ಬದಲಾವಣೆಯ ಶ್ರೇಯಸ್ಸನ್ನೆಲ್ಲ ಜನರಿಗೆ ಕೊಡುತ್ತ ಪ್ರಧಾನಿ ಮೋದಿ ಪರೋಕ್ಷವಾಗಿ ತಮ್ಮ ಸರ್ಕಾರವನ್ನು ಹೊಗಳಿದ್ದು ಹೇಗೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಪ್ರಯುಕ್ತ ತನ್ನ ಸಾಧನೆಗಳನ್ನು ಜನರೆದುರು ಇಡುವ ವಿಕಾಸಪರ್ವ ಅಭಿಯಾನವನ್ನು ಬಿಜೆಪಿ ಹಮ್ಮಿಕೊಂಡಿರುವುದು ಗೊತ್ತಷ್ಟೆ. ಭಾನುವಾರ ಸಂಜೆ ಈ ಪ್ರಚಾರಕಾರ್ಯಕ್ಕೆ ಸಾಕ್ಷಿಯಾಗುವ ಸರದಿ ದಾವಣಗೆರೆಯದ್ದು. ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಮಾತು ಪ್ರಮುಖ ಆಕರ್ಷಣೆ.

ಈ ಪ್ರಚಾರ ಅಭಿಯಾನದಲ್ಲಿ ದೇಶದ ಯಾವ ತುದಿಯಲ್ಲಿ ಮಾತನಾಡಿದರೂ ಆ ಮಾತುಗಳ ಸಾರ ನಿರೀಕ್ಷಿತ. ಈ ಎರಡು ವರ್ಷಗಳಲ್ಲಿ ಸರ್ಕಾರ ಏನೆಲ್ಲ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂಬ ಅಂಕಿಅಂಶಗಳನ್ನು ಜನರ ಮುಂದಿಡುವುದೇ ಎಲ್ಲ ಕಡೆ ನಡೆಯುವಂಥದ್ದು. ಮೂಲತಃ ಈ ಅಂಕಿಅಂಶಗಳ ಸಹವಾಸ ಲೆಕ್ಕದ ರುಚಿ ಇರುವವರಿಗೆ ರುಚಿಸಬಹುದಾದರೂ ಜನಸಾಮಾನ್ಯರಿಗೆ ಬೋರಿನ ವಿಷಯ. ಹೀಗಾಗಿ ಈ ಅಂಕಿಅಂಶಗಳನ್ನು ಅನುಭವದ ಸ್ವಾದವಾಗಿಸಿ ಜನರ ಮುಂದಿಡೋದು ಹೇಗೆ ಅನ್ನೋದೊಂದು ಸವಾಲು.

ಇಂಥ ಕೌಶಲ ನರೇಂದ್ರ ಮೋದಿಯವರಿಗಲ್ಲದೇ ಇನ್ಯಾರಿಗೆ?

ಮಾತನಾಡುತ್ತಿರುವುದು ಕರ್ನಾಟಕದಲ್ಲಿ. ಹೀಗಾಗಿ ಇಲ್ಲಿಗೇನು ಮಾಡಿದೆ ಎಂಬುದನ್ನು ಮೊದಲಿಗೆ ಹೇಳಬೇಕು. ಹಾಗೆಂದೇ ಮೋದಿ ಮಾತು ಹೀಗೆ ಹೊರಳಿತು- ‘ಚುನಾವಣಾ ಪ್ರಚಾರ ಭಾಷಣದಲ್ಲಿ ನಾನು ಹೇಳಿದ್ದೆ. ನೀವು ನನಗೆ ಕಮಲ ಕೊಡಿ, ಬದಲಾಗಿ ನಾನು ಲಕ್ಷ್ಮೀ ಕೊಡುತ್ತೇನೆ ಅಂತ. ಹೇಳಿ, ನಿಮಗೆ ಸ್ಮಾರ್ಟ್ ಸಿಟಿ ಕೊಟ್ಟಿಲ್ಲವಾ? ರೈಲ್ವೆ ಯೋಜನೆಗಳಿಗೆ ಹಣ ಸಿಕ್ಕಿಲ್ಲವಾ? ಕೌಶಲಾಭಿವೃದ್ಧಿ ಆಗುತ್ತಿಲ್ಲವಾ’ ಅಂತ ಕೇಂದ್ರ ಯೋಜನೆಗಳ ಪಟ್ಟಿ ಒಪ್ಪಿಸಿದರು.

ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ನಿಂತು ಸ್ವಲ್ಪ ಆ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳದಿದ್ದರೆ ಆಗುತ್ತದೆಯೇ? ಕಾಂಗ್ರೆಸ್ ಮುಕ್ತ ಭಾರತ ಅಂತ ನಾವು ಹೇಳಿದ್ವಿ, ಆದ್ರೆ ಜನರೇ ಆ ಗುರಿ ಕೈಗೆತ್ತಿಕೊಂಡುಬಿಟ್ಟಿದ್ದಾರೆ ಅಂತಂದ್ರು. ಕೇಂದ್ರದಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕಿಂತ ತಮ್ಮ ಸರ್ಕಾರ ಹೇಗೆ ಭಿನ್ನ ಎಂಬ ಬಗ್ಗೆ ತುಲನೆಯ ಮಾತುಗಳು ಬಂದವು.

‘ಮೋದಿ ದೊಡ್ಡ ದೊಡ್ಡ ಯೋಜನೆಗಳನ್ನು ತೋರಿಸುತ್ತಿಲ್ಲ ಎಂಬ ಮಾತಿದೆ. ಹಿಂದಿನವರು ದೊಡ್ಡ ದೊಡ್ಡ ಯೋಜನೆ ಮಾಡಿದರು, ದೊಡ್ಡವರ ಪರವಾಗಿ ಮಾಡಿದರು, ದೊಡ್ಡ ಹಗರಣಗಳಿಗೂ ಕಾರಣರಾದರು. ಹೇಳಿ, ನಾನು ಆ ಮಾರ್ಗದಲ್ಲಿ ನಡೆಯಬೇಕೆ?’ ಎಂದು ಪ್ರಶ್ನಿಸಿ, ಮುಂದೆ ನೆರೆದವರಿಂದ ‘ನಹೀ-ನಹೀ’ ಉತ್ತರ ಪಡೆದರು. ‘ನಾವು ಅಂಥ ಕಾನೂನು ತಂದಿದ್ದೇವೆ- ಇಂಥ ಕಾನೂನು ತಂದಿದ್ದೇವೆ ಎಂಬುದೇ ಹಿಂದಿನವರ ಹೆಗ್ಗಳಿಕೆ ಆಗಿತ್ತು. ಜನರ ತಲೆ ಮೇಲೆ ಇನ್ನಿಲ್ಲದ ಕಾನೂನುಗಳ ಭಾರ ಹೊರೆಸಿದ್ದರು. ಆದರೆ ನಾನು ಕಳೆದ 60 ವರ್ಷಗಳಲ್ಲಾಗದ್ದನ್ನು 2 ವರ್ಷಗಳಲ್ಲಿ ಸಾಧಿಸಿ, ಜನರ ಕುತ್ತಿಗೆ ಮೇಲಿದ್ದ ನಿರರ್ಥಕ 12 ಸಾವಿರ ಕಾನೂನುಗಳನ್ನು ತೆಗೆದುಹಾಕಿರುವೆ. ಈ ಹಿಂದೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳನ್ನು ಒಟ್ಟು ಸೇರಿಸಿ ಕಾಟಾಚಾರದ ಸಭೆ ಆಗುತ್ತಿತ್ತು. ನಾನು ಪ್ರತಿ ರಾಜ್ಯದ ಮುಖ್ಯಮಂತ್ರಿ ಜತೆ ಪ್ರತ್ಯೇಕ ಸಭೆ ಮಾಡಿ ಸಮಸ್ಯೆಗಳನ್ನು ಆಲಿಸಿದ್ದೇನೆ’ ಎಂದರು.

ಮೋದಿ ಭಾಷಣದ ಹೊಸತನ ಇದ್ದದ್ದು ಬದಲಾದ ಜನರ ಮನಸ್ಥಿತಿಯನ್ನು ಕೊಂಡಾಡುತ್ತ ಅದರ ಶ್ರೇಯವನ್ನು ತಮಗೆ ಕೊಟ್ಟುಕೊಂಡಿದ್ದರಲ್ಲಿ. ಮುಖ್ಯವಾಹಿನಿ ಮಾಧ್ಯಮಕ್ಕೆ ಯಾವಾಗಲೂ ಟಾಂಗ್ ಕೊಡುತ್ತಿದ್ದ ಪ್ರಧಾನಿ ಮೋದಿ ತಮ್ಮ ಪ್ರಶಂಸೆಯಲ್ಲಿ ಇವರೆಲ್ಲರನ್ನೂ ಸೇರಿಸಿಕೊಂಡಿದ್ದು ವಿಶೇಷ.

‘ಎಲ್ಲ ಸಮೀಕ್ಷೆಗಳೂ ಈ ಸರ್ಕಾರದ ಅತ್ಯುತ್ತಮ ಯೋಜನೆ ಎಂದರೆ ಸ್ವಚ್ಛತಾ ಅಭಿಯಾನ ಎಂದಿವೆ. ಏಕೆಂದರೆ ಜನರಿಗೆ ತಮ್ಮ ಮನೆ, ಮಂದಿರ, ಸಾರ್ವಜನಿಕ ಜಾಗ ಎಲ್ಲವೂ ಸ್ವಚ್ಛವಾಗಬೇಕೆಂಬ ಆಶಯ ಗಟ್ಟಿಯಾಗಿದೆ. ಹೀಗಾಗಿಯೇ ಇದು ಯಶಸ್ವಿಯಾಗ್ತಿದೆ. ಮಾಧ್ಯಮದವರೂ ಇದನ್ನು ಬಹಳ ದೊಡ್ಡ ಮಟ್ಟದಲ್ಲಿ ಎತ್ತಿಕೊಂಡು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಉದ್ದೇಶ ಶುದ್ಧವಿದ್ದರೆ ಜನರೆಲ್ಲ ಒಂದಾಗ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ…’

‘ಜನಮನ ಈ ಎರಡು ವರ್ಷಗಳಲ್ಲಿ ಸಕಾರಾತ್ಮಕವಾಗಿ ಹೇಗೆ ಬದಲಾಗಿದೆ ನೋಡಿ. ನಾವು ಜೀರೋ ಬ್ಯಾಲೆನ್ಸ್ ಇದ್ದರೂ ಖಾತೆ ತೆರೆಯಲು ಅನುವು ಮಾಡಿಕೊಟ್ಟೆವು. ಬ್ಯಾಂಕ್ ಗಳು ಹೆದರಿದ್ದವು. ಆದರೆ ಯಾರೂ ಶೂನ್ಯಖಾತೆ ತೆಗೆಯಲೇ ಇಲ್ಲ. ಈ ದೇಶದ ಬಡವನಲ್ಲೂ ಎಂಥ ಶ್ರೀಮಂತಿಕೆ ಇದೆ ನೋಡಿ… 5-10-100 ಎಷ್ಟಾಗುತ್ತೋ ಅಷ್ಟು ರುಪಾಯಿ ಇರಿಸಿ ಖಾತೆ ತೆಗೆದರು. ಪರಿಣಾಮ ಬಡವರಿಂದ 37 ಸಾವಿರ ಕೋಟಿ ರುಪಾಯಿ ಜಮಾ ಆಗಿದೆ.’

‘ತಿಂಗಳಿಗೆ ಒಂದೇ ರುಪಾಯಿ ತೆಗೆದಿರಿಸಿ ವಿಮಾ ಸೌಲಭ್ಯ ಕಲ್ಪಿಸಿದೆವು. ಬಡ ಕುಟುಂಬಕ್ಕೆ ಆಪತ್ಕಾಲದಲ್ಲಿ ₹2 ಲಕ್ಷ ಸಿಗುವ ಯೋಜನೆ ಇದು. ಜನರ ಮನಸ್ಸಲ್ಲಾದ ಬದಲಾವಣೆ ನೋಡಿ ಹೇಗಿದೆ? ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಬಟ್ಟೆ ಒಗೆಯುವವಳೋ, ಚಾಲಕನೋ ಇವರೆಲ್ಲರ ಪರವಾಗಿ ಯಜಮಾನನೇ ವಿಮೆ ಮಾಡಿಸಿದ್ದಾನೆ.’

‘ಬಸ್ಸಿನಲ್ಲಿ ನಾವು ಕುಳಿತ ಪಕ್ಕದ ಸೀಟಿನಲ್ಲಿ ಬ್ಯಾಗನ್ನೋ ಕರವಸ್ತ್ರವನ್ನೋ ಇಟ್ಟಿರುತ್ತೇವೆ. ನಮ್ಮದಲ್ಲದ ಆ ಸೀಟಿಗೆ ಬೇರೆ ಯಾರಾದರೂ ಬಂದರೂ ಮುಖ ಗಂಟಿಕ್ಕಿಕೊಳ್ಳುತ್ತೇವೆ. ಇಂಥ ಮನಸ್ಥಿತಿ ಹೊಂದಿದ್ದ ದೇಶದ ಜನ ಹೇಗೆ ಬದಲಾಗಿದ್ದಾರೆ ಎಂದರೆ, ಎಲ್ ಪಿ ಜಿ ಸಬ್ಸಿಡಿ ಬಿಡಿ ಎಂದಿದ್ದಕ್ಕೆ 1 ಕೋಟಿ 13 ಲಕ್ಷ ಉಳ್ಳವರು ಬಡವರಿಗಾಗಿ ತಮ್ಮ ಸಬ್ಸಿಡಿ ತೊರೆದಿದ್ದಾರೆ. ಇದಲ್ಲವೇ ಮಹಾ ಬದಲಾವಣೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಗಾಂಧಿ ಕರೆಗೆ ಓಗೊಟ್ಟು ಶಿಕ್ಷಣ ತೊರೆದ ಯುವಕರು ಹೋರಾಟಕ್ಕೆ ಧುಮುಕಿದ್ದರು. ದೇಶ ಸಂಕಷ್ಟದಲ್ಲಿದ್ದಾಗ ಅಂದಿನ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿ ಕೊಟ್ಟ ಒಂದು ಹೊತ್ತಿನ ಉಪವಾಸದ ಕರೆಯನ್ನು ಜನ ಶಿರಸಾವಹಿಸಿ ಪಾಲಿಸಿದರು. ಈಗಲೂ ಮನೆಗಳಲ್ಲಿ ಶಾಸ್ತ್ರಿ ಉಪವಾಸ ಆಚರಿಸುತ್ತಿರುವ ಹಿರಿಜೀವಗಳನ್ನು ಕಾಣಬಹುದು. ಇದೀಗ ಪ್ರಧಾನಿ ಕೊಟ್ಟ ಕರೆಗೆ ಎಲ್ ಪಿ ಜಿ ಸಬ್ಸಿಡಿ ತೊರೆದರು. ಇಂಥ ವಿಶ್ವಾಸದ ಕಾಲಘಟ್ಟ ಬಂದಿರುವುದು ವಿಶೇಷವಲ್ಲವೇ?’

ಹೀಗೆಲ್ಲ ಈ ಎರಡು ವರ್ಷದಲ್ಲಿ ಬದಲಾದ ಜನರ ಮನಸ್ಥಿತಿಗೆ ಕನ್ನಡಿ ಹಿಡಿದ ಮೋದಿ, ಇದರಿಂದ ಅಧಿಕಾರಿ ವರ್ಗಗಳ ಮನಸ್ಥಿತಿಯೂ ಬದಲಾಗಿದೆ ಎಂದು ಪ್ರತಿಪಾದಿಸಿದರು. ದೇಶವಾಸಿಗಳು ತಮಗಿಂತ ಎರಡು ಹೆಜ್ಜೆ ಮುಂದಿದ್ದಾರೆ ಎಂಬ ಎಚ್ಚರಿಕೆ ಅವರಲ್ಲಿ ಮೂಡಿರೋದೇ ಇದಕ್ಕೆ ಕಾರಣ ಎಂಬುದು ಮೋದಿ ವ್ಯಾಖ್ಯಾನ. ಅಲ್ಲದೇ ಸರ್ಕಾರಿ ನೌಕರಿಗಳಲ್ಲಿ ಸಂದರ್ಶನ ರದ್ದು ಮಾಡಿರುವುದರಿಂದ ಮೊದಲಿನಂತೆ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಂದೆ ಜಮೀನನ್ನು ತಾಯಿ ಒಡವೆಯನ್ನು ಅಡವಿಟ್ಟು ಮಗನಿಗೆ ನೌಕರಿ ಹಿಡಿಸಬೇಕಿಲ್ಲ ಅಂದರು ಪ್ರಧಾನಿ.

Leave a Reply