ಅಜ್ಜಿ ಎಂಬ ಆಪ್ತ ಮುಖದ ಹಿಂದಿರುವ ಸಂಕಟಗಳು ಇವು!

author-geetha‘ನೀವು ಲೇಖಕಿ ಅಲ್ಲವೇ?’

‘ಹೂಂ…’ ನಾನು ಪಾರ್ಕಿನಲ್ಲಿ ವಾಕ್ ಮಾಡುವಾಗ ಹಲವು ಮಂದಿ ಸಿಗ್ತಾರೆ. ಟಿ.ವಿ.ಯಲ್ಲಿ ನೋಡಿದ್ದೇವೆ ಅಂತಲೋ, ನಿಮ್ಮನ್ನು ಎಲ್ಲೋ ನೋಡಿದ್ದೇವೆ ಅಂತಲೋ ಮಾತನಾಡಿಸುತ್ತಾರೆ. ಹೀಗೆ ಲೇಖಕಿ ಅಂತ ಗುರುತಿಸುವವರು ಕಡಿಮೆ.

‘ನೀವು ಕಥೆ ಬರೀತೀರಿ.. ಲೇಖನಗಳನ್ನು ಬರೀತೀರಿ. ನಮ್ಮ ಬಗ್ಗೆಯೂ ಬರೆಯಿರಿ.’

ಆಕೆಯತ್ತ ನೋಡಿದೆ. ಅರವತ್ತರ ಆಸುಪಾಸು.

‘ವಯಸ್ಸಾದವರ ಕಷ್ಟಗಳ ಬಗ್ಗೆ ಕಥೆಗಳನ್ನು ಬರೆದಿದ್ದೀರಿ… ಓದಿದ್ದೇನೆ.. ಆದರೆ ಕಥೆ ಎಷ್ಟೇ ಆದರೂ ಕಥೆಯೇ.. ಜೀವನದ ಬಗ್ಗೆ ಬರೆಯಿರಿ..’

‘ಓಡಬೇಡವೋ..’ ತಮ್ಮ ಕೈಬಿಡಿಸಿಕೊಂಡು ಓಡಿದ ಮೊಮ್ಮಗುವಿನ ಹಿಂದೆ ಧಾವಿಸಿದರು ಆಕೆ. ‘ಬಿದ್ದು ಗಾಯ ಮಾಡಿಕೊಂಡರೆ ನಿಮ್ಮಮ್ಮನಿಗೆ ಏನು ಹೇಳಲಿ ನಾನು?’

ಆಕೆ ತಿರುವಿನಲ್ಲಿ ಮರೆಯಾದರೂ ಆಕೆಯ ಧ್ವನಿ ಕೇಳಿಸುತ್ತಿತ್ತು.

ಮನೆಗೆ ಬಂದು ಪೆನ್ನು ಪೇಪರ್ ಹಿಡಿದು ಕುಳಿತರೂ ಆಕೆಯ ದನಿಯೇ. ಆ ದನಿಯ ಹಿಂದಿನ ಅಸಹಾಯಕತೆ ಕಾಡಲಾರಂಭಿಸಿತು. ಮೊಮ್ಮಗು ಬಿದ್ದು ಗಾಯ ಮಾಡಿಕೊಂಡು ನೋವು ಅನುಭವಿಸುತ್ತದೆ ಎನ್ನುವುದಕ್ಕಿಂತ ಮನೆಗೆ ಹಿಂತಿರುಗುವ ಆ ಮಗುವಿನ ಅಮ್ಮ ಕೇಳುವ ಪ್ರಶ್ನೆಗೆ ಹೇಗೆ ಉತ್ತರಿಸಲಿ… ಎಂಬುದೇ ಹೆಚ್ಚಿನ ಯೋಚನೆಯಾಗಿತ್ತು ಆಕೆಗೆ. ಕಣ್ಣಾಡಿಸಿದರೆ, ಕಿವಿಯಾಡಿಸಿದರೆ ಆಕೆಯಂಥ ಸಾವಿರಾರು ಮಂದಿಯಿದ್ದಾರೆ. ತಕ್ಕ ವಯಸ್ಸಿನಲ್ಲಿ ಮದುವೆಯಾಗಿ, ಅತ್ತೆ ಮನೆಯಲ್ಲಿ ಹೊಂದಿಕೊಂಡು ಬಾಳಿ, ಗಂಡನಿಗೆ ಬೇಕಾದಂತೆ ತನ್ನ ಇರುವಿಕೆ, ಇಷ್ಟಕಷ್ಟಗಳನ್ನು ರೂಢಿಸಿಕೊಂಡು, ಮಕ್ಕಳನ್ನು ಹೆತ್ತು, ಅವುಗಳ ಏಳಿಗೆಯೇ ಪರಮೋದ್ದೇಶವಾಗಿ ಜೀವನ ಸವೆಸಿ, ಹೆಣ್ಣುಮಗಳಿದ್ದರೆ ತನ್ನಂತೆ ಅವಳ ಜೀವನವಾಗಬಾರದು, ಒಂದು ನೂರು ರುಪಾಯಿಗೆ ಗಂಡನ ಮುಂದೆ ಕೈಚಾಚುವಂತೆ ಆಗಬಾರದು, ಆರ್ಥಿಕ ಸ್ವಾತಂತ್ರ್ಯ ಅವಳಿಗಿರಬೇಕು ಎಂದು ಮಗನ ಸಮಕ್ಕೂ ಓದಿಸಿ, ಕೆಲಸ ಮಾಡಲು ಪ್ರೇರೇಪಿಸಿ ಬೆನ್ನೆಲುಬಾಗಿ ನಿಂತಿರುವ ನಡು ವಯಸ್ಕರು, ವೃದ್ಧೆಯರು ನಮ್ಮ ಸುತ್ತ ಇದ್ದಾರೆ. ತಕ್ಕ ವರ ಹುಡುಕಿ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವುದಷ್ಟೇ ಅಲ್ಲ… ಮಗನಿಗೂ ಕೆಲಸಕ್ಕೆ ಹೋಗುವ ಹುಡುಗಿಯನ್ನು ಹುಡುಕಿ ಮದುವೆ ಮಾಡಿ, ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ನಡೆಸುತ್ತಾ… ಮಗ, ಸೊಸೆ, ಮಗಳು, ಅಳಿಯ… ಎಲ್ಲರೂ ಕೆಲಸ ಮಾಡಿ ಐದಂಕಿಯ ಸಂಬಳ ತೆಗೆದುಕೊಂಡು… ಅಲ್ಲಿ ಕೊಂಡ ಫ್ಲಾಟು, ಇಲ್ಲಿ ಕೊಂಡ ಫ್ಲಾಟು… ರಜೆಗೆ ವಿದೇಶಕ್ಕೆ ಹೋದ ಸಡಗರ ವಿವರಿಸುತ್ತಾ, ಅವರು ಕೊಡಿಸಿದ ರೇಷ್ಮೆ ಸೀರೆ ಉಟ್ಟು ಸಡಗರಪಟ್ಟ ದಿನಗಳು ಕಳೆದು ಮೊಮ್ಮಕ್ಕಳು ಹುಟ್ಟಿದ ಮೇಲೆ ಶುರುವಾಗುತ್ತದೆ ಇವರ ಉಟ್ ಬೈಸು.

ಬಾಣಂತನವೇನೋ ಸರಿ… ನಂತರ ಶುರು, ಮೊಮ್ಮಕ್ಕಳನ್ನು ನೋಡಿಕೊಳ್ಳಬೇಕು!

ಸೊಸೆ- ಮಗಳು ಹೊರಗೆ ದುಡಿಯಬೇಕು ಅಂದರೆ ಮನೆಯಲ್ಲಿ ಮೊಮ್ಮಕ್ಕಳನ್ನು ನೋಡಿಕೊಳ್ಳಬೇಕು. ಚಿಕ್ಕವಾದರೆ ನ್ಯಾಪಿ ಬದಲಿಸಿ, ಹಾಲು ಬೆರೆಸಿ, ಕುಡಿಸಿ, ಸೆರಾಲಾಕ್, ರಾಗಿ ಚೆರಿ ಕಲಸಿ ತಿನ್ನಿಸಿ, ಮಲಗಿಸಿ ಲಾಲಿಸಬೇಕು. ದೊಡ್ಡವಾದರೆ ಅವುಗಳ ಹಿಂದೆ ಓಡಬೇಕು. ಶಾಲೆಗೆ ಹೊರಟರೆ ಡಬ್ಬಿಕಟ್ಟಿ ಶಾಲೆಗೆ ಬಿಟ್ಟುಬಂದು, ಕರಕೊಂಡುಬಂದು…. ಮತ್ತೊಮ್ಮೆ ತಾಯ್ತನ!

ತಮ್ಮ ಮನೆಗೆ ಬರುವ ಮಕ್ಕಳನ್ನು ಸಂಭಾಳಿಸುವುದು ಕೆಲವರ ಜವಾಬ್ದಾರಿ ಆದರೆ… ಮಗಳ, ಮಗನ ಮನೆಗೆ ಹೋಗಿ ಕೆಲವು ತಿಂಗಳುಗಳು ಇದ್ದು ನೋಡಿಕೊಳ್ಳಬೇಕಾಗುವುದು ಕೆಲವರ ಜವಾಬ್ದಾರಿ. ವಿದೇಶದಲ್ಲಿದ್ದರಂತೂ ಸುತ್ತು ಕೆಲಸಕ್ಕೂ ಜನರಿಲ್ಲದೆ ಎಲ್ಲವನ್ನೂ ಮಾಡಿ ಸುಸ್ತಾಗಿ ಕೂಡುವುದೂ ಇದೆ. ಆದರೆ ಮಕ್ಕಳು… ಮೊಮ್ಮಕ್ಕಳು ಪ್ರೀತಿ… ಆಸೆ ಎಲ್ಲ ಇದೆ. ಆದರೆ ವಯಸ್ಸು, ಶಕ್ತಿ ಇಲ್ಲ.

ಜವಾಬ್ದಾರಿ ಇಲ್ಲದ ತಾಯ್ತನ ಅಜ್ಜಿಯದು.. ಪ್ರೀತಿಸುವುದು, ಲಾಲಿಸುವುದು ಅಷ್ಟೇ ಎಂದು ನಮ್ಮಮ್ಮ ಹೇಳುತ್ತಿದ್ದರು. ಈಗ ಹಾಗಿಲ್ಲ. ದಂಡಿಸುವ ಅಧಿಕಾರವಿಲ್ಲ, ಆದರೆ ಮಾಡುವ ಹೊಣೆಗಾರಿಕೆ ಇದೆ. ಮಗಳು ಅಥವಾ ಸೊಸೆಗೆ ವರದಿ ಒಪ್ಪಿಸಬೇಕು. ಮಧ್ಯಾಹ್ನ ಏಕೆ ಮಲಗಿಸಲಿಲ್ಲ? ಟಿವಿ ನೋಡಲು ಯಾಕೆ ಬಿಟ್ರಿ? ಸಂಜೆ ಯಾಕೆ ಮಲಗಿಸಿದ್ರಿ? ಊಟ ಯಾಕೆ ಮಾಡಲಿಲ್ಲ? ಎಲ್ಲಿ ಬಿದ್ದದ್ದು? ಹೇಗೆ ಬಿದ್ದದ್ದು? ಬಟ್ಟೆ ಬದಲಿಸಿದ್ದು ಯಾಕೆ? ಕೊನೆಗೆ ಎಷ್ಟು ಬಾರಿ ಉಚ್ಚೆ ಮಾಡಿತು ಮಗು ಎಂದು ತಾಯಿ ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕು. ಮಗುವನ್ನು ನೋಡಿಕೊಳ್ಳಲು ಯಾರನ್ನಾದರೂ ನೇಮಿಸಿದ್ದರಂತೂ ಅವಳೇನು ಹೇಳಿದಳು, ಇವರೇನು ಹೇಳಿದರು ಎಂಬ ತನಿಖೆ. ಈಗ ಸಿಸಿಟಿವಿ ಬಂದು ಮನೆಯೆಲ್ಲಾ ಸಿಸಿಟಿವಿಮಯ. ಆಡುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ, ಬಿಸಿತುಪ್ಪ. ಅಂದರೆ ಮುರಿಯಬಹುದಾದಷ್ಟು ನಾಜೂಕು ಸಂಬಂಧಗಳು. ದುಡ್ಡು ಕೊಟ್ಟರೆ ನೋಡಿಕೊಳ್ಳುವ ಬೇಬಿ ಸಿಟ್ಟಿಂಗು, ಪ್ಲೇ ಹೋಂಗಳಿವೆ. ಕಷ್ಟ ಎಂದು ಬಾಯಿಬಿಟ್ಟರೆ ಮಗುವನ್ನು ಅಲ್ಲಿಗೇ ಕರೆದುಕೊಂಡು ಹೋಗಿ ಸೇರಿಸಿ ಅಜ್ಜಿಯ ನಿರುಪಯುಕ್ತತೆಯನ್ನು ಜಾಹೀರು ಮಾಡುತ್ತಾರೆ. ಬೇರೆ ಮನೆಯೂ ಮಾಡಿಕೊಂಡು ಹೋಗಿ ದೂರವಾಗಬಹುದು ಎಂಬ ಹೆದರಿಕೆಯೂ ಕಾಡುತ್ತಿರುತ್ತದೆ. ವಯಸ್ಸು- ಮನಸ್ಸು ಸೋಲುತ್ತಿರುತ್ತದೆ. ಮಾನಸಿಕ ಬೆಂಬಲ, ಪ್ರೀತಿ, ನಿಮ್ಮಿಂದಲೇ ಎಂಬ ಪ್ರೋತ್ಸಾಹಕಾರಿ ಮಾತು, ವಿಪರೀತವಾಗಿ ಅನುಮಾನಪಡುವುದನ್ನುಬಿಟ್ಟು ಇವರ ಸಹಕಾರ ಪಡೆಯುತ್ತಿರುವ ಸೊಸೆ, ಮಗ, ಮಗಳು ಆಡಿದರೆ ಆ ಜೀವಕ್ಕೆ ತಂಪು.

‘ನನ್ನ ಮಕ್ಕಳು ಚಿಕ್ಕವರಿದ್ದಾಗ ನಮ್ಮ ತಾಯಿ ನೀಡಿದ ಬೆಂಬಲ ಮರೆಯಲಾರೆ. ಅವರು ಮಾಡಿದ ಸಹಾಯ ಸ್ಮರಿಸದೇ ಇರಲಾರೆ. I owe it to her, my mother!’ ಎಂದು ಕೋಟ್ಯಂತರ ರುಪಾಯಿಗಳ ವ್ಯವಹಾರಗಳುಳ್ಳ ಎಂ ಎನ್ ಸಿಯೊಂದರ ಸಿಇಒ ಹೇಳಿದ ಮಾತು, ಅದನ್ನು ಎಲ್ಲ ಮಾಧ್ಯಮಗಳು ಪ್ರಚಾರಪಡಿಸಿದ ರೀತಿ ಎರಡೂ ಶ್ಲಾಘನೀಯ.

ಯಾವ ಕೆಲಸವೂ ಹೆಚ್ಚಲ್ಲ… ಯಾವುದೂ ಕಡಿಮೆಯಲ್ಲ. ಮಕ್ಕಳನ್ನು ಸಾಕುವುದಂತೂ ಸುಲಭದ ಕೆಲಸವಲ್ಲ. ಜೊತೆಗೆ ಮೂರರವರೆಗೆ ಕಲಿತಿದ್ದು ಮುಪ್ಪಿನವರೆಗೆ ಎಂದು ಇತ್ತೀಚಿನ ಅಧ್ಯಯನಗಳು ಪ್ರಕಟಿಸಿವೆ. ರಜಹಾಕಿ ಮಗುವಿನ ಮೊದಲ ಐದು ವರ್ಷಗಳ ಕಾಲ ಜೊತೆಯಲ್ಲಿ ಇರಲು ಸಾಧ್ಯವಾದರೆ ಸಂತೋಷ. ಆಗದಿದ್ದರೆ ಅದನ್ನು ಮಾಡುವ ಅಜ್ಜಿಯರ ಮೇಲೆ ಪ್ರೀತಿ, ವಿಶ್ವಾಸವಿರಲಿ.

ಮಕ್ಕಳನ್ನು ಯಾವುದೇ ವಯಸ್ಸಿನಲ್ಲಿ ಬೆಳೆಸುವ ಶಕ್ತಿ ಇದೆಯಂತಿದ್ದರೆ ಮೆನೋಪಾಸ್ ಇರುತ್ತಲೇ ಇರಲಿಲ್ಲ. ಹೆಣ್ಣು ಬದುಕಿರುವವರೆಗೂ ಹಡೆಯುತ್ತ, ಸಾಕುತ್ತ ಇರುತ್ತಿದ್ದಳೇನೋ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಅದು ಸಾಧ್ಯವಿಲ್ಲದ ಕಾರಣ ಪ್ರಕೃತಿ ಮೆನೋಪಾಸನ್ನು ಹೆಣ್ಣಿಗೆ ಇತ್ತಿದ್ದಾಳೆ. ಸುಖಕರ, ನೆಮ್ಮದಿಯ, ಜವಾಬ್ದಾರಿಗಳಿಲ್ಲದ ವೃದ್ಧಾಪ್ಯ ಒಂದು ವರ. ಅದು ಮಕ್ಕಳ ಜವಾಬ್ದಾರಿಯೂ ಹೌದು.

ಮಕ್ಕಳಿಗಾಗಿ, ಅವರ ಮಕ್ಕಳಿಗಾಗಿ ಶ್ರಮಪಡುತ್ತಿರುವ, ನಗುತ್ತಾ ಒಳ ಅಳಲು ಮರೆಸುತ್ತಿರುವ ಅಜ್ಜಿಯರ ಬಗ್ಗೆ ಪ್ರೀತಿಯಿರಲಿ. ಒಳ್ಳೆ ಮಾತಿರಲಿ. ಅಜ್ಜಿ ಮೊಮ್ಮಕ್ಕಳ ಬಾಂಧವ್ಯ ಚೆಂದವಿರಲಿ. ಆಕೆಗೆ ನೆಮ್ಮದಿಯಿರಲಿ.

After note- ಇದು ನಾನು ಸುತ್ತಾ ಮುತ್ತಾ ನೋಡುತ್ತಾ ಇರುವ ಸಮಸ್ಯೆಯಾದ್ದರಿಂದ ಕೊಂಚ (ಬರವಣಿಗೆಯಲ್ಲಿ) ಭಾವುಕಳಾದೆ. ಜೊತೆಗೆ ಉಪದೇಶವೂ ಹೆಚ್ಚಾಯಿತು. ಕ್ಷಮೆ ಇರಲಿ.

Leave a Reply