ಎಐಬಿ ತನ್ಮಯ್ ಭಟ್ ಮಾಡಿರೋ ಸಚಿನ್- ಲತಾ ಮಿಮಿಕ್ರಿ ಸಹ್ಯವಲ್ಲ ಎನ್ನೋದಕ್ಕಿರುವ 4 ಕಾರಣಗಳು

ಡಿಜಿಟಲ್ ಕನ್ನಡ ಟೀಮ್:

ಎಐಬಿ ಎಂಬ ಕಾಮಿಡಿ ತಂಡದ ತನ್ಮಯ್ ಭಟ್ ಈಗ ನಾನಾ ವಲಯಗಳ ಪ್ರಮುಖರಿಂದ, ನೆಟ್ ನಾಗರಿಕರಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ. ಶಿವಸೇನೆಯಿಂದ ಬಂಧನದ ಆಗ್ರಹವೂ ಆಗಿದೆ. ಇದಕ್ಕೆ ಕಾರಣ, ವಿಡಿಯೋ ಒಂದರಲ್ಲಿ ಸಚಿನ್ ತೆಂಡುಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರನ್ನು ಮಿಮಿಕ್ರಿ ಮಾಡಿ ಅವಮಾನಿಸಿರುವುದು.

ಬಿಜೆಪಿ, ಜೆಡಿಯು, ಎಲ್ ಜೆಪಿ ಸೇರಿದಂತೆ ಹಲವು ಪಕ್ಷಗಳ ರಾಜಕೀಯ ನಾಯಕರು ಹಾಗೂ ಬಾಲಿವುಡ್ ತೆರೆಗಳು ಖಂಡಿಸಿದ್ದಾರೆ. ವಿಡಿಯೋವನ್ನು ಬ್ಲಾಕ್ ಮಾಡುವ ಪ್ರಕ್ರಿಯೆ ಶುರುವಾಗಿರುವ ಬಗ್ಗೆ ವರದಿಗಳಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವೇನೋ ಸರಿ, ಆದರೆ ಅದು ಈ ಮಟ್ಟಕ್ಕೆ ಹೋಗಿ ಅವಹೇಳನಕ್ಕೆ ಬಳಕೆಯಾಗಬಾರದು ಎಂಬುದೇ ಪ್ರತಿಕ್ರಿಯಿಸಿರುವ ಹೆಚ್ಚಿನವರ ಅಭಿಪ್ರಾಯವಾಗಿದೆ.

ಮಿಮಿಕ್ರಿ ಮಾಡುವುದು ತಪ್ಪೇ ಎಂಬ ಪ್ರಶ್ನೆ ಕೇಳುವವರು ಎಐಬಿ ವಿಷಯದಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

  1. ಸಚಿನ್ ಮುಖವಾಡದ ಪಾತ್ರ ಲತಾ ಮಂಗೇಶ್ಕರ್ ಉದ್ದೇಶಿಸಿ ‘ನೀವು 5 ಸಾವಿರ ವರ್ಷ ಪುರಾತನ. ನಿಮಗೆ ಕೆಲ ವಿಷಯಗಳು ಅರ್ಥವಾಗಲ್ಲ. ಎಂಟು ದಿನ ನೀರಿನಲ್ಲಿ ಅದ್ದಿ ಇಟ್ಟವರಂತಿದ್ದೀರಿ’ ಇತ್ಯಾದಿ ಸಂಭಾಷಣೆಗಳಿವೆ. ಒಬ್ಬರ ದೇಹದ ಮೇಲೆ ಕಾಮೆಟಿಸೋದು ಯಾವ ಸೀಮೆ ಕಾಮಿಡಿ?
  2. ಸುಮ್ಮನೇ ತಮಾಷೆಗೆ ಮಾಡಿದ್ದು, ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬಾರದು ಎಂದೆಲ್ಲ ಸಮಜಾಯಿಷಿ ಕೊಟ್ಟರೂ, ಪ್ರಸ್ತುತ ಈ ವಿಡಿಯೋದಲ್ಲಿ ಮಾಡಿರುವುದು ತಮಾಷೆ ಹೆಸರಲ್ಲಿ ದ್ವೇಷದ ಪ್ಯಾಕೇಜ್. ಇದನ್ನು ಒಪ್ಪಲಾದೀತೇ?
  3. ಪ್ರಧಾನಿಯಿಂದ ಹಿಡಿದು ಯಾರ ಮೇಲಾದರೂ ಕಾಮಿಡಿ ಮಾಡಬಹುದು ಖರೆ. ಆದರೆ ಅದಕ್ಕೊಂದು ಸಂದರ್ಭ ಇರಬೇಕಲ್ಲ? ಅಂದರೆ ಮೂರ್ಖ ಹೇಳಿಕೆಯನ್ನೋ, ಸೆಲಿಬ್ರಿಟಿಯ ತಪ್ಪು ನಡೆಯನ್ನೋ, ವಿವಾದವನ್ನೋ ಪ್ರಸ್ತುತಪಡಿಸುವುದಕ್ಕೆ ಹಾಗೂ ಟೀಕಿಸುವುದಕ್ಕೆ ವ್ಯಂಗ್ಯವನ್ನು ಬಳಸಿಕೊಳ್ಳುವುದು ಸರಿ. ಈ ವಿಡಿಯೋದಲ್ಲಿ ಸಚಿನ್ ಮತ್ತು ಲತಾರನ್ನು ಎಳೆದು ತಂದಿರುವುದಕ್ಕೆ ಅಂಥ ಯಾವ ಸಂದರ್ಭಗಳೂ ಇಲ್ಲ. ಸಚಿನ್ ತೆಂಡುಲ್ಕರ್ ಯಾವುದಾದರೂ ಹೇಳಿಕೆ ಕೊಟ್ಟು ಅದನ್ನು ಟೀಕಿಸುವುದಕ್ಕೆ ತಮಾಷೆ ಬಳಸಿಕೊಳ್ಳಲಾಗಿದೆಯಾ ಅಥವಾ ಲತಾ ಮಂಗೇಶ್ಕರ್ ಯಾವುದಾದರೂ ವಿವಾದದಲ್ಲಿದ್ದು ಆ ಬಗ್ಗೆ ಕಾಮಿಡಿ ಮಾಡಲಾಯಿತಾ ಎಂಬ ಪ್ರಶ್ನೆ ಹಾಕಿಕೊಂಡರೆ ಅಂಥ ಯಾವ ಸಂಗತಿಗಳೂ ಇಲ್ಲಿಲ್ಲ. ಬೆಳಗ್ಗೆ ಎದ್ದು ನಿಮ್ಮ ತೆವಲಿಗೆ ಯಾರನ್ನೋ ಅವಹೇಳನ ಮಾಡಿ ಅದನ್ನು ಕಾಮಿಡಿ ಎಂದರೆ ಹೇಗೆ?
  4. ಇಷ್ಟವಿಲ್ಲದಿದ್ದವರು ನೋಡಬೇಡಿ ಅಷ್ಟೆ ಎಂಬ ಎಂದಿನ ವಾದವೊಂದಿದೆ. ಯಾರೋ ಪೋಲಿ ರಸ್ತೆಯಲ್ಲಿ ನಮಗೆ ಸಂಬಂಧಪಡದ ವ್ಯಕ್ತಿಗಳನ್ನು ಕೆಟ್ಟದಾಗಿ ಬಯ್ದುಕೊಂಡು ಹೋಗುತ್ತಿದ್ದರೆ, ವಿಷಯ ನಮ್ಮದಲ್ಲವಲ್ಲ ಅಂತ ದಿನವೂ ಹಾಗೆಯೇ ಸಹಿಸಿಕೊಳ್ಳುವುದಿಲ್ಲವಲ್ಲ? ಶಾಂತಿಭಂಗವಾಗುತ್ತಿದೆ ಅಂತ ಒಂದೋ ಜನ ಆತನಿಗೆ ಗದರುತ್ತಾರೆ, ಇಲ್ಲವೇ ಪೋಲೀಸರಿಗೆ ದೂರುತ್ತಾರೆ. ಇಂಟರ್ನೆಟ್ ಹೆದ್ದಾರಿಯಲ್ಲೂ ಹಾಗೆಯೇ. ನಾನು ಯಾರಿಗಾದರೂ ಅವಹೇಳನ ಮಾಡ್ತೀನಿ, ಇಷ್ಟವಾದರೆ ನೋಡಿ ಇಲ್ದಿದ್ರೆ ಮುಂದೆ ಹೋಗಿ ಅನ್ನೋದು ವಿತಂಡವಾದ.

Leave a Reply