ಸಿದ್ದರಾಮಯ್ಯನವರೇ, ನ್ಯಾಯ ಅನ್ನೋದು ನಿಮ್ಮ ಮಗ ಯತೀಂದ್ರ ಅವರಿಗೊಂದು, ಮೊಹಿಯುದ್ದೀನ್ ತಮ್ಮ ಫಾರೂಕ್ ಅವರಿಗೊಂದು ಇರುತ್ತದೆಯೇ..?

author-thyagarajವೈರುಧ್ಯಗಳು ಹೇಗಿರುತ್ತವೇ ನೋಡಿ..,

ಅವತ್ತು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಡಯಾಗ್ನಾಸ್ಟಿಕ್ ಕೇಂದ್ರದ ಸ್ಥಾಪನೆ ಗುತ್ತಿಗೆ ತಮ್ಮ ಕಿರಿಯ ಪುತ್ರ ಡಾ. ಯತೀಂದ್ರ ಪಾಲುದಾರಿಕೆಯ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಸೂಷನ್ಸ್ ಲ್ಯಾಬ್ ಸಂಸ್ಥೆಗೆ ಸಿಗುವಲ್ಲಿ ಅಧಿಕಾರ ದುರ್ಬಳಕೆ, ನೀತಿ ಸಂಹಿತೆ ಉಲ್ಲಂಘನೆ ಆಪಾದನೆ ತಮ್ಮ ಮೇಲೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಮಾತು ಹೇಳಿದ್ದರು – ‘ನೋಡ್ರೀ, ಯತೀಂದ್ರ ಒಬ್ಬ ವಯಸ್ಕ. ಮೇಲಾಗಿ ಈ ದೇಶದ ಪ್ರಜೆ. ತನಗೆ ಬೇಕಾದ ವೃತ್ತಿ, ವ್ಯಾಪಾರ, ವಹಿವಾಟು ಮಾಡುವ ಸ್ವಾತಂತ್ರ್ಯ ಆತನಿಗಿದೆ. ಮುಖ್ಯಮಂತ್ರಿ ಮಗನಾದ ಮಾತ್ರಕ್ಕೆ ಅವನು ಯಾವುದೇ ಬ್ಯುಸಿನೆಸ್ ಮಾಡಬಾರದಾ? ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ’ ಅಂತಾ.

ಅದೇ ಸಿದ್ದರಾಮಯ್ಯನವರು ಇವತ್ತು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉದ್ಯಮಿ ಬಿ.ಎ. ಫಾರೂಕ್ ಅವರ ಸಹೋದರ ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ಮಂಗಳೂರು ನಗರ ಉತ್ತರ ಕ್ಷೇತ್ರ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಏನಯ್ಯಾ, ನಿನ್ನ ಬ್ರದರ್ ಗೆ ಜೆಡಿಎಸ್ ನಿಂದ ನಿಂತ್ಕೊಬೇಡಾ ಅಂತಾ ಹೇಳಕ್ಕಾಗಲಿಲ್ವಾ..? ಮರ್ಯಾದೆಯಿಂದ ನಾಮಪತ್ರ ವಾಪಸ್ ತೆಗೆಸಿದೆಯೋ ಸರಿ, ನಮ್ ಪಕ್ಷದ ಮೂರನೇ ಕ್ಯಾಂಡಿಡೇಟ್ ರಾಮಮೂರ್ತಿ ಅವರಿಗೇನಾದರೂ ತೊಂದರೆ ಆಯ್ತೋ, ನಿನ್ನ ಬ್ರದರ್ ಕರ್ನಾಟಕದಲ್ಲಿ ಅದೆಂಗೆ ಬ್ಯುಸಿನೆಸ್ ಮಾಡ್ತಾನೋ ನಾನೂ ನೋಡ್ತೀನಿ’ ಅಂತಾ ಬೆದರಿಕೆಯನ್ನೂ ಹಾಕಿದ್ದಾರೆ.

ಅವತ್ತು ಮಗನ ವಿಚಾರದಲ್ಲಿ ತಮ್ಮ ಮೇಲೆ ಆಪಾದನೆ ಬಂದಾಗ ಯತೀಂದ್ರ ಒಬ್ಬ ವಯಸ್ಕ, ಅವರು ಏನು ಬೇಕಾದರೂ ವ್ಯವಹಾರ ಮಾಡಬಹುದು ಅಂತ ಅನ್ನಿಸಿದ್ದ ಸಿದ್ದರಾಮಯ್ಯನವರಿಗೆ ಇವತ್ತು ಫಾರೂಕ್ ಕೂಡ ಒಬ್ಬ ವಯಸ್ಕರು, ಸ್ವತಂತ್ರ ಭಾರತದ ಪ್ರಜೆ, ಅವರು ಯಾವ ಪಕ್ಷದಿಂದ ಬೇಕಾದರೂ ಚುನಾವಣೆಗೆ ನಿಲ್ಲಬಹುದು, ಅದನ್ನ ಕೇಳುವುದಿಕ್ಕೆ ಅವರಣ್ಣನಿಗೂ ಆಗುವುದಿಲ್ಲ, ಅವರ ಅಪ್ಪ-ಅಮ್ಮನಿಗೂ ಆಗೋದಿಲ್ಲ ಅಂತಾ ಅದೇಕೆ ಅನ್ನಿಸಲಿಲ್ಲವೋ ಗೊತ್ತಿಲ್ಲ. ಅದೂ ಮೊಹಿಯುದ್ದೀನ್ ಅವರೇ ಬಾಯಿ ಬಿಟ್ಟೇ ಹೇಳಿದ್ದಾರೆ. ‘ಇಲ್ಲಾ ಸಾರ್, ಫಾರೂಕ್ ಸ್ವತಂತ್ರ ಉದ್ಯಮಿ. ಆ ಉದ್ಯಮದಲ್ಲಿ ನನ್ನ ಪಾಲೇನೂ ಇಲ್ಲ. ಅವರು ನಾಮಪತ್ರ ಸಲ್ಲಿಸಿರೋದಿಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ನಿಂತ್ಕೋಬೇಡಾ ಅಂತ ಹೇಳಿದ್ದೇ, ಅವರು ಕೇಳಲಿಲ್ಲ’ ಅಂತಾ. ಇಷ್ಟಾದ ಮೇಲೂ ಸಿದ್ದರಾಮಯ್ಯನವರು ಆವಾಜ್ ಹಾಕಿಯೇ ಕಳುಹಿಸಿದ್ದಾರೆ. ಚುನಾವಣೆಯಿಂದ ಹಿಂದೆ ಸರಿಯದಿದ್ದರೆ ಫಾರೂಕ್ ಬ್ಯುಸಿನೆಸ್ ನೆಟ್ಟಗಿರಲ್ಲ ಅಂತಾ. ಫಾರೂಕ್ ಫಿಜಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು. ಅಲ್ಲದೇ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ವ್ಯವಹಾರವನ್ನೂ ಹೊಂದಿದ್ದಾರೆ. ಜತೆಗೆ ವಿದೇಶಗಳಲ್ಲೂ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.

ಇಲ್ಲಿ ಒಂದು ವಿಚಾರ ಅರ್ಥವಾಗುತ್ತಿಲ್ಲ. ಯತೀಂದ್ರ ವಿಚಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರಿಗೆ ಅನ್ವಯ ಆಗೋ ನ್ಯಾಯ, ಫಾರೂಕ್ ವಿಚಾರಕ್ಕೆ ಬಂದಾಗ ಮೊಹಿಯುದ್ದೀನ್ ಅವರಿಗೇಕೆ ಅನ್ವಯ ಆಗುವುದಿಲ್ಲ ಅಂತಾ. ಸಿದ್ದರಾಮಯ್ಯ ಅವರಿಗೇನಾಗಿದೆಯೋ ಗೊತ್ತಿಲ್ಲ. ಒಂದೇ ಕುಟುಂಬದ ಸದಸ್ಯರಾದ ಮಾತ್ರಕ್ಕೆ ಇಡೀ ಕುಟುಂಬ ಒಂದು ಪಕ್ಷಕ್ಕೇ ನಿಷ್ಠರಾಗಿರಲು ಸಾಧ್ಯವೇ? ಅದನ್ನು ನಿರೀಕ್ಷೆ ಮಾಡುವುದು ಮೂರ್ಖತನವಲ್ಲವೇ? ಹಾಗಾದರೆ ಈ ದೇಶದಲ್ಲಿ, ಈ ರಾಜ್ಯದಲ್ಲಿ ಒಂದೇ ಕುಟುಂಬದ ಬೇರೆ-ಬೇರೆ ಸದಸ್ಯರು ಬೇರೆ-ಬೇರೆ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿಲ್ಲವೇ? ರಾಜಕೀಯ ಮಾಡುತ್ತಿಲ್ಲವೇ?

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಸತೀಶ್ ಜಾರಕೀಹೊಳಿ ಕುಟುಂಬದ ಮೂವರು ಸದಸ್ಯರು ಮೂರು ಪ್ರಮುಖ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಮುಖಂಡರು, ಮಾಜಿ ಸಚಿವರು, ರಮೇಶ ಜಾರಕಿಹೊಳಿ ಜೆಡಿಎಸ್ ಜತೆ ಗುರುತಿಸಿಕೊಂಡಿದ್ದಾರೆ. ಹಾಗೆಂದು ನಿಮ್ಮ ಸಹೋದರರು ಅದ್ಯಾಕ್ರಿ ಆ ಪಕ್ಷಗಳಲ್ಲಿ ಇದ್ದಾರೆ ಅಂತ ಸತೀಶ್ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯನವರು ಪ್ರಶ್ನೆ ಮಾಡಲು ಸಾಧ್ಯವೇ? ಅಥವಾ ಸಿದ್ದರಾಮಯ್ಯನವರ ‘ಚುರುಕುಬುದ್ಧಿ’ ಮಾತು ಕೇಳಿಕೊಂಡು ಸತೀಶ್ ಜಾರಕಿಹೊಳಿ ಅವರು ತಮ್ಮ ಸಹೋದರರನ್ನು ಪ್ರಶ್ನೆ ಮಾಡಲು ಸಾಧ್ಯವೇ? ಒಂದೊಮ್ಮೆ ಪ್ರಶ್ನೆ ಮಾಡಿದರೆ ಎಂತಹ ಉತ್ತರ ಬರಬಹುದು ಗೊತ್ತೇ? ರಾಜಕೀಯ ಒಳ-ಹೊರಗುಗಳನ್ನು ಇಡಿ, ಇಡಿಯಾಗಿ ಅರೆದು ಕುಡಿದಿರುವ ‘ಅನುಭವಿ’ ರಾಜಕಾರಣಿ ಸಿದ್ದರಾಮಯ್ಯನವರಿಗೆ ಇದು ಯಾಕೆ ಹೊಳೆಯಲಿಲ್ಲವೋ?!

ಇನ್ನು ಸಿದ್ದರಾಮಯ್ಯನವರ ಪಕ್ಷದ ದಿಲ್ಲಿ ಮುಖಂಡರ ಕತೆ ನೋಡೋಣ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಪುತ್ರದ್ವಯರ ಕುಟುಂಬಗಳು ರಾಜಕೀಯ ಕವಲುದಾರಿ ಹಿಡಿದಿವೆ. ರಾಜೀವ್ ಗಾಂಧಿ ಸೋನಿಯಾ, ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕ ಕಾಂಗ್ರೆಸ್ಸಿನಲ್ಲಿ ಮುಂದುವರಿದಿದ್ದರೆ, ಸಂಜಯ್ ಗಾಂಧಿ ಪತ್ನಿ ಮೇನಕಾ, ಪುತ್ರ ವರುಣ್ ಗಾಂಧಿ ಬಿಜೆಪಿಯಲ್ಲಿ ಭವಿಷ್ಯ ಹುಡುಕಿಕೊಂಡಿದ್ದಾರೆ. ನಿಮ್ಮದು ಒಂದೇ ಸುಳಿ, ಹಾಗಾಗಿ ಒಂದೇ ಪಕ್ಷದಲ್ಲಿ ಇರಬೇಕು ಅಂತ ಯಾರಾದ್ರೂ ಹೇಳಿದರೆ ಅವರನ್ನು ತಡಮಾಡದೇ ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ ಅಷ್ಟೇ. ವಿವಿಧತೆಯ ಒಡ್ಡೋಲಗವೇ ರಾಜಕೀಯ. ಪಕ್ಷ ರಾಜಕೀಯಕ್ಕೆ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಎಂಬ ಸೀಮೆ, ಚೌಕಟ್ಟು ಎಂಬುದು ಇರುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದೇ ಏನಿಲ್ಲ.

ಇನ್ನು ಪಕ್ಷ ನಿಷ್ಠೆಗೆ ಬರುವುದಾದರೆ 2002 ರಲ್ಲಿ ನಡೆದ ಮೇಲ್ಮನೆ ಚುನಾವಣೆಯಲ್ಲಿ ಇಕ್ಬಾಲ್ ಅಹಮದ್ ಸರಡಗಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗ. ಆದರೆ ಆಗ ಇದೇ ಸಿದ್ದರಾಮಯ್ಯನವರು ಕುಲಬಾಂಧವ ಎನ್ನುವ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿ ಭೈರತಿ ಸುರೇಶ್ ಅವರನ್ನು ಗೆಲ್ಲಿಸಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿ ಸರಡಗಿ ಅವರಿಗೆ ನವಿಲುಗರಿಯಲ್ಲಿ ಹೊಗೆ ಆಡಿಸಿದರು. ಇವತ್ತು ಅದೇ ಸಿದ್ದರಾಮಯ್ಯನವರು ಮೊಹಿಯುದ್ದೀನ್ ಬಾವಾ ಅವರಿಗೆ ಪಕ್ಷನಿಷ್ಠೆ ಪಾಠ ಹೇಳುತ್ತಿದ್ದಾರೆ. ಅದು ಕೈಯಲ್ಲಿ ದಂಡ ಹಿಡಿದುಕೊಂಡು.

ಸಿದ್ದರಾಮಯ್ಯ ಅವರು ಈ ರೀತಿ ನೀತಿ ಪಾಠ ಹೇಳುವ ಬದಲು ಇನ್ನೂ ಒಂದು ಕೆಲಸ ಮಾಡಬಹುದಿತ್ತು. ಫಾರೂಕ್ ರಾಜ್ಯಸಭೆ ಸ್ಥಾನಾಕಾಂಕ್ಷಿ ಅನ್ನುವುದು ನಿನ್ನೆ-ಮೊನ್ನೆ ಹುಟ್ಟಿಕೊಂಡ ವಿಚಾರವೇನಲ್ಲ. ಅದು ಬಹಳ ದಿನದಿಂದಲೂ ಚಾಲ್ತಿಯಲ್ಲಿತ್ತು. ಸಿದ್ದರಾಮಯ್ಯ ಅವರೇ ಕರೆದು ಟಿಕೆಟ್ ಕೊಡಿಸಿಬಿಟ್ಟಿದ್ದರೆ ಈ ಮೊಹಿಯುದ್ದೀನ್ ಅವರಿಗೆ ಆವಾಜ್ ಹಾಕುವ ಪ್ರಮೇಯವೇ ಬರುತ್ತಿರಲಿಲ್ಲ. ಹೇಗಿದ್ದರೂ ಫಾರೂಕ್ ಕೂಡ ನಾಮಪತ್ರದ ವಿವರಗಳ ಪ್ರಕಾರ 618 ಕೋಟಿ ರುಪಾಯಿ ಆಸ್ತಿಪಾಸ್ತಿ ಹೊಂದಿರುವ ಕುಳ. ಮತ ಕೊರತೆ ಇರುವ ಟಿಕೆಟ್ ಅನ್ನು ಧನಿಕರಿಗೇ ತಾನೇ ಕೊಡುವುದು. ಅದು ಫಾರೂಕ್ ಆದರೇನು, ರಾಮಮೂರ್ತಿ ಆದರೇನು, ಅಬ್ರಾಹಂ ಆದರೇನು? ಸಿದ್ದರಾಮಯ್ಯನವರಿಗೆ ಈ ವಿಚಾರ ಏಕೆ ಹೊಳೆಯಲಿಲ್ಲವೋ? ಅವರಿಗೆ ಹೊಳೆಯದಿದ್ದರೆ ಸುತ್ತಮುತ್ತ ಇರುವ ವಂದಿಮಾಗಧ ಪಟಾಲಂ ಆದರೂ ಹೇಳಿಕೊಡಬೇಕಿತ್ತು. ಬಹುಶಃ ಇಬ್ಬರಿಗೂ ಪ್ರಜ್ಞೆ ಕೈಕೊಟ್ಟಿರಬಹುದು.

ಆದರೆ ಇಲ್ಲಿ ಗಮನಿಸಬೇಕಾದ ಅತಿಮುಖ್ಯ ವಿಚಾರವೆಂದರೆ ಸಿದ್ದರಾಮಯ್ಯನವರ ಪ್ರಕಾರ ಮೊಹಿಯುದ್ದೀನ್ ಅವರು ಹೇಳಿ ಫಾರೂಕ್ ನಾಮಪತ್ರ ಸಲ್ಲಿಸದಂತೆ ತಡೆಯಬಹುದಿತ್ತು. ಅದನ್ನು ಒಪ್ಪಿಕೊಳ್ಳೋಣ. ಆದರೆ ಕುದುರೆ ವ್ಯಾಪಾರಿ ಎಂ.ಎಂ.ಎಂ. ರಾಮಸ್ವಾಮಿ, ಮದ್ಯ ವ್ಯಾಪಾರಿ ವಿಜಯ ಮಲ್ಯ, ಭೂವ್ಯವಹಾರಿ ಕುಪೇಂದ್ರ ರೆಡ್ಡಿ ಅವರಂಥ ಕುಬೇರರನ್ನು ಹುಡುಕಿ ರಾಜ್ಯಸಭೆ ಕಣಕ್ಕಿಳಿಸಿದ ದೇವೇಗೌಡರು ಮತ್ತೊಂದು ಕುಳ ಹುಡುಕುವುದನ್ನು ತಡೆಯಲು ಆಗುತ್ತಿತ್ತೇ?!

1 COMMENT

  1. ವಿಶ್ಲೇಷಣೆ ಚೆನ್ನಾಗಿದೆ. ಮಾಧವರಾವ್ ಸಿಂಧಿಯಾ ಕಾಂಗ್ರೆಸ್ನಲ್ಲಿದ್ರು. ಅವರ ತಾಯಿ ರಾಜಮಾತಾ ವಿಜಯರಾಜೆ ಸಿಂಧಿಯಾ ಬಿಜೆಪಿಯಲ್ಲಿದ್ರು. ಈಗಲೂ ಇದೇ ಮನೆತನದ ವಸುಂಧರಾರಾಜೆ ಬಿಜೆಪಿ & ಜ್ಯೋತಿರಾದಿತ್ಯ ಕಾಕಾಂಗ್ರೆಸ್ನಲ್ಲಿದ್ದಾರೆ.

Leave a Reply