್ಪಿರುವ ದೇವೇಗೌಡರ ಒಲವು ಕಟ್ಟಾ ಅವರ ಕಡೆಗಿದೆ.
ಬಿಜೆಪಿ ಕೇಂದ್ರ ಚುನಾವಣೆ ಆಯೋಗ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ರಾಜ್ಯಸಭೆ: ರಾಜಸ್ತಾನ – ವೆಂಕಯ್ಯನಾಯ್ಡು, ಓಂಪ್ರಕಾಶ್ ಮಾಥೂರ್, ಹರ್ಷವರ್ಧನ್ ಸಿಂಗ್, ರಾಮ್ ಕುಮಾರ್ ವರ್ಮಾ, ಹರ್ಯಾಣ – ಚೌಧುರಿ ವೀರೇಂದ್ರಸಿಂಗ್, ಮಹಾರಾಷ್ಚ್ರ – ಪಿಯೂಶ್ ಗೋಯೆಲ್, ಕರ್ನಾಟಕ – ನಿರ್ಮಲಾ ಸೀತಾರಾಮನ್, ಜಾರ್ಖಂಡ್ – ಮುಖ್ತರ್ ಅಬ್ಬಾಸ್ ನಕ್ವಿ, ಗುಜರಾತ್ – ಪುರುಷೋತ್ತಮ್ ರೂಪಾಲ, ಮಧ್ಯಪ್ರದೇಶ್ – ಅನಿಲ್ ಮಾಧವ್ ದವೆ, ಛತ್ತೀಸಗಢ – ರಾಮ್ ವಿಚಾರ್ ನೇತಂ, ಬಿಹಾರ – ಗೋಪಾಲ್ ನಾರಾಯಣ ಸಿಂಗ್.
ವಿಧಾನ ಪರಿಷತ್ : ಕರ್ನಾಟಕ – ವಿ. ಸೋಮಣ್ಣ, ಮಹಾರಾಷ್ಟ್ರ – ಸುರ್ಜಿತ್ ಠಾಕೂರ್, ಬಿಹಾರ – ಅರ್ಜುನ್ ಸಹಾನಿ.

3 COMMENTS

  1. viralstyle.com

    of course like your website but you have to take a look at the spelling on several of your posts. A number of them are rife with spelling issues and I in finding it very bothersome to tell the truth on the other hand I?ll definitely come back again.

Leave a Reply