ವೆಂಕಯ್ಯ ರಾಜಸ್ಥಾನಕ್ಕೆ, ಆಫ್ರಿಕ ಪ್ರಜೆಗಳ ಹಲ್ಲೆಗೈದ ಆರೋಪಿಗಳ ಬಂಧನ, ಕಳಂಕಿತ ಫಿನ್ ಮೆಕೆನ್ಶಿಯಾದ ರಕ್ಷಣಾ ಒಪ್ಪಂದಗಳು ರದ್ದು, ಆಸ್ಟ್ರೇಲಿಯದ ಈ ನಗರವನ್ನು ಬಾವಲಿಗಳು ಆಕ್ರಮಿಸಿವೆ…

ಡಿಜಿಟಲ್ ಕನ್ನಡ ಟೀಮ್

 – ಹದಿನೆಂಟು ವರ್ಷಗಳ ಕಾಲ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದ ವೆಂಕಯ್ಯ ನಾಯ್ಡು ಅವರನ್ನು ಈ ಬಾರಿಯೂ ಇಲ್ಲಿಂದ ಚುನಾಯಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಮಣಿದಂತಿರುವ ಕೇಂದ್ರ ಬಿಜೆಪಿ ಕರ್ನಾಟಕದಿಂದ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಕಣಕ್ಕಿಳಿಸಿ, ವೆಂಕಯ್ಯ ಅವರ ಉಮೇದುವಾರಿಕೆಯನ್ನು ರಾಜಸ್ಥಾನಕ್ಕೆ ವರ್ಗಾಯಿಸಿದೆ. ನಿರ್ಮಲಾ ಅವರ ತಾಯಿ ಕಡೆಯ ಸಂಬಂಧಿಕರು ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ ಹಾಗೂ ನಿರ್ಮಲಾ ಸೀತಾರಾಮನ್ ಸಂಬಂಧ ಬೆಂಗಳೂರಿನೊಂದಿಗೆ ಚೆನ್ನಾಗಿದ್ದು, ಆಗಾಗ ಭೇಟಿ ನೀಡುತ್ತಿರುತ್ತಾರೆ ಎಂಬ ಕಾರಣವನ್ನು ಮುಂದಿರಿಸಲಾಗಿದೆ. ಉಳಿದಂತೆ ಬಿಜೆಪಿ ಪಟ್ಟಿಯಲ್ಲಿರುವ ಪ್ರಮುಖರೆಂದರೆ, ಪಿಯೂಶ್ ಗೋಯೆಲ್ (ಮಹಾರಾಷ್ಟ್ರ), ಮುಕ್ತಾರ್ ಅಬ್ಬಾಸ್ ನಖ್ವಿ (ಜಾರ್ಖಂಡ್).

– ಅಗುಸ್ಟಾ ವೆಸ್ಟ್ಲ್ಯಾಂಡ್ ಹಗರಣದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ದೃಢಪಟ್ಟಿರುವ ಫಿನ್ ಮೆಕೆನ್ಶಿಯಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, ಎಲ್ಲ ಟೆಂಡರ್ ಗಳಿಂದ ದೂರ ಇರಿಸುವುದಾಗಿ ರಕ್ಷಣಾಮಂತ್ರಿ ಪಾರಿಕ್ಕರ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆದರೆ ಈಗಾಗಲೇ ಆಮದು ಮಾಡಿಕೊಂಡಿರುವ ರಕ್ಷಣಾ ಪರಿಕರಗಳ ಬಿಡಿಭಾಗಗಳನ್ನು ಒದಗಿಸುವುದು ಹಾಗೂ ನಿರ್ವಹಣೆ ವಿಚಾರದಲ್ಲಿ ಈ ಕಂಪನಿಯನ್ನು ದೂರವಿರಿಸಿಲ್ಲ.

– ಬೇರೆ ಬೇರೆ ಘಟನೆಗಳಲ್ಲಿ ದೆಹಲಿಯಲ್ಲಿ ಆಫ್ರಿಕಾದ ಪ್ರಜೆಗಳ ಮೇಲೆ ನಡೆದ ಹಲ್ಲೆಯಲ್ಲಿ ಆರು ಮಂದಿ ಗಾಯಗೊಂಡರು. ಈ ಕುರಿತು ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜನಾಥ್ ಸಿಂಗ್ ತ್ವರಿತ ಸ್ಪಂದನೆಗೆ ಮುಂದಾದ ಪರಿಣಾಮ, ಸಂಜೆಯ ವೇಳೆಗೆಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

– ಆಸ್ಟ್ರೇಲಿಯದ ನ್ಯೂ ಸೌಥ್ವೇಲ್ಸ್ ಪ್ರಾಂತ್ಯದ ಬೇಟ್ಮನ್ ನಗರದಲ್ಲಿ ತುರ್ತು ಪರಿಸ್ಥಿತಿ. ಕಾರಣ ಏನೆಂದರೆ ಏಕಾಏಕಿ ಅಲ್ಲಿಗೆ ಆಗಮಿಸಿದ ಸುಮಾರು 10 ಸಾವಿರ ಸಂಖ್ಯೆಯ ಬಾವಲಿಗಳು ಎಲ್ಲೆಂದರಲ್ಲಿ ಜೋಲಾಡುತ್ತಿವೆ. ಆ ಪ್ರದೇಶದ ಜನಸಂಖ್ಯೆ ಇರೋದೇ 11 ಸಾವಿರ! ಇವನ್ನು ನಿವಾರಿಸಿಕೊಳ್ಳಲೆಂದೇ 1.8 ಮಿಲಿಯನ್ ಡಾಲರ್ ವ್ಯಯಿಸುವುದಾಗಿ ಹೇಳಿದೆ ಸೌಥ್ವೇಲ್ಸ್ ಸ್ಥಳೀಯ ಸರ್ಕಾರ. ಹೊಗೆ ಹಾಕುವುದು, ಶಬ್ದ ಮಾಡುವುದು, ಬಾವಲಿಗಳಿಗೆ ಆವಾಸವಾಗಿರುವ ಸಸ್ಯಗಳನ್ನು ಕಡಿಯುವುದು ಹೀಗೆ ಹಲವು ಕ್ರಮಗಳತ್ತ ಸ್ಥಳೀಯಾಡಳಿತ ಮುಂದಾಗಿದೆ. ಆದರೆ ಯಾವುದೇ ಕ್ರಮ ಬಾವಲಿಗಳಿಗೆ ಜೀವಹಾನಿ ಮಾಡಬಾರದು ಎಂದು ಪ್ರಾಣಿದಯಾ ಗುಂಪುಗಳು ಒತ್ತಡ ಹಾಕಿವೆ.

Leave a Reply