‘ಫೇರ್ ಆ್ಯಂಡ್ ಲವ್ಲಿ’ಯೋ, ‘ನಿಶ್ಚಿಂತ ನಿದ್ರೆ’ಯೋ… ಒಟ್ನಲ್ಲಿ ತೆರಿಗೆ ವಂಚಿತ ಹಣ ಒಪ್ಪಿಸೋಕೆ ನಾಳೆಯಿಂದ ಅವಕಾಶ

 

ಡಿಜಿಟಲ್ ಕನ್ನಡ ಟೀಮ್:

ದೇಶದೊಳಗೆ ಕಳ್ಳಹಣ ಇಟ್ಟುಕೊಂಡವರು ತಮ್ಮ ಪಾಪ ನಿವಾರಿಸಿಕೊಳ್ಳುವುದಕ್ಕೆ ಇರುವ ಅವಕಾಶ ಬುಧವಾರದಿಂದ ಶುರುವಾಗಲಿದ್ದು, ನವೆಂಬರ್ 31ಕ್ಕೆ ಮುಕ್ತಾಯವಾಗಲಿದೆ.

ಈ ಅವಧಿಯಲ್ಲಿ ತಮ್ಮಲ್ಲಿರುವ ತೆರಿಗೆರಹಿತ ಆಸ್ತಿಗಳ ಲೆಕ್ಕ ಒಪ್ಪಿಸಿದಲ್ಲಿ ಅಂಥವರಿಗೆ ಆದಾಯ ತೆರಿಗೆ ಕಾಯ್ದೆ ಮತ್ತು ಬೇನಾಮಿ ವ್ಯವಹಾರ ತಡೆ ಕಾಯ್ದೆಗಳಿಂದ ಈವರೆಗಿನ ಕೃತ್ಯಕ್ಕೆ ಮಾಫಿ ಸಿಗುತ್ತದೆ. ಇಂಥ ಆಸ್ತಿಗಳಿಗೆ ಮಾರುಕಟ್ಟೆ ಮೌಲ್ಯದ ಶೇ. 45ರಷ್ಟು ದಂಡ ಮತ್ತು ತೆರಿಗೆ ಬೀಳುತ್ತದೆ.

ಕೇಂದ್ರ ಆಯವ್ಯಯದಲ್ಲೇ ಪ್ರಸ್ತಾಪಿತವಾಗಿದ್ದ ಯೋಜನೆ ಇದು. ಇದಕ್ಕೆ ಲೋಕಸಭೆಯಲ್ಲಿ ಪ್ರತಿಕ್ರಿಯಿಸುತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಕಪ್ಪನ್ನು ಬಿಳುಪಾಗಿಸುವ ಫೇರ್ ಆ್ಯಂಡ್ ಲವ್ಲಿ ಯೋಜನೆ ಇದು’ ಅಂತ ಕಟಕಿಯಾಡಿದ್ದರು. ಆದರೆ, ಇದೀಗ ಜಪಾನ್ ಪ್ರವಾಸದಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪ್ರಕಾರ, ‘ಜೂನ್ 1ರಿಂದ ತೆರೆದುಕೊಳ್ಳುವ ಈ ಅವಕಾಶ ಅಕ್ರಮ ಸಂಪತ್ತು ಹೊಂದಿದವರು ತಮ್ಮ ಆಸ್ತಿ ಘೋಷಣೆ ಮಾಡಿ, ತೆರಿಗೆ ತುಂಬಿ ನಂತರ ಕಾನೂನಿನ ಭಯವಿಲ್ಲದೇ ರಾತ್ರಿ ನಿಶ್ಚಿಂತ ನಿದ್ರೆ ಮಾಡುವುದಕ್ಕೆ ಅನುಕೂಲ ಕಲ್ಪಿಸುತ್ತದೆ. ಇಲ್ಲದಿದ್ದರೆ ಒಂದರ ಹಿಂದೊಂದರಂತೆ ಸಾರ್ವಜನಿಕವಾಗುತ್ತಿರುವ ಲೆಕ್ಕಗಳ ಸಾಲಿನಲ್ಲಿ ಅವರೂ ಸಿಲುಕಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.’

ವಿದೇಶಗಳಲ್ಲಿರುವ ತೆರಿಗೆ ವಂಚಿತ ಹಣದ ಲೆಕ್ಕ ಒಪ್ಪಿಸುವ ಇಂಥದೇ ಅವಕಾಶವನ್ನು ಹಿಂದೆಯೇ ನೀಡಲಾಗಿತ್ತು.

Leave a Reply