ಶಸ್ತ್ರಾಸ್ತ್ರ ಕಾಪಾಡಲು ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ: ರಕ್ಷಣಾ ಸಚಿವ ಪಾರಿಕ್ಕರ್

 

ಡಿಜಿಟಲ್ ಕನ್ನಡ ಟೀಮ್:

‘ಅಗ್ನಿ ಅವಘಡಕ್ಕೆ ಒಳಗಾದ ಪುಲಗಾಂವ್ ನ ಸೇನಾ ಆಯುಧಾಗಾರದಲ್ಲಿ 16 ಯೋಧರು ಮೃತರಾಗಿದ್ದು, ಶಸ್ತ್ರಾಸ್ತ್ರಗಳನ್ನು ರಕ್ಷಿಸುವುದಕ್ಕೆ ತಮ್ಮ ಪ್ರಾಣ ಲೆಕ್ಕಿಸದೇ ಬೆಂಕಿ ಆರಿಸುತ್ತ ಪ್ರಾಣತ್ಯಾಗ ಮಾಡಿದ್ದಾರೆ. ಇಲ್ಲವಾದಲ್ಲಿ ಬೆಂಕಿ ಇನ್ನೂ ವ್ಯಾಪಿಸುತ್ತಿತ್ತು.’ ಇದು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಪ್ರಶಂಸಾತ್ಮಕ ಹೇಳಿಕೆ. ಬೆಂಕಿ ಹೊತ್ತಿಕೊಂಡಿದ್ದಕ್ಕೆ ನಿಖರ ಕಾರಣಗಳು ತನಿಖೆ ನಂತರವಷ್ಟೇ ತಿಳಿಯಲು ಸಾಧ್ಯ. ಆದರೆ ಇದರಲ್ಲಿ ಬಾಹ್ಯ ಶಕ್ತಿಗಳ ಸಂಚಿನ ಸಾಧ್ಯತೆ ಬಹಳ ಕಡಿಮೆ ಎಂದಿದ್ದಾರೆ ಸಚಿವರು.

ಇದಕ್ಕೂ ಮೊದಲು ವರದಿಯಾದಂತೆ- ಮಹಾರಾಷ್ಟ್ರದ ಪುಲಗಾಂವ್ ನ ಸೇನಾ ಶಸ್ತ್ರಾಗಾರದಲ್ಲಿ ಸಂಭವಿಸಿದ ಅಗ್ನಿ ದುರಂತ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ 20 ಮಂದಿಯನ್ನು ಬಲಿತೆಗೆದುಕೊಂಡಿದೆ ಎಂಬ ಮಾಹಿತಿ ಇತ್ತು. ಆದರೆ ರಕ್ಷಣಾ ಸಚಿವರು ದೃಢಪಡಿಸಿರುವ ಪ್ರಕಾರ ಸಾವಿನ ಸಂಖ್ಯೆ 16.  ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ ಗೆ ಸೇರಿದ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಗಪುರದಿಂದ 110 ಕಿ.ಮೀ ದೂರದಲ್ಲಿರುವ ಪುಲಗಾಂವ್ ನ ಈ ಸೇನಾ ಆಯುಧಾಗಾರವು ಭಾರತದ ಅತಿ ದೊಡ್ಡ ಶಸ್ತ್ರಾಸ್ತ್ರ ದಾಸ್ತಾನು ಸಂಗ್ರಹವಾಗಿದೆ. ಹಳೆ ಶಸ್ತ್ರಾಸ್ತ್ರಗಳನ್ನು ವಿಲೇವಾರಿ ಮಾಡುವುದಕ್ಕೆ ಸೌರ ವಿದ್ಯುತ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಹೆಗ್ಗಳಿಕೆಯೂ ಇದರದ್ದು. ಇಡೀ ಪಶ್ಚಿಮ ವಿಭಾಗಕ್ಕೆ ಪೂರೈಕೆ ಕೇಂದ್ರವಾಗಿರುವ ಇಲ್ಲಿ ಬ್ರಹ್ಮೋಸ್ ನಂಥ ಕ್ಷಿಪಣಿಗಳನ್ನೂ ಇಡಲಾಗಿದೆ. ಇಂಥ ಸೂಕ್ಷ್ಮ ಕೇಂದ್ರದಲ್ಲಿ ಹರಡಿರುವ ಅಗ್ನಿ ಕೇವಲ  ಆಕಸ್ಮಿಕವೋ, ಬೇರೆ ಆಯಾಮಗಳಿವೆಯೋ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಆದರೆ ಪಾರಿಕ್ಕರ್ ಪ್ರಕಾರ ಇದರಲ್ಲಿ ಆತಂಕವಾದ ಇಲ್ಲವೇ ಬಾಹ್ಯ ಶಕ್ತಿಗಳ ಕೈವಾಡವೇನೂ ಸದ್ಯಕ್ಕೆ ಕಂಡುಬರುತ್ತಿಲ್ಲ.

ಇದು ತುಂಬ ನೋವಿನ ಸುದ್ದಿ. ಸಂತ್ರಸ್ತರ ಕುಟುಂಬಕ್ಕೆ ಸಂತಾಪ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

Leave a Reply