₹5177.06 ಕೋಟಿ, ಇದು ಟಾಟಾ ಮೋಟಾರ್ಸ್ ನ ಲಾಭ!

ಡಿಜಿಟಲ್ ಕನ್ನಡ ಟೀಮ್:

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಭರ್ಜರಿ ಲಾಭ ತೋರಿಸಿದೆ. ₹5177.06 ಕೋಟಿಯ ಲಾಭ ಗಳಿಕೆಯೊಂದಿಗೆ ಅದರ ಒಟ್ಟೂ ಮಾರಾಟ ₹79,930 ಕೋಟಿ. ಅಂದರೆ ಹಿಂದಿನ ವಿತ್ತೀಯ ವರ್ಷದ ಗಳಿಕೆಗಿಂತ ಶೇ. 19ರಷ್ಟು ಹೆಚ್ಚು. ಇದು ಮಾರುಕಟ್ಟೆಯ ಎಲ್ಲ ಪರಿಣತರ ಅಂದಾಜುಗಳನ್ನು ಮೀರಿದ ವಿದ್ಯಮಾನ.

ಗಮನಿಸಬೇಕಾದ ಅಂಶ ಎಂದರೆ ಈ ಲಾಭದ ಕತೆಗೆ ಟಾಟಾದವರು ಕೊಂಡುಕೊಂಡಿರುವ ಜಾಗ್ವಾರ್ ಲ್ಯಾಂಡ್ ರೋವರ್ ಕೊಡುಗೆ ಪ್ರಮುಖ. ಆ ಘಟಕ ಶೇ. 56ರ ಲಾಭ ಹೆಚ್ಚಳವನ್ನು ತೋರಿಸಿದೆ. ಕಳೆದ ವರ್ಷ ಚೀನಾ ಬಂದರಿನಲ್ಲಿ ಜೆ ಎಲ್ ಆರ್ ಲಕ್ಸುರಿ ಕಾರೊಂದು ಅಗ್ನಿ ಅವಘಡಕ್ಕೆ ತುತ್ತಾಗಿತ್ತು. ಆ ಸಂಬಂಧ ಕಂಪನಿ ಪಡೆದುಕೊಂಡ ₹555 ಕೋಟಿ ರುಪಾಯಿಗಳ ವಿಮೆಯೂ ಲಾಭಗಾಥೆಗೆ ಪುಷ್ಟಿ ತುಂಬಿದೆ.

ಈ ಸಂದರ್ಭದಲ್ಲಿ ನೀವು ಓದಬೇಕಾದ ಹಳೆಓದು-ಮರುಓದು ಇಲ್ಲಿದೆ: ರತನ್ ಟಾಟಾರನ್ನು ಅವಮಾನಿಸಿದ್ದ ಫೋರ್ಡ್ ಕಂಪನಿ ಕೊನೆಗೆ ಅವರಲ್ಲೇ ಸಹಾಯ ಕೋರಿ ಬಂತು.

ನಿಧಾನಗತಿಗೆ ಬಿದ್ದಿದ್ದ ಚೀನಾ ಮಾರುಕಟ್ಟೆ ಚೇತರಿಸಿಕೊಂಡಿರುವುದೂ ಸಕಾರಾತ್ಮಕ ಅಂಶಗಳಲ್ಲೊಂದು ಎಂದು ಕಂಪನಿ ಹೇಳಿದೆ. ಆಂತರಿಕ ಮಾರುಕಟ್ಟೆ ವಿಷಯಕ್ಕೆ ಬಂದರೆ ಈ ಬಾರಿ ಟಾಟಾ ಮೋಟಾರ್ಸ್ ಕೈಹಿಡಿದಿರುವುದು ಮಧ್ಯಮ ಮತ್ತು ಹೆವಿ ಡ್ಯೂಟಿ ಟ್ರಕ್ ಗಳಿಗೆ ಬಂದ ಬೇಡಿಕೆ. ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಈ ವಿಭಾಗವು ಶೇ. 26ರಷ್ಟು ವಹಿವಾಟು ಹೆಚ್ಚಿಸಿಕೊಂಡಿದೆ. ಇತ್ತೀಚೆಗೆ ಕಂಪನಿ ಪರಿಟಯಿಸಿರುವ ಟಿಯಾಗೊ ವಾಹನ ಸಹ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Leave a Reply