ಐಪಿಎಲ್ ಕಪ್ ‘ರೈಸ್’ ಮಾಡಿದ ಹೈದರಾಬಾದ್ ಸನ್ಸ್, ಬೆಂಗಳೂರಿನ ರಾಯಲ್ ಕನಸು ಮುಳುಗಿಸಿದ ವ್ಯಾಟ್ಸನ್!

 

ಡಿಜಿಟಲ್ ಕನ್ನಡ ಟೀಮ್:

ಶೇನ್ ವ್ಯಾಟ್ಸನ್ ಕಡೇಯ ಓವರ್ ನಲ್ಲಿ ಕೊಟ್ಟ ಆ 24 ರನ್ನುಗಳು ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) ಟಿ20 ಕ್ರಿಕೆಟ್ ಪಂದ್ಯ ಸರಣಿಯ ಒಂಬತ್ತನೇ ಆವೃತ್ತಿಯ ಕಪ್ ಗೆಲ್ಲುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನಸು ಮಣ್ಣು ಮಾಡಿತು. ಅಲ್ಲದೇ, ಆ ಕನಸಿಗೆ ಕಣ್ಣಾಗಿದ್ದ ಆರ್ಸಿಬಿ ಅಭಿಮಾನಿಗಳನ್ನು ನಿರಾಸೆ ಕಡಲಲ್ಲಿ ಮುಳುಗಿಸಿ, ಸನ್ ರೈಸರ್ಸ್ ಹೈದರಾಬಾದ್ ಮಡಿಲಿಗೆ ಕಪ್ಪನ್ನೊಪ್ಪಿಸಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೆರೆದ ನಾನಾ ತಿರುವುಗಳು ಕ್ರಿಕೆಟ್ ಅಭಿಮಾನಿಗಳನ್ನು ಕೆಲವೊಮ್ಮೆ ಹುಚ್ಚೆದ್ದು ಕುಣಿಯುವಂತೆ ಮಾಡಿತಲ್ಲದೇ ಇನ್ನೂ ಕೆಲವೊಮ್ಮೆ ಉಸಿರು ಬಿಗಿಹಿಡಿಯುವಂಥ ಮೌನಕ್ಕೆ ಶರಣಾಗಿಸಿತ್ತು. ಎಂಟು ರನ್ನುಗಳಿಂದ ಚೊಚ್ಚಲ ಕಪ್ ಗೆಲ್ಲುವಲ್ಲಿ ಸನ್ ರೈಸರ್ಸ್ ನ ಅತ್ಯುತ್ತಮ ಬ್ಯಾಟಿಂಗ್ ಮತ್ತು ಅದಕ್ಕಿಂತ ಮಿಗಿಲಾಗಿ ಅಮೋಘ ಬೌಲಿಂಗ್ ನೆರವಾಯಿತಲ್ಲದೇ, ಮೊದಲ ಬಾರಿಗೆ ಕಪ್ ಗೆಲ್ಲುವ ವಿರಾಟ್ ಕೊಹ್ಲಿ ಕನಸನ್ನು ನುಚ್ಚುನೂರಾಗಿಸಿತು.

ನಿಜ, ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾದ ಈ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ತಂಡದ 208 ರನ್ನುಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಪಡೆಯ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಕ್ರಿಸ್ ಗೇಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಹಾಕಿಕೊಟ್ಟ ಭದ್ರ ಬುನಾದಿ ಪ್ರಯೋಜನಕ್ಕೆ ಬರಲಿಲ್ಲ. ಈ ಇಬ್ಬರ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ವಿಕೆಟ್ ಬಿದ್ದ ನಂತರ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಆವರಿಸಿದ ಮೌನ ಕೊನೆಯವರೆಗೂ ಕಣ್ಣಾಮುಚ್ಚಾಲೆ ಆಡಿತಲ್ಲದೇ, ನೆರೆದಿದ್ದ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳನ್ನು ಅದೇ ಸ್ಥಿತಿಯಲ್ಲಿ ಮನೆಗೆ ವಾಪಸ್ಸು ಕಳುಹಿಸಿತು.

ಆ ವಿಷಯ ಪಕ್ಕಕ್ಕಿರಲಿ, ಗೆಲುವು ಗೆಲುವೇ. ಅದರಲ್ಲೂ ಹೈದರಾಬಾದ್ ತಂಡದ ಇಂದಿನ ಗೆಲುವು ಎಲ್ಲ ರೀತಿಯಿಂದಲೂ ಅರ್ಹ. ತಂಡದ ನಾಯಕ ಡೇವಿಡ್ ವಾರ್ನರ್ ಅವರ 68 ರನ್ ಗಳಿಕೆಯ ಅಮೋಘ ಬ್ಯಾಟಿಂಗ್ ಜತೆಗೆ ಫೀಲ್ಡಿಂಗ್ ನಿರ್ವಹಣೆಯಲ್ಲಿ ಮೆರೆದ ಪಾರಮ್ಯ ಈ ಗೆಲುವಿನ ಹಿಂದಿನ ಶಕ್ತಿ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ (4 ಓವರ್ ಗಳಲ್ಲಿ ಕೇವಲ 25 ರನ್) ಮತ್ತು ಮುಸ್ತಾಫಿಜರ್ ರಹಮಾನ್ (4 ಓವರ್ ಗಳಲ್ಲಿ 37 ಕ್ಕೆ 1) ವಿಕೆಟ್ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. ಇದಕ್ಕೂ ಮೊದಲು ಫೈನಲ್ ಓವರ್ನಲ್ಲಿ 24 ರನ್ ಬಾರಿಸಿದ ಬೆನ್ ಕಟಿಂಗ್ ಗಳಿಸಿದ ಒಟ್ಟು ರನ್ 39 ರನ್ ಹಾಗೂ ಬೌಲಿಂಗ್ ನಲ್ಲಿ 35 ರನ್ ಕೊಟ್ಟು ಗೇಲ್ ಸೇರಿದಂತೆ ಗಳಿಸಿದ 2 ವಿಕೆಟ್ ಪಂದ್ಯದ ಗತಿಯನ್ನೇ ಬದಲಿಸಿತು. ಕೊನೆಯ ಓವರ್ ನಲ್ಲಿ ಕೇವಲ 9 ರನ್ ಕೊಟ್ಟು ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಭುವನೇಶ್ವರ್ ಎಲ್ಲರ ಆಕರ್ಷಣೆ ಬಿಂದುವಾದರು.

ರಾಯಲ್ ಚಾಲೆಂಜರ್ಸ್ ಪರ ಮೊದಲ ಹತ್ತು ಓವರ್ ಜತೆಯಾಟದಲ್ಲಿ 114 ರನ್ ತಂದುಕೊಟ್ಟ ಗೇಲ್ (36 ಚೆಂಡುಗಳಲ್ಲಿ 76) ಹಾಗೂ ಕೊಹ್ಲಿ (35 ರಲ್ಲಿ 54 ರನ್) ತಂಡಕ್ಕೆ ಗೆಲುವು ಸುಲಿದ ಬಾಳೆಹಣ್ಣು ಎಂಬಂಥ ವಾತಾವರಣ ನಿರ್ಮಿಸಿದ್ದರು. ನಾಲ್ಕು ಶತಕ, ಏಳು ಅರ್ಧ ಶತಕದೊಂದಿಗೆ ಸರಣಿಯಲ್ಲಿ 81.08 ರನ್ ಸರಾಸರಿಯೊಡನೆ 973 ರನ್ (ಸ್ಚ್ರೈಕಿಂಗ್ ರೇಟ್ 152.03) ಕಲೆ ಹಾಕಿರುವ ಕೊಹ್ಲಿ ಅವರ ಅಮೋಘ ಸಾಧನೆಗೆ ಫೈನಲ್ ಪಂದ್ಯದ ಸೋಲು ಒಂದು ಕಪ್ಪುಚುಕ್ಕೆ. 38 ಸಿಕ್ಸ್, 83 ಬೌಂಡರಿ ಬಾರಿಸಿರುವ ಕೊಹ್ಲಿ ತಂಡದ ಕಪ್ ಗೆಲ್ಲುವಾಸೆ ಗಡಿಯಂಚಲ್ಲೇ ನಿಂತದ್ದು ಅಭಿಮಾನಿಗಳ ಪಾಲಿನ ಕೆಟ್ಟ ಕನಸು.

ಸ್ಕೋರು ವಿವರ: ಬ್ಯಾಟಿಂಗ್ – ಸನ್ ರೈಸರ್ಸ್ ಹೈದರಾಬಾದ್ 50 ಓವರ್ ಗಳಲ್ಲಿ 7 ಕ್ಕೆ 208. ಡೇವಿಡ್ ವಾರ್ನರ್ 69 (38), ಶಿಖರ್ ಧವನ್ 28 (25) , ಮೊಸೆಸ್ ಹೆನ್ರಿಕ್ 4 (5) ಯುವರಾಜ್ ಸಿಂಗ್ 38 (23), ದೀಪಕ್ ಹೂಡ 3 (6) ಬೆನ್ ಕಟಿಂಗ್ 39 ನಾಟೌಟ್ (15), ಓಜಾ 7 (4), ಬಿಪುಲ್ ಶರ್ಮಾ 5 (3), ಭುವನೇಶ್ವರ್ ಕುಮಾರ್ ನಾಟೌಟ್ 1 (1). ಬೌಲಿಂಗ್ – ಶ್ರೀನಾಥ್ ಅರವಿಂದ್ 4-0-30-2, ಗೇಲ್ 3-0-24-0, ವ್ಯಾಟ್ಸನ್ 4-0-61-0, ಯಜುವೇಂದ್ರ ಚಹಾಲ್ 4-0-35-1, ಇಕ್ಬಾಲ್ ಅಬ್ದುಲ್ಲಾ 4-0-10-1, ಕ್ರಿಸ್ ಜೋರ್ಡನ್ 4-0-45-3.

ರಾಯಲ್ ಚಾಲೆಂಜರ್ಸ್ 7 ವಿಕೆಟ್ ನಷ್ಟಕ್ಕೆ 200. ಕ್ರಿಸ್ ಗೇಲ್ 76 (38), ವಿರಾಟ್ ಕೊಹ್ಲಿ 54 (35), ಡಿವಿಲ್ಲರ್ಸ್ 5 (6), ರಾಹುಲ್ 11 (9), ವಾಟ್ಸನ್ 11 (9), ಸಚಿನ್ ಬೇಬಿ ನಾಟೌಟ್ 18 (10), ಜೋರ್ಡಾನ್ 3 (4), ಇಕ್ಬಾಲ್ ಅಬ್ದುಲ್ಲಾ ನಾಟೌಟ್ 4 (2). ಬೌಲಿಂಗ್ – ಭುವನೇಶ್ವರ್ ಕುಮಾರ್ 4-0-25-0, ಬರಿಂದರ್ ಶಾನ್ 3-0-41-1, ಬೆನ್ ಕಟಿಂಗ್ 4-0-35-2, ಮುಸ್ತಾಫಿಜರ್ ರಹಮಾನ್ 4-0-37-1, ಹೆನ್ರಿಕ್ 3-0-40-0, ಬಿಪುಲ್ ಶರ್ಮಾ 2-0-17-1.

ಪಂದ್ಯ ಶ್ರೇಷ್ಠ: ಬೆನ್ ಕಟಿಂಗ್, ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ.

Leave a Reply