ಕನ್ನಡ ಕಲಿಯುವೆ- ಕರ್ನಾಟಕದ ಹಿತಾಸಕ್ತಿ ಕಾಪಾಡುವೆ ಅಂದ್ರು ನಿರ್ಮಲಾ, ಅಂತೂ ಕನ್ನಡಿಗರು ಧ್ವನಿ ಎತ್ತಿದರೆ ಬಿಸಿ ಮುಟ್ಟೋದು ಖಾತ್ರಿಯಾಯ್ತು!

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಕಲಿತು ರಾಜ್ಯದ ಸಮಸ್ಯೆಗಳಿಗೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕನ್ನಡ ಭಾಷೆ ಕಲಿಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯದ ನೆಲ, ಜಲ, ಭಾಷೆ, ಗಡಿ ಸೇರಿದಂತೆ ಯಾವುದೇ ಪ್ರಚಲಿತ ಸಮಸ್ಯೆಗಳಿಗೆ ಜನರ ಸೇವಕಿಯಾಗಿ ಕೆಲಸ ಮಾಡುತ್ತೇನೆ.’ ಎಂದರು.

ಯಾರೇನೇ ಹೇಳಿದರೂ ಇದು ಕನ್ನಡ ಹಿತಾಸಕ್ತಿಯ ಪರವಾಗಿ ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ನಾನಾ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದ್ದ ಅಭಿಪ್ರಾಯದ ಸ್ವೀಕಾರವೇ ಆಗಿದೆ. ಈ ಮೊದಲು ಬಿಜೆಪಿಗರ ಬಾಯಲ್ಲಿ ಬರುತ್ತಿದ್ದದ್ದು- ‘ಬೇರೆ ಪಕ್ಷಗಳ ರಾಜ್ಯಸಭೆ ಸದಸ್ಯರು ಏನು ಮಾಡ್ತಾರೆ ಹೇಳ್ರಿ ಮೊದ್ಲು’ ಎಂಬಂತಹ ಪ್ರತಿಕ್ರಿಯೆ. ಆದರೆ ಕೊನೆಪಕ್ಷ ಈಗ ಭಾಷೆ- ಭಾವ ಬದಲಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋಗುವುದು ಅಂದರೆ ಕೆಲಸಗಾರ, ಚಿಂತಕ ಆಗಿದ್ದರಷ್ಟೇ ಅಲ್ಲ ಬದಲಿಗೆ ಕರ್ನಾಟಕದ ಪರ ಧ್ವನಿ ಎತ್ತಬೇಕಾದ ಅಗತ್ಯವೂ ಇದೆ ಅಂತ ಬಿಜೆಪಿ ನಿಧಾನವಾಗಿ ಒಪ್ಪಿಕೊಳ್ಳಬೇಕಾಗಿದೆ. ಅದು ನಿರ್ಮಲಾ ಸೀತಾರಾಮನ್ ಅವರ ವಿನಮ್ರ ಮಾತುಗಳಲ್ಲಿ ಬಿಂಬಿತವಾಗಿದೆ. ಬಹುಶಃ, ವೆಂಕಯ್ಯ ಅವರನ್ನೇ ಕೇಂದ್ರೀಕರಿಸಿಕೊಂಡು ನಡೆದ ಅಭಿಯಾನ ಹಾಗೂ ಸಾಮಾಜಿಕ ಮಾಧ್ಯಮದ ಸಂದರ್ಭದಲ್ಲಿ ಬಿಜೆಪಿಯೇ ಹೆಚ್ಚು ಸಕ್ರಿಯವಾಗಿರುವುದು ಅದಕ್ಕೆ ನೇರ ಬಿಸಿ ತಟ್ಟಿ ವಾಸ್ತವ ಅರ್ಥ ಮಾಡಿಕೊಳ್ಳುವುದಕ್ಕೆ ಕಾರಣವಾಗಿದ್ದಿರಬಹುದು. ಇದು ರಾಜ್ಯಸಭೆಗೆ ಸ್ಥಳೀಯರನ್ನಲ್ಲದೇ ಬೇರೆಯವರನ್ನು ಕಳುಹಿಸುವ ಎಲ್ಲ ಪಕ್ಷಗಳಿಗೂ ಅರಿವಾಗಬೇಕು. ಆಯಾ ರಾಜ್ಯದವರೇ ಅಲ್ಲದಿದ್ದರೂ, ಕೊನೆಪಕ್ಷ ಆ ರಾಜ್ಯದ ಪರ ಧ್ವನಿಯಾಗುತ್ತೇನೆ ಎಂಬಂತಹ ಭರವಸೆಯನ್ನಾದರೂ ಕೊಡಲೇಬೇಕು. ಅದಲ್ಲದೇ, ನಮ್ಮ ಪಕ್ಷದವರು ಆರಿಸುತ್ತಾರೆ- ನಿಮ್ಮದೇನು ಎಂಬ ನಡೆ ಅರಗಿಸಿಕೊಳ್ಳಲಾಗುವುದಿಲ್ಲ ಎಂಬಂತಹ ವಾತಾವರಣವನ್ನು ನಿರ್ಮಿಸುವಲ್ಲಿ ಕನ್ನಡಿಗರು ಈ ಬಾರಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.

Leave a Reply