ಬೆಂಗಳೂರಲ್ಲಿ ಭಾರಿ ಡಿಸೇಲ್ ವಾಹನಗಳು ಬ್ಯಾನ್ ಆಗುತ್ತವಾ? ಹಸಿರು ನ್ಯಾಯಮಂಡಳಿ ಪ್ರಕರಣ ಎತ್ತ ಸಾಗಿದೆ?

ಡಿಜಿಟಲ್ ಕನ್ನಡ ಟೀಮ್:

 ‘ಮಂಗಳವಾರವೇ ಕಡೆ ದಿನ. ರಾಜ್ಯದಲ್ಲಿ ವಾಯುಮಾಲಿನ್ಯಕ್ಕೆ ಅತಿ ಕೆಟ್ಟದಾಗಿ ಒಳಗಾಗಿರುವ ನಗರಗಳ ಮಾಹಿತಿ ಸಲ್ಲಿಸಿ. ಇಲ್ಲದಿದ್ದರೆ ಮುಖ್ಯ ಕಾರ್ಯದರ್ಶಿಗಳ ಬಂಧನಕ್ಕೆ ಆದೇಶಿಸಬೇಕಾಗುತ್ತದೆ’

ಇದು ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ ಟಿ) ಕರ್ನಾಟಕವೂ ಸೇರಿದಂತೆ 8 ರಾಜ್ಯಗಳಿಗೆ ಎಚ್ಚರಿಸಿರುವ ಪರಿ.

ಇದೀಗ ದೆಹಲಿಯ ರಾಷ್ಟ್ರ ರಾಜಧಾನಿ ಪ್ರಾಂತ್ಯದಲ್ಲಿ ಡಿಸೇಲ್ ಚಾಲಿತ ಭಾರಿ ವಾಹನಗಳಿಗೆ ನಿಷೇಧವಿದೆ. ಇದನ್ನು ಇನ್ನೂ 11 ನಗರಗಳಿಗೆ ವಿಸ್ತರಿಸಬೇಕು ಎಂಬ ಅರ್ಜಿ ಎನ್ ಜಿ ಟಿ ಮುಂದಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರವು ಇಂಥ ಕ್ರಮಕ್ಕೆ ಮುಂದಾಗಬಾರದೆಂದು ಪ್ರತಿಅರ್ಜಿ ಸಲ್ಲಿಸಿದೆ. ಈ ತೀರ್ಮಾನವಾಗುವುದಕ್ಕೆ ಮುಂಚೆ ಮಾಹಿತಿಗಳು ಬೇಕಲ್ಲ? ಈ ಸಂಬಂಧವಾಗಿಯೇ ಎನ್ ಜಿ ಟಿ ಗರಂ ಆಗಿ ಗಡವು ವಿಧಿಸಿದೆ.

ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಪಂಜಾಬ್, ಉತ್ತರ ಪ್ರದೇಶ, ಬಿಹಾರ ಈ ರಾಜ್ಯಗಳಿಂದ ಎನ್ ಜಿ ಟಿ ಈ ನಿಟ್ಟಿನಲ್ಲಿ ಕೋರಿರುವ ಮಾಹಿತಿಗಳು ಇವು- ರಾಜ್ಯದ ಅತಿ ಮಾಲಿನ್ಯಯುಕ್ತ ನಗರ ಯಾವುದು? ಆ ನಗರದಲ್ಲಿರುವ ವಾಹನಗಳ ಸಂಖ್ಯೆ ಹಾಗೂ ಪೆಟ್ರೋಲ್- ಡಿಸೇಲ್ ವಾಹನಗಳ ವರ್ಗೀಕರಣ ನೀಡಿ. ಅತಿ ಮಾಲಿನ್ಯಯುಕ್ತ ನಗರದ ಪ್ರಸ್ತುತ ಜನಸಂಖ್ಯೆ ಮಾಹಿತಿ ಕೊಡಿ.

ದೆಹಲಿಯಲ್ಲಿರುವ ನಿಷೇಧ ಮಾದರಿಯನ್ನು ಬೆಂಗಳೂರು, ಮುಂಬೈ, ಹೈದರಾಬಾದ್, ಕೋಲ್ಕತಾಗಳಿಗೂ ವಿಸ್ತರಿಸಬೇಕು ಎಂಬುದು ಅರ್ಜಿದಾರರ ವಾದ.

ಕೇರಳದ ಪ್ರಮುಖ ನಗರಗಳಲ್ಲಿ 10 ವರ್ಷಕ್ಕೆ ಮೀರಿದ ಡಿಸೇಲ್ ಎಂಜಿನ್ ಹೊಂದಿರುವ ಎಲ್ಲ ಬಗೆಯ ವಾಹನಗಳನ್ನು ನಿಷೇಧಿಸಿ ಎನ್ ಜಿ ಟಿ ಆದೇಶಿಸಿದೆ. 2000 ಸಿಸಿ ಗಿಂತ ಹೆಚ್ಚಿನ ಲಕ್ಸುರಿ ಡಿಸೇಲ್ ಕಾರ್ ಗಳ ಹೊಸ ನೋಂದಾವಣಿ ಇಲ್ಲ ಎಂಬ ನಿಯಮ ಕೇರಳ ಮತ್ತು ದೆಹಲಿ ಎನ್ ಸಿ ಆರ್ ವಿಭಾಗಗಳಲ್ಲಿ ಜಾರಿಯಲ್ಲಿದೆ.

ಈ ನಿಷೇಧ ಪರ್ವವು ಬೆಂಗಳೂರು ಸೇರಿದಂತೆ ಉಳಿದ ನಗರಗಳನ್ನು ಆವರಿಸಲಿದೆಯೇ ಎಂಬುದಕ್ಕೆ ಎಲ್ಲರೂ ಎನ್ ಜಿ ಟಿಯತ್ತ ಮುಖ ಮಾಡಿ ಕುಳಿತಿದ್ದಾರೆ. ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವಾಲಯ ಇದನ್ನು ವಿರೋಧಿಸಿ ಎನ್ ಜಿ ಟಿ ಮುಂದೆ ನಿಂತಿದೆ.

ಏಕೆಂದರೆ ಇದರಿಂದ ಅಟೊಮೊಬೈಲ್ ಉದ್ಯಮ ನಷ್ಟಕ್ಕೆ ಸಿಲುಕುತ್ತದೆ ಎಂಬ ಆತಂಕ ಮನೆಮಾಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ದೆಹಲಿ ಎನ್ ಸಿಆರ್ ನಲ್ಲಿ ಜಾರಿಯಲ್ಲಿರುವ ನಿಷೇಧವೇ ಈ ಕ್ಷೇತ್ರದ ಸುಮಾರು 5500 ಉದ್ಯೋಗಗಳನ್ನು ಕಸಿದಿದೆ. ಇದನ್ನು ಭಾರತದ ಬೇರೆ ಮಹಾನಗರಗಳಿಗೂ ವಿಸ್ತರಿಸಿದರೆ 47 ಸಾವಿರ ಉದ್ಯೋಗಗಳು ನಷ್ಟವಾಗುತ್ತವೆ ಎಂದು ‘ಸೊಸೈಟಿ ಆಫ್ ಇಂಡಿಯನ್ ಅಟೊಮೊಬೈಲ್ ಮನುಫ್ಯಾಕ್ಚರರ್ಸ್’ ಸಂಸ್ಥೆ ಅಂದಾಜು ಹಾಕಿದೆ.

Leave a Reply