ಆರ್ಟ್ ಆಫ್ ಲಿವಿಂಗ್ ದಂಡ ಕಟ್ಟಲೇಬೇಕು- ಎನ್ ಜಿ ಟಿ ಆದೇಶ

ಡಿಜಿಟಲ್ ಕನ್ನಡ ಟೀಮ್:

ಯಮುನಾ ತೀರದಲ್ಲಿ ಸಾಂಸ್ಕೃತಿಕ ಹಬ್ಬ ಆಯೋಜಿಸಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ ಟಿ) ₹5 ಕೋಟಿ ದಂಡ ವಿಧಿಸಿತ್ತಷ್ಟೆ. ಇದನ್ನು ದಂಡ ಅಂತಲ್ಲದೇ ಯಮುನಾ ತೀರದಲ್ಲಿ ಜೀವ ವೈವಿಧ್ಯ ಪಾರ್ಕ್ ನಿರ್ಮಾಣಕ್ಕೆ ಇರುವ ಬ್ಯಾಂಕ್ ಗ್ಯಾರಂಟಿ ಎಂದು ಪರಿಗಣಿಸಬೇಕು ಎಂಬ ಸಂಸ್ಥೆಯ ಅರ್ಜಿಯನ್ನು ಎನ್ ಜಿ ಟಿ ತಿರಸ್ಕರಿಸಿದೆ. ಮಧ್ಯಾಂತರ ಆದೇಶ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ 25 ಲಕ್ಷ ರುಪಾಯಿ ಪಾವತಿಸಿತ್ತು. ಉಳಿದ ಮೊತ್ತವನ್ನು ದಂಡವಾಗಿ ತುಂಬಬೇಕು ಎಂದು ಎನ್ ಜಿ ಟಿ ಮಂಗಳವಾರ ಆದೇಶಿಸಿದೆ.

ಯಮುನಾ ಪ್ರವಾಹ ಪ್ರದೇಶದಲ್ಲಿ ಸಾಂಸ್ಕೃತಿಕ ಹಬ್ಬಕ್ಕೂ ಮುಂಚೆ ಪರಿಸರ ಹೇಗಿತ್ತೋ ಅದಕ್ಕಿಂತ ಸುಸ್ಥಿತಿ ಈಗಿದೆ ಎಂಬುದು ಆರ್ಟ್ ಆಫ್ ಲಿವಿಂಗ್ ವಾದ. ಅಲ್ಲದೇ, ಯಮುನಾ ತೀರದಲ್ಲಿ ಪರಿಸರಕ್ಕೆ ಆಗಿರುವ ಹಾನಿ ಪರಿಶೀಲನೆಗೆ ಎನ್ ಜಿ ಟಿ ನೇಮಿಸಿದ್ದ ಪರಿಸರ ಪರಿಣತರ ಸಮಿತಿ ಸಹ ಪೂರ್ವಾಗ್ರಹಪೀಡಿತವಾಗಿದೆ ಎಂಬುದು ಆರ್ಟ್ ಆಫ್ ಲಿವಿಂಗ್ ಪ್ರತಿಪಾದನೆ. ‘ಜೈಲಿಗೆ ಬೇಕಾದರೆ ಹೋಗುತ್ತೇನೆ, ಆದರೆ ದಂಡವಾಗಿ ಯಾವ ಮೊತ್ತವನ್ನೂ ಕಟ್ಟುವುದಿಲ್ಲ’ ಎಂದು ಈ ಹಿಂದೆ ಟಿವಿ ಸಂದರ್ಶನಗಳಲ್ಲಿ ರವಿಶಂಕರ್ ಗುರೂಜಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೀಗ ಎನ್ ಜಿ ಟಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಹೋಗುವುದಕ್ಕೆ ಸಂಸ್ಥೆ ಆಲೋಚಿಸಿದೆ.

Leave a Reply