ಅಮೆರಿಕ ಚುನಾವಣೆಯಲ್ಲಿ ಆಗ್ತಿದೆ ಮೋದಿ ಮಾದರಿ ಪ್ರಸ್ತಾಪ, ಆರ್ಥಿಕ ನೀತಿ ಅನುಕರಣೀಯ ಅಂದ್ರು ಸಿಸ್ಕೊದ ಅಧ್ಯಕ್ಷ

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಚುನಾವಣೆಗಳಾಗುವಾಗ ಅಮೆರಿಕವನ್ನೋ, ಇಂಗ್ಲೆಂಡ್ ಅನ್ನೋ ಪ್ರಸ್ತಾಪಿಸಿ ಹಾಗಿರಬೇಕಿತ್ತು- ಹೀಗಿರಬೇಕಿತ್ತು ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ ಅಧ್ಯಕ್ಷೀಯ ಚುನಾವಣೆಗೆ ತಯಾರಾಗುತ್ತಿರುವ ಅಮೆರಿಕದಲ್ಲಿ ಈಗ ಭಾರತದ ಉದಾಹರಣೆಗಳು ಧ್ವನಿಸುತ್ತಿವೆ.

‘ಅಮೆರಿಕದ ಮುಂದಿನ ಅಧ್ಯಕ್ಷರಾಗುವವರು ಮೋದಿ ಮಾದರಿಯಲ್ಲೇ ತಮ್ಮ ಆರ್ಥಿಕ ನೀತಿಗಳನ್ನು ಜನರ ಮುಂದಿರಿಸಬೇಕು’ ಎಂದಿದ್ದಾರೆ ತಂತ್ರಜ್ಞಾನ ದೈತ್ಯ ಕಂಪನಿ ಸಿಸ್ಕೊದ ಅಧ್ಯಕ್ಷ ಜಾನ್ ಚೇಂಬರ್ಸ್.

ಇದು ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಹೇಳಿದ್ದು ಎಂಬುದು ಇವರ ಮುಂದಿನ ಮಾತುಗಳಿಂದ ಸ್ಪಷ್ಟವಾಗಿದೆ. ‘ಈಗಿನ ಆಗುಹೋಗು ಗಮನಿಸಿದರೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರೇ ಅಧ್ಯಕ್ಷರಾಗಬಹುದು ಎನಿಸುತ್ತಿದೆ. ರಾಜಕೀಯ ಪಕ್ಷ ಯಾವುದೇ ಆಗಿರಲಿ, ಆದರೆ ಭಾರತದಲ್ಲಿ ನರೇಂದ್ರ ಮೋದಿ ತಂತ್ರಜ್ಞಾನವನ್ನು ಬಳಸಿಕೊಂಡು ಹೇಗೆ ಉದ್ಯೋಗಸೃಷ್ಟಿಗೆ ಮುಂದಾಗಿದ್ದಾರೋ ಅಂಥದೇ ಆರ್ಥಿಕ ದೃಷ್ಟಿಕೋನಗಳನ್ನು ಅಮೆರಿಕ ಅಧ್ಯಕ್ಷೀಯ ಆಕಾಂಕ್ಷಿಗಳೂ ಬಹಿರಂಗಪಡಿಸಬೇಕು’ ಎಂದಿದ್ದಾರೆ ಚೇಂಬರ್ಸ್.

ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟ್ ಅಪ್ ಇಂಡಿಯಾ’ ಯೋಜನೆಗಳು ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಬಲ ತುಂಬಿವೆ ಅಂತ ಸಿಸ್ಕೊ ಮುಖ್ಯಸ್ಥ ಪ್ರಶಂಸಿಸಿದ್ದಾರೆ.

ಮೇ 25ರ ‘ಬ್ಲೂಮ್ ಬರ್ಗ್ ಬ್ರೇಕ್ ವೆ ಸಮಿಟ್’ನಲ್ಲಿ ಚೇಂಬರ್ಸ್ ಹೇಳಿರುವ ಮಾತುಗಳು ಹಲವು ರೀತಿಯಲ್ಲಿ ಪ್ರಾಮುಖ್ಯ ಪಡೆಯುತ್ತವೆ. ಸಿಸ್ಕೊ ಅಮೆರಿಕದ ಅಗ್ರಗಣ್ಯ ತಂತ್ರಜ್ಞಾನ ಕಂಪನಿ. ಇಲ್ಲಿಂದ ಬರುವ ಮಾತುಗಳು ಬಹುಮಟ್ಟಿಗೆ ಅಲ್ಲಿನ ಉದ್ಯಮರಂಗದ ಆಲೋಚನೆಯನ್ನು ಪ್ರತಿಬಿಂಬಿಸುವಂಥವು.

ಹೇಗೆ ಪ್ರಾರಂಭದಲ್ಲಿ ನರೇಂದ್ರ ಮೋದಿಯವರನ್ನು ಕೋಮು ಧ್ರುವೀಕರಣದ ವ್ಯಕ್ತಿ ಎಂದು ಎದುರಾಳಿಗಳು ಬಿಂಬಿಸಿದರೋ ಅಂತೆಯೇ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಅತಿರೇಕವಾದಿ ಅಂತ ವ್ಯಾಖ್ಯಾನಿಸಲಾಯಿತು. ಟ್ರಂಪ್ ಕೆಲವು ಹೇಳಿಕೆಗಳು ಹಾಗೆಯೇ ಇದ್ದವಾದರೂ, ಮಾಧ್ಯಮಗಳಲ್ಲಿ ಈತ ಅಧ್ಯಕ್ಷೀಯ ರೇಸಿನಲ್ಲಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬರ್ಥದಲ್ಲಿ ವಿಶ್ಲೇಷಣೆಗಳು ಬಂದವು. ಆದರೇನಂತೆ? ಈ ಎಲ್ಲ ಟೀಕೆಗಳನ್ನು ಮೆಟ್ಟಿ ಟ್ರಂಪ್ ಗೆಲ್ಲುವ ಹಂತಕ್ಕೆ ಬಂದಿದ್ದಾಗಿದೆ.

ಹಳೆಓದು- ಮರುಓದು: ಮಹಾ ಅತಿರೇಕಿ ಅಂತ ಹಂಗಿಸಿಕೊಂಡ ಟ್ರಂಪ್ ಅಮೆರಿಕನ್ನರಿಗೇಕೆ ಆಪ್ತನಾಗಿದ್ದಾನೆ ಗೊತ್ತೇ?

ಈ ಸಂದರ್ಭದಲ್ಲಿ ಚೇಂಬರ್ಸ್ ಅಂಥವರು ಧ್ವನಿಸುತ್ತಿರುವುದೇನೆಂದರೆ- ಟ್ರಂಪ್ ರಾಜಕೀಯ ಸಿದ್ಧಾಂತಗಳು ಹೇಗಾದರೂ ಇದ್ದಿರಲಿ. ಆದರೆ ನರೇಂದ್ರ ಮೋದಿ ರೀತಿಯಲ್ಲಿ ಆರ್ಥಿಕತೆ ಸರಿಪಡಿಸುವತ್ತ ಪ್ರಯತ್ನವಿದ್ದರೆ ಉದ್ಯಮರಂಗಕ್ಕೆ, ಜನರಿಗೆ ಅಷ್ಟು ಸಾಕು ಎಂದು.

ಪರೋಕ್ಷವಾಗಿ ಈ ಹೇಳಿಕೆ ಟ್ರಂಪ್ ಕುರಿತಲ್ಲದೇ, ನರೇಂದ್ರ ಮೋದಿ ಯಶಸ್ಸನ್ನು ಜಗತ್ತು ಹೇಗೆ ಗ್ರಹಿಸುತ್ತಿದೆ ಎಂಬುದನ್ನೂ ಸಾರುತ್ತಿದೆ. ಇಲ್ಲಿ ನಾವು ಅಸಹಿಷ್ಣುತೆ, ಗೋಮಾಂಸ ಹೀಗೆಲ್ಲ ಥರಹೇವಾರಿ ವಿಷಯಗಳನ್ನು ಚರ್ಚಿಸಿಕೊಂಡಿದ್ದರೂ ಆರ್ಥಿಕತೆಯೇ ಮುಖ್ಯ ಮಾನದಂಡ, ಮೌಲ್ಯಮಾಪನ ಅಲ್ಲಿಯೇ ಎಂಬ ಚಿತ್ರಣವೊಂದನ್ನು ತೆರೆದಿರಿಸುತ್ತಿದೆ ಈ ಅಭಿಪ್ರಾಯ.

ಮುಂದುವರಿದು ಆ ಸಭೆಯಲ್ಲಿ ಚೇಂಬರ್ಸ್ ಹೇಳಿರುವುದು- ‘ಜೂನ್ 7-8ರ ಭೇಟಿಯಲ್ಲಿ ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿರುವ ಮೋದಿ ಅಲ್ಲಿಯೂ ಡಿಜಿಟಲ್ ಇಂಡಿಯಾ, ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಭಾರತದ ಅರ್ಥವ್ಯವಸ್ಥೆ ಬಗ್ಗೆಯೇ ಮಾತನಾಡುತ್ತಾರೆ. ನಾಗರಿಕರಿಗೆ ಕಡಿಮೆ ದರದಲ್ಲಿ ವೇಗದ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಿ ಆರೋಗ್ಯ ಸೇವೆಗಳನ್ನು ಮುಟ್ಟಿಸುವ ಕುರಿತೂ ಮಾತಾಡುತ್ತಾರೆ. ವಾಸ್ತವವಾಗಿ ರಾಷ್ಟ್ರೀಯ ಚರ್ಚೆಯ ವಿಷಯಗಳು ಇವೇ ಆಗಿರಬೇಕು. ಅಮೆರಿಕದಲ್ಲಿ ಮುಂದೆ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷ ಯಾವುದಾದರೂ ಇಲ್ಲಿನ ಆರ್ಥಿಕ ಅಪಸವ್ಯಗಳನ್ನು ನಿವಾರಿಸುವುದೇ ಅದರ ಆದ್ಯತೆ ಆಗಿರಬೇಕು. ಮುಂದಿನ ದಶಕದಲ್ಲಿ ಸರಾಸರಿ ಅಮೆರಿಕನ್ ಪ್ರಜೆಯ ವೇತನ 10-15 ಶೇಕಡ ಹೆಚ್ಚಾಗುವಂತೆ ನೋಡಿಕೊಳ್ಳಬೇಕು’ ಅಂತ ಪಾಠ ಹೇಳಿದ್ದಾರೆ.

ಅಲ್ಲಿಗೆ ಅಮೆರಿಕದವರು ಭಾರತದ ಮಾದರಿಯನ್ನು ಆದರ್ಶವಾಗಿರಿಸಿಕೊಂಡು ಚರ್ಚಿಸುವ ದಿನಗಳು ಬಂದಿವೆ ಎಂದಾಯಿತು!

Leave a Reply