ಹಿರಿಯ ಸಾಹಿತಿ ದೇಜಗೌ ನಿಧನ, ನುಡಿ ನಮನ

 

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ ತೀ.ನಂ. ಶ್ರೀಕಂಠಯ್ಯ ಮತ್ತು ಕುವೆಂಪು ಅವರ ಶಿಷ್ಯಕೊಂಡಿ, ಹಿರಿಯ ಸಾಹಿತಿ, ಕನ್ನಡ ಹೋರಾಟಗಾರರು, ಪದ್ಮಶ್ರೀ, ಕರ್ನಾಟಕ ರತ್ನ, ನಾಡೋಜ ಪ್ರಶಸ್ತಿ ಪುರಸ್ಕೃತರು ಆದ ದೇ. ಜವರೇಗೌಡರು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು.

‘ದೇಜಗೌ’ ಎಂದೇ ಖ್ಯಾತರಾಗಿದ್ದ ಅವರಿಗೆ 98 ವರ್ಷಗಳಾಗಿತ್ತು. ಕೆಲಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ಪತ್ನಿ ಸಾವಿತ್ರಮ್ಮ ಈ ಹಿಂದೆಯೇ ತೀರಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಶಶಿಧರ ಪ್ರಸಾದ್ ಅವರ ಪುತ್ರ. ಪುತ್ರಿ ಶಶಿಕಲಾ ಅಮೆರಿಕದಲ್ಲಿದ್ದಾರೆ.

ದೇಜಗೌ ಅವರ ಪಾರ್ಥೀವ ಶರೀರವನ್ನು ಜಯದೇವ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದ್ದು, ಅಮೆರಿಕದಲ್ಲಿರುವ ಅವರ ಪುತ್ರಿ ಆಗಮನದ ನಂತರ ಸಾರ್ವಜನಿಕರ ಅಂತಿಮ ದರ್ಶನ ಮತ್ತು ಅಂತ್ಯ ಸಂಸ್ಕಾರ ನಡೆಯಲಿದೆ. ಸಕಲ ಸರಕಾರಿ ಗೌರವಗೊಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.

1918 ರ ಜುಲೈ 8 ರಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆಯ ದೇವೇಗೌಡ-ಚನ್ನಮ್ಮ ದಂಪತಿ ಪುತ್ರರಾಗಿ ಜನಿಸಿದ ದೇಜಗೌ ಪ್ರಾಥಮಿಕ ಶಿಕ್ಷಣವನ್ನು ಚನ್ನಪಟ್ಟಣದಲ್ಲಿ ಮುಗಿಸಿ ಕಾಲೇಜು ಶಿಕ್ಷಣಕ್ಕೆ ಮೈಸೂರು ಸೇರಿದರು. ಕುವೆಂಪು ವಿಚಾರಧಾರೆಗಳು, ಕೃತಿಗಳಿಂದ ಪ್ರಭಾವಿತರಾದ ಅವರು ಕನ್ನಡದಲ್ಲಿ ಎಂಎ ಮುಗಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಸಾಹಿತ್ಯ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. ನಂತರ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು. 1969 ರಿಂದ ’75 ರವರೆಗೆ ಕುಲಪತಿಗಳೂ ಆದರು. ಕನ್ನಡ ವಿಶ್ವಕೋಶ, ಬಸವೇಶ್ವರ-ಅಂಬೇಡ್ಕರ್, ಬಸವೇಶ್ವರ ಒಂದು ತುಲನಾತ್ಮಕ ಅಧ್ಯಯನ, ನಳಚರಿತೆ, ಧರ್ಮಾಮೃತ ಸಂಗ್ರಹ, ಕಬ್ಬಿಗರ ಕಾವ, ರುಕ್ಮಾಂಗದ ಚರಿತ್ರೆ,  ಸಾಹಿತಿಗಳ ಸಾಂಗತ್ಯದಲ್ಲಿ, ರಾಷ್ಟ್ರಕವಿ ಕುವೆಂಪು, ತೀನಂಶ್ರೀ, ಮೋತಿಲಾಲ ನೆಹರೂ, ರಾಮಾಯಣ ದರ್ಶನಂ ವಚನ ಚಂದ್ರಿಕೆ, ಅನೇಕ ಜಾನಪದ ಕೃತಿಗಳು ಸೇರಿದಂತೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಅನೇಕ ಕೃತಿಗಳನ್ನು ರಚಿಸಿರುವ ದೇಜಗೌ ಅವರು ಬೆಂಗಳೂರಿನಲ್ಲಿ ನಡೆದ 47 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದ ದೇಜಗೌ ಹಠ ಹೋರಾಟಗಳಿಗೆ ಹೆಸರಾಗಿದ್ದರು. ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡದಿದ್ದರೆ ಪದ್ಮಶ್ರೀ ಪ್ರಶಸ್ತಿ ವಾಪಸ್ಸು ಮಾಡುವುದಾಗಿಯೂ ಕೇಂದ್ರ ಸರಕಾರಕ್ಕೆ ಬೆದರಿಕೆ ಹಾಕಿದ್ದರು. ಗೋಕಾಕ ಚಳವಳಿ, ಕಾವೇರಿ ಹೋರಾಟ ಸೇರಿದಂತೆ ನಾಡು-ನುಡಿಗಾಗಿ ನಡೆದ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಕರ್ನಾಟಕ ವಿಶ್ವವಿದ್ಯಾಯಲದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಆಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೋರುರು ಪ್ರಶಸ್ತಿ, ಪದ್ಮ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕನ್ನಡ ವಿವಿ ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದರು.

Leave a Reply