ದಾವಣಗೆರೆಗೆ ಪ್ರಧಾನಿ ಮೋದಿ, ಆದರೆ ಪ್ರಧಾನಿ ಕಾರ್ಯಾಲಯದ ಜಾಲತಾಣದಲ್ಲಿ ಕನ್ನಡಕ್ಕೆ ಸದ್ಯಕ್ಕಂತೂ ಜಾಗವಿಲ್ಲ ನೋಡಿ!

Jpeg

ಚೈತನ್ಯ ಹೆಗಡೆ

ಪ್ರಧಾನಿ ನರೇಂದ್ರ ಮೋದಿ ಎರಡು ವರ್ಷದ ‘ವಿಕಾಸಪರ್ವ’ ಸಂದೇಶವನ್ನು ತಲುಪಿಸುವುದಕ್ಕೆ ಇಂದು ದಾವಣಗೆರೆಗೆ ಬರುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಭವಿಷ್ಯದಲ್ಲಿ ಮತ್ತೆ ಬಿಜೆಪಿ ಆಡಳಿತಕ್ಕೂ ಇಂಥ ಭೇಟಿಗಳು ಸಹಕಾರಿಯಾಗುತ್ತವೆ ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ದಾವಣಗೆರೆ ಸಮಾವೇಶದಲ್ಲಿ ಪ್ರಧಾನಿ ಮೋದಿ ಕನ್ನಡಿಗರ ದೊಡ್ಡತನವನ್ನು ಉಬ್ಬಿಸುವ ಡೈಲಾಗುಗಳನ್ನು ಉದುರಿಸಿಯಾರು.

ಆದರೆ…

ಅತ್ತ, ಇದೇ ಭಾನುವಾರ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಧಾನ ಮಂತ್ರಿ ಕಚೇರಿಯ ಜಾಲತಾಣದ ಆರು ಪ್ರಾದೇಶಿಕ ಭಾಷೆಗಳ ಅವತರಣಿಕೆಯನ್ನು ಲೋಕಾರ್ಪಣಗೊಳಿಸಿದ್ದಾರೆ. ಯಾತನೆಯ ವಿಷಯ ಎಂದರೆ ಇದರಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ!

ನೀವು http://www.pmindia.gov.in ಎಂಬ ಪಿಎಂಒ ವೆಬ್ ಸೈಟ್ ಹೊಕ್ಕರೆ ಅದರ ಬಲ ತುದಿಯ ಚಿಕ್ಕ ಆಯತದಲ್ಲಿ ಭಾಷೆ ಬದಲಾವಣೆ ಅವಕಾಶಗಳಿವೆ. ಅಲ್ಲಿ ನೀವು ಕಾಣಬಹುದಾಗಿದ್ದು ಇಂಗ್ಲಿಷ್, ಹಿಂದಿ, ತಮಿಳು, ಮರಾಠಿ, ಬೆಂಗಾಳಿ, ಮಲಯಾಳಂ, ಗುಜರಾತಿ, ತೆಲುಗು. ಉಳಿದ ಭಾಷೆಗಳ ಬಗ್ಗೆ ಹಂತ ಹಂತವಾಗಿ ಗಮನಹರಿಸಲಾಗುವುದು ಅಂತ ಇದೇ ವೆಬ್ ಸೈಟ್ ಹೇಳುತ್ತಿದೆ. ಅಲ್ಲಿಗೆ ತಮಿಳು, ತೆಲುಗು, ಗುಜರಾತಿ ಇತ್ಯಾದಿ ಭಾಷೆಗಳಂತೆ ಆದ್ಯತೆ ಪಟ್ಟಿಯಲ್ಲಿಲ್ಲ ಕನ್ನಡ.

ಬಹುಶಃ ಪುರಸೊತ್ತಾದಾಗ ಕನ್ನಡದ ಆಯ್ಕೆ ಕೊಟ್ಟರಾಯಿತೆಂದು ಮೋದಿ ಸರ್ಕಾರದ ಚಿಂತಕರೆಲ್ಲ ಎಣಿಸಿರಬಹುದು. ಏಕೆಂದರೆ ಕನ್ನಡಿಗರ ಅಭಿಮಾನಶೂನ್ಯತೆ ಗೊತ್ತಿದ್ದದ್ದೇ. ಹೇಗಂದರೂ ರಾಷ್ಟ್ರೀಯವಾದದ ಗುಂಗಲ್ಲಿ ಮತ ಹಾಕಿ, ಬಿಜೆಪಿಗೆ ಅತಿ ಹೆಚ್ಚಿನ ಸಂಸದರನ್ನು ಕಳುಹಿಸಿಯೇ ಕಳುಹಿಸುತ್ತಾರೆ. ಇವರನ್ನು ರಮಿಸಿ, ಇವರಿಗೆ ಪ್ರಾಮುಖ್ಯ ಕೊಟ್ಟು ಆಗಬೇಕಿರುವುದಾದರೂ ಏನು?

ಕನ್ನಡಿಗರು ‘ಟೇಕನ್ ಫಾರ್ ಗ್ರಾಂಟೆಡ್’. ಅದರ ಬದಲು ತಮಿಳರನ್ನು, ಮಲೆಯಾಳಿಗಳನ್ನು, ಬೆಂಗಾಳಿಗಳನ್ನು ಮುದ್ದಿಸೋಣ. ಅಲ್ಲೆಲ್ಲ ಬಿಜೆಪಿಯ ಮತ ಪ್ರಮಾಣ ಹೆಚ್ಚಿದೆ. ಸುಗ್ಗಿ ಕೊಯ್ಯುವುದು ಯಾವಾಗ? ಅಷ್ಟು ಸುಲಭದಲ್ಲಿಲ್ಲ. ಅಲ್ಲೆಲ್ಲ ಒಂದು ಪ್ರಾದೇಶಿಕ ಮಿಡಿತ ಇದೆ. ಹೀಗಾಗಿ ಅವರೊಂದಿಗೆ ಅವರ ಭಾಷೆ- ಶೈಲಿಯಲ್ಲೇ ವ್ಯವಹರಿಸಬೇಕಾಗುತ್ತದೆ.

ಇಂಥದೊಂದು ಧಾಟಿಯಲ್ಲಿ ತಾನು ಯೋಚಿಸುತ್ತಿದ್ದೇನೆ ಅಂತ ಪರೋಕ್ಷವಾಗಿ ಸಾರುತ್ತಿದೆ ರಾಷ್ಟ್ರೀಯ ಬಿಜೆಪಿ.

ಖಂಡಿತವಾಗಿಯೂ ಮೇಲಿನ ಭಾಷೆಗಳಿಗೆಲ್ಲ ಪ್ರಾಧಾನ್ಯ ದೊರಕುತ್ತಿರುವುದಕ್ಕೆ ಸಂತೋಷ ಪಡಬೇಕು. ಆ ಬಗ್ಗೆ ಅಸೂಯೆಯಿಲ್ಲ. ಆದರೆ ಕನ್ನಡಕ್ಕೆ ಕಿಮ್ಮತ್ತಿಲ್ಲವಾಯಿತಾ ಎಂಬ ಪ್ರಶ್ನೆ ಚುಚ್ಚುತ್ತಿರುವುದನ್ನು ಸಹಿಸುವುದಾದರೂ ಹೇಗೆ?

ಪ್ರಧಾನಿಯವರೇ ತಮ್ಮ ಟ್ವೀಟ್ ನಲ್ಲಿ ಸಾರುತ್ತಿರುವಂತೆ ‘ಈ ಪ್ರಾದೇಶಿಕ ಸೈಟ್ ಗಳು ನಿಮ್ಮೊಂದಿಗೆ ನನ್ನ ಸಂವಾದ ಹೆಚ್ಚಿಸಿಕೊಳ್ಳುವುದಕ್ಕೆ ಅನುಕೂಲ’. ಹಾಗೆನ್ನುತ್ತಲೇ ಜಾಲತಾಣ ಉದ್ಘಾಟಿಸಿದ ಸುಷ್ಮಾ ಸ್ವರಾಜ್ ಅವರಿಗೆ ಹಾಗೂ ಆರು ಭಾಷೆಗಳಲ್ಲಿ ಜಾಲತಾಣ ನಿರ್ಮಾಣಕ್ಕೆ ದುಡಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

pmoಎಲ್ಲರನ್ನೂ ಗಮನಿಸಿಕೊಂಡಾದ ಮೇಲೆ ಮುಂದೆಂದಾದರೂ ಪ್ರಧಾನಿ ಕಾರ್ಯಾಲಯದ ಜಾಲತಾಣದಲ್ಲಿ ಕನ್ನಡಕ್ಕೂ ಜಾಗ ಸಿಕ್ಕೀತೇನೋ. ಆದರೆ ಬಿಜೆಪಿಯ ಯೋಚನಾಧಾಟಿಯಲ್ಲಿ ಕರ್ನಾಟಕಕ್ಕೆ ಆದ್ಯತೆಯಂತೂ ಇಲ್ಲ, ಗಮನವಿರಬಹುದಷ್ಟೆ. ಏನೇ ಆದರೂ ಮೊದಲ ಪ್ರಯತ್ನದಲ್ಲೇ ಕನ್ನಡಕ್ಕೆ ಸಿಗಬೇಕಿದ್ದ ಸ್ಥಾನವದು. ಬಳ್ಳಾರಿಯಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಆಗಾಗ ಬಂದು ಕನ್ನಡಿಗರಿಗೆ ಭಾವನಾತ್ಮಕ ಸ್ಪರ್ಶ ಕೊಟ್ಟಿದ್ದ ಸುಷ್ಮಾ ಸ್ವರಾಜ್ ಅಂಥವರಿಗೆ ಹಾಗೊಂದು ಪಶ್ಚಾತಾಪ ಕಾಡಲೇಬೇಕು.

ನಮಗೆ ಗೊತ್ತಿರಬೇಕು. ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿ ಪರ ಹೋರಾಡಿಕೊಂಡಿರುವ ಟ್ವಿಟ್ಟರ್- ಫೇಸ್ಬುಕ್ ಸೇನೆಯ ದೊಡ್ಡ ತುಕಡಿಯೊಂದು ಬೆಂಗಳೂರಿನಲ್ಲೇ ಇದೆ. ಮೋದಿ ಸರ್ಕಾರದ ವಿರುದ್ಧ ಸಣ್ಣ ಅಸಮಾಧಾನದ ಧ್ವನಿ ಎತ್ತಿದರೂ ಹಿಂದೆ- ಮುಂದೆ ನೋಡದೆ ಸಾರಾಸಗಟಾಗಿ ಅಂಥವರನ್ನೆಲ್ಲ ‘ದೇಶದ್ರೋಹಿ’, ‘ಪ್ರೆಸ್ಟಿಟ್ಯೂಟ್’ ಪಟ್ಟ ಕಟ್ಟಿ ಹಳಿಯುವಲ್ಲಿ ಇವರ ಕೊಡುಗೆ ದೊಡ್ಡದು. ಇವರಲ್ಲಿ ಕನ್ನಡಿಗರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಪಿ ಎಂ ಒ ಪ್ರಾದೇಶಿಕ ಜಾಲತಾಣದಲ್ಲಿ ಕನ್ನಡ ಇಲ್ಲದೇ ಇರುವುದು ಮೋದಿಭಕ್ತ ಸೈಬರ್ ಆರ್ಮಿ ಸೈನಿಕರೆಲ್ಲರ ಸೋಲು.

ದಾವಣಗೆರೆ ಸಮಾವೇಶದಲ್ಲಿ ತಮ್ಮ ಸರ್ಕಾರದ ಸಾಧನೆ ಹೇಳುತ್ತ, ಕನ್ನಡಿಗರ ಪ್ರೇಮದ ಕುರಿತೂ ಮೋದಿ ಡೈಲಾಗು ಹೊಡೆದಾರು. ನೀವೆಲ್ಲ ನನ್ನ ಹೃದಯದಲ್ಲಿದ್ದೀರಿ ಎಂದಾರು. ಅವರಿಗೆ ಹೇಳಬೇಕಿದೆ- ಕನ್ನಡಿಗರ ಪ್ರೀತಿ, ಔದಾರ್ಯ ಎಲ್ಲ ಗೊತ್ತಿರುವುದೇ ಸ್ವಾಮಿ. ಅದರ ಕೆಲ ಪಾಲನ್ನಾದರೂ ತಿರುಗಿ ಕೊಡುವುದಕ್ಕೆ ಮನಸ್ಸು ಮಾಡಿ. ಭಾವನಾತ್ಮಕ ಭಾಷಣಗಳು ಹಾಗಿರಲಿ, ನಿಮ್ಮ ಆಡಳಿತದಲ್ಲಿ ಕನ್ನಡ- ಕರ್ನಾಟಕದ ಆಸಕ್ತಿಗಳಿಗೆ ಸ್ಥಾನ ಕೊಡಿ ಅಂತ.

Leave a Reply