ವಾದ್ರಾಗೆ ಶಸ್ತ್ರಾಸ್ತ್ರ ಡೀಲರ್ ನಂಟು?

ಡಿಜಿಟಲ್ ಕನ್ನಡ ಟೀಮ್:

ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ, ಶಸ್ತ್ರಾಸ್ತ್ರ ವ್ಯಾಪಾರಿ ಒಬ್ಬರಿಂದ ಲಂಡನ್ ನಲ್ಲಿ 19 ಕೋಟಿ ರು. ಮೌಲ್ಯದ ಬೇನಾಮಿ ಮನೆ ಪಡೆದ್ದಾರೆಯೇ? ಎನ್ ಡಿ ಟಿವಿಯ ತನಿಖಾ ವರದಿಯೊಂದು ಸೋಮವಾರ ಈ ಚರ್ಚೆಗೆ ನಾಂದಿ ಹಾಡಿದೆ.

ವಿತ್ತ ಸಚಿವಾಲಯವು ನಡೆಸುತ್ತಿರುವ ತನಿಖೆಯಲ್ಲಿ ಈ ಅಂಶವನ್ನೇ ಕೇಂದ್ರಿಕರಿಸಲಾಗಿದೆ ಎಂದು ಅದು ತನಗೆ ದೊರೆತಿರುವ ರಹಸ್ಯ ದಾಖಲೆಗಳ ಆಧಾರದಲ್ಲಿ ವರದಿ ಮಾಡಿದೆ. ಸಂಜಯ್ ಭಂಡಾರಿ ಎಂಬ ಶಸ್ತ್ರಾಸ್ತ್ರ ಡೀಲರ್ ಒಡೆತನದ 18 ಜಾಗಗಳ ಮೇಲೆ ಕಳೆದ ತಿಂಗಳು ತನಿಖಾ ಏಜೆನ್ಸಿಗಳು ದಾಳಿ ಮಾಡಿ ದಾಖಲೆ ಸಂಗ್ರಹಿಸಿದ್ದವು. ಅಲ್ಲಿ ಲಭ್ಯವಾಗಿರುವ ದಾಖಲೆಗಳ ಪೈಕಿ ಈ ಸಂಜಯ್ ಭಂಡಾರಿ ಜತೆ ರಾಬರ್ಟ್ ವಾದ್ರಾ ಮತ್ತು ಅವರ ಸಹಾಯಕ ಮನೋಜ್ ಅರೋರಾ ನಡುವಿನ ಇ ಮೇಲ್ ಪತ್ರ ವ್ಯವಹಾರಗಳೂ ಸೇರಿವೆ. ಇವುಗಳ ಆಧಾರದಲ್ಲಿ ರೂಪುಗೊಂಡಿರುವ ಸರ್ಕಾರಿ ವರದಿ ಕೊಡುತ್ತಿರುವ ಚಿತ್ರಣ ಎಂದರೆ: ಲಂಡನ್ ನ ಬ್ರಿಯಾನ್ಸ್ಟನ್ ಸ್ಕೇವರ್ ನ ’12 ಎಲ್ಲಾರ್ಟನ್ ಹೌಸ್’ ನವೀಕರಣಕ್ಕೆ ಸಂಬಂಧಿಸಿದ ಹಣ ಪಾವತಿ ಬಗ್ಗೆ ವಾದ್ರಾ ಮತ್ತವರ ಸೆಕ್ರೆಟರಿ ಹಲವು ಇ ಮೇಲ್ ಗಳನ್ನು ಭಂಡಾರಿಯ ಲಂಡನ್  ಸೆಕ್ರೆಟರಿ ಸುಮಿತ್ ಚಡ್ಡಾಗೆ ಕಳುಹಿಸಿದ್ದಾರೆ. 2009ರ ಅಕ್ಟೋಬರ್ ನಲ್ಲಿ₹19 ಕೋಟಿಗೆ ಖರೀದಿಯಾಗಿದ್ದ ಈ ಮನೆಯನ್ನು 2010 ಜೂನ್ ನಲ್ಲಿ ಮಾರಲಾಗಿದೆ.

ಈ ಬಗೆಯ ಯಾವುದೇ ವ್ಯವಹಾರಗಳಾಗಿಲ್ಲ, ಲಂಡನ್ ನ ಆ ವಿಳಾಸದಲ್ಲಿ ವಾದ್ರಾ ನೇರವಾಗಿ ಅಥವಾ ಇನ್ಯಾರ ಮೂಲಕವೂ ಮನೆ ಹೊಂದಿರಲಿಲ್ಲ ಎಂದು ವಾದ್ರಾ ವಕೀಲರು ಪ್ರತಿಕ್ರಿಯಿಸಿದ್ದಾರೆ.

ಮೋದಿ ಸರ್ಕಾರ ಬರುತ್ತಲೇ ಸಂಜಯ್ ಭಂಡಾರಿ ಮಾಲಿಕತ್ವದ ‘ಆಫ್ ಸೆಟ್ ಇಂಡಿಯಾ ಸೊಲ್ಯೂಷನ್’ ಅನ್ನು ಇಂಟಲಿಜೆನ್ಸ್ ಬ್ಯೂರೊ ವರದಿ ಆಧಾರದಲ್ಲಿ ರಕ್ಷಣಾ ವ್ಯವಹಾರಗಳಿಂದ ದೂರವಿರಿಸಲಾಗಿತ್ತು. ಹಣಕಾಸು ಅವ್ಯವಹಾರದ ಆರೋಪದಲ್ಲಿ ತನಿಖಾ ಸಂಸ್ಥೆಗಳಿಂದ ಪ್ರಶ್ನೆಗೆ ಒಳಗಾಗುತ್ತಿರುವ ವ್ಯಕ್ತಿ ಸಂಜಯ್ ಭಂಡಾರಿ. ವಾದ್ರಾ ಲಂಡನ್ ಮನೆಯ ವಿಚಾರದಲ್ಲಿ ಪ್ರಶ್ನಿಸಿದಾಗ ಭಂಡಾರಿ ನೇರ ಉತ್ತರ ನೀಡಿಲ್ಲಎಂದು ಸರ್ಕಾರಿ ವರದಿ ಹೇಳುತ್ತಿರುವುದಾಗಿ ಎನ್ ಡಿ ಟಿ ವಿ ವರದಿ ಮಾಡಿದೆ.

Leave a Reply