ಅಖ್ಲಾಕ್ ಮನೆಯಲ್ಲಿದ್ದದ್ದು ಗೋಮಾಂಸವೇ ಎಂದ ವಿಧಿವಿಜ್ಞಾನ ಪ್ರಯೋಗಾಲಯ ವರದಿ, ಮತ್ತೀಗ ಪರ-ವಿರೋಧಗಳ ಸರದಿ

ಡಿಜಿಟಲ್ ಕನ್ನಡ ಟೀಮ್:

ಗೋಮಾಂಸ ತಿಂದಿರುವ ಆರೋಪದ ಮೇಲೆ ದಾದ್ರಿಯಲ್ಲಿ ಅಖ್ಲಾಕ್ ಖಾನ್ ಎಂಬುವವರನ್ನುಕಳೆದ ವರ್ಷ ಸೆಪ್ಟೆಂಬರ್ 28ರಂದು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳನ್ನೂ ಬಂಧಿಸಲಾಗಿದೆ. ಆದರೆ, ಇದೀಗ ಮಥುರಾದ ಫಾರೆನ್ಸಿಕ್ ಲ್ಯಾಬ್ ನೀಡಿರುವ ವರದಿ ಪ್ರಕಾರ ಅಖ್ಲಾಕ್ ಮನೆಯಲ್ಲಿದ್ದ ಮಾಂಸ ಗೋವಿನದ್ದೇ ಆಗಿತ್ತು ಎಂದು ಉಲ್ಲೇಖಿಸಿರುವುದು ಮತ್ತೊಂದು ಬಗೆಯ ರಾಜಕೀಯ ಹಣಾಹಣಿಯನ್ನು ಸೃಷ್ಟಿಸಿದೆ.

‘ಅಖ್ಲಾಕ್ ರನ್ನು ಕೊಂದ ಆರೋಪಿಗಳು ಜೈಲಿನಲ್ಲಿದ್ದಾರೆ. ಹತ್ಯೆಗೈದವರಿಗೆ ಶಿಕ್ಷೆಯಾಗಲಿ. ಆದರೆ, ಅಖ್ಲಾಕ್ ಕುಟುಂಬದ ವಿರುದ್ಧ ಗೋಹತ್ಯೆ ಹಾಗೂ ಗೋಮಾಂಸ ಸೇವನೆ ಪ್ರಕರಣ ದಾಖಲಾಗಲಿ’ ಎಂದು ಬಿಜೆಪಿ ಸಂಸದ ಸಂಗೀತ್ ಸೋಮ್ ಹೇಳಿದ್ದಾರೆ.

ಮತ್ತೊಂದೆಡೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮಥುರಾ ಪ್ರಯೋಗಾಲಯದ ವರದಿಯನ್ನೇ ಸಂಶಯಿಸಿದ್ದಾರೆ. ದಾದ್ರಿ ಹತ್ಯೆ ಪ್ರಕರಣವು ದೇಶದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಬೇರೆಯವರ ಉಡುಗೆ- ತೊಡುಗೆಗಳು ಹಸ್ತಕ್ಷೇಪದ ವಿಷಯವಾಗಬಾರದೆಂಬ ಅಭಿಮತ ರೂಪುತಾಳಿತ್ತು. ಉ. ಪ್ರ. ಸರ್ಕಾರದ ಪಶುಪಾಲನಾ ಇಲಾಖೆ ತನ್ನ ಪ್ರಾಥಮಿಕ ವರದಿಯಲ್ಲಿ ಅಖ್ಲಾಕ್ ಮನೆಯಲ್ಲಿದ್ದದ್ದು ಆಡಿನ ಮಾಂಸ ಎಂದಿರುವಾಗ ಈ ವರದಿಯ ಅಧಿಕೃತತೆ ಹೇಗೆ ಎಂಬುದು ಮುಖ್ಯಮಂತ್ರಿ ಪ್ರಶ್ನೆ. ತಾವು ಗೋಮಾಂಸ ತಿಂದಿಲ್ಲ ಎಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದ ಅಖ್ಲಾಕ್ ಕುಟುಂಬವೂ ಈ ವರದಿ ಸುಳ್ಳೆಂದು ದೂರಿದೆ.

ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಇದು ರಾಜಕೀಯ ಅಖಾಡವನ್ನು ಸಜ್ಜುಗೊಳಿಸಿದೆ. ‘ಈ ವರದಿ ಉತ್ತರ ಪ್ರದೇಶ ಸರ್ಕಾರವನ್ನು, ಕೇಂದ್ರದ ವಿರೋಧ ಪಕ್ಷಗಳನ್ನು ಮತ್ತು ಮಾಧ್ಯಮದ ಒಂದು ವರ್ಗವನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಉ. ಪ್ರ. ಸರ್ಕಾರ ಅಖ್ಲಾಕ್ ಕುಟುಂಬಕ್ಕೆ ನೀಡಿದ್ದ ಎಲ್ಲ ಸವಲತ್ತುಗಳನ್ನು ರದ್ದುಗೊಳಿಸಿ ಅವರ ವಿರುದ್ಧ ಗೋಹತ್ಯೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿಯ ಸಂಸದ ಯೋಗಿ ಆದಿತ್ಯನಾಥ ಆಗ್ರಹಿಸಿದ್ದಾರೆ.

Leave a Reply