ಸೋನಿಯಾ ವಿವರಿಸದ ಮಾತು: ಕಾಂಗ್ರೆಸ್ ಮುಕ್ತ ಭಾರತಕ್ಕೂ ‘ಖಾಸಗಿ ವ್ಯಕ್ತಿ’ ರಾಬರ್ಟ್ ವಾದ್ರಾಗೂ ಏನು ಸಂಬಂಧ?

ಚೈತನ್ಯ ಹೆಗಡೆ

ರಾಬರ್ಟ್ ವಾದ್ರಾ ಖಾಸಗಿ ವ್ಯಕ್ತಿಯೋ ಅಥವಾ ಕಾಂಗ್ರೆಸ್ಸಿಗರೋ?

ಇದು ಸಾರ್ವಜನಿಕ ವೇದಿಕೆಯಲ್ಲಿ ಕಾಂಗ್ರೆಸ್ ಹೊಂದಿರುವ ದ್ವಂದ್ವ. ಇದೀಗ ರಾಬರ್ಟ್ ವಾದ್ರಾ ಶಸ್ತ್ರಾಸ್ತ್ರ ಡೀಲರ್ ಜತೆ ಕೈಜೋಡಿಸಿ ಲಂಡನ್ ನಲ್ಲಿ ಬೇನಾಮಿ ಮನೆ ಹೊಂದಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸುವಾಗಲೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇದೇ ಗಲಿಬಿಲಿ ತೋರಿದರು.

‘ಸರ್ಕಾರ ಇರುವುದು ಬಿಜೆಪಿಯದ್ದೇ. ಸಾಕ್ಷ್ಯ ಇದ್ದರೆ ಕ್ರಮ ತೆಗೆದುಕೊಳ್ಳಲಿ, ಮಾಧ್ಯಮಗಳಲ್ಲಿ ವಿಷಯ ಸೋರಿಕೆ ಮೂಲಕ ಬೊಬ್ಬೆ ಹಾಕುವುದೇಕೆ’ ಎಂದಿದ್ದರೆ ಸಾಕಿತ್ತು.

ಆದರೆ ಆಕ್ರೋಶಿತ ಪ್ರತಿಕ್ರಿಯೆ ಹೊರಹಾಕುವ ಭರದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ ಎಂದರೆ ಏನರ್ಥ ಅಂದುಕೊಂಡ್ರಿ? ಈ ಆರೋಪವೂ ಆ ಷಡ್ಯಂತ್ರದ ಭಾಗ’ ಅಂದುಬಿಟ್ಟರು.

ಉಳಿದಂತೆ, ತನಿಖೆ ನಡೆದು ‘ದೂದ್ ಕಾ ದೂದ್, ಪಾನಿ ಕಾ ಪಾನಿ’ ಆಗಿಹೋಗಲಿ ಎಂದಿದ್ದು ಸೂಕ್ತ ಪ್ರತಿಕ್ರಿಯೆಯೇ. ಆದರೆ ರಾಬರ್ಟ್ ವಾದ್ರಾ ಮೇಲಿನ ಆರೋಪ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಭಾಗ ಎಂದಿದ್ದು, ಇನ್ನು ಮುಂದೆ ವಾದ್ರಾ ವಹಿವಾಟುಗಳಿಗೆಲ್ಲ ಕಾಂಗ್ರೆಸ್ ಉತ್ತರದಾಯಿ ಎಂಬುದನ್ನು ಮೈಮೇಲೆ ಎಳೆದುಕೊಂಡಂತೆ.

ಈ ಹಿಂದೆ ಡಿ ಎಲ್ ಎಫ್ ಭೂ ಅವ್ಯವಹಾರದಲ್ಲಿ ರಾಬರ್ಟ್ ವಾದ್ರಾ ಹೆಸರು ಕೇಳಿ ಬಂದಾಗಲೂ ಕಾಂಗ್ರೆಸ್ ವಕ್ತಾರರು- ‘ರಾಬರ್ಟ್ ವಾದ್ರಾ ಒಬ್ಬ ಖಾಸಗಿ ವ್ಯಕ್ತಿ’ ಎನ್ನುತ್ತಲೇ ಹಗಲಿರುಳೂ ವಾದ್ರಾ ಪರ ಸಮರ್ಥನೆಗಳನ್ನು ಮಂಡಿಸುವ ಶ್ರಮ ತೆಗೆದುಕೊಂಡಿದ್ದರು.

ಈ ಎರಡು ವರ್ಷಗಳಲ್ಲಿ ಬಿಜೆಪಿಯ ರಾಜಕೀಯದಾಟವೂ ಸ್ಪಷ್ಟವಾಗಿಯೇ ಇದೆ. ಅಧಿಕಾರದಲ್ಲಿದ್ದರೂ ಸೋನಿಯಾ ಕುಟುಂಬದ ವಿಷಯದಲ್ಲಿ ಅದು ಪ್ರತಿಪಕ್ಷದ ವರಸೆಯನ್ನೇ ಮುಂದುವರಿಸಿದೆ. ಡಿ ಎಲ್ ಎಫ್ ಹಗರಣ ಧ್ವನಿಸಿದ್ದ ಹರ್ಯಾಣದಲ್ಲಿ ಈಗ ಇರುವುದೂ ಬಿಜೆಪಿ ಸರ್ಕಾರವೇ. ಲಂಡನ್ ನಲ್ಲಿ ವಾದ್ರಾ ಬೇನಾಮಿ ಆಸ್ತಿ ಹೊಂದಿರುವುದು ಹೌದಾದರೆ, ತನಿಖಾ ಏಜೆನ್ಸಿಗಳಿಗೆ ಸೂಕ್ತ ನಿರ್ದೇಶನ ಕೊಟ್ಟು ಆತ ಕಾನೂನಿನ ಕಟಕಟೆಯಲ್ಲಿ ನಿಲ್ಲುವಂತೆ ಮಾಡಬೇಕಿರುವುದು ಕೇಂದ್ರದ ಬಿಜೆಪಿ ಸರ್ಕಾರವೇ. ಆದರೆ ಕಾಯ್ದೆ- ಕಾನೂನುಗಳ ಹಾದಿ ದೂರದ್ದು. ಹೀಗಾಗಿ ಮತದಾರರಲ್ಲಿ ಜನಾಭಿಪ್ರಾಯ ಮೂಡಿಸುವುದಕ್ಕೆ ತನ್ನೆಲ್ಲ ಶ್ರಮ ವ್ಯಯಿಸುತ್ತಿದೆ ಬಿಜೆಪಿ. ಅದರ ಪರಿಣಾಮವೇ ಆರೋಪ ಪರ್ವ. ಸಾಮಾಜಿಕ ಜಾಲತಾಣಗಳಲ್ಲಿ ಯಾವ ಬಿಜೆಪಿಯ ಕಟ್ಟರ್ ಸಮರ್ಥಕರೆಲ್ಲ ಪ್ರೆಸ್ಟಿಟ್ಯೂಟ್ ಅಂತ ಬಾಯ್ತುಂಬ ಬಯ್ದುಕೊಂಡು ಪೌರುಷ ಮೆರೆಯುತ್ತಿದ್ದಾರೋ, ಅದೇ ಎನ್ ಡಿ ಟಿ ವಿಯಲ್ಲಿ ಕೇಂದ್ರ ಸರ್ಕಾರದ ತನಿಖಾ ಏಜೆನ್ಸಿಯ ಪ್ರಾಥಮಿಕ ವರದಿ ಸೋರಿಕೆ ಆಗಿ ವಾದ್ರಾ ಡೀಲಿಂಗ್ ಬಗ್ಗೆ ಪ್ರಶ್ನೆಗಳೆದ್ದಿರುವ ಕೌತುಕದ ಕಾಲಘಟ್ಟದಲ್ಲಿ ನಾವಿದ್ದೇವೆ!

ಅಗುಸ್ಟಾ ವಿಷಯದಲ್ಲಾಗಲೀ, ವಾದ್ರಾ ಒಪ್ಪಂದಗಳ ವಿಷಯದಲ್ಲಾಗಲೀ ‘ತನಿಖೆ ಆಗಲಿ ನೋಡೋಣ’ ಎಂದು ಸವಾಲು ಹಾಕುವ ಸೋನಿಯಾ ಗಾಂಧಿ ಕಡೆಯಿಂದಲೂ ರಾಜಕೀಯ ಆಟವೊಂದಿದೆ. ಹೇಳುವುದಷ್ಟೇ ಎಂಬುದನ್ನು ಬಿಟ್ಟರೆ ಕಾನೂನಿನ ಪ್ರಕ್ರಿಯೆ ಶುರುವಾಗುತ್ತಲೇ ಇವರದ್ದೂ ‘ಬಲಿಪಶು’ ಬೊಬ್ಬೆ. ಇದಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರಕರಣವೇ ಉದಾಹರಣೆ. ಸುಬ್ರಮಣಿಯನ್ ಸ್ವಾಮಿ ಹೂಡಿದ್ದ ದಾವೆ ಪ್ರಕಾರ ಸೋನಿಯಾ- ರಾಹುಲ್ ರಿಗೆ ಸಮನ್ಸ್ ಬಂದರೆ, ಇತ್ತ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಬೀದಿಗೆ ಇಳಿದು ಇದು ಬಿಜೆಪಿಯ ‘ದ್ವೇಷದ ರಾಜಕಾರಣ’ ಅಂದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತನಿಖೆಯಾಗಲಿ ಎಂದೇ ಸವಾಲು ಹಾಕಿದ್ದ ರಾಹುಲ್ ಗಾಂಧಿ ಸಹ ನಂತರ ಕಾನೂನು ಪ್ರಕ್ರಿಯೆಯನ್ನು ಮೋದಿಯವರ ದ್ವೇಷದ ರಾಜಕಾರಣ ಎಂದುಬಿಟ್ಟರು.

ಕೇವಲ ಕಾನೂನು ಅಂತ ಹೋದರೆ ಎಲ್ಲಿ ರಾಜಕೀಯ ಅನುಕಂಪ ಬೇರೆ ಥರದ ಲೆಕ್ಕಾಚಾರಗಳನ್ನು ಹುಟ್ಟಿಸಿಬಿಡಬಹುದೇನೋ ಎಂಬ ಹೆದರಿಕೆ ಎಲ್ಲ ಪಕ್ಷಗಳಲ್ಲೂ ಇದೆ. ಹೀಗಾಗಿಯೇ ಹೇಳಿಕೆಗಳ ಹೊಡೆದಾಟ ತೆರೆದುಕೊಳ್ಳುತ್ತದೆ. ಈ ಹಂತದಲ್ಲಿ ರಾಬರ್ಟ್ ವಾದ್ರಾ ವಿರುದ್ಧದ ಆರೋಪವು ‘ಕಾಂಗ್ರೆಸ್ ಮುಕ್ತ ಭಾರತ’ ಪ್ರಯತ್ನದ ಒಂದು ಭಾಗ ಎನ್ನುವ ಮೂಲಕ, ‘ವಾದ್ರಾ ಖಾಸಗಿ ವ್ಯಕ್ತಿ’ ಎಂಬ ತನ್ನ ವಾದವನ್ನು ಕಾಂಗ್ರೆಸ್ ಪರಮೋಚ್ಛ ನಾಯಕಿಯೇ ಹೊಡೆದುಹಾಕಿದ್ದಾರೆ.

Leave a Reply